IPL 2026 | ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತಿ ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿವಾಹದ ಕಾರಣದಿಂದಾಗಿ ಇಂಗ್ಲಿಸ್ ಟೂರ್ನಿಯ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದು, ಕಳೆದ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ 31 ವರ್ಷದ ಈ ಆಟಗಾರನನ್ನು ಆರಂಭದಲ್ಲಿ ಪಂಜಾಬ್ ತಂಡವೇ ಉಳಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ವಿವಾಹದ ಕಾರಣದಿಂದ ದೀರ್ಘಕಾಲ ಲಭ್ಯವಿರುವುದಿಲ್ಲ ಎಂದು ಕೊನೆಯ ಕ್ಷಣದಲ್ಲಿ ತಿಳಿಸಿದ್ದರಿಂದ ಅವರನ್ನು ಬಿಡುಗಡೆ ಮಾಡಿತ್ತು.
ಹರಾಜಿಗೂ ಮುನ್ನ ಬಿಸಿಸಿಐ ನೀಡಿದ ಮಾಹಿತಿಯಂತೆ ಇಂಗ್ಲಿಸ್ ಕೇವಲ ನಾಲ್ಕು ಪಂದ್ಯಗಳಿಗೆ ಮಾತ್ರ ಲಭ್ಯವಿರುತ್ತಾರೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ಅವರನ್ನು ಕೈಬಿಟ್ಟಿತ್ತು. ಆದರೆ, ಹರಾಜಿನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದ ಇಂಗ್ಲಿಸ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಬರೊಬ್ಬರಿ 8.6 ಕೋಟಿ ರೂ. ನೀಡಿ ಖರೀದಿಸಿತು. ಕುತೂಹಲಕಾರಿ ಸಂಗತಿಯೆಂದರೆ, ಒಪ್ಪಂದವಾದ ನಂತರ ಇಂಗ್ಲಿಸ್ ಅರ್ಧದಷ್ಟು ಸೀಸನ್‌ಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಏಪ್ರಿಲ್ ಆರಂಭದಲ್ಲೇ ವಿವಾಹವಾಗಲಿರುವ ಇಂಗ್ಲಿಸ್, ಹನಿಮೂನ್ಗೆ ಹತ್ತು ದಿನಗಳ ಸಮಯ ತೆಗೆದುಕೊಂಡರು ಸಹ, ಎಲ್‌ಎಸ್‌ಜಿ ಪರ ಸುಮಾರು ಐದರಿಂದ ಆರು ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.
ಆರ್‌ಸಿಬಿಗೂ ಆತಂಕ
ಆರ್‌ಸಿಬಿ ತಂಡವು ತನ್ನ ಪ್ರಮುಖ ವೇಗಿ ಜೋಶ್ ಹ್ಯಾಜಲ್‌ವುಡ್ ಲಭ್ಯತೆಗಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ದೃಢೀಕರಣಕ್ಕೆ ಕಾಯುತ್ತಿದೆ. ಮಂಡಿರಜ್ಜು ಗಾಯ ಮತ್ತು ಅಕಿಲ್ಸ್ ನೋವಿನಿಂದಾಗಿ ಆಶಸ್ ಹಾಗೂ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದ ಹ್ಯಾಜಲ್‌ವುಡ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಪುನರಾಗಮನದ ಬಗ್ಗೆ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಕಳವಳ ವ್ಯಕ್ತಪಡಿಸಿದ್ದು, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮಿಚೆಲ್ ಸ್ಟಾರ್ಕ್ ಲಭ್ಯತೆಯ ಬಗ್ಗೆ ಸಿಎಯಿಂದ ಸ್ಪಷ್ಟ ಉತ್ತರಕ್ಕಾಗಿ ಕಾಯುತ್ತಿದೆ(ಏಜೆನ್ಸೀಸ್).