ಐಸಿಸ್​ ವಿರುದ್ಧ ಅಮೆರಿಕ ಸಮರ 
ವಿದೇಶ

ಐಸಿಸ್​ ವಿರುದ್ಧ ಅಮೆರಿಕ ಸಮರ

"ದಾಳಿ ನಿಲ್ಲಿಸಿ, ಇಲ್ಲವೆ ಪರಿಣಾಮ ಎದುರಿಸಲು ಸಜ್ಜಾಗಿ' ಎಂದು ಹಲವು ವೇಳೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್​ ಸ್ಟೇಟ್​ (ಐಎಸ್​ಐಎಸ್​) ವಿರುದ್ಧ ಗುಡುಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಳೆದ ವಾರ ಗಂಭೀರ ಎಚ್ಚರಿಕೆಯನ್ನೂ ನೀಡಿದ್ದರು. ಅದರಂತೆ, ಭಯೋತ್ಪಾದಕರ ಸದ್ದಡಗಿಸಲು ಅಮೆರಿಕವು ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್​ಮಸ್​ ದಿನವನ್ನೇ ಆಯ್ದುಕೊಂಡಿತು. ನೈಜೀರಿಯಾದಲ್ಲಿರುವ ಐಎಸ್​ಐಎಸ್​ ನೆಲೆಗಳ ಮೇಲೆ ಡಿಸೆಂಬರ್​ 25ರಂದು ಅಮೆರಿಕದ ಸೇನೆ ವಾಯುದಾಳಿ (ಏರ್​ ಸ್ಟೈಕ್​) ನಡೆಸಿದ್ದು, ಹಲವು ಭಯೋತ್ಪಾದಕರು ಹತರಾಗಿದ್ದಾರೆ. ಮೃತಪಟ್ಟವರ ನಿರ್ದಿಷ್ಟ ಸಂಖ್ಯೆಯ ಕುರಿತು ಮಾಹಿತಿ ಬರಬೇಕಿದೆ. ಆದರೆ, ದಾಳಿಯಂತೂ ಪ್ರಬಲ ಹಾಗೂ ಮಾರಕ ಪ್ರಮಾಣದಲ್ಲಿತ್ತು ಎಂಬುದು ಸ್ಪಷ್ಟ.
ನೈಜೀರಿಯಾದಲ್ಲಿ ಕ್ರೈಸ್ತರ ಮೇಲಾಗುತ್ತಿರುವ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಕಳೆದ ತಿಂಗಳು ಪೆಂಟಗನ್​ನಲ್ಲಿ ನಡೆದ ಸಭೆಯಲ್ಲಿ ಟ್ರಂಪ್​ ಅಧಿಕಾರಿಗಳಿಗೆ ಸೂಚಿಸಿದ್ದರು. ನೈಜೀರಿಯಾದವರಿಗೆ ನೀಡುತ್ತಿದ್ದ ವೀಸಾವನ್ನು ನಿರ್ಬಂಧಿಸುವುದಾಗಿ ಅಮೆರಿಕದ ಗೃಹ ಇಲಾಖೆ ಹೇಳಿತ್ತು.
ಹಿನ್ನೆಲೆ: ನೈಜೀರಿಯಾದಲ್ಲಿ ಬೋಕೋ ಹರಾಮ್​ ಮತ್ತು ಅದರಿಂದ ಬೇರ್ಪಟ್ಟ Islamic State–West Africa Province (ISWAP) ಗುಂಪುಗಳು ದೀರ್ಘಕಾಲದಿಂದ ಉಗ್ರ ಚಟುವಟಿಕೆಗಳಲ್ಲಿ ತೊಡಗಿವೆ. ಉತ್ತರ ಈಶಾನ್ಯದಲ್ಲಿ ಐಎಸ್​ಡಬ್ಲುಎಪಿ ಹೆಚ್ಚು ಸಕ್ರಿಯವಾಗಿದ್ದರೂ, ಉತ್ತರ ಪಶ್ಚಿಮದಲ್ಲಿ (ಸೊಕೊಟೊ) ಹೊಸ ಗುಂಪುಗಳು ಐಎಸ್​ಐಎಸ್​ನೊಂದಿಗೆ ಸಂಪರ್ಕ ಹೊಂದಿವೆ. ಈ ಎಲ್ಲ ಗುಂಪುಗಳನ್ನು ಹಣಿಯುವುದು ಅಮೆರಿಕದ ಉದ್ದೇಶವಾಗಿದೆ. ಈ ದಾಳಿ ನೈಜೀರಿಯಾದಲ್ಲಿ ಅಮೆರಿಕದ ಅಪರೂಪದ ನೇರ ಸೈನ್ಯ ಕಾರ್ಯಾಚರಣೆಯಾಗಿದೆ. ಸಾಮಾನ್ಯವಾಗಿ ಅಮೆರಿಕವು ಬೇಹುಗಾರಿಕೆ, ಸೇನಾ ತರಬೇತಿ ಮತ್ತು ಬೆಂಬಲ ನೀಡುತ್ತದೆ, ಆದರೆ ನೇರ ಏರ್​ಸ್ಟ್ರೆಕ್​ಗಳು ಕಡಿಮೆ. ಕೆಸ್ತರ ಮೇಲೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳಿಂದ ರೋಸಿಹೋಗಿ ಅಮೆರಿಕ ನೇರ ವಾಯುದಾಳಿ ನಡೆಸಿದೆ.
ಹಲವು ಘಟನೆಗಳು: ಕ್ರೈಸ್ತರನ್ನು ಗುರಿಯಾಗಿಸಿ ಇಸ್ಲಾಮಿಕ್​ ಮೂಲಭೂತವಾದಿ ಸಂಘಟನೆಗಳ ಕರಾಳ ಕೃತ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ. 2025ರ ನವೆಂಬರ್​ 20ರ ರಾತ್ರಿ 2 ಗಂಟೆಯ ಸುಮಾರಿಗೆ ನೈಜೀರಿಯಾದ ನೈಜರ್​ ರಾಜ್ಯದ ಪಪಿರಿ ಗ್ರಾಮದ ಸೇಂಟ್​ ಮೇರಿ ಕ್ಯಾಥೋಲಿಕ್​ ಬೋರ್ಡಿಂಗ್​ ಸ್ಕೂಲ್​ಗೆ ನುಗ್ಗಿದ ಶಸ್ತ್ರಸಜ್ಜಿತ ಭಯೋತ್ಪಾದಕರು 303 ಮಕ್ಕಳು ಮತ್ತು 12 ಶಿಕ್ಷಕರನ್ನು ಅಪಹರಿಸಿದರು. ಅಪಹರಿಸಲ್ಪಟ್ಟ ಮಕ್ಕಳು 12ರಿಂದ 17 ವಯೋಮಾನದವರು. ನ.23ರ ಹೊತ್ತಲ್ಲಿ 50 ಮಕ್ಕಳು ತಪ್ಪಿಸಿಕೊಂಡು ಕುಟುಂಬದವರೊಂದಿಗೆ ಸೇರಿಕೊಂಡರು. ಡಿ.8ರಂದು 100 ಮಕ್ಕಳು ಮತ್ತು ಒಬ್ಬ ಶಿಕ್ಷಕರನ್ನು ಬಿಡುಗಡೆಗೊಳಿಸಲಾಯಿತು. ಡಿ.21ರಂದು ಉಳಿದ ಮಕ್ಕಳು ಮತ್ತು ಶಿಕ್ಷಕರು ಬಿಡುಗಡೆಯಾದರು. ಆದರೆ, ಈ ಘಟನೆ ನೈಜೀರಿಯಾದಲ್ಲಿ ಶಾಲಾ ಸುರಕ್ಷತೆ ನಿಟ್ಟಿನಲ್ಲಿ ದೊಡ್ಡ ಬೆದರಿಕೆಯನ್ನು ಒಡ್ಡಿದೆ. ಇದಕ್ಕೂ ಮುನ್ನ 2025ರ ಜೂನ್​ 21ರಂದು ನೈಜೀರಿಯಾದ ಈಶಾನ್ಯ ಭಾಗದ ಬೊರ್ನೊ ಪ್ರಾಂತ್ಯದ ರೆಸ್ಟೋರೆಂಟ್​ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡರು.
ಮುಖ್ಯಾಂಶಗಳು
- ನೈಜೀರಿಯಾದಲ್ಲಿ ಭಯೋ ತ್ಪಾದಕ ದಾಳಿಗಳಿಗೆ 2020ರಿಂದ ಈವರೆಗೆ 20 ಸಾವಿರಕ್ಕಿಂತಲೂ ಅಧಿಕ ಕ್ರೈಸ್ತರು ಮೃತಪಟ್ಟಿದ್ದಾರೆ ಎಂದು ನೈಜೀರಿಯಾ ಸರ್ಕಾರದ ಅಂಕಿ&ಅಂಶಗಳೇ ಸ್ಪಷ್ಟಪಡಿಸಿವೆ.
- 2025ರ ಒಂದೇ ವರ್ಷದಲ್ಲಿ ಏಳು ಸಾವಿರ ಕೆಸ್ತರು ಭಯೋತ್ಪಾದಕ ದಾಳಿಗಳಿಗೆ ಬಲಿಯಾಗಿದ್ದಾರೆ.
-ಕಳೆದ ಒಂದು ವರ್ಷದಲ್ಲೇ ನೈಜೀರಿಯಾ ಸೇನೆ 13 ಸಾವಿರಕ್ಕೂ ಅಧಿಕ ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಮತ್ತು ಅಪಹರಣಕ್ಕೆ ಒಳಗಾಗಿದ್ದ 10 ಸಾವಿರ ಜನರನ್ನು ರಸಿ, ಬಂಧಮುಕ್ತಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.
? ಕಳೆದೊಂದು ವರ್ಷದಲ್ಲೇ ಸೇನೆ ದೇಶದ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿ 4 ಸಾವಿರಕ್ಕೂ ಅಧಿಕ ಎಕೆ&47 ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
- ಚರ್ಚ್​, ಶಾಲೆ, ಆಟದ ಮೈದಾನ, ಮಾರುಕಟ್ಟೆ ಸೇರಿದಂತೆ ಹಲವು ಜನನಿಬಿಡ ಸ್ಥಳಗಳಲ್ಲಿ ಸೇನೆ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ.

ಐಸಿಸ್​ನ ರಕ್ತರಂಜಿತ ಇತಿಹಾಸ

ಕುಖ್ಯಾತ ಭಯೋತ್ಪಾದಕ ಅಬೂ ಅಲ್​ ಬಕರ್​ ಬಗ್ದಾದಿ 2014ರ ಜೂನ್​ 29ರಂದು ಅಲ್​&ಖೈದಾ ಉಗ್ರ ಸಂಟನೆಯಿಂದ ಹೊರ ಬಂದು ಇಸ್ಲಾಮಿಕ್​ ಸ್ಟೇಟ್​ (ಐಎಸ್​ಐಎಸ್​) ಸಂಘಟನೆ ಸ್ಥಾಪಿಸಿರುವುದಾಗಿ ಘೋಷಿಸಿದ. 2017ರ ಜೂನ್​ 7ರಂದು ಐಎಸ್​ಐಎಸ್​ ಇರಾನ್​ನಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಸಿತು. ಇರಾನ್​ ರಾಜಧಾನಿ ತೆಹ್ರಾನ್​ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 12 ಜನರು ಮೃತಪಟ್ಟರು. ಆ ಬಳಿಕ ವಿವಿಧ ರಾಷ್ಟ್ರಗಳಲ್ಲಿ ಉಗ್ರ ಕೃತ್ಯಗಳನ್ನು ನಡೆಸಿದ್ದು, ನೈಜೀರಿಯಾದಲ್ಲಂತೂ ಬಲವಾಗಿ ಬೇರು ಬಿಟ್ಟಿದೆ. ನೈಜೀರಿಯಾದಲ್ಲಿ ಐಎಸ್​ಐಎಸ್​ಗೆ ಇತರ ಮೂಲ ಭೂತವಾದಿ ಇಸ್ಲಾಮಿಕ್​ ಸಂಘಟನೆಗಳ ಬೆಂಬಲ ದೊರೆತಿರುವುದರಿಂದ ಸಂಘಟನೆ ತನ್ನ ಜಾಲ ವಿಸ್ತರಿಸಿಕೊಳ್ಳಲು ಸಹಾಯಕವಾಗಿದೆ. 2013ರಿಂದ 2018ರ ಅವಧಿಯಲ್ಲಿ ಐಎಸ್​ಐಎಸ್​ ವಿವಿಧ ದೇಶಗಳಲ್ಲಿ ನಡೆಸಿದ ಪೈಶಾಚಿಕ ದಾಳಿಗಳಲ್ಲಿ 28 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕಕ್ಕೆ ಮೇಲುಗೈ: 2019ರ ಅಕ್ಟೋಬರ್​ 27ರಂದು ಐಎಸ್​ಐಎಸ್​ ವಿರುದ್ಧದ ಹೋರಾಟದಲ್ಲಿ ಅಮೆರಿಕ ಮಹತ್ವದ ಮುನ್ನಡೆ ಪಡೆದುಕೊಂಡಿತು. ಅಂದು ಅಮೆರಿಕ ಸೇನೆ ತನ್ನನ್ನು ಸುತ್ತುವರಿದಿರುವುದನ್ನು ಮನಗಂಡ ಬಗ್ದಾದಿ ತನ್ನನ್ನು ತಾನೇ ಬಾಂಬ್​ನಿಂದ ಸ್ಫೋಟಿಸಿಕೊಂಡು, ಪ್ರಾಣಬಿಟ್ಟ. ಈತನ ಮರಣದ ನಂತರ ಅಬೂ ಅಲ್​ ಹುಸೇನ್​ ಅಲ್​&ಕುರೇಶಿ ಐಎಸ್​ಐಎಸ್​ನ ನೇತೃತ್ವ ವಹಿಸಿದ್ದಾನೆ.
ಉದ್ದೇಶವೇನು?: ಇಸ್ಲಾಮಿಕ್​ ರಾಜ್ಯ ಸ್ಥಾಪಿಸುವುದು, ಇಸ್ಲಾಮಿಕ್​ ಆಳ್ವಿಕೆ ವಿಸ್ತರಿಸುವುದು, ಇದಕ್ಕೆ ಅಡ್ಡಿ ಬಂದವರನ್ನು ನಿರ್ದಾಣ್ಯವಾಗಿ ಕೊಲ್ಲುವುದು ಐಎಸ್​ಐಎಸ್​ ಕಾರ್ಯಸೂಚಿಯಾಗಿದೆ.

ಹಿಂಸಾಪೀಡಿತ ರಾಷ್ಟ್ರ

ನೈಜೀರಿಯಾ ಹಿಂಸೆಯಿಂದ ತತ್ತರಿಸಿದೆ. ಐಎಸ್​ಐಎಸ್​ ಮಾತ್ರವಲ್ಲ ಬೋಕೋ ಹರಾಮ್​ ಸೇರಿದಂತೆ ಇತರ ಸಂಘಟನೆಗಳು ಸಹ ಹಿಂಸಾಚಾರದಲ್ಲಿ ನಿರತವಾಗಿವೆ. ಜಮೀನು, ಜಾತಿಯ ಸಂಘರ್ಷದಿಂದಲೂ ಇಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕ ಜಾಲಗಳು ನಡೆಸುತ್ತಿರುವ ಹಿಂಸಾಚಾರ ತೀವ್ರ ಪ್ರಮಾಣದ್ದಾಗಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೋಕೋ ಹರಾಮ್​ನಂಥ ಮೂಲಭೂತವಾದಿ ಸಂಘಟನೆಗಳು ಹಲವು ವರ್ಷಗಳಿಂದ ಹಿಂಸಾಚಾರದಲ್ಲಿ ತೊಡಗಿವೆ. "ಧಾರ್ಮಿಕ ಸ್ವಾತಂತ್ರ್ಯಯ ಉಲ್ಲಂಘಿಸಿದ ದೇಶ'ಗಳ ಪಟ್ಟಿಯಲ್ಲಿ ನೈಜೀರಿಯಾದ ಹೆಸರನ್ನು 2020ರಲ್ಲಿ ಸೇರಿಸಿದ್ದ ಅಮೆರಿಕ, 2023ರಲ್ಲಿ ತೆಗೆದುಹಾಕಿತ್ತು. ಈ ಕ್ರಮವನ್ನು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಪೂರಕ ಎಂದು ವಿಶ್ಲೇಷಿಸಲಾಯಿತು. ಆದರೆ, ಕಳೆದೊಂದು ವರ್ಷದಲ್ಲಿ ಕೆಸ್ತರನ್ನು ಗುರಿಯಾಗಿಸಿ ದಾಳಿಗಳು ಹೆಚ್ಚುತ್ತಿರುವುದರಿಂದ ಕೆಂಡಾಮಂಡಲವಾಗಿರುವ ಟ್ರಂಪ್​ ನೈಜೀರಿಯಾಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿ, ಈ ಬಾರಿ ದಾಳಿಗೆ ಆದೇಶಿಸಿದ್ದಾರೆ.

ಮುಂದೇನು?

ಬೋಕೋ ಹರಾಮ್​, ಐಎಸ್​ಐಎಸ್​ ಸೇರಿದಂತೆ ಮೂಲಭೂತವಾದಿ ಭಯೋತ್ಪಾದಕ ಸಂಟನೆಗಳನ್ನು ನಿರ್ನಾಮಗೊಳಿಸಲು ನೈಜೀರಿಯಾ ಸರ್ಕಾರ ವಿಲವಾದರೆ ಅಮೆರಿಕದ ಸೇನೆಯನ್ನೇ ಕಳುಹಿಸುತ್ತೇನೆ ಎಂದು ಗುಡುಗಿರುವ ಟ್ರಂಪ್​, ನರಸಂಹಾರ ಮಾಡುತ್ತಿರುವ ಭಯೋತ್ಪಾದಕರನ್ನು ನಮ್ಮ ಸೇನೆ ಶಸ್ತ್ರಾಸ್ತ್ರಗಳ ಮೂಲಕ ಅಂತ್ಯಗೊಳಿಸಲಿದೆ ಎಂದಿದ್ದಾರೆ. ನೈಜೀರಿಯಾ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಅಮೆರಿಕ ಡಿ.25ರ ದಾಳಿ ನಡೆಸಿದ್ದು, ಅಲ್ಲಿನ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಭಯೋತ್ಪಾದಕರ ವಿರುದ್ಧದ ಸಮರವನ್ನು ಮತ್ತಷ್ಟು ತೀವ್ರಗೊಳಿಸಲಿದೆ. ಈ ಕುರಿತಾದ ಸುಳಿವನ್ನು ಟ್ರಂಪ್​ ಹಲವು ಬಾರಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಗುಪ್ತಚರ ಮಾಹಿತಿ ವಿನಿಮಯ ಮತ್ತು ಕಾರ್ಯತಂತ್ರದಲ್ಲಿ ಸಮನ್ವಯ ಸಾಧಿಸಿ ಈ ದಾಳಿ ನಡೆಸಲಾಗಿದೆ. ಇದರಲ್ಲಿ ಪರಸ್ಪರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಗೌರವ, ಜಾಗತಿಕ ಭದ್ರತೆಯ ಬದ್ಧತೆಗಳು ಅಡಗಿವೆ. ಕ್ರೈಸ್ತರು, ಮುಸ್ಲಿಮರು ಅಥವಾ ಇತರ ಸಮುದಾಯಗಳನ್ನು ಗುರಿಯಾಗಿಸಿ ಯಾವುದೇ ರೀತಿಯ ಭಯೋತ್ಪಾದಕ ಹಿಂಸಾಚಾರ ನಡೆದರೂ, ಅದು ನೈಜೀರಿಯಾದ ಮೌಲ್ಯಗಳಿಗೆ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಅವಮಾನವಾದಂತೆ.
> ನೈಜೀರಿಯಾದ ವಿದೇಶಾಂಗ ಇಲಾಖೆ
ಈ ಭಯೋತ್ಪಾದಕರಿಗೆ ಮೊದಲೇ ನಾನು ಎಚ್ಚರಿಕೆ ನೀಡಿದ್ದೆ. ಕೆಸ್ತರ ನರಮೇಧ ನಿಲ್ಲಿಸದಿದ್ದರೆ ನರಕಕ್ಕೆ ಕಳುಹಿಸುವುದಾಗಿ ಹೇಳಿದ್ದೆ. ಅದು ಇಂದು ರಾತ್ರಿ (ಡಿ.25) ನಡೆದಿದೆ. ಐಸಿಸ್​ ನೆಲೆಗಳನ್ನು ಗುರಿಯಾಗಿಸಿ ನಿಖರ ದಾಳಿ ನಡೆದಿದ್ದು, ಅದನ್ನು ಅಮೆರಿಕ ಮಾತ್ರ ಮಾಡಲು ಸಾಧ್ಯ.
> ಡೊನಾಲ್ಡ್​ ಟ್ರಂಪ್​ ಅಮೆರಿಕ ಅಧ್ಯಕ್ಷ