ಬಾಂಗ್ಲಾದೇಶದ ಹಿಂದೂ ನಾಯಕ ರಮೇಶ್ ಚಂದ್ರ ಸೇನ್ 
ವಿದೇಶ

ಬಾಂಗ್ಲಾದಲ್ಲಿ ಮತ್ತೊಂದು 'ಕಸ್ಟಡಿ ಡೆತ್'? ಹಿಂದೂ ನಾಯಕ ರಮೇಶ್ ಸೇನ್ ಸಾವಿನ ಸುತ್ತ ಅನುಮಾನದ ಹುತ್ತ! Ramesh Sen

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದ ಹಿಂದೂ ನಾಯಕ ರಮೇಶ್ ಚಂದ್ರ ಸೇನ್ ನಿಧನ
  • ಇದೊಂದು ಜೈಲು ಹತ್ಯೆ ಎನ್ನುತ್ತಿರುವ ಬಾಂಗ್ಲಾ ನಾಗರಿಕರು
  • ಮಾಜಿ ಪ್ರಧಾನಿ ಶೇಕ್​ ಹಸೀನಾ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಮೇಶ್ ಚಂದ್ರ ಸೇನ್
ಬಾಂಗ್ಲಾದೇಶ: ಬಾಂಗ್ಲಾದೇಶದ ಹೆಸರಾಂತ ಹಿಂದೂ ನಾಯಕ ಮತ್ತು ಮಾಜಿ ಸಚಿವ ರಮೇಶ್ ಚಂದ್ರ ಸೇನ್ (Ramesh Sen) ಶನಿವಾರ (ಫೆ.7) ಬಂಧನದಲ್ಲಿದ್ದಾಗ ತೀವ್ರ ಅಸ್ವಸ್ಥರಾಗಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಸಹಾಯಕಾರಿ ಸ್ವಭಾವ ಮತ್ತು ಕಳಂಕರಹಿತ ರಾಜಕೀಯ ಜೀವನಕ್ಕೆ ಹೆಸರುವಾಸಿಯಾದ ಸೇನ್ ಅವರ ಸಾವು, ಹಿರಿಯ ಅವಾಮಿ ಲೀಗ್ ನಾಯಕರು ಮತ್ತು ಬಂಧನದಲ್ಲಿರುವ ಮಾಜಿ ಸಚಿವರ ಚಿಕಿತ್ಸೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ರಮೇಶ್ ಚಂದ್ರ ಸೇನ್ ಬಾಂಗ್ಲಾದೇಶದ ಮಾಜಿ ಜಲಸಂಪನ್ಮೂಲ ಸಚಿವರಾಗಿದ್ದರು ಮತ್ತು ಐದು ಬಾರಿ ಸಂಸತ್ ಸದಸ್ಯರಾಗಿದ್ದರು. ಸೇನ್​ ಅವರನ್ನು ದಿನಾಜ್‌ಪುರ ಜಿಲ್ಲಾ ಜೈಲಿನಿಂದ ದಿನಾಜ್‌ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಬೆಳಿಗ್ಗೆ 9.10 ಕ್ಕೆ ಕರೆದೊಯ್ಯಲಾಯಿತು ಮತ್ತು ಬೆಳಿಗ್ಗೆ 9:29 ಕ್ಕೆ ನಿಧನರಾದರು ಎಂದು ಬಾಂಗ್ಲಾದೇಶದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
85 ವರ್ಷ ವಯಸ್ಸಿನ ಸೇನ್ ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದು, ಮುಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ, ಮಾಜಿ ಸಚಿವರಿಗೆ ಸರಿಯಾದ ವೈಧ್ಯಕೀಯ ಸೌಲಭ್ಯಗಳನ್ನು ನೀಡಲಿಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಆಗಸ್ಟ್ 2024 ರಲ್ಲಿ ಶೇಖ್ ಹಸೀನಾ ಆಡಳಿತದ ಪತನದ ನಂತರ ಅವಾಮಿ ಲೀಗ್ (ಎಎಲ್) ನಾಯಕರ ವಿರುದ್ಧ ರಾಜಕೀಯ ದ್ವೇಷದ ವ್ಯಾಪಕ ಆರೋಪಗಳು ಸಾಮಾನ್ಯವಾದಾಗ, ಅವರ ಮೇಲೆ ಕೊಲೆ ಸೇರಿದಂತೆ ಮೂರು ಆರೋಪಗಳನ್ನು ಹೊರಿಸಲಾಯಿತು. ಆಗಸ್ಟ್ 2024 ರಲ್ಲಿ ದನಗಳಿಗೆ ಬಳಸುವ ಹಗ್ಗಗಳಿಂದ ಕೈಗಳನ್ನು ಕಟ್ಟಿ ಪೊಲೀಸರ ಬಳಿ ಕರೆದೊಯ್ಯುತ್ತಿರುವ ಸೇನ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡವು.

ಅವಾಮಿ ಲೀಗ್ ನಾಯಕನ ಜೈಲು ಹತ್ಯೆ

ಸೇನ್ ಅವರ ಸಾವಿನ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿರುವ ಬಾಂಗ್ಲಾದೇಶಿಗಳು, ಇದೊಂದು ಜೈಲು ಕೊಲೆ ಎಂದು ಆರೋಪಿಸಿದ್ದಾರೆ. ಇಗಾಗಲೇ ಅನಾರೋಗ್ಯಕ್ಕೆ ಒಳಗಾಗಿರುವ ಐದು ಜನ ಅವಾಮಿ ಲೀಗ್ ನಾಯಕರು ಇದೇ ರೀತಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅವರು ಈ ಕೊಲೆಯನ್ನು ಸಹ ಅನಾರೋಗ್ಯದಿಂದ ಸಂಭವಿಸಿದ ಸಾವೆಂದು ಹೇಳುತ್ತಿದ್ದಾರೆ. ಆದರೆ ಇದು ಕಸ್ಟಡಿಯಲ್ಲಿ ನಡೆದಿರುವ ಕಗ್ಗೊಲೆಯಾಗಿದೆ. ಇದು 2024 ರಿಂದ ನಡೆಯುತ್ತಿರುವ ಹತ್ಯಾಕಾಂಡದ ಭಾಗವಾಗಿದೆ ಎಂದು ಬಾಂಗ್ಲಾದೇಶದ ನಿವಾಸಿ ಪ್ರದೀಪ್ ಕುಮಾರ್ ಚೌಧರಿ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಯಾರು ಈ ರಮೇಶ್ ಚಂದ್ರ ಸೇನ್?

ವರದಿಗಳ ಪ್ರಕಾರ, ಏಪ್ರಿಲ್ 30, 1940 ರಂದು ಜನಿಸಿದ ರಮೇಶ್ ಚಂದ್ರ ಸೇನ್, ರಂಗ್‌ಪುರ್ ಕಾರ್ಮೈಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಫೆಬ್ರವರಿ 1997 ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರು ಮೊದಲು ಠಾಕೂರ್ಗಾಂವ್​ನಿಂದ ಸಂಸದರಾಗಿ ಆಯ್ಕೆಯಾದರು. ಸೇನ್ ಠಾಕೂರ್ಗಾಂವ್ ಕ್ಷೇತ್ರದ ಸಂಸದರಾಗಿದ್ದ ಸೇನ್, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್‌ನ ಪ್ರೆಸಿಡಿಯಂ ಸದಸ್ಯರಾಗಿದ್ದರು. ಅವರು 2009 ರಿಂದ 2014 ರವರೆಗೆ ಸಚಿವರಾಗಿದ್ದರು.
ಶ್ರೀಮಂತ ಹಿನ್ನೆಲೆಯಿಂದ ಬಂದ ಸೇನ್, ಅವರ ಔದಾರ್ಯ ಮತ್ತು ಸಹಾಯಕಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಆದಾಗ್ಯೂ, ಆಗಸ್ಟ್ 2024 ರಲ್ಲಿ ಅವ್ಯವಸ್ಥೆ ಉಂಟಾದ ನಂತರ, ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಆಗಸ್ಟ್ 16 ರ ಮಧ್ಯರಾತ್ರಿ ಸೇನ್ ಅವರನ್ನು ಅವರ ಮನೆಯಿಂದ ಬಂಧಿಸಿ ಮರುದಿನ ದಿನಜ್‌ಪುರ ಜಿಲ್ಲಾ ಜೈಲಿಗೆ ಕಳುಹಿಸಲಾಯಿತು.
ಬಾಂಗ್ಲಾದೇಶ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ ಸೇನ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳುತ್ತಿವೆ. ಆದರೆ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಿಂಸೆಯಿಂದ ಕಂಗೆಟ್ಟಿದ್ದ ಸೇನ್​ ಕುಟುಂಬ ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂಬ ವದಂತಿಯಿದೆ. ಹೀಗಾಗಿ ಸೇನ್​ ಅವರ ಅಂತ್ಯಕ್ರಿಯೆಯನ್ನು ಯಾರು ಮಾಡಲಿದ್ದಾರೆ ಎಂದು ಬಾಂಗ್ಲಾ ಜನತೆ ಚಿಂತಿತರಾಗಿದ್ದಾರೆ,(ಏಜನ್ಸೀಸ್​).