ಪಾಕ್ಗೆ ಅಮೆರಿಕದ ಕಪಾಳಮೋಕ್ಷ: ಭಯೋತ್ಪಾದಕರ ಸ್ವರ್ಗ ಎಂದು ಘೋಷಿಸಿದ ಸಿಆರ್‌ಎಸ್ ವರದಿ! ಭಾರತದ ವಿರುದ್ಧ ಸಂಚು ಬಯಲು!
ವಾಷಿಂಗ್ಟನ್: ಭಯೋತ್ಪಾದನೆಯನ್ನು ಪೋಷಿಸುತ್ತಾ ಜಾಗತಿಕ ವೇದಿಕೆಯಲ್ಲಿ ಶಾಂತಿಯ ನಾಟಕವಾಡುತ್ತಿದ್ದ ಪಾಕಿಸ್ತಾನದ(Pakistan Exposed) ಅಸಲಿ ಮುಖವಾಡ ಮತ್ತೊಮ್ಮೆ ಕಳಚಿಬಿದ್ದಿದೆ. ಅಮೆರಿಕದ ಪ್ರತಿಷ್ಠಿತ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ (CRS) ಬಿಡುಗಡೆ ಮಾಡಿರುವ 2026ರ ಮಾರ್ಚ್ 25 ಇತ್ತೀಚಿನ ವರದಿಯು, ಪಾಕಿಸ್ತಾನವು ಇಂದಿಗೂ ಭಯೋತ್ಪಾದಕರ ಪಾಲಿಗೆ ಸುರಕ್ಷಿತ ಸ್ವರ್ಗ ಎಂಬ ಕಟು ಸತ್ಯವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟಿದೆ.
ಭಾರತವೇ ಈ ಭಯೋತ್ಪಾದಕರ ಟಾರ್ಗೆಟ್!
ಅಮೆರಿಕದ ಸಂಸತ್ತಿನ ಈ ವರದಿಯ ಪ್ರಕಾರ, ಪಾಕಿಸ್ತಾನವು ತನ್ನ ಮಣ್ಣಿನಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ವಿರುದ್ಧ ಕೇವಲ ಹೆಸರಿಗಷ್ಟೇ ಕ್ರಮ ಕೈಗೊಳ್ಳುತ್ತಿದೆ. ವಿಶೇಷವಾಗಿ ಭಾರತದ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉಗ್ರಗಾಮಿಗಳಿಗೆ ಪಾಕ್ ಸೇನೆ ಮತ್ತು ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿವೆ ಎಂದು ವರದಿ ಗಂಭೀರ ಆರೋಪ ಮಾಡಿದೆ.
ಲಷ್ಕರ್-ಎ-ತೈಬಾ: 1993 ರಿಂದ ಭಾರತವನ್ನು ರಕ್ತಸಿಕ್ತಗೊಳಿಸುತ್ತಿರುವ ಈ ಸಂಘಟನೆಯು ಪಾಕಿಸ್ತಾನ ಮತ್ತು ಯುರೋಪ್‌ನಿಂದ ನಿರಂತರವಾಗಿ ದೇಣಿಗೆ ಸಂಗ್ರಹಿಸುತ್ತಿದೆ. ಜಮಾತ್-ಉದ್-ದಾವಾ ಮಾಧ್ಯಮಗಳ ಮೂಲಕ ತನ್ನ ವಿಷಕಾರಿ ಸಿದ್ಧಾಂತವನ್ನು ಪಸರಿಸುತ್ತಿದೆ.
ಜೈಶ್-ಎ-ಮೊಹಮ್ಮದ್: 2002 ರಲ್ಲೇ ನಿಷೇಧಕ್ಕೊಳಗಾಗಿದ್ದರೂ, ಈ ಸಂಘಟನೆಯು ರಿಯಲ್ ಎಸ್ಟೇಟ್ ಮತ್ತು ಸರಕು ವ್ಯಾಪಾರದಂತಹ ಕಾನೂನುಬದ್ಧ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ನಿಧಿಯನ್ನು ಭಯೋತ್ಪಾದನೆಗೆ ಬಳಸಿಕೊಳ್ಳುತ್ತಿದೆ.
ಮಸೂದ್ ಅಜರ್, ಸಾಜಿದ್ ಮಿರ್ ಇನ್ನೂ ಮುಕ್ತ!
ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಜೈಶ್ ಸಂಸ್ಥಾಪಕ ಮಸೂದ್ ಅಜರ್ ಮತ್ತು 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮಿರ್ ಇಬ್ಬರೂ ಇಂದಿಗೂ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮಿಲಿಟರಿ ವಿಫಲವಾಗಿದೆ ಎಂದು ಅಮೆರಿಕದ ವರದಿ ಬೆರಳು ಮಾಡಿ ತೋರಿಸಿದೆ. ರಾಷ್ಟ್ರೀಯ ಕ್ರಿಯಾ ಯೋಜನೆ ಎಂಬುದು ಕೇವಲ ಕಾಗದದ ಮೇಲಿನ ನಾಟಕವಾಗಿದ್ದು, ಯಾವುದೇ ಉಗ್ರಗಾಮಿ ಪಡೆಯನ್ನು ಹತ್ತಿಕ್ಕುವ ಇಚ್ಛಾಶಕ್ತಿ ಪಾಕಿಸ್ತಾನಕ್ಕಿಲ್ಲ ಎಂದು ವರದಿ ಕಿಡಿಕಾರಿದೆ.
ಪಾಕಿಸ್ತಾನಕ್ಕೆ ತಾನೇ ತೋಡಿದ ಹಳ್ಳ!
ಭಾರತವನ್ನು ಗುರಿಯಾಗಿಸಿಕೊಂಡ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಈಗ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಅತಿ ದೊಡ್ಡ ಶಾಪವಾಗಿ ಪರಿಣಮಿಸಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶರಿಯತ್ ಕಾನೂನು ಜಾರಿಗೆ ತರಲು ಟಿಟಿಪಿ ಯತ್ನಿಸುತ್ತಿದ್ದು, ಇದು ಪಾಕ್ ಸೇನೆಯ ಮೇಲೆಯೇ ದಾಳಿಗಳನ್ನು ನಡೆಸುತ್ತಿದೆ. ಅಲ್-ಖೈದಾ ಸಂಘಟನೆಯು ಈ ಟಿಟಿಪಿ ಉಗ್ರರಿಗೆ ಮಾರ್ಗದರ್ಶನ ನೀಡುತ್ತಿರುವುದು ಇಡೀ ಪ್ರದೇಶವನ್ನು ಅಸ್ಥಿರಗೊಳಿಸಿದೆ,(ಏಜೆನ್ಸೀಸ್).