ಅಮೆರಿಕ: ಕೃತಕ ಬುದ್ಧಿಮತ್ತೆ (ಎಐ) ದೈತ್ಯ ಕಂಪನಿ ಇದೀಗ ಐತಿಹಾಸಿಕ ಬೆಳವಣಿಗೆಯನ್ನು ಕಂಡಿದೆ. ಜನಪ್ರಿಯ ಎಐ ಚಾಟ್ಬಾಟ್ ಕ್ಲಾಡ್ (Claude) ಅಭಿವೃದ್ಧಿಪಡಿಸಿರುವ ಆಂಥ್ರೋಪಿಕ್ ಕಂಪನಿಯ ಷೇರುಗಳು ಮೊದಲ ದಿನವೇ ಮಾರುಕಟ್ಟೆಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದಿವೆ.
ನಾಸ್ಡಾಕ್ನಲ್ಲಿ ಗುರುವಾರ (ನ.19) ವಹಿವಾಟು ಆರಂಭಿಸಿದ ಕಂಪನಿಯ ಷೇರುಗಳು ಮೊದಲ ದಿನವೇ ಶೇ.17ಕ್ಕೂ ಹೆಚ್ಚು ಏರಿಕೆ ಕಂಡಿವೆ. ಆರಂಭಿಕ ವಹಿವಾಟಿನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ ದಾಟಿದ್ದು, ದಿನದ ಅಂತ್ಯಕ್ಕೆ ಸುಮಾರು 1.75 ಟ್ರಿಲಿಯನ್ ಡಾಲರ್ಗೆ ತಲುಪಿದೆ. ಎಐ ಕ್ಷೇತ್ರದ ಬಗ್ಗೆ ಹೂಡಿಕೆದಾರರಲ್ಲಿರುವ ನಿರೀಕ್ಷೆ ಮತ್ತು ಉತ್ಸಾಹಕ್ಕೆ ಈ ಐಪಿಒ ಮತ್ತೊಂದು ಉದಾಹರಣೆಯಾಗಿದೆ.
ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಸ್ಡಾಕ್ನಲ್ಲಿ ಮೊದಲ ದಿನದ ವಹಿವಾಟಿನ ಅಂತ್ಯಕ್ಕೆ ಷೇರುಗಳು ಶೇ.17.07ರಷ್ಟು ಏರಿಕೆ ಕಂಡಿವೆ. ಪ್ರತಿ ಷೇರಿನ ಬೆಲೆ 97.17 ಡಾಲರ್ಗೆ ಮುಕ್ತಾಯಗೊಂಡಿದ್ದು, ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 1.75 ಟ್ರಿಲಿಯನ್ ಡಾಲರ್ಗೆ ತಲುಪಿರುವುದು ಹೂಡಿಕೆದಾರರಲ್ಲೂ ಖುಷಿ ತಂದಿದೆ.
ಆಂಥ್ರೋಪಿಕ್ ತನ್ನ ಐಪಿಒ ಷೇರಿನ ಆರಂಭಿಕ ಬೆಲೆಯನ್ನು 83 ಡಾಲರ್ ಎಂದು ನಿಗದಿಪಡಿಸಿತ್ತು. ಆದರೆ, ನವೆಂಬರ್ 19ರಂದು ನಾಸ್ಡಾಕ್ನಲ್ಲಿ ವಹಿವಾಟು ಆರಂಭಗೊಂಡಾಗ ಷೇರುಗಳು 111.50 ಡಾಲರ್ಗೆ ಓಪನ್ ಆದವು. ಇದು ಐಪಿಒ ಬೆಲೆಗಿಂತ ಶೇ.30ಕ್ಕೂ ಹೆಚ್ಚಿನ ಏರಿಕೆಯಾಗಿತ್ತು. ದಿನದ ವಹಿವಾಟಿನಲ್ಲಿ ಷೇರುಗಳ ಬೆಲೆ 115.10 ಡಾಲರ್ವರೆಗೂ ತಲುಪಿತ್ತು. ಬಳಿಕ ಸ್ವಲ್ಪ ಇಳಿಕೆಯಾದರೂ, ವಹಿವಾಟಿನ ಅಂತ್ಯಕ್ಕೆ 97.17 ಡಾಲರ್ನಲ್ಲಿ ಸ್ಥಿರಗೊಂಡಿತು.
ಮೊದಲ ದಿನದ ಆರಂಭಿಕ ಏರಿಕೆಯ ಸಂದರ್ಭದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 2.01 ಟ್ರಿಲಿಯನ್ ಡಾಲರ್ಗೆ ತಲುಪಿತ್ತು. ದಿನದ ಅಂತ್ಯಕ್ಕೆ ಸಂಪೂರ್ಣವಾಗಿ ಪರಿಗಣಿಸಲಾದ ಷೇರುಗಳ ಆಧಾರದ ಮೇಲೆ ಕಂಪನಿಯ ಮೌಲ್ಯ ಸುಮಾರು 1.75 ಟ್ರಿಲಿಯನ್ ಡಾಲರ್ ಆಗಿತ್ತು.
ಈ ಐಪಿಒ ಮೂಲಕ ಆಂಥ್ರೋಪಿಕ್ ಸುಮಾರು 81 ಬಿಲಿಯನ್ ಡಾಲರ್ ಸಂಗ್ರಹಿಸಿದೆ. ಕಂಪನಿ ಒಟ್ಟು 98 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ 83 ಡಾಲರ್ ದರದಲ್ಲಿ ಸಾರ್ವಜನಿಕರಿಗೆ ನೀಡಿತ್ತು. ಈ ಮೂಲಕ ಐಪಿಒ ಮೂಲಕ ಹಣ ಸಂಗ್ರಹಿಸಿದ ಪ್ರಮಾಣದಲ್ಲಿ ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಸಂಸ್ಥೆಯ ಹಿಂದಿನ ದಾಖಲೆಯನ್ನು ಹಿಂದಿಕ್ಕಿದೆ.
ಸ್ಪೇಸ್ಎಕ್ಸ್ ತನ್ನ ಐಪಿಒ ಮೂಲಕ ಸುಮಾರು 75 ಬಿಲಿಯನ್ ಡಾಲರ್ ಸಂಗ್ರಹಿಸಿತ್ತು. ಆರಂಭದಲ್ಲಿ ಆಂಥ್ರೋಪಿಕ್ ಪ್ರತಿ ಷೇರಿಗೆ 70ರಿಂದ 78 ಡಾಲರ್ ಬೆಲೆ ನಿಗದಿಪಡಿಸುವ ನಿರೀಕ್ಷೆ ಹೊಂದಿತ್ತು. ಆದರೆ, ಹೂಡಿಕೆದಾರರಿಂದ ಭಾರಿ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಿಮವಾಗಿ 83 ಡಾಲರ್ಗೆ ಬೆಲೆ ನಿಗದಿಪಡಿಸಲಾಯಿತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಆಂಥ್ರೋಪಿಕ್ನ ಈ ಐಪಿಒ ಕೇವಲ ಕಂಪನಿಯ ಯಶಸ್ಸಿಗೆ ಮಾತ್ರವಲ್ಲ, ಇಡೀ ಎಐ ಉದ್ಯಮಕ್ಕೂ ಮಹತ್ವದ ಬೆಳವಣಿಗೆಯಾಗಿದೆ. ಮುಂದುವರಿದ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾದ ಆಂಥ್ರೋಪಿಕ್ ಸಾರ್ವಜನಿಕ ಷೇರು ಮಾರುಕಟ್ಟೆಗೆ ಪ್ರವೇಶಿಸಿರುವುದು ಹೂಡಿಕೆದಾರರ ಆಸಕ್ತಿಯನ್ನು ಇನ್ನಷ್ಟು ಡಬಲ್ ಮಾಡಿದೆ.
ಈ ಮಧ್ಯೆ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚುತ್ತಿರುವ ನಡುವೆಯೇ ಕೆಲವು ಆತಂಕಗಳೂ ಇವೆ. ಎಐ ತಂತ್ರಜ್ಞಾನದಲ್ಲಿ ಗುಳ್ಳೆ (AI Bubble) ಸೃಷ್ಟಿಯಾಗುವ ಸಾಧ್ಯತೆ, ಡೇಟಾ ಸೆಂಟರ್ಗಳು ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯಕ್ಕೆ ತಗಲುವ ಭಾರಿ ವೆಚ್ಚ ಹಾಗೂ ಉದ್ಯೋಗಗಳ ಮೇಲೆ ಈ ಆಧುನಿಕ ಟೆಕ್ನಾಲಜಿ ಬೀರುವ ಪರಿಣಾಮದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಆಂಥ್ರೋಪಿಕ್ನ ಹಣಕಾಸಿನ ಸ್ಥಿತಿಯೂ ಗಮನ ಸೆಳೆಯುತ್ತಿದೆ. ಕಂಪನಿಯ ಆದಾಯ ವೇಗವಾಗಿ ಹೆಚ್ಚುತ್ತಿದ್ದರೂ, ಅದರ ಕಾರ್ಯಾಚರಣಾ ವೆಚ್ಚ ಮತ್ತು ಮೂಲಸೌಕರ್ಯ ಹೂಡಿಕೆಗಳು ದೊಡ್ಡ ಮಟ್ಟದಲ್ಲಿವೆ. ರಾಯಿಟರ್ಸ್ ವರದಿ ಪ್ರಕಾರ, 2025ರಲ್ಲಿ ಕಂಪನಿಯ ಆದಾಯ 4.59 ಬಿಲಿಯನ್ ಡಾಲರ್ ಆಗಿತ್ತು. 2026ರ ಮೊದಲ ಆರು ತಿಂಗಳಲ್ಲಿ ಅದು 16.29 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಂಪನಿಯ ಕಾರ್ಯಾಚರಣಾ ನಷ್ಟ 693 ಮಿಲಿಯನ್ ಡಾಲರ್ ಆಗಿತ್ತು.
ಇದಲ್ಲದೆ, ಮುಂದಿನ ಹತ್ತು ವರ್ಷಗಳಲ್ಲಿ ಸುಮಾರು ಎಂಟು ಪಾಲುದಾರ ಸಂಸ್ಥೆಗಳೊಂದಿಗೆ ಕಂಪ್ಯೂಟಿಂಗ್ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ 600 ಬಿಲಿಯನ್ ಡಾಲರ್ಗೂ ಅಧಿಕ ವೆಚ್ಚದ ಬದ್ಧತೆಗಳನ್ನು ಕಂಪನಿ ಹೊಂದಿದೆ. ಈ ಒಪ್ಪಂದಗಳ ಕೆಲವು ಭಾಗಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲದಿರುವುದರಿಂದ, ಭವಿಷ್ಯದಲ್ಲಿ ವೆಚ್ಚ ನಿರ್ವಹಣೆ ಕಂಪನಿಗೆ ಪ್ರಮುಖ ಸವಾಲಾಗುವ ಸಾಧ್ಯತೆಗಳಿವೆ,(ಏಜೆನ್ಸೀಸ್).