ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ
- ಇತ್ತೀಚೆಗಷ್ಟೇ ಮರಣದಂಡನೆ ಶಿಕ್ಷೆಗೆ ಗುರಿ
- ಈಗ ಭ್ರಷ್ಟಾಚಾರ ಕೇಸ್ನಡಿ 5 ವರ್ಷ ಜೈಲು ಶಿಕ್ಷೆ
- ಹಸೀನಾ ಸೇರಿ 29 ಮಂದಿಗೆ ಕಾನೂನು ಸಂಕಷ್ಟ
ನವದೆಹಲಿ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಇತ್ತೀಚೆಗಷ್ಟೇ ಬಾಂಗ್ಲಾ ನ್ಯಾಯಾಲಯ, ಮೂರು ಆರೋಪಗಳಲ್ಲಿ ಹಸೀನಾರನ್ನು ತಪ್ಪಿತಸ್ಥರೆಂದು ಘೋಷಿಸಿ, ಮರಣದಂಡನೆ ಶಿಕ್ಷೆಗೆ ಗುರಿ ಪಡಿಸಿತು. ಇದರ ಬೆನ್ನಲ್ಲೇ ಈಗ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.
ಶಾಕ್ ಮೇಲೆ ಮತ್ತೊಂದು ಶಾಕ್
ಪುರ್ಬಾಚಲ್ ಪ್ಲಾಟ್‌ಫಾರ್ಮ್ ಹಗರಣ ಪ್ರಕರಣದಲ್ಲಿ ಢಾಕಾದ ವಿಶೇಷ ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ಕೇಸ್ನಡಿ, ಶೇಖ್ ಹಸೀನಾಗೆ ಐದು ವರ್ಷ, ಅವರ ಸಹೋದರಿ ರೆಹಾನಾ ಅವರಿಗೆ ಏಳು ವರ್ಷ ಮತ್ತು ಸೋದರ ಸೊಸೆ ಹಾಗೂ ಬ್ರಿಟಿಷ್ ಸಂಸದೆ ತುಲಿಪ್ ಸಿದ್ದಿಕ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಶೇಖ್ ಹಸೀನಾ ಅವರ ಕುಟುಂಬವು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಪುರ್ಬಾಚಲ್ ಪ್ರದೇಶದಲ್ಲಿ ಅಕ್ರಮವಾಗಿ ಪ್ಲಾಟ್‌ಗಳನ್ನು ಸ್ವಾಧೀನಪಡಿಸಿಕೊಂಡ ಆರೋಪವನ್ನು ಹೊತ್ತಿದೆ. ಹಸೀನಾ ಮತ್ತು ಅವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಕೋರ್ಟ್ ಹಸೀನಾ ಅವರ ಮಗ ಮತ್ತು ಮಗಳಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ.
ಢಾಕಾ ಟ್ರಿಬ್ಯೂನ್ ವರದಿ ಪ್ರಕಾರ, ಪುರ್ಬಾಚಲ್ ಯೋಜನೆಯಡಿ ಪ್ಲಾಟ್‌ಗಳ ಹಂಚಿಕೆಯಲ್ಲಿನ ಅಕ್ರಮಗಳ ಕುರಿತು ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ. ಶೇಖ್ ಹಸೀನಾ, ಅವರ ಮಕ್ಕಳು, ಸಹೋದರಿ ರೆಹಾನಾ, ಸೊಸೆ ಸಿದ್ದಿಕ್ ಮತ್ತು ಇತರ ಸಂಬಂಧಿಕರು ಸೆಕ್ಟರ್ 27ರ ರಾಜತಾಂತ್ರಿಕ ವಲಯದಲ್ಲಿ ಆರು ನಿವೇಶನಗಳನ್ನು (7,200 ಚದರ ಅಡಿ) ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಎಸಿಸಿ ಆರೋಪಿಸಿದೆ.
29 ಜನರ ವಿರುದ್ಧ ಗಂಭೀರ ಆರೋಪ
ಜನವರಿ 2025ರಲ್ಲಿ ದಾಖಲಾಗಿದ್ದ ಪ್ರಕರಣದ ಭಾಗವಾಗಿ, ಹಸೀನಾ ಅವರ ಮಕ್ಕಳು ಮತ್ತು ಸೈಮಾ ವಾಝೀದ್ ಸೇರಿ 29 ಜನರ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಬ್ರಿಟಿಷ್ ಸಂಸತ್ತಿನಲ್ಲಿ ಹ್ಯಾಂಪ್‌ಸ್ಟೆಡ್ ಹೈಗೇಟ್ ಅನ್ನು ಪ್ರತಿನಿಧಿಸುವ ತುಲಿಪ್ ಸಿದ್ದಿಕ್, ಈ ಹಿಂದೆ ಆರೋಪಗಳನ್ನು ನಿರಾಕರಿಸಿದ್ದರು, ತನಿಖೆಯನ್ನು ಕಟ್ಟುಕಥೆ ಆರೋಪಗಳು ಮತ್ತು ರಾಜಕೀಯ ದ್ವೇಷದ ಆಧಾರದ ಮೇರೆಗೆ ಪ್ರಹಸನ ಎಂದು ಬಣ್ಣಿಸಿದ್ದರು. ಜನವರಿಯಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಸಂಪುಟದಲ್ಲಿ ಖಜಾನೆ ಮತ್ತು ಹಣಕಾಸು ಕಾರ್ಯದರ್ಶಿ ಹುದ್ದೆಗೆ ತುಲಿಪ್ ರಾಜೀನಾಮೆ ನೀಡಿದ್ದು ಇಲ್ಲಿ ಗಮನಾರ್ಹ.
21 ವರ್ಷಗಳ ಜೈಲು ಶಿಕ್ಷೆ
ಹಸೀನಾ ವಿರುದ್ಧದ ಹಲವಾರು ಪ್ರಕರಣಗಳಲ್ಲಿ ಈ ತೀರ್ಪು ಕೂಡ ಒಂದಾಗಿದೆ. ಈ ತಿಂಗಳ ಆರಂಭದಲ್ಲಿ, ಪುರ್ಬಾಚಲ್ ಪ್ರಾಜೆಕ್ಟ್ಗೆ ಸಂಬಂಧಿಸಿದ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಢಾಕಾದ ವಿಶೇಷ ನ್ಯಾಯಾಲಯವು ಅವರಿಗೆ 21 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಜಾಯ್ ಮತ್ತು ಪುಟುಲ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆಗಸ್ಟ್ 5, 2024ರಂದು, ಬೃಹತ್ ಪ್ರತಿಭಟನೆಗಳ ಮೂಲಕ ಹಸೀನಾ ಅವರ ಅವಾಮಿ ಲೀಗ್ ಆಡಳಿತವನ್ನು ಕೆಡವಲಾಯಿತು. ಇದಾದ ಬಳಿಕ ಹಸೀನಾ ಭಾರತದಲ್ಲಿ ಆಶ್ರಯ ಪಡೆದರು. ಮಾಜಿ ಪ್ರಧಾನಿಯ ಈ ನಡೆಯನ್ನು ಖಂಡಿಸಿದ ಬಾಂಗ್ಲಾದೇಶ, ಅವರಿಗೆ ಛೀಮಾರಿ ಹಾಕಿತ್ತು.
ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಅವರ ಪಾತ್ರಕ್ಕಾಗಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಶೇಖ್ ಹಸೀನಾ ಅವರನ್ನು ದೋಷಿ ಎಂದು ಘೋಷಿಸಿ, ಮರಣದಂಡನೆ ಶಿಕ್ಷೆ ವಿಧಿಸಿತು. ಪ್ರಸ್ತುತ, ಬಾಂಗ್ಲಾದೇಶ ಮಧ್ಯಂತರ ಸರ್ಕಾರವು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ತಿಳಿಸಿದೆ. ಈ ವಿನಂತಿಯನ್ನು ಕಾನೂನುಬದ್ಧವಾಗಿ ಪರಿಗಣಿಸುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).