WEB
ವಿದೇಶ

ಅರಬ್ ಸ್ಟ್ರಿಂಗ್ ಮಾದರಿಯ ಪ್ರತಿಭಟನೆ! ಯುರೋಪಿಯನ್ ದೇಶಗಳಲ್ಲಿ ಭುಗಿಲೆದ್ದ ಜನಾಕ್ರೋಶ

ಫ್ರಾನ್ಸ್​ನಿಂದ ಆರಂಭವಾಗಿ 9 ಯುರೋಪಿಯನ್ ದೇಶಗಳಲ್ಲಿ ಬೆಲೆ ಏರಿಕೆ ಹಾಗೂ ಶಾಲೆ-ಕಾಲೇಜುಗಳ ಸಮಸ್ಯೆಗಳ ವಿರುದ್ಧ ಸರ್ಕಾರ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇವುಗಳನ್ನು 2011ರ ಮಧ್ಯಪ್ರಾಚ್ಯ ದೇಶಗಳ ಅರಬ್ ಸ್ಪ್ರಿಂಗ್ ಕ್ರಾಂತಿಗೆ ಹೋಲಿಸಲಾಗುತ್ತಿದ್ದು, ಆ ಸಮಯದಲ್ಲಿ ಹಲವು ಆಡಳಿತಗಾರರು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

ಫ್ರಾನ್ಸ್​ನಿಂದ ಆರಂಭವಾಗಿ 9 ಯುರೋಪಿಯನ್ ದೇಶಗಳಲ್ಲಿ ಬೆಲೆ ಏರಿಕೆ ಹಾಗೂ ಶಾಲೆ-ಕಾಲೇಜುಗಳ ಸಮಸ್ಯೆಗಳ ವಿರುದ್ಧ ಸರ್ಕಾರ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇವುಗಳನ್ನು 2011ರ ಮಧ್ಯಪ್ರಾಚ್ಯ ದೇಶಗಳ ಅರಬ್ ಸ್ಪ್ರಿಂಗ್ ಕ್ರಾಂತಿಗೆ ಹೋಲಿಸಲಾಗುತ್ತಿದ್ದು, ಆ ಸಮಯದಲ್ಲಿ ಹಲವು ಆಡಳಿತಗಾರರು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಈ ನಡುವೆ, ‘ಫ್ರಾನ್ಸ್​ನ ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ. ಅಲ್ಲಿಗೆ ಭಾರಿ ಸಂಖ್ಯೆಯಲ್ಲಿ ಹೊರಗಿನವರು ಬರುತ್ತಿದ್ದಾರೆ. ನಾನು ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಎಚ್ಚರಿಕೆ ನೀಡಿದ್ದೆ. ಫ್ರಾನ್ಸ್ ಪ್ರತಿಭಟನೆಯ ಹಿಂದೆ ಒಂದು ಮಹಾನ್ ದೇಶವನ್ನು ವಶಪಡಿಸಿಕೊಳ್ಳುವ ಇಸ್ಲಾಂನ ಆಕಾಂಕ್ಷೆಯಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಿಜವಾಗಿಯೂ ಯುರೋಪ್​ನಲ್ಲಿ ಅರಬ್ ದೇಶಗಳಂತೆ ಅಧಿಕಾರವನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆಯೇ, ಜನರು ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಕಂಗಾಲಾಗಿದ್ದಾರೆಯೇ ಅಥವಾ ಟ್ರಂಪ್ ಅವರ ವಾದ ಸರಿಯಾಗಿದೆಯೇ? ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.

ಹೇಗೆ ಆರಂಭವಾಯಿತು ಹೋರಾಟ?

ಬೇಸಿಗೆ ರಜೆಯ ನಂತರ ಫ್ರಾನ್ಸ್​ನಲ್ಲಿ ಸೆಪ್ಟೆಂಬರ್​ನಿಂದ ಶಾಲೆಗಳು ಪುನರಾರಂಭಗೊಂಡವು. ಸೆಪ್ಟೆಂಬರ್ 21ರಂದು ರಾಜಧಾನಿ ಪ್ಯಾರಿಸ್​ನ ಲೈಸೀ ಸೇಂಟ್-ಎಕ್ಸುಪೆರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಕೊರತೆ, ತರಗತಿಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆ ಮತ್ತು ಶಾಲಾ ಕಟ್ಟಡದ ದುಸ್ಥಿತಿಯನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದರು. ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನೆಯು ವೇಗವಾಗಿ ಹರಡಿತು ಮತ್ತು ಶಿಕ್ಷಕರು, ಪಾಲಕರು ಹಾಗೂ ಕಾರ್ವಿುಕ ಸಂಘಟನೆಗಳು ಕೂಡ ಇದರಲ್ಲಿ ಭಾಗಿಯಾಗಿ ಹಣದುಬ್ಬರ, ಬಜೆಟ್ ಕಡಿತದಂತಹ ವಿಷಯಗಳ ವಿರುದ್ಧವೂ ಪ್ರತಿಭಟಿಸಲು ಪ್ರಾರಂಭಿಸಿದರು. 20 ದಿನಗಳಲ್ಲಿ ಈ ಪ್ರತಿಭಟನೆಯು 100ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳಿಗೆ ವ್ಯಾಪಿಸಿತು. ಅಕ್ಟೋಬರ್ 17ರಂದು ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತು. 5.5 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದರು. 1500ಕ್ಕೂ ಹೆಚ್ಚು ಅಂಗಡಿಗಳನ್ನು ಲೂಟಿ ಮಾಡಲಾಯಿತು ಮತ್ತು ಹಲವು ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. 2400ಕ್ಕೂ ಅಧಿಕ ಜನರನ್ನು ಬಂಧಿಸಲಾಯಿತು.

ಫ್ರಾನ್ಸ್​ನಲ್ಲಿ ಪ್ರತಿಭಟನೆಗಳು ಆರಂಭವಾದ ಸಂದರ್ಭದಲ್ಲಿ, ಅಕ್ಟೋಬರ್ 7ರಂದು ಫ್ರಾನ್ಸ್ ಸರ್ಕಾರವು ಇರಾನ್ ಮೇಲೆ ಆರೋಪ ಹೊರಿಸಿತು. ವಿದೇಶಾಂಗ ಸಚಿವಾಲಯವು ಇರಾನಿನ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ, ಇರಾನ್ ವಿದೇಶಾಂಗ ಸಚಿವಾಲಯವು ಆನ್​ಲೈನ್ ಅಭಿಯಾನಗಳನ್ನು ನಡೆಸುವ ಮೂಲಕ ಪ್ರತಿಭಟನೆಗೆ ತುಪ್ಪ ಸುರಿಯುತ್ತಿದೆ ಎಂದು ಹೇಳಿತ್ತು. ಇಂತಹ ನಾಚಿಕೆಗೇಡಿನ ಪ್ರಚೋದನೆಗಳು ನಿಲ್ಲಬೇಕು ಎಂದೂ ಎಚ್ಚರಿಸಿತ್ತು. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ, ಬಾಹ್ಯ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದ ವಲಸಿಗರಿಂದಾಗಿ ಫ್ರಾನ್ಸ್ ನಲ್ಲಿ ಗಲಭೆಗಳು ನಡೆದಿವೆ ಎಂದು ಹೇಳಿದರು. ಅವರು, ಪಾಶ್ಚಿಮಾತ್ಯ ದೇಶಗಳ ಉದಾರವಾದಿಗಳು ಕರುಣೆಯ ಹೆಸರಿನಲ್ಲಿ ಮೂರನೇ ಜಗತ್ತನ್ನು (ಅಭಿವೃದ್ಧಿಶೀಲ ದೇಶಗಳನ್ನು) ಫ್ರಾನ್ಸ್​ಗೆ ಆಮದು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದರು. ಆದಾಗ್ಯೂ, ಅಮೆರಿಕದ ವಿರೋಧ ಪಕ್ಷದ ಸಂಸದ ರೋ ಖನ್ನಾ ಇದನ್ನು ತಳ್ಳಿಹಾಕುತ್ತ, ಯುರೋಪಿಯನ್ ದೇಶಗಳಲ್ಲಿ ಕೆಲವೇ ಜನರ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗಿದೆ, ಇದರಿಂದಾಗಿ ಯುವಕರು ಮನೆ, ಶಿಕ್ಷಣ, ಉದ್ಯೋಗದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಲವು ದೇಶಗಳಿಗೆ ಹಬ್ಬಿದ ಸಂಘರ್ಷದ ಜ್ವಾಲೆ

  • ಸ್ಪೇನ್​ನಲ್ಲಿ 87 ವರ್ಷದ ವೃದ್ಧೆಯೊಬ್ಬರಿಗೆ ಶೇಕಡ 230ರಷ್ಟು ಹೆಚ್ಚಿಸಲಾದ ಮನೆಯ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದಿದ್ದಾಗ, ಅವರನ್ನು ಮನೆಯಿಂದ ಹೊರಹಾಕಲಾಯಿತು. ಅಕ್ಟೋಬರ್ 7ರಂದು ಆ ವೃದ್ಧೆ ಪ್ರಾಣ ಕಳೆದುಕೊಂಡರು. ಇದರ ಬೆನ್ನಲ್ಲೇ 50ಕ್ಕೂ ಹೆಚ್ಚು ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸಿದರು.

  • ಇಟಲಿಯಲ್ಲಿ ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಅಕ್ಟೋಬರ್ 16ರಂದು ವಿದ್ಯಾರ್ಥಿಗಳು ‘ನೋ ಮೆಲೋನಿ ಡೇ’ ಮೆರವಣಿಗೆ ನಡೆಸಿದರು. ಅ.17ರಂದು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಅಂಗಡಿಗಳನ್ನು ಲೂಟಿ ಮಾಡಿ ವಸ್ತುಗಳಿಗೆ ಬೆಂಕಿ ಹಚ್ಚಿದರು.

  • ಅಲ್ಬೇನಿಯಾದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಕ್ಟೋಬರ್ 13ರಿಂದ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾಕಾರರು ಪ್ರಧಾನಿ ಎಡಿ ರಾಮಾ ರಾಜೀನಾಮೆಗೆ ಪಟ್ಟುಹಿಡಿದಿದ್ದಾರೆ. ಅ.17ರಂದು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್​ಗಳನ್ನು ಎಸೆದರು. ಕಾರುಗಳಿಗೆ ಮತ್ತು ರಸ್ತೆ ಬದಿಯ ಕಸದ ತೊಟ್ಟಿಗಳಿಗೆ ಬೆಂಕಿ ಹಚ್ಚಿದರು.

  • ಬೆಲ್ಜಿಯಂನಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ವಿುಕ ಸಂಘಟನೆಗಳು ಒಗ್ಗೂಡಿ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಬೆಲೆ ಏರಿಕೆಯ ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸಿದರು. ಅ.17ರಂದು ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತು. 139ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು.

  • ಪೋರ್ಚುಗಲ್​ನಲ್ಲಿ ಮನೆಬಾಡಿಗೆ ದರ ಏರಿಕೆಯನ್ನು ವಿರೋಧಿಸಿ ಅಕ್ಟೋಬರ್ 10ರಿಂದ ಅಲ್ಲಲ್ಲಿ ಸಣ್ಣ ಪ್ರಮಾಣದ ಪ್ರತಿಭಟನೆಗಳು ಶುರುವಾದವು. ಅ.17ರಂದು ಸಾವಿರಾರು ಜನರು ರಾಜಧಾನಿ ಲಿಸ್ಬನ್​ನಲ್ಲಿ ಮೆರವಣಿಗೆ ನಡೆಸಿದರು.

  • ಆಸ್ಟ್ರಿಯಾದಲ್ಲಿ ಶಿಕ್ಷಣ ಬಜೆಟ್​ನಲ್ಲಿ ಸಂಭಾವ್ಯ 1 ಬಿಲಿಯನ್ ಯುರೋ ಕಡಿತ, ಗ್ರೀಸ್​ನಲ್ಲಿ ದುಬಾರಿ ಶಿಕ್ಷಣ ಮತ್ತು ಹಾಸ್ಟೆಲ್​ಗಳ ಕೊರತೆ ಹಾಗೂ ಜರ್ಮನಿಯಲ್ಲಿ ಕಡ್ಡಾಯ ಮಿಲಿಟರಿ ಸೇವೆ ನಿಯಮವನ್ನು ಮರುಜಾರಿಗೊಳಿಸುವ ಆತಂಕದಿಂದಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಇದಲ್ಲದೆ ಜರ್ಮನಿ, ಆಸ್ಟ್ರಿಯಾ, ಐರ್ಲೆಂಡ್​ನ ಹಲವು ಭಾಗಗಳಲ್ಲೂ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿರುವ ವರದಿಗಳಿವೆ.

ಯುರೋಪಿಯನ್ ದೇಶಗಳ ಪ್ರತಿಭಟನೆಗಳಲ್ಲಿ ಏಕರೂಪದ ಮಾದರಿ ಇದೆಯೇ?

ಹೌದು, ಮುಖ್ಯವಾಗಿ 2 ರೀತಿಯ ಮಾದರಿಗಳು (ಪ್ಯಾಟರ್ನ್) ಕಂಡುಬರುತ್ತಿವೆ.

1.ಪ್ರತಿಭಟನೆಗಳ ಹಿಂದೆ ಹಣದುಬ್ಬರ ಮತ್ತು ಬೆಲೆ ಏರಿಕೆಯಂತಹ ಪ್ರಮುಖ ಕಾರಣಗಳು: ಎಲ್ಲ ದೇಶಗಳಲ್ಲೂ ಬೆಲೆ ಏರಿಕೆ, ನಿರುದ್ಯೋಗ, ಜೀವನ ವೆಚ್ಚ ಮತ್ತು ದುಬಾರಿ ಶಿಕ್ಷಣದಂತಹ ಸಾಮಾನ್ಯ ಸಮಸ್ಯೆಗಳಿವೆ. ಫ್ರಾನ್ಸ್ ಈ ಹೋರಾಟದ ಕೇಂದ್ರಬಿಂದುವಾಗಿದ್ದು, ಈಗ ಅದೇ ಮಾದರಿಯಲ್ಲಿ ಇತರ ದೇಶಗಳಿಗೂ ಹಬ್ಬುತ್ತಿದೆ. ಫ್ರಾನ್ಸ್​ನಲ್ಲಿ ಹಣದುಬ್ಬರ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನರಲ್ಲಿ ತೀವ್ರ ಅಸಮಾಧಾನವಿದೆ. ಆದಾಯಕ್ಕೆ ಹೋಲಿಸಿದರೆ ದೈನಂದಿನ ಜೀವನ ವೆಚ್ಚ ತೀವ್ರವಾಗಿ ಹೆಚ್ಚುತ್ತಿದೆ. ವರದಿಗಳ ಪ್ರಕಾರ, ಇಡೀ ಯುರೋಪಿಯನ್ ಒಕ್ಕೂಟದಲ್ಲಿ 30 ವರ್ಷದೊಳಗಿನ ಶೇಕಡ 27ರಷ್ಟು ಯುವಕರು ಇಡೀ ಕುಟುಂಬಕ್ಕೆ ಸಾಕಾಗುವಷ್ಟು ಕೊಠಡಿಗಳಿಲ್ಲದ ಕಿಕ್ಕಿರಿದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಗ್ರೀಸ್​ನಲ್ಲಿ ಈ ಪ್ರಮಾಣ ಶೇ.48ರಷ್ಟಿದೆ. ಯುವಕರು ಹಾಸ್ಟೆಲ್​ಗಳ ಕೊರತೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ಪೋರ್ಚುಗಲ್​ನಲ್ಲಿ 2015ರಿಂದ 2024ರ ಅವಧಿಯಲ್ಲಿ ಮನೆಗಳ ಬೆಲೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಸ್ಪೇನ್​ನಲ್ಲೂ ಇದೇ ಸಮಸ್ಯೆ ಎದುರಾಗಿದೆ. ಇಟಲಿಯಲ್ಲಿ ಹಣದುಬ್ಬರದ ದರವು ಯೂರೋಜೋನ್​ನಲ್ಲೇ ಅತಿ ಹೆಚ್ಚು ಅಂದರೆ ಶೇ.4.2ಕ್ಕೆ ತಲುಪಿದೆ. ಬೆಲ್ಜಿಯಂನಲ್ಲಿ ಕಾಲೇಜ್ ಶುಲ್ಕಗಳು ಮತ್ತಷ್ಟು ದುಬಾರಿಯಾಗಬಹುದು ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಕಾಡುತ್ತಿದೆ. ಜರ್ಮನಿ ಮತ್ತು ಆಸ್ಟ್ರಿಯಾದಲ್ಲೂ ದುಬಾರಿ ಕಾಲೇಜು ಶುಲ್ಕವನ್ನು ವಸೂಲಿ ಮಾಡಿದರೂ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಬೇನಿಯಾದಲ್ಲಿ ಸರ್ಕಾರದ ಭ್ರಷ್ಟಾಚಾರವೇ ಅತಿ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಕರಾವಳಿ ತೀರ ಪ್ರದೇಶಗಳನ್ನು ಖಾಸಗಿ ಕಂಪನಿಗಳ ಉಸ್ತುವಾರಿಗೆ ಒಪ್ಪಿಸುವುದನ್ನು ವಿರೋಧಿಸಿ ಮೇ ತಿಂಗಳಲ್ಲಿಯೇ ಪ್ರತಿಭಟನೆ ಆರಂಭವಾಗಿತ್ತು.

2. ಹೆಚ್ಚಿನ ಪ್ರತಿಭಟನೆಗಳ ಹಿಂದೆ ಸರ್ಕಾರ ವಿರೋಧಿ ಗುಂಪುಗಳು ಮತ್ತು ಎಡಪಂಥೀಯರ ಬೆಂಬಲ: ಪ್ರತಿಭಟನೆಗಳು ನಡೆಯುತ್ತಿರುವ ದೇಶಗಳಲ್ಲಿ ಬಲಪಂಥೀಯ (ರೈಟ್​ವಿಂಗ್) ಸರ್ಕಾರಗಳು ಅಧಿಕಾರದಲ್ಲಿವೆ; ಆದರೆ ಅಲ್ಲಿನ ವಿರೋಧ ಪಕ್ಷಗಳು ಎಡಪಂಥೀಯ ಅಥವಾ ಎಡಪಂಥೀಯ ಒಲವುಳ್ಳ ಪಕ್ಷಗಳಾಗಿದ್ದು, ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆಗಳಿಗೆ ಬೆಂಬಲ ನೀಡುತ್ತಿವೆ.

ಫ್ರಾನ್ಸ್​ನಲ್ಲಿ ಅಧ್ಯಕ್ಷರಾಗಿ ಮ್ಯಾಕ್ರನ್ ಅವರ ಎರಡು ಅವಧಿಗಳು ಪೂರ್ಣಗೊಳ್ಳಲಿವೆ. ಅವರ ಸರ್ಕಾರವನ್ನು ಸ್ಪಷ್ಟವಾಗಿ ಎಡ ಅಥವಾ ಬಲಪಂಥೀಯ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಪ್ರಮುಖ ವಿರೋಧ ಪಕ್ಷವಾದ ಲಾ ಫ್ರಾನ್ಸ್ ಇನ್ಸೂಮಿಸ್ (ಎಲ್​ಎಫ್​ಐ) ಎಡಪಂಥೀಯ ಪಕ್ಷವಾಗಿದೆ. ಪ್ರತಿಭಟನೆಯನ್ನು ಎಲ್​ಎಫ್​ಐ ಮುಕ್ತವಾಗಿ ಬೆಂಬಲಿಸಿದೆ. ಪ್ರತಿಭಟನೆಯ ನಡುವೆ ನುಸುಳಿದ ಮುಸುಕುಧಾರಿಗಳು ಬೆಂಕಿ ಹಚ್ಚುವಿಕೆ ಹಾಗೂ ಹಿಂಸಾಚಾರದಲ್ಲಿ ತೊಡಗಿದ್ದರು. ತೀವ್ರ ಎಡಪಂಥೀಯ ಗಲಭೆಕೋರರು ಚಳವಳಿಯನ್ನು ಹೈಜಾಕ್ ಮಾಡಿದ್ದಾರೆ ಎಂದು ಮ್ಯಾಕ್ರನ್ ಹೇಳಿದ್ದಾರೆ. ಫ್ರಾನ್ಸ್​ನ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನ ಅವರು ಎಲ್​ಎಫ್​ಐ ಮೇಲೆ ಹಿಂಸಾಚಾರ ಪ್ರಚೋದನೆಯ ಆರೋಪ ಹೊರಿಸಿದ್ದಾರೆ. ಆದಾಗ್ಯೂ, ಎಲ್​ಎಫ್​ಐ ಈ ಆರೋಪವನ್ನು ನಿರಾಕರಿಸಿದೆ.

ಇಟಲಿಯಲ್ಲಿ ತೀವ್ರ ಬಲಪಂಥೀಯ ನಾಯಕಿ ಎಂದು ಪರಿಗಣಿಸಲಾದ ಮೆಲೋನಿ ಅವರು ವಿಶ್ವವಿದ್ಯಾಲಯಗಳ ಕೆಲವು ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇ.30ಕ್ಕೆ ಮಿತಿಗೊಳಿಸಿದ್ದಾರೆ. ಅವರು ಶಾಲೆಗಳಲ್ಲಿ ಬುರ್ಖಾ ನಿಷೇಧಿಸುವ ಬಗ್ಗೆಯೂ ಮಾತನಾಡಿದ್ದರು. ಇಲ್ಲಿನ ಪ್ರತಿಭಟನೆಗಳ ಹಿಂದೆ ‘ಅಕ್ಟೋಬರ್ 17 ಮೂವ್​ವೆುಂಟ್’ ಎಂಬ ಗುಂಪು ಸಕ್ರಿಯವಾಗಿದೆ. ವಿರೋಧ ಪಕ್ಷದ ಎಡಪಂಥೀಯರು ಸರ್ಕಾರದ ವಿರುದ್ಧದ ಅಸಮಾಧಾನವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಎಡಪಂಥೀಯ ಪಕ್ಷಗಳು ನವೆಂಬರ್ 20ರಂದು ರೋಮ್ಲ್ಲಿ ಬೃಹತ್ ರ್ಯಾಲಿಗೆ ಕರೆ ನೀಡಿವೆ. ಪೋರ್ಚುಗಲ್​ನ ಪ್ರಧಾನಿ ಲೂಯಿಸ್ ಮಾಂಟೆನೆಗ್ರೊ ಅವರನ್ನು ಬಲಪಂಥೀಯರೆಂದು ಪರಿಗಣಿಸಲಾಗಿದ್ದು, ಅಲ್ಲಿನ ವಿರೋಧ ಪಕ್ಷವಾದ ಸೋಷಿಯಲಿಸ್ಟ್ ಪಕ್ಷವು ಎಡಪಂಥೀಯ ವಿಚಾರಗಳನ್ನು ಹೊಂದಿದೆ. ಅಲ್ಬೇನಿಯಾದಲ್ಲಿ 2013ರಿಂದ ಅಧಿಕಾರದಲ್ಲಿರುವ ಪ್ರಧಾನಿ ಎಡಿ ರಾಮಾ ವಿರುದ್ಧ ನಡೆಯುತ್ತಿರುವ ಚಳವಳಿಯ ಹೆಸರು ‘ಫ್ಲೆಮಿಂಗೋ’. ತಮಗೆ ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲ ಎಂದು ಪ್ರತಿಭಟನಾಕಾರರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಚಳವಳಿಯು ಎಡಪಂಥೀಯ ಸಿದ್ಧಾಂತದಿಂದ ಪ್ರಭಾವಿತವಾಗಿದೆ ಎಂದು ರಾಮಾ ಆರೋಪಿಸಿದ್ದಾರೆ. ಇದೇ ರೀತಿ ಗ್ರೀಸ್, ಬೆಲ್ಜಿಯಂ ಮತ್ತು ಜರ್ಮನಿಯಲ್ಲಿಯೂ ವಿರೋಧ ಪಕ್ಷಗಳಲ್ಲಿ ಎಡಪಂಥೀಯ ಸಿದ್ಧಾಂತದ ಪಕ್ಷಗಳೇ ಇವೆ.