ಮನುಷ್ಯರಂತೆ ಬದಲಾಗುತ್ತಿರುವ ಚಿಂಪಾಂಜಿಗಳು: ಜಗಳ, ಸೇಡು, ಹತ್ಯೆ... ಶಿಶುಗಳನ್ನೂ ಬಿಡದ ಮೃಗಗಳ ರಕ್ತಸಿಕ್ತ ಕಾಳಗ! Monkeys Becoming Humans 
ವಿದೇಶ

ಮನುಷ್ಯರಂತೆ ಬದಲಾಗುತ್ತಿರುವ ಚಿಂಪಾಂಜಿಗಳು: ಜಗಳ, ಸೇಡು, ಹತ್ಯೆ... ಶಿಶುಗಳನ್ನೂ ಬಿಡದ ಮೃಗಗಳ ರಕ್ತಸಿಕ್ತ ಕಾಳಗ! Monkeys Becoming Humans

ಪ್ರಮುಖ ಮುಖ್ಯಾಂಶಗಳು

  • ಮನಷ್ಯನ ಗುಣಗಳು ಪ್ರಾಣಿಗಳಲ್ಲೂ ಕಾಣಿಸಿಕೊಂಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ
  • ದೀರ್ಘಕಾಲದಿಂದ ಒಟ್ಟಿಗೆ ವಾಸಿಸುತ್ತಿದ್ದ ಚಿಂಪಾಂಜಿ ಸಮುದಾಯ ಇದೀಗ ಎರಡು ಬಣಗಳಾಗಿ ಕಿತ್ತಾಡುತ್ತಿವೆ
  • ಚಿಂಪಾಂಜಿಗಳ ಕಿತ್ತಾಟದಿಂದ ಇಲ್ಲಿಯವರೆಗೆ 17 ಮರಿಗಳು ಸೇರಿದಂತೆ ಒಟ್ಟು 28 ಚಿಂಪಾಂಜಿಗಳು ಮೃತಪಟ್ಟಿವೆ
  • ಮನುಷ್ಯರಂತೆ ಸಂಘಟಿತವಾಗಿ ಯುದ್ಧ ಮಾಡುವ ಈ ಸ್ವಭಾವವು ವನ್ಯಜೀವಿ ತಜ್ಞರಲ್ಲಿ ಆಘಾತ ಮೂಡಿಸಿದೆ
Monkeys Becoming Humans : ಮಂಗನಿಂದ ಮಾನವ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಆರಂಭದಲ್ಲಿ ಮಂಗನಂತಿದ್ದ ಮಾನವ, ವರ್ಷಗಳ ಕಾಲ ವಿಕಸನಕ್ಕೆ ಒಳಗಾಗಿ, ಇಂದು ಮಾನವ ರೂಪ ಪಡೆದುಕೊಂಡಿದ್ದಾನೆ. ಆದರೆ, ಮನುಷ್ಯ ಇಂದು ತನ್ನ ಸ್ವಾರ್ಥದಿಂದಾಗಿ ಭೂಮಿಯ ಮೇಲೆ ಅಗಾಧ ಬದಲಾವಣೆ ಮಾಡಿದ್ದಾನೆ. ಅಲ್ಲದೆ, ಪ್ರಾಣಿಗಳಲ್ಲಿ ಇಲ್ಲದೇ ಇರುವ ಸ್ವಾರ್ಥ, ದುರಾಸೆ ಹಾಗೂ ಹೊಟ್ಟೆಕಿಚ್ಚಿನಂತಹ ಕೆಟ್ಟ ಭಾವನೆಗಳನ್ನು ಮಾನವ ಬೆಳೆಸಿಕೊಂಡಿದ್ದಾನೆ. ಇಂದಿಗೂ ಕಾಡಿನಲ್ಲಿ ಯಾವುದೇ ಚಿಂತೆಯಿಲ್ಲದೇ ಎಲ್ಲ ಪ್ರಾಣಿಗಳು ತಮ್ಮ ಗುಂಪಿನ ಜತೆ ಅನ್ಯೋನ್ಯದಿಂದ ಬದುಕುತ್ತಿವೆ. ಆದರೆ, ಮನುಷ್ಯ ಅನ್ಯೋನ್ಯತೆನೆಯನ್ನು ಮೀರಿ, ಜಗಳ ಹಾಗೂ ಒಡೆದಾಟವನ್ನು ಮೈಗೂಡಿಸಿಕೊಂಡಿದ್ದಾನೆ. ಹೀಗಾಗಿ, ಇಂದು ಅಪರಾಧಗಳು ಹೆಚ್ಚುತ್ತಲೇ ಇವೆ. ಮನಷ್ಯನ ಈ ಗುಣಗಳು ಪ್ರಾಣಿಗಳಲ್ಲೂ ಕಾಣಿಸಿಕೊಂಡಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಹೌದು, ದೀರ್ಘಕಾಲದಿಂದ ಒಂದೇ ಗುಂಪಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಚಿಂಪಾಂಜಿ ಸಮುದಾಯ, ಇದೀಗ ಎರಡು ಬಣಗಳಾಗಿ ಕಿತ್ತಾಡುತ್ತಿರುವುದಾಗಿ ವರದಿಯಾಗಿದೆ. ಉಗಾಂಡಾದ ಕಿಬಾಲೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ನ್ಗೋಗೊ ಚಿಂಪಾಂಜಿ ಸಮುದಾಯವು ಎರಡು ಬಣಗಳಾಗಿ ಕಿತ್ತಾಡುತ್ತಿವೆ. ಚಿಂಪಾಂಜಿಗಳ ಈ ನಡೆಯಿಂದ ಸಂಶೋಧಕರು ಆಘಾತಕ್ಕೊಳಗಾಗಿದ್ದಾರೆ. ಚಿಂಪಾಂಜಿಗಳ ನಡುವೆ ನಡೆದ ಅಂತರ್ಯುದ್ಧದಲ್ಲಿ ಸುಮಾರು 28 ಚಿಂಪಾಂಜಿಗಳು ಪ್ರಾಣ ಕಳೆದುಕೊಂಡಿವೆ.

ಕಿತ್ತಾಟ ಶುರುವಾಗಿದ್ದು ಯಾವಾಗ?

ಅಂದಹಾಗೆ, ಕಿಬಾಲೆ ರಾಷ್ಟ್ರೀಯ ಉದ್ಯಾನವನವು ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯ ಚಿಂಪಾಂಜಿಗಳಿಗೆ ನೆಲೆಯಾಗಿದೆ. ಈ ಉದ್ಯಾನವನವನ್ನು 1995 ರಿಂದ ಸಂಶೋಧಕರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಚಿಂಪಾಜಿಗಳ ಗುಂಪು 2015ರಲ್ಲಿ ವಿಭಜನೆಯಾಗಲು ಪ್ರಾರಂಭಿಸಿತು. 2017 ರಲ್ಲಿ ಮರಿಗಳು ಸೇರಿದಂತೆ ಸುಮಾರು 25 ಚಿಂಪಾಂಜಿಗಳು ರೋಗದಿಂದ ಸಾವಿಗೀಡಾದಗ ಅವುಗಳ ಸಾಮಾಜಿಕ ಬಂಧಗಳು ಕುಸಿದವು. ಅಂದಿನಿಂದ ಅವು ಎರಡು ಗುಂಪುಗಳಾಗಿ ವಿಭಜನೆಯಾಗಿ 2018 ರಿಂದ ಪರಸ್ಪರ ದಾಳಿ ಮಾಡಲು ಪ್ರಾರಂಭಿಸಿದವು ಎಂಬುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ.

ಹೇಗಿರುತ್ತದೆ ಕಿತ್ತಾಟ?

ಇನ್ನೂ ಚಿಂಪಾಂಜಿಗಳ ಯುದ್ಧ ತಂತ್ರಗಳು ಹೇಗಿವೆ ಅಂದರೆ, ಕಚ್ಚುವುದು, ಹೊಡೆದಾಡುವುದು, ಒದೆಯುವುದು ಮತ್ತು ಎಳೆದಾಡುವುದು ಸೇರಿವೆ. ಈ ಹೊಡೆದಾಟದಲ್ಲಿ ಇಲ್ಲಿಯವರೆಗೆ 17 ಮರಿಗಳು ಸೇರಿದಂತೆ 28 ಚಿಂಪಾಂಜಿಗಳು ಸಾವಿಗೀಡಾಗಿವೆ ಎಂದು ವರದಿಯಾಗಿದೆ. ಹೆಣ್ಣು ಚಿಂಪಾಂಜಿಗಳು ಸಹ ದಾಳಿಯಲ್ಲಿ ಸಕ್ರಿಯವಾಗಿವೆ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಡಾ. ಆರನ್ ಸ್ಯಾಂಡೆಲ್ ಹೇಳುತ್ತಾರೆ.

ಚಿಂಪಾಂಜಿಗಳ ಕಿತ್ತಾಟಕ್ಕೆ ಕಾರಣವೇನು?

ಕಿಬಾಲೆ ರಾಷ್ಟ್ರೀಯ ಉದ್ಯಾನವನದ ಚಿಂಪಾಂಜಿಗಳು ಮುಖ್ಯವಾಗಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಮತ್ತು ಆಹಾರದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಬಣಗಳಾಗಿ ಕಿತ್ತಾಡುತ್ತಿವೆ ಎಂದು ಹೇಳಲಾಗಿದೆ. ಕಾಡಿನಲ್ಲಿ ಹಣ್ಣುಗಳು ಹೆಚ್ಚಿರುವ ಸಮೃದ್ಧ ಪ್ರದೇಶಗಳನ್ನು ತಮ್ಮದಾಗಿಸಿಕೊಳ್ಳಲು ಮತ್ತು ತಮ್ಮ ಗುಂಪಿನ ಹೆಣ್ಣು ಚಿಂಪಾಂಜಿಗಳನ್ನು ರಕ್ಷಿಸಿಕೊಳ್ಳಲು ಚಿಂಪಾಂಜಿ ಸಮುದಾಯದ ನಡುವೆ ಭೀಕರ ಪೈಪೋಟಿ ನಡೆಯುತ್ತದೆ. ಶಕ್ತಿಯುತವಾದ ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ದಾಳಿ ಮಾಡುವ ಮೂಲಕ ಅವರ ಪ್ರದೇಶವನ್ನು ವಶಪಡಿಸಿಕೊಂಡರೆ, ತಮ್ಮ ಮುಂದಿನ ಪೀಳಿಗೆಗೆ ಹೆಚ್ಚಿನ ಆಹಾರ ಮತ್ತು ಸುರಕ್ಷತೆ ಸಿಗುತ್ತದೆ ಎಂಬ ಮೂಲ ಪ್ರವೃತ್ತಿಯೇ ಈ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ. ಇದಲ್ಲದೆ, ಗಂಡು ಮತ್ತು ಹೆಣ್ಣು ನಡುವಿನ ತೀವ್ರ ಸ್ಪರ್ಧೆಯೇ ಈ ಹೊಡೆದಾಟಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಎರಡು ಗುಂಪುಗಳ ಪ್ರಮುಖ ಆಕರ್ಷಣೆ

ಅಂದಹಾಗೆ, ಉಗಾಂಡಾದ ಕಿಬಾಲೆ ರಾಷ್ಟ್ರೀಯ ಉದ್ಯಾನವನವು ಸುಮಾರು 1,500ಕ್ಕೂ ಹೆಚ್ಚು ಚಿಂಪಾಂಜಿಗಳಿಗೆ ಆವಾಸಸ್ಥಾನವಾಗಿದೆ. ಇದು ಪೂರ್ವ ಆಫ್ರಿಕಾದಲ್ಲೇ ಅತಿ ಹೆಚ್ಚು ಸಾಂದ್ರತೆಯ ಚಿಂಪಾಂಜಿಗಳನ್ನು ಹೊಂದಿರುವ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಇಲ್ಲಿನ ಚಿಂಪಾಂಜಿಗಳು ವಿವಿಧ ಬಣಗಳಾಗಿ ಅಥವಾ ಸಮುದಾಯಗಳಾಗಿ ವಾಸಿಸುತ್ತಿದ್ದು, ಪ್ರತಿಯೊಂದು ಗುಂಪಿನಲ್ಲಿ ಸರಿಸುಮಾರು 50 ರಿಂದ 200ರವರೆಗೆ ಸದಸ್ಯರಿರುತ್ತಾರೆ. ಇವುಗಳಲ್ಲಿ ಕನ್ಯಾಂಚು ಮತ್ತು ಸೆಬಿಟೋಲಿ ಸಮುದಾಯಗಳು ಅತ್ಯಂತ ಪ್ರಸಿದ್ಧವಾಗಿದ್ದು, ಪ್ರವಾಸಿಗರಿಗೆ ಮತ್ತು ಸಂಶೋಧಕರಿಗೆ ಈ ಗುಂಪುಗಳೇ ಪ್ರಮುಖ ಆಕರ್ಷಣೆಯಾಗಿವೆ.

ಚಿಂಪಾಂಜಿಗಳ ಮೇಲ್ವಿಚಾರಣೆ ಹೇಗೆ?

ಈ ಚಿಂಪಾಂಜಿಗಳನ್ನು ಮುಖ್ಯವಾಗಿ 'ಹ್ಯಾಬಿಚುಯೇಶನ್' ಎಂಬ ಪ್ರಕ್ರಿಯೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತರಬೇತಿ ಪಡೆದ ರೇಂಜರ್‌ಗಳು ಮತ್ತು ಸಂಶೋಧಕರು ಪ್ರತಿದಿನ ಚಿಂಪಾಂಜಿಗಳನ್ನು ಹಿಂಬಾಲಿಸುವ ಮೂಲಕ, ಅವುಗಳಿಗೆ ಮನುಷ್ಯರ ಉಪಸ್ಥಿತಿಯ ಅಭ್ಯಾಸ ಮಾಡಿಸುತ್ತಾರೆ. ಇದರಿಂದ ಅವುಗಳ ನೈಸರ್ಗಿಕ ನಡವಳಿಕೆಗೆ ತೊಂದರೆಯಾಗದಂತೆ ಹತ್ತಿರದಿಂದ ಗಮನಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಸಂಶೋಧಕರು ಡಿಎನ್‌ಎ ವಿಶ್ಲೇಷಣೆ, ಅವುಗಳ ಆರೋಗ್ಯದ ಮೇಲೆ ನಿಗಾ ಇಡುವುದು ಮತ್ತು ಜಿಪಿಎಸ್ ತಂತ್ರಜ್ಞಾನವನ್ನು ಬಳಸಿ ಅವುಗಳ ಚಲನವಲನಗಳನ್ನು ಮತ್ತು ಸಾಮಾಜಿಕ ಬದಲಾವಣೆಗಳನ್ನು ನಿರಂತರವಾಗಿ ದಾಖಲಿಸುತ್ತಾರೆ, (ಏಜೆನ್ಸೀಸ್).