ಇರಾನ್ ಸರ್ವನಾಶಕ್ಕೆ ಅರಬ್ ರಾಷ್ಟ್ರಗಳ ಸೀಕ್ರೆಟ್ ಸ್ಕೆಚ್? ಟ್ರಂಪ್ ಮೇಲೆ ಒತ್ತಡ ಹೇರುತ್ತಿವೆಯೇ ಗಲ್ಫ್ ದೇಶಗಳು! 
ವಿದೇಶ

ಇರಾನ್ ಸರ್ವನಾಶಕ್ಕೆ ಅರಬ್ ರಾಷ್ಟ್ರಗಳ ಸೀಕ್ರೆಟ್ ಸ್ಕೆಚ್? ಟ್ರಂಪ್ ಮೇಲೆ ಒತ್ತಡ ಹೇರುತ್ತಿವೆಯೇ ಗಲ್ಫ್ ದೇಶಗಳು! Donald Trump

ರಿಯಾದ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಅಚ್ಚರಿಯ ಬೆಳವಣಿಗೆಯೊಂದು ಹೊರಬಿದ್ದಿದೆ. ಅಮೆರಿಕದ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಯುಎಇ (UAE), ಇರಾನ್ ಸಂಪೂರ್ಣವಾಗಿ ಸೋಲುವವರೆಗೂ ಯುದ್ಧವನ್ನು ನಿಲ್ಲಿಸಬೇಡಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಮೇಲೆ ಗುಪ್ತವಾಗಿ ಒತ್ತಡ ಹೇರುತ್ತಿವೆ ಎಂದು ವರದಿಯಾಗಿದೆ. ಇರಾನ್‌ನ ಇಸ್ಲಾಮಿಕ್ ಆಡಳಿತವನ್ನು ಬುಡಸಮೇತ ಕಿತ್ತೊಗೆಯಲು ಇದೊಂದು ಐತಿಹಾಸಿಕ ಅವಕಾಶ ಎಂದು ಗಲ್ಫ್ ರಾಷ್ಟ್ರಗಳು ವಾದಿಸುತ್ತಿವೆ.

ತೆರೆಮರೆಯ ರಾಜತಾಂತ್ರಿಕ ಸಂಚಲನ

ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ಯುದ್ಧದ ಆರಂಭದಲ್ಲಿ ಅಮೆರಿಕ ಮತ್ತು ಇಸ್ರೇಲ್ ತಮಗೆ ಮುನ್ಸೂಚನೆ ನೀಡದೆ ದಾಳಿ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಗಲ್ಫ್ ರಾಷ್ಟ್ರಗಳು, ಈಗ ತಮ್ಮ ನಿಲುವು ಬದಲಿಸಿವೆ. ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಬಹ್ರೇನ್ ದೇಶಗಳ ಉನ್ನತ ಅಧಿಕಾರಿಗಳು ಶ್ವೇತಭವನದ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಇರಾನ್ ಇನ್ನೂ ಪೂರ್ಣ ಪ್ರಮಾಣದಲ್ಲಿ ದುರ್ಬಲಗೊಂಡಿಲ್ಲ, ಕಾರ್ಯಾಚರಣೆ ಮುಂದುವರಿಯಲಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇರಾನ್‌ನ ನಾಯಕತ್ವದಲ್ಲಿ ಆಮೂಲಾಗ್ರ ಬದಲಾವಣೆ ಅಥವಾ ಅವರ ವರ್ತನೆಯಲ್ಲಿ ಸಂಪೂರ್ಣ ಸುಧಾರಣೆ ಬರುವವರೆಗೂ ಈ ಮಿಲಿಟರಿ ಕಾರ್ಯಾಚರಣೆಯನ್ನು ಅಂತ್ಯಗೊಳಿಸಬಾರದು ಎಂಬುದು ಈ ರಾಷ್ಟ್ರಗಳ ಬಲವಾದ ಆಗ್ರಹವಾಗಿದೆ.

ಯುಎಇ ಅತ್ಯಂತ ಆಕ್ರಮಣಕಾರಿ: ಭೂಸೇನಾ ದಾಳಿಗೆ ಒತ್ತಾಯ!

ಈ ಇಡೀ ಬೆಳವಣಿಗೆಯಲ್ಲಿ ಯುಎಇ ಅತ್ಯಂತ ಹಟಮಾರಿ ನಿಲುವನ್ನು ತಳೆದಿದೆ. ಇರಾನ್ ಮೇಲೆ ಕೇವಲ ವೈಮಾನಿಕ ದಾಳಿ ಸಾಲದು, ಬದಲಿಗೆ ಅಮೆರಿಕದ ಸೈನ್ಯವು ನೇರವಾಗಿ ಇರಾನ್ ಮಣ್ಣಿಗೆ ಇಳಿದು ಭೂಸೇನಾ ದಾಳಿ ನಡೆಸಬೇಕು ಎಂದು ಯುಎಇ ಒತ್ತಾಯಿಸುತ್ತಿದೆ. ಕುವೈತ್ ಮತ್ತು ಬಹ್ರೇನ್ ಕೂಡ ಈ ಅಪಾಯಕಾರಿ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಸೌದಿ ಅರೇಬಿಯಾದ ವಾದದ ಪ್ರಕಾರ, ಈಗಲೇ ಯುದ್ಧ ನಿಲ್ಲಿಸಿದರೆ ಅದು ಇರಾನ್ ಪಾಲಿಗೆ ವರದಾನವಾಗಲಿದೆ ಮತ್ತು ಅರಬ್ ನೆರೆಹೊರೆಯವರಿಗೆ ಭವಿಷ್ಯದಲ್ಲಿ ಭದ್ರತೆಯ ಖಾತರಿ ಸಿಗುವುದಿಲ್ಲ. ಇರಾನ್ ಅನ್ನು ಪೂರ್ಣವಾಗಿ ಮಣಿಸಿದರೆ ಮಾತ್ರ ಈ ಭಾಗದಲ್ಲಿ ಶಾಂತಿ ಸಾಧ್ಯವಾಗುತ್ತದೆ ಎಂದು ತಿಳಿದು ಬಂದಿದೆ.

ಟ್ರಂಪ್ ಹೇಳಿದ್ದೇನು..?

ಫ್ಲೋರಿಡಾದಿಂದ ವಾಷಿಂಗ್ಟನ್‌ಗೆ ಏರ್ ಫೋರ್ಸ್ ಒನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಟ್ರಂಪ್, ಗಲ್ಫ್ ಮಿತ್ರ ರಾಷ್ಟ್ರಗಳ ಬೆಂಬಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೌದಿ ಅರೇಬಿಯಾ ಪ್ರಬಲವಾಗಿ ಹೋರಾಡುತ್ತಿದೆ, ಕತಾರ್, ಯುಎಇ, ಕುವೈತ್ ಮತ್ತು ಬಹ್ರೇನ್ ಎಲ್ಲರೂ ಇರಾನ್ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಕೂಡ ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳು ಇರಾನ್ ವಿಚಾರದಲ್ಲಿ ಒಂದೇ ಹಾದಿಯಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಯುದ್ಧದ ಕೇಂದ್ರಬಿಂದುವಾಗಿ ಅಮೆರಿಕದ ನೆಲೆಗಳು

ಗಲ್ಫ್ ರಾಷ್ಟ್ರಗಳು ನೇರವಾಗಿ ಯುದ್ಧದಲ್ಲಿ ಭಾಗಿಯಾಗದಿದ್ದರೂ, ಅವುಗಳ ನೆಲದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳಿಂದಲೇ ಇರಾನ್ ಮೇಲೆ ದಾಳಿಗಳು ನಡೆಯುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕಳೆದ ಕೆಲವು ದಿನಗಳಿಂದ ಸೌದಿ ಮತ್ತು ಯುಎಇಯಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸುತ್ತಿದೆ. ಇದು ಗಲ್ಫ್ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದ್ದರೂ, ಇರಾನ್‌ನ ಆಡಳಿತವನ್ನು ಕಿತ್ತೊಗೆಯುವ ಹಠಕ್ಕೆ ಅವು ಬಿದ್ದಿವೆ.

ಶಾಂತಿಗಾಗಿ ಒಮಾನ್ ಮತ್ತು ಕತಾರ್ ಪ್ರಯತ್ನ

ಎಲ್ಲಾ ಅರಬ್ ರಾಷ್ಟ್ರಗಳು ಯುದ್ಧವನ್ನು ಬೆಂಬಲಿಸುತ್ತಿಲ್ಲ. ಇತಿಹಾಸದುದ್ದಕ್ಕೂ ಇರಾನ್ ಮತ್ತು ಪಶ್ಚಿಮ ದೇಶಗಳ ನಡುವೆ ಸಂಧಾನಕಾರರಾಗಿ ಕೆಲಸ ಮಾಡುತ್ತಿರುವ ಒಮಾನ್ ಮತ್ತು ಕತಾರ್, ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ಅಮೆರಿಕಕ್ಕೆ ಸಲಹೆ ನೀಡಿವೆ. ಯುದ್ಧ ಮುಂದುವರಿದರೆ ಅದು ಇಡೀ ಪಶ್ಚಿಮ ಏಷ್ಯಾವನ್ನು ಸರ್ವನಾಶ ಮಾಡಬಹುದು ಎಂಬ ಭೀತಿ ಅವರದ್ದಾಗಿದೆ.

ಮುಂದಿನ ದಿನಗಳು ನಿರ್ಣಾಯಕ

ಗಲ್ಫ್ ರಾಷ್ಟ್ರಗಳ ಈ ಒತ್ತಡಕ್ಕೆ ಮಣಿದು ಟ್ರಂಪ್ ಇರಾನ್ ಮೇಲೆ ಬೃಹತ್ ಪ್ರಮಾಣದ ಭೂಸೇನಾ ದಾಳಿಗೆ ಆದೇಶ ನೀಡುತ್ತಾರಾ ಅಥವಾ ಇರಾನ್‌ನ ಪ್ರತಿದಾಳಿಯಿಂದ ತತ್ತರಿಸಿರುವ ಮಿತ್ರ ರಾಷ್ಟ್ರಗಳು ನೇರವಾಗಿ ಯುದ್ಧಭೂಮಿಗೆ ಇಳಿಯುತ್ತವೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಒಂದು ವೇಳೆ ಯುದ್ಧ ವಿಸ್ತರಣೆಯಾದರೆ, ಅದು ಜಾಗತಿಕ ತೈಲ ಮಾರುಕಟ್ಟೆ ಮತ್ತು ವಿಶ್ವದ ಭದ್ರತೆಯ ಮೇಲೆ ಭೀಕರ ಪರಿಣಾಮ ಬೀರುವುದು ಖಚಿತವಾಗಿದೆ,(ಏಜೆನ್ಸೀಸ್).