ಎಐ ಚಿತ್ರ 
ವಿದೇಶ

ಅಭೇದ್ಯ ರಕ್ಷಣೆ ಕೋಟೆ! ಅಧ್ಯಕ್ಷರ ಭದ್ರತಾ ವ್ಯವಸ್ಥೆಯ ಸುತ್ತ

ಆಯಾ ದೇಶದ ಅಧ್ಯಕ್ಷರು ಅಥವಾ ರಾಷ್ಟ್ರಪತಿ ಸಾಂವಿಧಾನಿಕ ಹುದ್ದೆಯ ಗೌರವ, ಶಿಷ್ಟಾಚಾರವೇನೋ ಹೊಂದಿರುತ್ತಾರೆ. ಆದರೆ, ಇಂಥ ಆಯಕಟ್ಟಿನ ಹುದ್ದೆಯನ್ನು ನಿರ್ವಹಿಸುವುದು ತುಂಬ ಸವಾಲಿನ ಕೆಲಸ. ಅದರಲ್ಲೂ, ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಧ್ಯಕ್ಷರ ಮೇಲೆ ಎಲ್ಲರ ಗಮನವೂ ಇರುತ್ತದೆ. ಬೆದರಿಕೆಗಳು ಸದಾ ಕಾಡುತ್ತಿರುತ್ತವೆ. ಹೀಗಾಗಿಯೇ, ಇವರಿಗೆ ನೀಡುವ ಭದ್ರತೆ ಕೂಡ ಅಸಾಧಾರಣ ವ್ಯವಸ್ಥೆಯನ್ನು ಹೊಂದಿರುತ್ತದೆ. ಬಲವಾದ ಭದ್ರತಾ ವ್ಯವಸ್ಥೆ ಹೊಂದಿದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಯತ್ನ ನಡೆದಿರುವುದು ಜಾಗತಿಕವಾಗಿ ಕಳವಳ ಮೂಡಿಸಿದೆ. ಭದ್ರತೆ ಎಂಬುದು ಅತ್ಯಾಧುನಿಕ ತಂತ್ರಜ್ಞಾನ, ನುರಿತ ಸಿಬ್ಬಂದಿ, ಸೂಕ್ತ ಕಾರ್ಯಯೋಜನೆಯ ಸಂಗಮ. ಈ ವ್ಯವಸ್ಥೆ ಹೇಗೆಲ್ಲ ಕಾರ್ಯನಿರ್ವಹಿಸುತ್ತಿದೆ ಎಂಬುದರ ವಿವರ ಇಲ್ಲಿದೆ.

ಅಮೆರಿಕದ ಅಧ್ಯಕ್ಷರ ಭದ್ರತೆಯು ವಿಶ್ವದ ಕಠಿಣ ಮತ್ತು ಸಂಕೀರ್ಣ ವ್ಯವಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಕ್ಷಣೆಯ ಜವಾಬ್ದಾರಿಯನ್ನು ‘ಯುನೈಟೆಡ್ ಸ್ಟೇಟ್ಸ್ ಸಿಕ್ರೇಟ್ ಸರ್ವಿಸ್’ ಹೊತ್ತಿದೆ. ಸೀಕ್ರೆಟ್ ಸರ್ವಿಸ್ ಕೇವಲ ಅಂಗರಕ್ಷಕರ ತಂಡವಲ್ಲ; ಇದು ಹಲವು ಹಂತಗಳಲ್ಲಿ ಕೆಲಸ ಮಾಡುತ್ತದೆ. ಟ್ರಂಪ್ ಯಾವುದೇ ಸ್ಥಳಕ್ಕೆ ಭೇಟಿ ನೀಡುವ ಹಲವು ದಿನಗಳ ಮೊದಲೇ ಈ ತಂಡ ಅಲ್ಲಿಗೆ ಹೋಗಿ ಸ್ಥಳ ಪರಿಶೀಲನೆ ನಡೆಸುತ್ತದೆ. ಸ್ಥಳೀಯ ಪೊಲೀಸರೊಂದಿಗೆ ಸೇರಿ ತುರ್ತು ನಿರ್ಗಮನ ಮಾರ್ಗಗಳು, ಹತ್ತಿರದ ಆಸ್ಪತ್ರೆಗಳು ಮತ್ತು ಸಂಭವನೀಯ ಬೆದರಿಕೆಗಳನ್ನು ಪತ್ತೆ ಮಾಡುತ್ತದೆ. ಮುಖ್ಯವಾಗಿ, ಟ್ರಂಪ್ ಸುತ್ತಲೂ ಮೂರು ಸುತ್ತಿನ ಭದ್ರತೆ ಇರುತ್ತದೆ. ಒಳಗಿನ ಸುತ್ತಿನಲ್ಲಿ ವೈಯಕ್ತಿಕ ಅಂಗರಕ್ಷಕರು, ಎರಡನೇ ಸುತ್ತಿನಲ್ಲಿ ಸಮವಸ್ತ್ರಧಾರಿ ಅಧಿಕಾರಿಗಳು ಮತ್ತು ಹೊರವಲಯದಲ್ಲಿ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳಿರುತ್ತವೆ.

ವಿಶೇಷ ತಂತ್ರಜ್ಞಾನ 

ದ ಬೀಸ್ಟ್- ಇದು ಅಧ್ಯಕ್ಷರ ಅಧಿಕೃತ ಕಾರು. ಬಾಂಬ್ ನಿರೋಧಕ, ಗುಂಡು ನಿರೋಧಕ ಮತ್ತು ರಾಸಾಯನಿಕ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಕಾರಿನೊಳಗೆ ಅಧ್ಯಕ್ಷರ ಗುಂಪಿನ ರಕ್ತದ ಪೊಟ್ಟಣಗಳು ಮತ್ತು ಆಮ್ಲಜನಕದ ವ್ಯವಸ್ಥೆಯೂ ಇರುತ್ತದೆ. ಟ್ರಂಪ್ ಪ್ರಯಾಣಿಸುವ ಏರ್ ಫೋರ್ಸ್ ಒನ್​ವಿಮಾನವು ಕ್ಷಿಪಣಿ ನಿರೋಧಕ ತಂತ್ರಜ್ಞಾನವನ್ನು ಹೊಂದಿದ್ದು, ಹಾರಾಟದ ಸಮಯದಲ್ಲಿಯೂ ಇಂಧನ ಮರುಪೂರಣ ಮಾಡುವ ಸಾಮರ್ಥ್ಯ ಹೊಂದಿದೆ. ಟ್ರಂಪ್ ಬೆಂಗಾವಲು ವಾಹನಗಳಲ್ಲಿ ಸಂವಹನವನ್ನು ಕಡಿತಗೊಳಿಸುವ ಮತ್ತು ರಿಮೋಟ್ ಮೂಲಕ ಸ್ಪೋಟಿಸುವ ಬಾಂಬ್​ಗಳನ್ನು ತಡೆಯುವ ಹೈ-ಟೆಕ್ ಜಾಮರ್​ಗಳಿರುತ್ತವೆ.

ನ್ಯೂಕ್ಲಿಯರ್ ಫುಟ್ಬಾಲ್

ಟ್ರಂಪ್ ಎಲ್ಲಿಗೆ ಹೋದರೂ ಅವರ ಜೊತೆಯಲ್ಲಿ ಒಬ್ಬ ಮಿಲಿಟರಿ ಅಧಿಕಾರಿ ಒಂದು ಬ್ರೀಫ್​ಕೇಸ್ ಹಿಡಿದುಕೊಂಡು ಹೋಗುತ್ತಾನೆ. ಇದನ್ನು ‘ನ್ಯೂಕ್ಲಿಯರ್ ಫುಟ್ಬಾಲ್’ ಎನ್ನಲಾಗುತ್ತದೆ. ಇದರಿಂದ ಅಧ್ಯಕ್ಷರು ಯಾವುದೇ ಕ್ಷಣದಲ್ಲಿ ಪರಮಾಣು ದಾಳಿಗೆ ಆದೇಶ ನೀಡಬಹುದು.

ವೈಟ್ ಹೌಸ್ ಭದ್ರತೆ

ಅಧ್ಯಕ್ಷರ ನಿವಾಸವಾದ ವೈಟ್​ಹೌಸ್ ಸುತ್ತಲೂ ರೇಡಾರ್​​​ ಗಳು, ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಮತ್ತು ಸ್ನೈಪರ್​ಗಳು ದಿನದ 24 ಗಂಟೆಯೂ ಕಣ್ಗಾವಲು ಇಟ್ಟಿರುತ್ತಾರೆ. ಭೌತಿಕ ದಾಳಿ ಮಾತ್ರವಲ್ಲದೆ, ಸೈಬರ್ ಮತ್ತು ರಾಸಾಯನಿಕ ದಾಳಿಗಳನ್ನು ಎದುರಿಸಲು ಈ ವ್ಯವಸ್ಥೆ ಸನ್ನದ್ಧವಾಗಿರುತ್ತದೆ.

ಮಾಜಿ ಅಧ್ಯಕ್ಷರಿಗೂ ಭದ್ರತೆ

ಅಮೆರಿಕದ ಕಾನೂನಿನ ಪ್ರಕಾರ, ಮಾಜಿ ಅಧ್ಯಕ್ಷರು ಮತ್ತು ಅವರ ಸಂಗಾತಿಗೆ ಜೀವಮಾನ ಪೂರ್ತಿ ಸಿಕ್ರೇಟ್ ಸರ್ವಿಸ್ ಭದ್ರತೆ ನೀಡಲಾಗುತ್ತದೆ. ಡೊನಾಲ್ಡ್ ಟ್ರಂಪ್ ಮುಂದೆ ಅಧಿಕಾರದಲ್ಲಿ ಇಲ್ಲದಿದ್ದರೂ, ಈ ವಿಶೇಷ ರಕ್ಷಣೆ ಅವರಿಗೆ ಮುಂದುವರಿಯುತ್ತದೆ.

ಸೀಕ್ರೆಟ್ ಸರ್ವಿಸ್ ಪಡೆ ಹೇಗೆ ಕೆಲಸ ಮಾಡುತ್ತದೆ?

ಸೀಕ್ರೆಟ್ ಸರ್ವಿಸ್ ಏಜೆಂಟ್​ಗಳು ಕಠಿಣ ತರಬೇತಿ ಪಡೆಯುತ್ತಾರೆ. ಕಠಿಣ ಸನ್ನಿವೇಶಗಳಲ್ಲಿ ಗುಂಡೇಟಿಗೆ ಎದೆಕೊಟ್ಟು, ಅಧ್ಯಕ್ಷರನ್ನು ಉಳಿಸುವ ಮಾನವ ಗುರಾಣಿ ಆಗಲು ಸಿದ್ಧರಿರುತ್ತಾರೆ.

ಈ ಪಡೆ ಕೇವಲ ಭೌತಿಕ ರಕ್ಷಣೆ ನೀಡುವುದಿಲ್ಲ, ಬದಲಿಗೆ ಸಾಮಾಜಿಕ ಜಾಲತಾಣಗಳು ಮತ್ತು ಇತರ ಮೂಲಗಳ ಮೂಲಕ ಅಧ್ಯಕ್ಷರ ಮೇಲೆ ಬರಬಹುದಾದ ಬೆದರಿಕೆಗಳನ್ನು ಮೊದಲೇ ಪತ್ತೆಹಚ್ಚಿ ಹತ್ತಿಕ್ಕುತ್ತದೆ. 2024ರ ಬಟ್ಲರ್ ದಾಳಿ ಮತ್ತು ಇತ್ತೀಚೆಗೆ ವಾಷಿಂಗ್ಟನ್​ನ ಡಿನ್ನರ್ ಕಾರ್ಯಕ್ರಮವೊಂದರಲ್ಲಿ ನಡೆದ ದಾಳಿಯ ಯತ್ನಗಳ ನಂತರ, ಸೀಕ್ರೆಟ್ ಸರ್ವಿಸ್ ಈಗ ಡ್ರೋನ್ ವಿರೋಧಿ ತಂತ್ರಜ್ಞಾನ ಮತ್ತು ಸ್ನೈಪರ್ ತಂಡಗಳನ್ನು ದ್ವಿಗುಣ ಗೊಳಿಸಿದೆ.

ಬಾತ್ ರೂಂ, ಟೆಲಿಪೋನ್ ಬೂತ್ 

ಪುತಿನ್ ಯಾವುದೇ ದೇಶಕ್ಕೆ ಭೇಟಿ ನೀಡುವ ಹಲವು ದಿನಗಳ ಮುನ್ನವೇ ರಷ್ಯಾದಿಂದ ಶೌಚಗೃಹ, ಟೆಲಿಫೋನ್ ಬೂತ್ ಆಗಮಿಸುತ್ತದೆ. ಪುತಿನ್ ಸ್ಮಾರ್ಟ್​ಫೋನ್ ಬಳಸುವುದಿಲ್ಲ. ಸುರಕ್ಷಿತ ಕಮ್ಯುನಿಕೇಶನ್ ಸಂಪರ್ಕದ ಮೂಲಕ ಮಾತನಾಡುತ್ತಾರೆ. ಹೀಗಾಗಿ, ಅಧ್ಯಕ್ಷರು ತಂಗುವ ಕೋಣೆಯಲ್ಲಿ ಟೆಲಿಫೋನ್ ಬೂತ್​ನ್ನು ತಾತ್ಕಾಲಿಕವಾಗಿ ಇನ್​ಸ್ಟಾಲ್ ಮಾಡಲಾಗುತ್ತದೆ. ಪುತಿನ್ ಹೋಟೆಲ್ ಕೋಣೆಯ ಬಾತ್​ರೂಮ್ ಕೂಡ ಬಳಸುವುದಿಲ್ಲ. ಇದಕ್ಕಾಗಿ ರಷ್ಯಾದಿಂದಲೇ ಸಂಚಾರಿ ಬಾತ್​ರೂಮ್್ನು ತಂದು ಹೋಟೆಲ್ ಕೊಣೆಯಲ್ಲಿ ಅಳವಡಿಸಲಾಗುತ್ತದೆ. ಪುತಿನ್ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇರಿಸಲಾಗುತ್ತದೆ. ವಿದೇಶ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಅವರ ಖಾಸಗಿ ಕ್ಷಣಗಳ ಸಂದರ್ಭದಲ್ಲೂ ಭದ್ರತಾ ಸಿಬ್ಬಂದಿ ಇರುತ್ತಾರೆ. ಪುತಿನ್ ಮಲ ಹಾಗೂ ಮೂತ್ರವನ್ನು ಒಂದು ಸೀಲ್ಡ್ ಬ್ಯಾಗ್​ನಲ್ಲಿ ಸಂಗ್ರಹಿಸಿ, ಇದನ್ನು ಪೂಪ್-ಬ್ರೀಫ್​ಕೇಸ್ ಮುಖಾಂತರ ವಾಪಸ್ ರಷ್ಯಾಗೆ ಕಳುಹಿಸಲಾಗುತ್ತದೆ. ಪುತಿನ್ ಆರೋಗ್ಯದಲ್ಲಿ ಏನಾದರೂ ಏರುಪೇರಾಗಿದೆಯೇ ಅಥವಾ ಫುಡ್ ಪಾಯಿಜನಿಂಗ್ ಆಗಿದೆಯೇ ಎಂಬುದರ ಬಗ್ಗೆ ತಜ್ಞರು ಪರೀಕ್ಷೆ ನಡೆಸುವ ಮೂಲಕ, ಸಂಭಾವ್ಯ ಅಪಾಯಗಳನ್ನು ತಪ್ಪಿಸಲಾಗುತ್ತದೆ.

ಹೈಟೆಕ್ ಕಾವಲು

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರಕ್ಷಣೆಯ ಹೊಣೆ ಪ್ರೆಸಿಡೆನ್ಶಿಯಲ್ ಸೆಕ್ಯುರಿಟಿ ಸರ್ವೀಸ್​ನದ್ದು. ಎಸ್​ಬಿಪಿ ಏಜೆನ್ಸಿ ಇದನ್ನು ನಿರ್ವಹಿಸುತ್ತದೆ. ಪುತಿನ್ ಪ್ರವಾಸ ಕೈಗೊಳ್ಳುವ ದೇಶದ ಅಪರಾಧ ದರ, ಭಯೋತ್ಪಾದನೆಯ ಸ್ಥಿತಿ, ಪ್ರತಿಭಟನೆಗಳು ಮತ್ತು ಧಾರ್ವಿುಕ ವಾತಾವರಣದ ಬಗ್ಗೆ ಎಸ್​ಬಿಪಿ ಅಧ್ಯಯನ ನಡೆಸುತ್ತದೆ. ಈ ಅಧ್ಯಯನದ ಅವಧಿಯಲ್ಲಿ ಅಪಾಯಕಾರಿ ಅಥವಾ ಅನುಮಾನಕಾರಿ ಅಂಶಗಳು ಕಂಡುಬಂದರೆ ಅಧ್ಯಕ್ಷರ ಕಚೇರಿಗೆ ಮಾಹಿತಿ ನೀಡಲಾಗುತ್ತದೆ. ಪುತಿನ್ ಪ್ರವಾಸದ ಕನಿಷ್ಠ ಒಂದು ತಿಂಗಳು ಮುನ್ನವೇ ಸೆಕ್ಯುರಿಟಿ ತಂಡವನ್ನು ಕಳಿಸಲಾಗುತ್ತದೆ. ಪುತಿನ್ ತಂಗುವ ಹೋಟೆಲ್, ಸಂಚರಿಸುವ ಮಾರ್ಗದ ಬಗ್ಗೆ ಈ ತಂಡ ಪರಿಶೀಲನೆ ನಡೆಸುತ್ತದೆ. ಪುತಿನ್ ಹೋಟೆಲ್ ಕೋಣೆಗೆ ತಲುಪುವ ಮೊದಲೇ ಅಲ್ಲಿನ ಸಾಬೂನು, ಶ್ಯಾಂಪೂ, ಹ್ಯಾಂಡ್​ವಾಶ್, ಟೂತ್​ಪೆಸ್ಟ್ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ತೆಗೆದು, ರಷ್ಯಾದಿಂದ ತರಲಾದ ವಸ್ತುಗಳನ್ನು ಪುತಿನ್ ಬಳಕೆಗೆ ಜೋಡಿಸಲಾಗುತ್ತದೆ.

ದೊಡ್ಡ ತಂಡ

ಪುತಿನ್ ಎಲ್ಲಿಗೆ ಹೋದರೂ ಅವರ ಜತೆ ಕನಿಷ್ಠ 100 ಜನರ ತಂಡವಿರುತ್ತದೆ. ವೈಯಕ್ತಿಕ ಅಂಗರಕ್ಷಕರು, ಎಸ್​ಬಿಪಿ, ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್ (ಎಫ್​ಎಸ್​ಒ) ಸದಸ್ಯರು, ಶಿಷ್ಟಾಚಾರ ಅಧಿಕಾರಿಗಳು, ಅಧ್ಯಕ್ಷರ ಕಚೇರಿಯ ಆಡಳಿತಾತ್ಮಕ ಉನ್ನತ ಅಧಿಕಾರಿಗಳು ಮತ್ತು ಕೆಲ ಪತ್ರಕರ್ತರು ಈ ತಂಡದಲ್ಲಿರುತ್ತಾರೆ. ಪುತಿನ್ ಜತೆ ವಿದೇಶ ಪ್ರವಾಸಕ್ಕೆ ನಿಯೋಜನೆಯಾಗುವ ಅಂಗ ರಕ್ಷರನ್ನು ಪ್ರವಾಸದ ಮುನ್ನ ಎರಡು ವಾರಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ.

ಜಿನ್​ಪಿಂಗ್​ಗೆ ಟೈಟ್ ಸೆಕ್ಯುರಿಟಿ

ಚೀನಾದ ಅಧ್ಯಕ್ಷ ಷಿ ಜಿನ್​ಪಿಂಗ್ ಭದ್ರತಾ ವ್ಯವಸ್ಥೆಯು ರಹಸ್ಯಮಯ ಹಾಗೂ ಬಲಿಷ್ಠವಾಗಿದೆ. ಅಮೆರಿಕದ ಅಧ್ಯಕ್ಷರ ಭದ್ರತೆ ಬಹಿರಂಗವಾಗಿ ಚರ್ಚೆಯಾಗುತ್ತದೆಯಾದರೂ, ಚೀನಾದ ವ್ಯವಸ್ಥೆ ಕಟ್ಟುನಿಟ್ಟಾದ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಜಿನ್​ಪಿಂಗ್ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ‘ಸೆಂಟ್ರಲ್ ಗಾರ್ಡ್ ಬ್ಯೂರೋ’ ಎಂಬ ವಿಶೇಷ ಘಟಕವು ನಿರ್ವಹಿಸುತ್ತದೆ.

ಇದನ್ನು ‘8341 ಯುನಿಟ್’ ಎಂದೂ ಕರೆಯಲಾಗುತ್ತದೆ. ಇದು ಕೇವಲ ಮಿಲಿಟರಿ ಘಟಕವಲ್ಲ, ಇದು ಪೀಪಲ್ಸ್ ಲಿಬರೇಶನ್ ಆರ್ವಿು ಮತ್ತು ಕಮ್ಯುನಿಸ್ಟ್ ಪಕ್ಷದ ನೇರ ನಿಯಂತ್ರಣದಲ್ಲಿರುತ್ತದೆ. ಈ ಘಟಕದಲ್ಲಿ ಸಾವಿರಾರು ಆಯ್ದ ಸೈನಿಕರಿದ್ದು, ಅವರು ಜಿನ್​ಪಿಂಗ್ ವೈಯಕ್ತಿಕ ಭದ್ರತೆ ಮತ್ತು ಅವರ ನಿವಾಸವಾದ ‘ಝೆೊಂಗ್ನಾನ್ಹೈ’ ಕಾವಲು ಕಾಯುತ್ತಾರೆ. ಜಿನ್​ಪಿಂಗ್ ಪ್ರಯಾಣಕ್ಕೆ ಚೀನಾ ನಿರ್ವಿುತ ‘ಹೊಂಗ್ಕಿ ಎನ್ 701’ ಲಿಮೋಸಿನ್ ಕಾರ್ ಅನ್ನು ಬಳಸುತ್ತಾರೆ. ಈ ಕಾರಿನ ತಾಂತ್ರಿಕ ವಿವರಗಳನ್ನು ಚೀನಾ ಸರ್ಕಾರವು ಗುಟ್ಟಾಗಿಟ್ಟಿದೆ. ಆದರೆ ಇದು ಬಾಂಬ್, ಗುಂಡೇಟು ಮತ್ತು ರಾಸಾಯನಿಕ ದಾಳಿಗಳನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ದಾಳಿ ನಡೆದರೂ ಕಾರು ವೇಗವಾಗಿ ಚಲಿಸುವಂತೆ ಮಾಡುವ ‘ರನ್-ಫ್ಲಾಟ್’ ಟೈರ್​ಗಳನ್ನು ಇದು ಹೊಂದಿದೆ. ಅಲ್ಲದೆ, ಚೀನಾವು ಜಗತ್ತಿನಲ್ಲೇ ಸುಧಾರಿತ ಮುಖ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ. ಜಿನ್​ಪಿಂಗ್ ಭೇಟಿ ನೀಡುವ ಯಾವುದೇ ಸ್ಥಳದಲ್ಲಿ ಸಾವಿರಾರು ಕ್ಯಾಮೆರಾಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಚಲನವಲನಗಳನ್ನು ಕ್ಷಣಕ್ಷಣಕ್ಕೂ ಗಮನಿಸಲಾಗುತ್ತದೆ. ಭದ್ರತಾ ಪಡೆಗಳು ಧರಿಸುವ ಸ್ಮಾರ್ಟ್ ಗ್ಲಾಸ್​ಗಳು ಸಂಶಯಾಸ್ಪದ ವ್ಯಕ್ತಿಗಳನ್ನು ತಕ್ಷಣವೇ ಗುರುತಿಸಬಲ್ಲವು.

ಜಿನ್​ಪಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಭದ್ರತೆಯು ಮೂರು ಹಂತಗಳಲ್ಲಿರುತ್ತದೆ.

ಒಳವಲಯ: ಸೀಕ್ರೆಟ್ ಏಜೆಂಟ್​ಗಳು ಜಿನ್​ಪಿಂಗ್ ಹತ್ತಿರದಲ್ಲಿರುತ್ತಾರೆ.

ಮಧ್ಯವಲಯ: ಸಮವಸ್ತ್ರಧಾರಿ ವಿಶೇಷ ಪಡೆಗಳು ಸುತ್ತುವರಿದಿರುತ್ತವೆ.

ಹೊರವಲಯ: ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಇಲಾಖೆಯ ಸಿಬ್ಬಂದಿ ಸಾಮಾನ್ಯ ಜನರಂತೆ ವೇಷ ಧರಿಸಿ ನಿಗಾ ವಹಿಸಿರುತ್ತಾರೆ.