ಇಂಧನ ಬೆಲೆಯಲ್ಲಿ ಮತ್ತ ಏರಿಕೆ
- ಮಧ್ಯಪ್ರಾಚ್ಯ ಉದ್ವಿಗ್ನದಿಂದ ಸತತ ನಾಲ್ಕನೇ ಬಾರಿ ಇಂಧನ ಬೆಲೆ ಏರಿಕೆ
- ತಮ್ಮ ಸರ್ಕಾರದ ನಿರ್ಧಾರಕ್ಕೆ ಜನರು ಕಂಗಾಲು
ಕಠ್ಮಂಡು: ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಕ್ಷಿಪಣಿ ದಾಳಿಗಳು, ಇಂದಿನ ಭೀಕರ ಯುದ್ಧಕ್ಕೆ ಕಾರಣವಾಗಿದೆ. ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಎನ್ನುತ್ತಿವೆ ಈ ದೇಶಗಳು. ಅತ್ತ ಇರಾನ್ ತಮ್ಮ ಸುಪ್ರೀಂ ಲೀಡರ್ ಹತ್ಯೆ ಮತ್ತು ಅಮಾಯಕ ಮಕ್ಕಳನ್ನು ಬಲಿ ಪಡೆದ ಯುಎಸ್ ಅನ್ನು ಬಗ್ಗುಬಡಿಯಲು ಪಣತೊಟ್ಟಿದೆ. ತನ್ನ ಮಾತುಗಳೇ ಶಾಸನ ಎನ್ನುತ್ತಿರುವ ಡೊನಾಲ್ಡ್ ಟ್ರಂಪ್ ಮತ್ತೊಂದೆಡೆ. ಈ ಪರಿಸ್ಥಿತಿಯಿಂದ ಸದ್ಯ ಮಧ್ಯಪ್ರಾಚ್ಯ ತೀವ್ರ ಉದ್ವಿಗ್ನಗೊಂಡಿದ್ದು, ತೈಲ ಮತ್ತು ಇತರೆ ಅತ್ಯವಶ್ಯಕ ವಸ್ತುಗಳ ಪೂರೈಕೆ ಆಗದೆ ಒಂದಷ್ಟು ರಾಷ್ಟ್ರಗಳು ತತ್ತರಿಸಿ ಹೋಗಿವೆ.
ಈ ಹಿಂದೆಯೇ, ಹಲವಾರು ಬಾರಿ ಇಂಧನ ದರವನ್ನು ಏರಿಸಿದ್ದ ನೇಪಾಳ ಸರ್ಕಾರ, ಇದೀಗ ಸತತ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಹೆಚ್ಚಿಸಿದೆ. ಇರಾನ್-ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ನೇಪಾಳದಲ್ಲಿ ಇಂಧನ ಬೆಲೆಗಳು ದಿಢೀರ್ ದಿಢೀರ್ ಎನ್ನುವಂತೆ ಏರಿಕೆಯಾಗುತ್ತಿವೆ. ಕೇವಲ ಎರಡೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಿದೆ.
ಇತ್ತೀಚಿನ ವರದಿ ಪ್ರಕಾರ, ಪ್ರಸ್ತುತ ನೇಪಾಳದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 216.50 ರೂ.ಗೆ ತಲುಪಿದೆ. ಅದೇ ಡೀಸೆಲ್ ಬೆಲೆ 204.50 ರೂ. ಆಗಿದೆ. ನಾಲ್ಕನೇ ಬಾರಿಯ ಏರಿಕೆಯಲ್ಲಿ, ಪೆಟ್ರೋಲ್ 17 ಮತ್ತು ಡೀಸೆಲ್ 25 ರೂ. ಹೆಚ್ಚಾಗಿದೆ. ಈ ಹೊಸ ಬೆಲೆಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿರುವುದು ಸದ್ಯ ನೇಪಾಳ ಜನತೆಯನ್ನು ಚಿಂತೆಗೀಡು ಮಾಡಿದೆ.
ನೇಪಾಳ ತೈಲ ನಿಗಮದ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ಏರಿಕೆಯಿಂದಾಗಿ ಈ ನಿರ್ಧಾರ ಅನಿವಾರ್ಯ. ತೈಲ ಆಮದುಗಳಲ್ಲಿ ಭಾರಿ ಏರಿಕೆಯಿಂದಾಗಿ ಸರ್ಕಾರವು ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಇಂಧನ ಬೆಲೆಗಳಿಂದಾಗಿ ಪ್ರಸ್ತುತ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಆಗಿರುವ ಬೆಲೆ ಏರಿಕೆಯು ಜನರ ಮೇಲೆ ಭಾರೀ ಹೊರೆಯನ್ನು ಹೊರಿಸಿದೆ.
ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಮುಂದುವರಿದಿರುವ ಯುದ್ಧದ ಪರಿಸ್ಥಿತಿಗಳಿಂದ ನೇಪಾಳ ಮಾತ್ರವಲ್ಲ, ಪಾಕಿಸ್ತಾನ, ಶ್ರೀಲಂಕಾ ಸೇರಿ ಹಲವು ರಾಷ್ಟ್ರಗಳು ತೀರ ಸಂಕಷ್ಟಕ್ಕೆ ಸಿಲುಕಿವೆ. ಕೆಲವೆಡೆ ಲಾಕ್ಡೌನ್ ಮಾಡುವ ಅನಿವಾರ್ಯ ಕೂಡ ಎದುರಾಗಿದೆ. ಆದರೆ, ಅದಕ್ಕೆ ಈಗಲೇ ಅವಕಾಶ ಕೊಡುವುದು ಬೇಡ ಎಂದು ನಿರ್ಧರಿಸಲಾಗಿದೆ,(ಏಜೆನ್ಸೀಸ್).