ಏಷ್ಯನ್ ಚಾಂಪಿಯನ್ಸ್ ಲೀಗ್: ಗೆದ್ದು ಇತಿಹಾಸ ಬರೆದ ಉತ್ತರ ಕೊರಿಯಾ ಮಹಿಳಾ ಫುಟ್‌ಬಾಲ್ ತಂಡ! ಆಟಗಾರ್ತಿಯರ ಜೊತೆ ಕಿಮ್ ಸಂಭ್ರಮಾಚರಣೆ!
ಪ್ಯೊಂಗ್ಯಾಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕವಾಗಿ ತೀವ್ರ ಒಂಟಿತನ ಎದುರಿಸುತ್ತಿರುವ ಉತ್ತರ ಕೊರಿಯಾ ದೇಶವು ಕ್ರೀಡಾ ಜಗತ್ತಿನಲ್ಲಿ ಅಪ್ರತಿಮ ಇತಿಹಾಸ ಸೃಷ್ಟಿಸಿದೆ. ಉತ್ತರ ಕೊರಿಯಾದ ಪ್ರಮುಖ ಮಹಿಳಾ ಫುಟ್‌ಬಾಲ್ ಕ್ಲಬ್ ಆದ ನೆಗೊಹ್ಯಾಂಗ್ ವುಮೆನ್ಸ್ ಎಫ್‌ಸಿ ಏಷ್ಯಾದ ಅತ್ಯುನ್ನತ ಕ್ರೀಡಾಕೂಟವಾದ ಎಎಫ್‌ಸಿ ವುಮೆನ್ಸ್ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong Un) ಅವರು ಆಟಗಾರ್ತಿಯರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ವಿಡಿಯೋ ಜಾಗತಿಕವಾಗಿ ಭಾರಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮುಖತುಂಬಾ ನಗುತ್ತಾ ಆಟಗಾರ್ತಿಯರನ್ನು ಶ್ಲಾಘಿಸುತ್ತಿರುವುದು ಕಂಡುಬಂದಿದೆ. ದೇಶದ ಸರ್ವೋಚ್ಚ ನಾಯಕನಿಂದ ಇಂತಹ ಪ್ರಶಂಸೆ ಮತ್ತು ಪ್ರೀತಿಯನ್ನು ನಿರೀಕ್ಷಿಸದ ಆಟಗಾರ್ತಿಯರು ತೀವ್ರ ಭಾವುಕರಾಗಿ ಕಣ್ಣೀರು ಹಾಕುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜಪಾನ್ ತಂಡವನ್ನು ಮಣಿಸಿ ಐತಿಹಾಸಿಕ ಸಾಧನೆ
ದಕ್ಷಿಣ ಕೊರಿಯಾದ ಸುವೊನ್ ನಗರದಲ್ಲಿ ನಡೆದ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ನೆಗೊಹ್ಯಾಂಗ್ ಕ್ಲಬ್ ಬಲಿಷ್ಠ ಜಪಾನ್‌ನ ‘ಟೋಕಿಯೋ ವರ್ಡಿ ಬೆಲೆಜಾ’ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯದ ಮೊದಲಾರ್ಧ ಮುಗಿಯುವ ಕೆಲವೇ ಕ್ಷಣಗಳ ಮುನ್ನ ನೆಗೊಹ್ಯಾಂಗ್ ತಂಡದ ನಾಯಕಿ ಕಿಮ್ ಕ್ಯೊಂಗ್ ಯಾಂಗ್ ಅವರು ಹೊಡೆದ ಏಕೈಕ ಗೋಲು ಇತಿಹಾಸ ಸೃಷ್ಟಿಸಿತು. ನಾಯಕಿ ಕಿಮ್ ಕ್ಯೊಂಗ್ ಯಾಂಗ್ ಇಡೀ ಟೂರ್ನಿಯ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೂ ಭಾಜನರಾದರು.
ಈ ಗೆಲುವಿನ ಮೂಲಕ ನೆಗೊಹ್ಯಾಂಗ್ ತಂಡವು ಮುಂದಿನ ವರ್ಷ ಅಮೆರಿಕದ ಮಿಯಾಮಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಫಿಫಾ ವುಮೆನ್ಸ್ ಚಾಂಪಿಯನ್ಸ್ ಕಪ್ ಟೂರ್ನಿಗೆ ಅಧಿಕೃತವಾಗಿ ಅರ್ಹತೆ ಪಡೆದಿದೆ.
ದಕ್ಷಿಣ ಕೊರಿಯಾ ಗಡಿಯಲ್ಲಿ ಹಾರಿದ ಉತ್ತರ ಕೊರಿಯಾ ಧ್ವಜ!
ಕಳೆದ ಎಂಟು ವರ್ಷಗಳಲ್ಲಿ ದಕ್ಷಿಣ ಕೊರಿಯಾ ದೇಶಕ್ಕೆ ಭೇಟಿ ನೀಡಿದ ಉತ್ತರ ಕೊರಿಯಾದ ಮೊದಲ ಕ್ರೀಡಾ ತಂಡ ಎಂಬ ಹೆಗ್ಗಳಿಕೆಗೆ ನೆಗೊಹ್ಯಾಂಗ್ ಪಾತ್ರವಾಗಿದೆ. ಪ್ರಸ್ತುತ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಅತ್ಯಂತ ಕಳಪೆ ಮಟ್ಟದಲ್ಲಿದ್ದರೂ, ಕ್ರೀಡಾಂಗಣದಲ್ಲಿ ಮಾತ್ರ ಅದ್ಭುತ ದೃಶ್ಯಗಳು ಕಂಡುಬಂದವು.
ಪಂದ್ಯ ಮುಗಿಯುತ್ತಿದ್ದಂತೆ ಉತ್ತರ ಕೊರಿಯಾದ ಆಟಗಾರ್ತಿಯರು ಮೈದಾನದಾದ್ಯಂತ ತಮ್ಮ ದೇಶದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಓಡಿದರು. ದಕ್ಷಿಣ ಕೊರಿಯಾದ ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಉತ್ತರ ಕೊರಿಯಾದ ಧ್ವಜ ಪ್ರದರ್ಶನವನ್ನು ನಿಷೇಧಿತ ಎಂದು ಪರಿಗಣಿಸಲಾಗುತ್ತದೆಯಾದರೂ, ಕ್ರೀಡಾ ಮನೋಭಾವದ ಹಿನ್ನೆಲೆಯಲ್ಲಿ ಅಲ್ಲಿ ನೆರೆದಿದ್ದ ಸುಮಾರು 1,200 ದಕ್ಷಿಣ ಕೊರಿಯಾದ ನಾಗರಿಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ವಿಜೇತ ತಂಡವನ್ನು ಹುರಿದುಂಬಿಸಿದರು.
ದಕ್ಷಿಣ ಕೊರಿಯಾ ಅಧ್ಯಕ್ಷರ ಶುಭ ಹಾರೈಕೆ: ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಉತ್ತರ ಕೊರಿಯಾ ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ನೆಗೊಹ್ಯಾಂಗ್ ತಂಡದ ಆಟಗಾರ್ತಿಯರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಚೆಂಡು ದುಂಡಗಿದೆ, ನಾವು ಕ್ರೀಡಾಂಗಣದಲ್ಲಿ ಮತ್ತೆ ಭೇಟಿಯಾಗಲಿದ್ದೇವೆ. ನಿಮ್ಮ ಮುಂದಿನ ಸವಾಲುಗಳಿಗೆ ನಮ್ಮ ಬೆಂಬಲವಿರಲಿದೆ ಎಂದು ಬರೆದುಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಿಂದ ಹೊರನಡೆದ ಕೋಚ್ ಮತ್ತು ನಾಯಕಿ!
ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಂದು ಸಣ್ಣ ವಿವಾದವೂ ಸೃಷ್ಟಿಯಾಯಿತು. ದಕ್ಷಿಣ ಕೊರಿಯಾದ ಪತ್ರಕರ್ತರೊಬ್ಬರು ಪ್ರಶ್ನೆ ಕೇಳುವಾಗ ಉತ್ತರ ಕೊರಿಯಾವನ್ನು ಅಧಿಕೃತ ಹೆಸರಿನಿಂದ ಕರೆಯುವ ಬದಲು ಉತ್ತರ ಭಾಗ ಎಂದು ಸಂಬೋಧಿಸಿದರು. ಇದರಿಂದ ಅಸಮಾಧಾನಗೊಂಡ ನೆಗೊಹ್ಯಾಂಗ್ ತಂಡದ ಮುಖ್ಯ ಕೋಚ್ ರಿ ಯು ಇಲ್ ಮತ್ತು ನಾಯಕಿ ಕಿಮ್ ಕ್ಯೊಂಗ್ ಯಾಂಗ್ ತಕ್ಷಣವೇ ಪತ್ರಿಕಾಗೋಷ್ಠಿಯಿಂದ ಹೊರನಡೆದರು. ತಮ್ಮ ದೇಶವನ್ನು ಅಧಿಕೃತವಾಗಿ ‘ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ’ (DPRK) ಎಂದು ಕರೆಯಬೇಕು ಎಂಬುದು ಅವರ ಪಟ್ಟು ಆಗಿತ್ತು.
ಒಟ್ಟಾರೆಯಾಗಿ ತೀವ್ರ ಬಡತನ ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳ ನಡುವೆಯೂ ಕೇವಲ ಕ್ರೀಡಾ ಶಕ್ತಿಯಿಂದ ಏಷ್ಯಾವನ್ನು ಗೆದ್ದಿರುವ ಉತ್ತರ ಕೊರಿಯಾದ ಈ ಮಹಿಳಾ ಫುಟ್‌ಬಾಲ್ ತಂಡದ ಸಾಧನೆ ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಒಂದು ಸುವರ್ಣ ಮೈಲಿಗಲ್ಲಾಗಿ ಉಳಿಯಲಿದೆ,(ಏಜೆನ್ಸೀಸ್).