ಭೂಮಿಯಿಂದ ಅತಿ ದೂರ ಪಯಣಿಸಿದ ಮಾನವರು: 56 ವರ್ಷಗಳ ಹಳೆಯ ದಾಖಲೆ ಮುರಿದ ಆರ್ಟೆಮಿಸ್ 2! Artemis II astronauts 
ವಿದೇಶ

ಭೂಮಿಯಿಂದ ಅತಿ ದೂರ ಪಯಣಿಸಿದ ಮಾನವರು: 56 ವರ್ಷಗಳ ಹಳೆಯ ದಾಖಲೆ ಮುರಿದ ಆರ್ಟೆಮಿಸ್ 2! Artemis II astronauts

ಪ್ರಮುಖ ಮುಖ್ಯಾಂಶಗಳು

  • ಅಪೊಲೊ 13 ನಿರ್ಮಿಸಿದ್ದ ಮೈಲಿಗಲ್ಲನ್ನು ಹಿಂದಿಕ್ಕಿ ಹೊಸ ಇತಿಹಾಸ ಬರೆದ ಆರ್ಟೆಮಿಸ್ 2 ಗಗನಯಾತ್ರಿಗಳು
  • ಇತಿಹಾಸದಲ್ಲೇ ಭೂಮಿಯಿಂದ ಅತಿ ಹೆಚ್ಚು ದೂರ ಪ್ರಯಾಣಿಸಿದ ಮಾನವರು ಎಂಬ ಹೆಗ್ಗಳಿಕೆಗೆ ಪಾತ್ರ
  • ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಯುಗ ಆರಂಭವಾಗಿದ್ದು ಚಂದ್ರನತ್ತ ನಮ್ಮ ಪಯಣ ಈಗ ಮತ್ತಷ್ಟು ಹತ್ತಿರ
  • 1970ರಲ್ಲಿ ಅಪೊಲೊ 13 ನಿರ್ಮಿಸಿದ್ದ 2,48,655 ಮೈಲಿಗಳ ಹಳೆಯ ದಾಖಲೆ ಮುರಿದ ಆರ್ಟೆಮಿಸ್ 2
Artemis II Astronauts : ಅಪೊಲೊ 13 ನಿರ್ಮಿಸಿದ್ದ ಮೈಲಿಗಲ್ಲನ್ನು ಹಿಂದಿಕ್ಕಿ, ಆರ್ಟೆಮಿಸ್ 2 ಗಗನಯಾತ್ರಿಗಳು ಈಗ ಇತಿಹಾಸದಲ್ಲೇ ಭೂಮಿಯಿಂದ ಅತಿ ಹೆಚ್ಚು ದೂರ ಪ್ರಯಾಣಿಸಿದ ಮಾನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಯುಗ ಆರಂಭವಾಗಿದ್ದು, ಚಂದ್ರನತ್ತ ನಮ್ಮ ಪಯಣ ಈಗ ಮತ್ತಷ್ಟು ಆಪ್ತವಾಗಿದೆ.
ಏಪ್ರಿಲ್ 6ರಂದು ಮಧ್ಯಾಹ್ನ ಸುಮಾರು 1.57ಕ್ಕೆ (EDT), ನಾಸಾದ ಆರ್ಟೆಮಿಸ್ 2 ನೌಕೆಯು ಚಂದ್ರನ ಹಿಮ್ಮುಖ ಭಾಗದಲ್ಲಿ ಚಲಿಸುವ ಮೂಲಕ, 1970ರಲ್ಲಿ ಅಪೊಲೊ 13 ನಿರ್ಮಿಸಿದ್ದ 2,48,655 ಮೈಲಿಗಳ ಹಳೆಯ ದಾಖಲೆಯನ್ನು ಮುರಿದಿದೆ. ಮಾನವ ಕುಲದ ಇತಿಹಾಸದಲ್ಲೇ ಭೂಮಿಯಿಂದ ಅತಿ ದೂರ ಪ್ರಯಾಣಿಸಿದ ದಾಖಲೆ ಬರೆದ ಈ ಓರಿಯನ್ ಕ್ಯಾಪ್ಸುಲ್, ಅದೇ ದಿನ ರಾತ್ರಿ 7.07ರ ಸುಮಾರಿಗೆ ಭೂಮಿಯಿಂದ ಗರಿಷ್ಠ 2,52,760 ಮೈಲಿ (ಸುಮಾರು 4,06,778 ಕಿ.ಮೀ) ದೂರವನ್ನು ತಲುಪಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ, ಇಂಥದ್ದೊಂದು ಕ್ಷಣ ಬಂದೇ ಬರುತ್ತದೆ ಅಂತಾ ಅಪೊಲೊ 13 ಕಮಾಂಡರ್​ ಆಗಿದ್ದ ಜಿಮ್​ ಲೊವೆಲ್​​ ಅವರು ಮೊದಲೇ ಊಹಿಸಿದ್ದರು. ಹೀಗಾಗಿ ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ತಾವು ಸಾಯುವ ಮುನ್ನ ಆರ್ಟೆಮಿಸ್ 2 ಗಗನಯಾತ್ರಿಗಳಾದ ನಾಸಾದ ರೇಡ್​ ವೈಸ್​ಮ್ಯಾನ್​, ವಿಕ್ಟರ್​ ಗ್ಲೋವರ್​ ಮತ್ತು ಕ್ರಿಸ್ಟಿನಾ ಕೋಚ್​ ಹಾಗೂ ಕೆನಡಾ ಸ್ಪೇಸ್​ ಏಜೆನ್ಸಿಯ ಜೆರೆಮಿ ಹನ್ಸೇನ್​ ಅವರಿಗಾಗಿ ಅಭಿನಂದನಾ ಸಂದೇಶವನ್ನು ಮೊದಲೇ ರೆಕಾರ್ಡ್​ ಮಾಡಿದ್ದರು.

ಜಿಮ್​ ಲೊವೆಲ್ಲ್​ ಸಂದೇಶ ಏನಿತ್ತು?

"ಹಲೋ ಆರ್ಟೆಮಿಸ್ 2, ನಾನು ಅಪೊಲೊ ಗಗನಯಾತ್ರಿ ಜಿಮ್ ಲೊವೆಲ್ ಮಾತನಾಡುತ್ತಿದ್ದೇನೆ. ನನ್ನ ಹಳೆಯ ನೆರೆಹೊರೆಗೆ (ಬಾಹ್ಯಾಕಾಶದ ಈ ಭಾಗಕ್ಕೆ) ನಿಮಗೆ ಸ್ವಾಗತ," ಎಂಬುದು ಸಂದೇಶವಾಗಿತ್ತು. ಈ ಸಂದೇಶವನ್ನು ಇಂದು ಆರ್ಟೆಮಿಸ್ 2 ಗಾಗಿ ಮಿಷನ್ ಕಂಟ್ರೋಲ್ ಪ್ರಸಾರ ಮಾಡಿತು. ಅಂದಹಾಗೆ, ಜಿಮ್ ಲೊವೆಲ್ ಅವರು 1970ರಲ್ಲಿ ಅಪೊಲೊ 13 ಮಿಷನ್ ಮೂಲಕ ಚಂದ್ರನ ಅತಿ ಹತ್ತಿರ ಹೋಗಿ ದಾಖಲೆ ಬರೆದಿದ್ದರು. ಈಗ 56 ವರ್ಷಗಳ ನಂತರ ಆರ್ಟೆಮಿಸ್ 2 ತಂಡವು ಅದೇ ಹಾದಿಯಲ್ಲಿ ಸಾಗಿ ಅವರ ಹಳೆಯ ದಾಖಲೆಯನ್ನು ಮುರಿದಿದೆ. ಹಾಗಾಗಿ, ತಾನು ಹಿಂದೆ ಓಡಾಡಿದ್ದ ಜಾಗಕ್ಕೆ ಹೊಸಬರು ಬಂದಿದ್ದಾರೆ ಎಂಬ ಅರ್ಥದಲ್ಲಿ ಅವರು ಈ ಆತ್ಮೀಯ ಸಂದೇಶವನ್ನು ಮಿಷನ್ ಕಂಟ್ರೋಲ್ ಮೂಲಕ ರವಾನಿಸಿದ್ದಾರೆ.
ಅಪೊಲೊ ಮಿಷನ್‌ನಲ್ಲಿ ತಾವು ಚಂದ್ರನ ಕಕ್ಷೆ ಸುತ್ತುವಾಗ ಇಡೀ ಭೂಮಿಯನ್ನು ಕಂಡು ಜಗತ್ತನ್ನೇ ಒಂದುಗೂಡಿಸಿದ ಕ್ಷಣಗಳನ್ನು ಸ್ಮರಿಸಿದ ಜಿಮ್ ಲೊವೆಲ್, ಈಗ ಆರ್ಟೆಮಿಸ್ 2 ತಂಡಕ್ಕೆ ಆ ಸಾಧನೆಯ 'ಹೊಣೆಗಾರಿಕೆಯ ಹಣತೆ'ಯನ್ನು (Torch) ಹಸ್ತಾಂತರಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿದ್ದಾರೆ. ಈ ಐತಿಹಾಸಿಕ ದಿನದಂದು ಚಂದ್ರನ ಸುತ್ತ ಸಂಚರಿಸುತ್ತಾ ಮಂಗಳ ಗ್ರಹದ ಮುಂದಿನ ಪಯಣಕ್ಕೆ ಭದ್ರ ಬುನಾದಿ ಹಾಕುತ್ತಿರುವ ಗಗನಯಾತ್ರಿಗಳಾದ ರೀಡ್, ವಿಕ್ಟರ್, ಕ್ರಿಸ್ಟಿನಾ ಮತ್ತು ಜೆರೆಮಿ ಅವರಿಗೆ ಶುಭ ಕೋರಿದ ಅವರು, ಎಷ್ಟೇ ಕೆಲಸದ ಒತ್ತಡವಿದ್ದರೂ ಬಾಹ್ಯಾಕಾಶದ ಆ ಸುಂದರ ನೋಟವನ್ನು ಸವಿಯಲು ಮರೆಯಬೇಡಿ ಎಂದು ಹಾರೈಸಿದ್ದಾರೆ.
ಆರ್ಟೆಮಿಸ್ 2 ಮಿಷನ್ ಯಶಸ್ವಿಯಾಗಿ ಸಾಗುತ್ತಿದ್ದು, ಓರಿಯನ್ ನೌಕೆಯು ಚಂದ್ರನ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು ಭೂಮಿಯತ್ತ ಮರಳಲು ಸಜ್ಜಾಗಿದೆ. ಈ ನೌಕೆಯು ಏಪ್ರಿಲ್ 10ರ ಶುಕ್ರವಾರದಂದು ಸ್ಯಾನ್ ಡಿಯಾಗೋ ಕರಾವಳಿಯ ಸಮುದ್ರದಲ್ಲಿ ಇಳಿಯಲಿದ್ದು, ಇದು ಆಳವಾದ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಸುರಕ್ಷತೆಯನ್ನು ಸಾಬೀತುಪಡಿಸುವ ಪ್ರಮುಖ ಪರೀಕ್ಷೆಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2028ರ ಅಂತ್ಯದ ವೇಳೆಗೆ ಆರ್ಟೆಮಿಸ್ 4 ಮಿಷನ್ ಮೂಲಕ ಚಂದ್ರನ ಮೇಲೆ ಮೊದಲ ಬಾರಿಗೆ ಮಾನವ ಇಳಿಯಲಿದ್ದು, 2030ರ ಆರಂಭದಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಶಾಶ್ವತ ನೆಲೆಯನ್ನು ನಿರ್ಮಿಸುವ ಗುರಿಯನ್ನು ನಾಸಾ ಹೊಂದಿದೆ.
ಅಂದಹಾಗೆ, ಏಪ್ರಿಲ್ 1ರಂದು ಉಡಾವಣೆಯಾದ ಆರ್ಟೆಮಿಸ್ 2, ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ಮೊದಲ ಮಾನವಸಹಿತ ಮಿಷನ್ ಆಗಿದ್ದು, 1972ರ ಅಪೊಲೊ 17ರ ನಂತರ ಭೂಮಿಯ ಕೆಳ ಕಕ್ಷೆಯನ್ನು (LEO) ದಾಟಿ ಹೋದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಈ ಮಿಷನ್ ಹಲವು ಐತಿಹಾಸಿಕ ದಾಖಲೆಗಳನ್ನು ಬರೆದಿದ್ದು, ಪೈಲಟ್ ವಿಕ್ಟರ್ ಗ್ಲೋವರ್ ಭೂಮಿಯ ಕಕ್ಷೆ ಮೀರಿ ಪ್ರಯಾಣಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಹಾಗೆಯೇ, ಕ್ರಿಸ್ಟಿನಾ ಕೋಚ್ ಈ ಸಾಧನೆ ಮಾಡಿದ ಮೊದಲ ಮಹಿಳೆಯಾದರೆ, ಜೆರೆಮಿ ಹ್ಯಾನ್ಸೆನ್ ಅಮೆರಿಕನ್ನರಲ್ಲದ (ಕೆನಡಾದ) ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, (ಏಜೆನ್ಸೀಸ್​).