ಜಲಸಮಾಧಿಯಾಗುತ್ತಾ ಅಮೆರಿಕದ ಮಹಾ ನೌಕೆ..? ಟ್ರಂಪ್ ಸೈನ್ಯಕ್ಕೆ ಖಮೇನಿ ಕೊಟ್ಟ ಡೆತ್ ವಾರ್ನಿಂಗ್ ಹಿಂದಿನ ಗುಟ್ಟೇನು..! 
ವಿದೇಶ

ಜಲಸಮಾಧಿಯಾಗುತ್ತಾ ಅಮೆರಿಕದ ಮಹಾ ನೌಕೆ..? ಟ್ರಂಪ್ ಸೈನ್ಯಕ್ಕೆ ಖಮೇನಿ ಕೊಟ್ಟ ಡೆತ್ ವಾರ್ನಿಂಗ್ ಹಿಂದಿನ ಗುಟ್ಟೇನು..! Ali Khamenei

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿರುವ ಬೆನ್ನಲ್ಲೇ, ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ(Ali Khamenei) ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ತನ್ನ ಅತ್ಯಾಧುನಿಕ ಯುದ್ಧನೌಕೆಗಳನ್ನು ಇರಾನ್ ಗಡಿಯತ್ತ ಕಳುಹಿಸಿ ಬೆದರಿಸುತ್ತಿದೆ. ಅದರೆ, ಆ ನೌಕೆಗಳನ್ನು ನಾಶಪಡಿಸುವ ಶಕ್ತಿ ಇರಾನ್ ಬಳಿ ಇದೆ ಎಂದು ಗುಡುಗಿದ್ದಾರೆ.

ಖಮೇನಿ ಹೇಳಿದ್ದೇನು..?

ಜಿನೀವಾದಲ್ಲಿ ನಡೆಯುತ್ತಿರುವ ಪರಮಾಣು ಮಾತುಕತೆಗಳ ನಡುವೆಯೇ ಟೆಹ್ರಾನ್‌ನಲ್ಲಿ ಮಾತನಾಡಿದ ಖಮೇನಿ, ಅಮೆರಿಕನ್ನರು ಪದೇಪದೆ ನಾವು ಇರಾನ್ ಕಡೆಗೆ ಯುದ್ಧನೌಕೆಯನ್ನು ಕಳುಹಿಸಿದ್ದೇವೆ ಎಂದು ಹೇಳುತ್ತಿರುತ್ತಾರೆ. ನಿಸ್ಸಂದೇಹವಾಗಿ ಯುದ್ಧನೌಕೆಯು ಒಂದು ಅಪಾಯಕಾರಿ ಮಿಲಿಟರಿ ಶಸ್ತ್ರಾಸ್ತ್ರವಾಗಿದೆ. ಆದರೆ ಆ ಯುದ್ಧನೌಕೆಗಿಂತ ಅಪಾಯಕಾರಿ ಅಂದರೆ, ಆ ನೌಕೆಯನ್ನು ಸಮುದ್ರದ ತಳಕ್ಕೆ ಕಳುಹಿಸಬಲ್ಲ ಶಸ್ತ್ರಾಸ್ತ್ರ ನಮ್ಮಲ್ಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದ್ದೇವೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಖಮೇನಿ, ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವು ಒಮ್ಮೊಮ್ಮೆ ಚೇತರಿಸಿಕೊಳ್ಳಲಾಗದಂತಹ ಅಘಾತವನ್ನು ಅನುಭವಿಸಬಹುದು ಎಂದು ಲೇವಡಿ ಮಾಡಿದ್ದಾರೆ.

ಆಡಳಿತ ಬದಲಾವಣೆ' ಅಸಾಧ್ಯ

ಅಮೆರಿಕವು ಕಳೆದ 47 ವರ್ಷಗಳಿಂದ ಇರಾನ್‌ನ ಇಸ್ಲಾಮಿಕ್ ಆಡಳಿತವನ್ನು ಉರುಳಿಸಲು ಪ್ರಯತ್ನಿಸುತ್ತಿದೆ, ಆದರೆ ಅದರಲ್ಲಿ ಅವರು ಎಂದಿಗೂ ಯಶಸ್ವಿಯಾಗಲಿಲ್ಲ. ಭವಿಷ್ಯದಲ್ಲೂ ಇದು ಅವರಿಗೆ ಸಾಧ್ಯವಿಲ್ಲ ಎಂದು ಖಮೇನಿ ಸವಾಲು ಹಾಕಿದ್ದಾರೆ.

ಮಾತುಕತೆ ಮತ್ತು ಸಿದ್ದತೆ

ಜಿನೆವಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ವಿಷಯದ ಕುರಿತು ಪರೋಕ್ಷ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ನಮಗೆ ಯುದ್ಧ ಬೇಕಿಲ್ಲ, ಆದರೆ ನಾವು ಯಾರ ಕಿರುಕುಳಕ್ಕೂ ಮಣಿಯುವುದಿಲ್ಲ. ನಮ್ಮ ಮೇಲೆ ದಾಳಿ ಮಾಡುವವರಿಗೆ ನಾವು ಸಿಡಿಲಿನಂತಹ ಏಟು ನೀಡಲಿದ್ದೇವೆ ಎಂದು ಖಮೇನಿ ಗುಡುಗಿದ್ದಾರೆ.

ಹೆಚ್ಚುತ್ತಿರುವ ಮಿಲಿಟರಿ ಜಮಾವಣೆ

ಇರಾನ್‌ನ ಪರಮಾಣು ಯೋಜನೆಗಳನ್ನು ಹತ್ತಿಕ್ಕಲು ಅಮೆರಿಕವು ಈಗಾಗಲೇ ತನ್ನ ಬೃಹತ್ ವಿಮಾನವಾಹಕ ನೌಕೆಗಳಾದ USS ಅಬ್ರಹಾಂ ಲಿಂಕನ್ ಮತ್ತು USS ಜೆರಾಲ್ಡ್ ಆರ್. ಫೋರ್ಡ್ ಅನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸಿದೆ. ಇದರ ಜೊತೆಗೆ ಕಳೆದ 24 ಗಂಟೆಗಳಲ್ಲಿ 50ಕ್ಕೂ ಹೆಚ್ಚು F-35 ಮತ್ತು F-22 ಯುದ್ಧ ವಿಮಾನಗಳನ್ನು ಅಮೆರಿಕ ಈ ಭಾಗಕ್ಕೆ ರವಾನಿಸಿದೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).