ಕಾಂಗೋ ಸೇನಾ ವಿಮಾನ ಪತನ 
ವಿದೇಶ

ಕಾಂಗೋ ಸೇನಾ ವಿಮಾನ ಪತನ: ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ 14 ಮಂದಿ ದುರ್ಮರಣ! | Congo Plane Crash

Congo Plane Crash: ಕಾಂಗೋದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಕಾಂಗೋ ಮಿಲಿಟರಿ ಶುಕ್ರವಾರ ತಿಳಿಸಿದೆ.

Congo Plane Crash: ಕಾಂಗೋದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಇಬ್ಬರು ಹಿರಿಯ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಕಾಂಗೋ ಮಿಲಿಟರಿ ಶುಕ್ರವಾರ ತಿಳಿಸಿದೆ.

ಈ ದುರಂತದಲ್ಲಿ ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮುಟೊಂಬೊ ಕಟಾಲಯಿ ಟಿಯೆಂಡೆ ಮತ್ತು ಸಶಸ್ತ್ರ ಪಡೆಗಳ ಆಡಿಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಬಕುಮಿ ಲಿಕುಲಿಯಾ ಮೃತಪಟ್ಟಿದ್ದಾರೆ. ಈ ಇಬ್ಬರು ಜನರಲ್ ಅಧಿಕಾರಿಗಳ ಜೊತೆಗೆ, ನಿಯೋಗದ ಹನ್ನೆರಡು ಸದಸ್ಯರು ಹಾಗೂ ವಿಮಾನದ ಸಿಬ್ಬಂದಿ ಕೂಡ ಈ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಾಂಗೋ ಮಿಲಿಟರಿ ವಕ್ತಾರ ಮೇಜರ್ ಜನರಲ್ ಎಫೋಮಿ ಎಕೆಂಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ವಿಮಾನವು ಕಿಕ್ವಿಟ್‌ನಿಂದ ರಾಜಧಾನಿ ಕಿನ್‌ಶಾಸಾಗೆ ಹಿಂತಿರುಗುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಂಗೆ ಪ್ರದೇಶದಲ್ಲಿ ಪತನಗೊಂಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೂ ಮೃತಪಟ್ಟಿದ್ದಾರೆ. ಘಟನೆ ವರದಿಯಾದ ಕೂಡಲೇ ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಎಕೆಂಗೆ ತಿಳಿಸಿದ್ದಾರೆ.

ಅಪಘಾತದ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಮಂಡಳಿ ಅಧ್ಯಕ್ಷ ಟ್ರೈಫೋನ್ ಕಿನ್-ಕಿ ಎಯ್ ಮುಲುಂಬಾ ತಿಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ದೇಶದ ಪೂರ್ವ ಪ್ರದೇಶದಲ್ಲಿ ರುವಾಂಡಾ ಬೆಂಬಲಿತ M23 ಬಂಡುಕೋರ ಗುಂಪು ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ನಂತರ, ಕಾಂಗೋ ಮಿಲಿಟರಿಯು ಹಲವಾರು ಬಂಡುಕೋರ ಗುಂಪುಗಳ ವಿರುದ್ಧ ತೀವ್ರ ಸಂಘರ್ಷ ನಡೆಸುತ್ತಿರುವ ನಡುವೆಯೇ ಈ ದುರಂತ ಸಂಭವಿಸಿದೆ.

ಜರ್ಮನಿಯಲ್ಲಿ ಅಮೆರಿಕ ಸೇನಾ ವಿಮಾನ ಪತನ: ಪೈಲಟ್‌ಗೆ ಗಾಯ

ಇನ್ನೊಂದೆಡೆ, ಪಶ್ಚಿಮ ಜರ್ಮನಿಯ ಅಮೆರಿಕನ್ ಏರ್ ಬೇಸ್‌ನಲ್ಲಿ ಮಂಗಳವಾರ ಅಮೆರಿಕದ ಮಿಲಿಟರಿ ವಿಮಾನವೊಂದು ಪತನಗೊಂಡಿದ್ದು, ಪೈಲಟ್ ಗಾಯಗೊಂಡಿದ್ದಾರೆ. ಸ್ಪಾಂಗ್‌ಡಾಹ್ಲೆಮ್ ಯುಎಸ್ ಏರ್ ಬೇಸ್ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ವಿಮಾನ ಪತನಗೊಳ್ಳುವ ಮುನ್ನ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ. ಆದರೆ ಘಟನೆಯ ಕುರಿತು ಏರ್ ಬೇಸ್ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಘಟನೆ ನಡೆದ ತಕ್ಷಣ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಸ್ಪಾಂಗ್‌ಡಾಹ್ಲೆಮ್ ನೆಲೆಸಿರುವ ಸ್ಥಳೀಯ ಜರ್ಮನ್ ಜಿಲ್ಲಾಡಳಿತ ತಿಳಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳು ಸಹ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜರ್ಮನ್ ಸುದ್ದಿ ಸಂಸ್ಥೆ dpa ವರದಿ ಪ್ರಕಾರ, ಸ್ಪಾಂಗ್‌ಡಾಹ್ಲೆಮ್ ಏರ್ ಬೇಸ್ ಸುಮಾರು 20 F-16 ಫೈಟರ್ ಜೆಟ್‌ಗಳ ತುಕಡಿಗೆ ನೆಲೆಯಾಗಿದೆ. ವಿಶ್ವದಾದ್ಯಂತ ಯುಎಸ್ ಏರ್ ಫೋರ್ಸ್ ಮತ್ತು ನ್ಯಾಟೋ (NATO) ಮಿಷನ್‌ಗಳಿಗೆ ಬೆಂಬಲ ನೀಡುವ ಈ ಸ್ಕ್ವಾಡ್ರನ್, ಈ ಏರ್ ಬೇಸ್‌ನ ಪ್ರಮುಖ ಕೇಂದ್ರವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ನೌಕಾನೆಲೆಯಲ್ಲಿ ಸುಮಾರು 5,000 ಮಿಲಿಟರಿ ಮತ್ತು ಸಿವಿಲಿಯನ್ ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಜೊತೆಗೆ 700 ರಿಂದ 800 ಜರ್ಮನ್ನರು ಕೂಡ ಇಲ್ಲಿ ಉದ್ಯೋಗದಲ್ಲಿದ್ದಾರೆ.

ಯುಎಸ್ ಏರ್ ಫೋರ್ಸ್ 1950ರ ದಶಕದ ಮಧ್ಯಭಾಗದಿಂದಲೇ ಸ್ಪಾಂಗ್‌ಡಾಹ್ಲೆಮ್‌ನಲ್ಲಿ ತನ್ನ ಉಪಸ್ಥಿತಿಯನ್ನು ಕಾಯ್ದುಕೊಂಡಿದೆ. ನೈಋತ್ಯ ಜರ್ಮನಿಯ ಕೈಸರ್ಸ್‌ಲೌಟರ್ನ್ ಬಳಿಯ ರಾಮ್‌ಸ್ಟೈನ್ (Ramstein) ನೆಲೆ ಬಿಟ್ಟರೆ, ಸ್ಪಾಂಗ್‌ಡಾಹ್ಲೆಮ್ ಏರ್ ಬೇಸ್ ಅನ್ನು ಈ ಪ್ರದೇಶದಲ್ಲಿರುವ ಅಮೆರಿಕ ಮಿಲಿಟರಿಯ ಅತ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ(ಏಜೆನ್ಸೀಸ್​)