ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿ ಅಲೀಮಾ ಖಾನ್
ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಒಬ್ಬ ತೀವ್ರಗಾಮಿ ಇಸ್ಲಾಮಿಸ್ಟ್, ಆತ ಭಾರತದೊಂದಿಗೆ ಯುದ್ಧಕ್ಕೆ ಹಂಬಲಿಸುತ್ತಾನೆ ಎಂದು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿಯರಲ್ಲಿ(Imran Khan's sister) ಒಬ್ಬರಾದ ಅಲೀಮಾ ಖಾನ್ ಹೇಳಿದ್ದಾರೆ.
ಸ್ಕೈ ನ್ಯೂಸ್‌ನ ಯಾಲ್ಡಾ ಹಕೀಮ್‌ಗೆ ಅಲೀಮಾ ಖಾನ್ ಸಂದರ್ಶನ ನೀಡಿದ್ದು,ಅದರಲ್ಲಿ ತಮ್ಮ ಸಹೋದರ ಶುದ್ಧ ಉದಾರವಾದಿಯಾಗಿದ್ದು, ಭಾರತ ಮತ್ತು ಬಿಜೆಪಿ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಆದರೆ ಅಸಿಮ್ ಮುನೀರ್ ತೀವ್ರಗಾಮಿಯಾಗಿದ್ದು ಅದಕ್ಕಾಗಿಯೇ ಭಾರತದೊಂದಿಗೆ ಯುದ್ಧವನ್ನು ಬಯಸುತ್ತಾನೆ. ಅವರ ಇಸ್ಲಾಮಿಕ್ ಮೂಲಭೂತವಾದ ಮತ್ತು ಸಂಪ್ರದಾಯವಾದವು ಇಸ್ಲಾಂನಲ್ಲಿ ನಂಬಿಕೆಯಿಲ್ಲದವರ ವಿರುದ್ಧ ಹೋರಾಡಲು ಅವರನ್ನು ಒತ್ತಾಯಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಮ್ರಾನ್ ಅವರನ್ನು ಪಾಕಿಸ್ತಾನದ ಆಸ್ತಿ ಎಂದು ಕರೆದಿರುವ ಅವರು, ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೊಳಗಾಗಿರುವ ತಮ್ಮ ಸಹೋದರ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥರನ್ನು ಬಿಡುಗಡೆ ಮಾಡಲು ಪಶ್ಚಿಮದ ದೇಶಗಳು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕಾಶ್ಮೀರ ಪಾಕಿಸ್ತಾನದ ಕತ್ತಿನ ರಕ್ತನಾಳ ಮತ್ತು ಮುಸ್ಲಿಮರು ಹಿಂದೂಗಳಿಗಿಂತ ಭಿನ್ನರು ಎಂಬ ಮುನೀರ್ ಅವರ ಹೇಳಿಕೆಗಳು ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿಗೆ ಕಾರಣವೆಂದು ನಂಬಲಾಗಿದೆ. ಘಟನೆಯಲ್ಲಿ 26 ಮಂದಿ ಭಾರತೀಯರು ಮೃತಪಟ್ಟಿದ್ದರು. ಇದಾದ ಬಳಿಕ ಭಾರತ ಪ್ರತಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು (ಏಜೆನ್ಸೀಸ್).