ಇರಾನ್ ಗಡಿಗೆ ಅಮೆರಿಕದ ಮತ್ತೊಂದು ಬೃಹತ್ ಯುದ್ಧ ನೌಕೆ: ಯುದ್ಧದ ಕಹಳೆ ಊದಿದರಾ ಡೊನಾಲ್ಡ್ ಟ್ರಂಪ್..? 
ವಿದೇಶ

ಇರಾನ್ ಗಡಿಗೆ ಅಮೆರಿಕದ ಮತ್ತೊಂದು ಬೃಹತ್ ಯುದ್ಧ ನೌಕೆ: ಯುದ್ಧದ ಕಹಳೆ ಊದಿದರಾ ಡೊನಾಲ್ಡ್ ಟ್ರಂಪ್..? Donald Trump

ನ್ಯೂಯಾರ್ಕ್: ಜಾಗತಿಕ ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಯಾಗಿದೆ. ಇರಾನ್ ಜೊತೆಗಿನ ಪರಮಾಣು ಒಪ್ಪಂದದ ಮಾತುಕತೆಗಳು ಹಳ್ಳ ಹಿಡಿಯುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ ವಿರುದ್ಧ ಮಿಲಿಟರಿ ಕ್ರಮದ ಸುಳಿವು ನೀಡಿದ್ದಾರೆ. ಮಧ್ಯಪ್ರಾಚ್ಯಕ್ಕೆ ಅಮೆರಿಕ ತನ್ನ ಎರಡನೇ ಬೃಹತ್ ವಿಮಾನವಾಹಿ ಯುದ್ಧ ನೌಕೆಯನ್ನು ರವಾನಿಸುತ್ತಿರುವುದನ್ನು ಟ್ರಂಪ್ ಖಚಿತಪಡಿಸಿದ್ದು, ಇದು ಇರಾನ್ ಮೇಲಿನ ಸಂಭವನೀಯ ದಾಳಿಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಶ್ವದ ಅತಿದೊಡ್ಡ ಯುದ್ಧ ನೌಕೆ 'ಫೋರ್ಡ್' ಇರಾನ್ ಕಡೆಗೆ..!

ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧ ನೌಕೆ ಬೀಡುಬಿಟ್ಟಿದೆ. ಇದರ ಬೆನ್ನಲ್ಲೇ ವಿಶ್ವದ ಅತಿದೊಡ್ಡ ವಿಮಾನವಾಹಿ ನೌಕೆಯಾದ ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ಅನ್ನು ಮೆಡಿಟರೇನಿಯನ್ ಸಮುದ್ರಕ್ಕೆ ನಿಯೋಜಿಸಲು ವೈಟ್ ಹೌಸ್ ನಿರ್ಧರಿಸಿದೆ. ಒಂದು ವೇಳೆ ಇರಾನ್ ಜೊತೆ ಒಪ್ಪಂದ ಸಾಧ್ಯವಾಗದಿದ್ದರೆ, ನಮಗೆ ಈ ಶಕ್ತಿಯ ಅಗತ್ಯವಿದೆ. ಇದು ಶೀಘ್ರದಲ್ಲೇ ಹೊರಡಲಿದೆ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಿಶೇಷವೆಂದರೆ, ಕಳೆದ ತಿಂಗಳಷ್ಟೇ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಕಾರ್ಯಾಚರಣೆಯಲ್ಲಿದ್ದ ಈ ನೌಕೆ, ಈಗ ಇರಾನ್ ಗಡಿಯತ್ತ ಸಾಗುತ್ತಿದೆ.

ಇರಾನ್‌ನಲ್ಲಿ ಆಡಳಿತ ಬದಲಾವಣೆಯೇ ಪರಿಹಾರ - ಟ್ರಂಪ್

ಇರಾನ್‌ನ ಇಂದಿನ ಸ್ಥಿತಿಗೆ ಅಲ್ಲಿನ ಆಡಳಿತವೇ ಕಾರಣ ಎಂದು ಕಿಡಿಕಾರಿದ ಟ್ರಂಪ್, ಕಳೆದ 47 ವರ್ಷಗಳಿಂದ ಮಾತುಕತೆ ನಡೆಯುತ್ತಲೇ ಇದೆ. ಆದರೆ ಫಲಿತಾಂಶ ಶೂನ್ಯ. ಈ ಸಮಯದಲ್ಲಿ ನಾವು ಅನೇಕ ಪ್ರಾಣಗಳನ್ನು ಕಳೆದುಕೊಂಡಿದ್ದೇವೆ. ಇರಾನ್‌ನಲ್ಲಿ ಆಡಳಿತ ಬದಲಾವಣೆಯಾಗುವುದು ಅಲ್ಲಿನ ಜನರಿಗೆ ಒಳ್ಳೆಯದು ಎಂದು ಗುಡುಗಿದ್ದಾರೆ. ಇರಾನ್‌ನಲ್ಲಿ ಆರ್ಥಿಕ ಸಂಕಷ್ಟದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸಿದ ಅಮೆರಿಕ ಅಧ್ಯಕ್ಷ, ಈ ಬಿಕ್ಕಟ್ಟನ್ನು ಒಮ್ಮೆ ಮತ್ತು ಕೊನೆಯ ಬಾರಿಗಾಗಿ ಬಗೆಹರಿಸುವುದಾಗಿ ಹೇಳಿದ್ದಾರೆ.

ಇರಾನ್ ಪರಮಾಣು ತಾಣಗಳ ಮೇಲೆ ಅಮೆರಿಕ ಕಣ್ಣು

ಅಮೆರಿಕದ ಕಠಿಣ ಆರ್ಥಿಕ ನಿರ್ಬಂಧಗಳಿಂದ ಇರಾನ್ ತತ್ತರಿಸಿದೆ. ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಂತಹ ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಲು ಅಮೆರಿಕ ಮತ್ತು ಇಸ್ರೇಲ್ ಜಂಟಿ ಯೋಜನೆ ರೂಪಿಸುತ್ತಿವೆ ಎನ್ನಲಾಗಿದೆ. ಈ ಕುರಿತು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಗುಪ್ತ ಸಭೆ ಕೂಡ ನಡೆದಿದೆ.

ಇರಾನ್ ತಿರುಗೇಟು; ಅತಿಯಾದ ಬೇಡಿಕೆಗಳಿಗೆ ಬಗ್ಗುವುದಿಲ್ಲ

ಅತ್ತ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಮೆರಿಕದ ಬೆದರಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮತ್ತು ಯುರೋಪ್ ನಿರ್ಮಿಸಿರುವ ಅಪನಂಬಿಕೆಯ ಗೋಡೆಯು ಮಾತುಕತೆಗೆ ಅಡ್ಡಿಯಾಗಿದೆ. ನಾವು ಶಾಂತಿಯನ್ನು ಬಯಸುತ್ತೇವೆ.ಆದರೆ ಅಮೆರಿಕದ ಅತಿಯಾದ ಬೇಡಿಕೆಗಳಿಗೆ ತಲೆಬಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಬೆಳವಣಿಗೆಗಳು ಜಾಗತಿಕವಾಗಿ ತೈಲ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಅಮೆರಿಕದ ಈ ಮಿಲಿಟರಿ ನಡೆ ಇರಾನ್ ಅನ್ನು ಸಂಘರ್ಷಕ್ಕೆ ಪ್ರಚೋದಿಸುತ್ತಿದೆಯೇ ಎಂಬ ಪ್ರಶ್ನೆ ಈಗ ಮೂಡಿದೆ,(ಏಜೆನ್ಸೀಸ್).