- "ಮಿನಿಟ್‌ಮ್ಯಾನ್ III" ಅಬ್ಬರ: ಪಶ್ಚಿಮ ಏಷ್ಯಾ ಯುದ್ಧದ ನಡುವೆ ಅಮೆರಿಕದ ಪರಮಾಣು ಶಕ್ತಿ ಪ್ರದರ್ಶನ!
- ಜಗತ್ತಿಗೆ ನಡುಕ ಹುಟ್ಟಿಸಿದ ಅಮೆರಿಕದ ಕ್ಷಿಪಣಿ ಪರೀಕ್ಷೆ: ಕೆಲವೇ ನಿಮಿಷಗಳಲ್ಲಿ ಖಂಡಾಂತರ ಗುರಿ ಮುಟ್ಟುವ ಸಾಮರ್ಥ್ಯ!
- ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ಗಂಟೆ: ಗಂಟೆಗೆ 15,000 ಮೈಲಿ ವೇಗದಲ್ಲಿ ಚಿಮ್ಮಿದ ಅಮೆರಿಕದ ಕ್ಷಿಪಣಿ!
ವಾಷಿಂಗ್ಟನ್/ಕ್ಯಾಲಿಫೋರ್ನಿಯಾ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಆರನೇ ದಿನಕ್ಕೆ ಕಾಲಿಟ್ಟಿದೆ. ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಅಸ್ಥಿರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅಮೆರಿಕವು ತನ್ನ ಅತ್ಯಂತ ಶಕ್ತಿಶಾಲಿ ಪರಮಾಣು ಸಾಮರ್ಥ್ಯದ LGM-30G ಮಿನಿಟ್‌ಮ್ಯಾನ್ III (Minuteman III) ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಮಂಗಳವಾರ ತಡರಾತ್ರಿ ಕ್ಯಾಲಿಫೋರ್ನಿಯಾದ ವ್ಯಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆ ನೆಲೆಯಿಂದ ಈ ಉಡಾವಣೆ ನಡೆದಿದೆ. ಈ ಕ್ಷಿಪಣಿಯು ಯಾವುದೇ ಯುದ್ಧ ಶಿರಸ್ತ್ರಾಣವನ್ನು ಹೊಂದಿರಲಿಲ್ಲ (Unarmed). ಅಮೆರಿಕದ ಭೂ-ಆಧಾರಿತ ಪರಮಾಣು ಪ್ರತಿರೋಧಕ ವ್ಯವಸ್ಥೆಯ ಸನ್ನದ್ಧತೆಯನ್ನು ಪರಿಶೀಲಿಸುವುದು ಈ ಪರೀಕ್ಷೆಯ ಮುಖ್ಯ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿನಿಟ್‌ಮ್ಯಾನ್ III: ವಿನಾಶಕಾರಿ ಕ್ಷಿಪಣಿ
ಮಿನಿಟ್‌ಮ್ಯಾನ್ III ಕೇವಲ ಒಂದು ಕ್ಷಿಪಣಿಯಲ್ಲ, ಇದು ಅಮೆರಿಕದ ಪರಮಾಣು ತ್ರಿಶಕ್ತಿಯ (Nuclear Triad) ಬೆನ್ನೆಲುಬು. ಇದರ ತಾಂತ್ರಿಕ ಸಾಮರ್ಥ್ಯಗಳು ಬೆಚ್ಚಿಬೀಳಿಸುವಂತಿವೆ. ಗಂಟೆಗೆ 15,000 ಮೈಲಿಗಳಿಗಿಂತ ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಕೆಲವೇ ನಿಮಿಷಗಳಲ್ಲಿ ಒಂದು ಖಂಡದಿಂದ ಮತ್ತೊಂದು ಖಂಡದ ಗುರಿಯನ್ನು ತಲುಪಬಲ್ಲದು. ಅಂದಾಜು 6,000 ಮೈಲಿಗಳ ದೂರದವರೆಗೆ ದಾಳಿ ಮಾಡುವ ಕ್ಷಮತೆ ಹೊಂದಿದೆ. ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಪ್ರಯೋಗಿಸಲಾದ ಪರಮಾಣು ಬಾಂಬ್‌ಗಳಿಗಿಂತಲೂ ಹಲವು ಪಟ್ಟು ಹೆಚ್ಚು ಶಕ್ತಿಶಾಲಿ ಪರಮಾಣು ಶಿರಸ್ತ್ರಾಣಗಳನ್ನು ಇದು ಹೊತ್ತೊಯ್ಯಬಲ್ಲ ಸಾಮಾರ್ಥ್ಯ ಹೊಂದಿದೆ.
ಕಾಕತಾಳೀಯವೇ ಅಥವಾ ಎಚ್ಚರಿಕೆಯೇ?
ಅಮೆರಿಕದ ಮಿಲಿಟರಿ ಅಧಿಕಾರಿಗಳು ಈ ಪರೀಕ್ಷೆಯು ಮೊದಲೇ ನಿಗದಿಯಾಗಿತ್ತು ಮತ್ತು ಪ್ರಸ್ತುತ ಅಂತರಾಷ್ಟ್ರೀಯ ಘಟನೆಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರೂ, ಇದರ ಸಮಯವು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಯುದ್ಧ ಸನ್ನದ್ಧತೆ: "ಈ ಪರೀಕ್ಷೆಯು ನಮ್ಮ ಐಸಿಬಿಎಂ (ICBM) ಪಡೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ದೇಶದ ರಕ್ಷಣೆಗೆ ಸದಾ ಸಿದ್ಧವಾಗಿರಲು ಸಹಾಯ ಮಾಡುತ್ತದೆ," ಎಂದು 576ನೇ ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್ ಕಮಾಂಡರ್ ಕ್ಯಾರಿ ರೇ ತಿಳಿಸಿದ್ದಾರೆ.
ಜಾಗತಿಕ ಎಚ್ಚರಿಕೆ: ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಯುದ್ಧದ ಭೀತಿ ಇರುವಾಗ ಇಂತಹ ಶಕ್ತಿಶಾಲಿ ಕ್ಷಿಪಣಿಯ ಪರೀಕ್ಷೆಯು ಅಮೆರಿಕದ ಮಿಲಿಟರಿ ಬಲವನ್ನು ಜಗತ್ತಿಗೆ ಸಾರಿದಂತಾಗಿದೆ.
ಪರಮಾಣು ತ್ರಿಶಕ್ತಿ (Nuclear Triad) ಎಂದರೇನು?
ಅಮೆರಿಕ ತನ್ನ ಪರಮಾಣು ರಕ್ಷಣಾ ವ್ಯವಸ್ಥೆಯನ್ನು ಮೂರು ವಿಭಾಗಗಳಲ್ಲಿ ಹೊಂದಿದೆ. ಭೂ-ಆಧಾರಿತ: ಮಿನಿಟ್‌ಮ್ಯಾನ್ III ನಂತಹ ಐಸಿಬಿಎಂ ಕ್ಷಿಪಣಿಗಳು. ಸಮುದ್ರ-ಆಧಾರಿತ: ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸುವ ಕ್ಷಿಪಣಿಗಳು. ವಾಯು-ಆಧಾರಿತ: ಪರಮಾಣು ಬಾಂಬ್‌ಗಳನ್ನು ಹೊತ್ತೊಯ್ಯುವ ಯುದ್ಧ ವಿಮಾನಗಳು,(ಏಜೆನ್ಸೀಸ್).