ಇರಾನ್ ಮೇಲೆ ಅಮೆರಿಕದ ಮತ್ತೆ ಕೆಂಗಣ್ಣು; ಸರಿಯಾಗಿ ನಡೆದುಕೊಳ್ಳದಿದ್ದರೆ ದಾಳಿ ಗ್ಯಾರಂಟಿ ಎಂದು ಎಚ್ಚರಿಸಿದ ಡೊನಾಲ್ಡ್ ಟ್ರಂಪ್! 
ವಿದೇಶ

ಇರಾನ್ ಮೇಲೆ ಅಮೆರಿಕದ ಮತ್ತೆ ಕೆಂಗಣ್ಣು; ಸರಿಯಾಗಿ ನಡೆದುಕೊಳ್ಳದಿದ್ದರೆ ದಾಳಿ ಗ್ಯಾರಂಟಿ ಎಂದು ಎಚ್ಚರಿಸಿದ ಡೊನಾಲ್ಡ್ ಟ್ರಂಪ್! Donald Trump

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ ವಿರುದ್ಧ ಮತ್ತೆ ಗುಡುಗಿದ್ದಾರೆ. ಇರಾನ್ ಕಳುಹಿಸಿರುವ ಹೊಸ ಶಾಂತಿ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ತಿಳಿಸಿರುವ ಟ್ರಂಪ್, ಅದೇ ಸಮಯದಲ್ಲಿ ಒಂದು ವೇಳೆ ಇರಾನ್ ತಪ್ಪು ಹೆಜ್ಜೆ ಇಟ್ಟರೆ ಕ್ಷಿಪಣಿ ದಾಳಿ ನಡೆಸಲು ನಾವು ಸಿದ್ಧ ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಯು ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್ ನಡುವೆ ಹೊಸ ಸಂಚಲನ ಮೂಡಿಸಿದ್ದು, ಜಗತ್ತು ಮತ್ತೊಂದು ಮಹಾಯುದ್ಧದ ಅಂಚಿನಲ್ಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

ಟ್ರಂಪ್ ಆಕ್ರೋಶ: "47 ವರ್ಷಗಳ ದೌರ್ಜನ್ಯಕ್ಕೆ ಬೆಲೆ ತೆರಲೇಬೇಕು"

ಈ ಬಗ್ಗೆ ತಮ್ಮದೇ ಆದ ಟ್ರೂತ್ ಸೋಶಿಯಲ್​ನಲ್ಲಿ ಪೋಸ್ಟ್ ಹಾಕಿರುವ ಟ್ರಂಪ್, ಇರಾನ್ ಕಳುಹಿಸಿರುವ ಪ್ರಸ್ತಾವನೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ.
ಇರಾನ್ ನಮಗೆ ಕಳುಹಿಸಿರುವ ಯೋಜನೆಯನ್ನು ನಾನು ಶೀಘ್ರದಲ್ಲೇ ಪರಿಶೀಲಿಸುತ್ತೇನೆ. ಆದರೆ ಅದು ಒಪ್ಪುವಂತಿದೆ ಎಂದು ನನಗನ್ನಿಸುತ್ತಿಲ್ಲ. ಕಳೆದ 47 ವರ್ಷಗಳಿಂದ ಇರಾನ್ ಮಾನವಕುಲಕ್ಕೆ ಮತ್ತು ಇಡೀ ಜಗತ್ತಿಗೆ ಮಾಡಿದ ದ್ರೋಹಕ್ಕೆ ಅವರು ಇನ್ನೂ ಸರಿಯಾದ ಬೆಲೆ ತೆತ್ತಿಲ್ಲ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ಫ್ಲೋರಿಡಾದಲ್ಲಿ ಏರ್ ಫೋರ್ಸ್ ಒನ್ ವಿಮಾನ ಏರುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್​, ಇರಾನ್ ಒಪ್ಪಂದಕ್ಕೆ ಬರಲು ಹಪಹಪಿಸುತ್ತಿದೆ, ಆದರೆ ಅವರ ನಿಯತ್ತು ಸರಿಯಿಲ್ಲ. ಅವರು ಕೇಳುತ್ತಿರುವ ಕೆಲವು ವಿಷಯಗಳನ್ನು ಒಪ್ಪಲು ನಮಗೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಿಲಿಟರಿ ಕಾರ್ಯಾಚರಣೆಯ ಮುನ್ಸೂಚನೆ: ಬ್ಲಾಸ್ಟ್ ದಿ ಹೆಲ್ ಔಟ್ ಆಫ್ ದೆಮ್!

ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಅಮೆರಿಕದ ಮುಂದಿರುವ ಆಯ್ಕೆಗಳ ಬಗ್ಗೆ ಟ್ರಂಪ್ ಅತ್ಯಂತ ಕಠಿಣ ಪದಗಳನ್ನು ಬಳಸಿದ್ದಾರೆ.
ದಾಳಿಯ ಬೆದರಿಕೆ: ಅವರು ಏನಾದರೂ ಕೆಟ್ಟದನ್ನು ಮಾಡಲು ಪ್ರಯತ್ನಿಸಿದರೆ ಅಥವಾ ಮಿತಿ ಮೀರಿದರೆ, ನಾವು ಸುಮ್ಮನಿರುವುದಿಲ್ಲ. ದಾಳಿ ಮಾಡುವ ಸಾಧ್ಯತೆ ಖಂಡಿತವಾಗಿಯೂ ಇದೆ ಎಂದಿದ್ದಾರೆ.
ನಿರ್ಣಾಯಕ ಆಯ್ಕೆ: ಮಾತುಕತೆ ಅಥವಾ ಸಂಪೂರ್ಣ ವಿನಾಶವಾಗಿದೆ. ಈ ಎರಡರ ನಡುವೆ ಇರಾನ್ ಯಾವುದನ್ನಾದರೂ ಆರಿಸಿಕೊಳ್ಳಬಹುದು. ಅವರನ್ನು ಸಂಪೂರ್ಣವಾಗಿ ಮುಗಿಸಿಬಿಡಬೇಕೇ ಅಥವಾ ಒಪ್ಪಂದ ಮಾಡಿಕೊಳ್ಳಬೇಕೇ ಎಂಬ ಪ್ರಶ್ನೆ ಎದ್ದಿದೆ. ಇವೇ ನಮ್ಮ ಮುಂದಿರುವ ಆಯ್ಕೆಗಳು ಎಂದು ಟ್ರಂಪ್ ಹೇಳುವ ಮೂಲಕ ಯುದ್ಧದ ಕಾರ್ಮೋಡವನ್ನು ಸ್ಪಷ್ಟಪಡಿಸಿದ್ದಾರೆ.

ಸ್ಟ್ರೇಟ್ ಆಫ್ ಹಾರ್ಮುಜ್ ಮತ್ತು ಪರಮಾಣು ಬಿಕ್ಕಟ್ಟು

ಈ ಸಂಘರ್ಷಕ್ಕೆ ಪ್ರಮುಖ ಕಾರಣ ಸ್ಟ್ರೇಟ್ ಆಫ್ ಹೊರ್ಮುಜ್ ಜಲಸಂಧಿಯ ಮೇಲಿನ ಹತೋಟಿ. ಇರಾನ್ ಈ ಪ್ರಮುಖ ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್ ಹಡಗುಗಳನ್ನು ತಡೆಹಿಡಿದಿದೆ.
ಇರಾನ್ ಅಧಿಕಾರಿಗಳು, ಅಮೆರಿಕ ಮೊದಲು ನಮ್ಮ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲಿ, ಆಮೇಲೆ ಪರಮಾಣು ಮಾತುಕತೆ ಬಗ್ಗೆ ಯೋಚಿಸೋಣ ಎಂದು ಪಟ್ಟು ಹಿಡಿದಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ ಕೂಡ, ಅಮೆರಿಕದೊಂದಿಗೆ ಮತ್ತೊಂದು ಸುತ್ತಿನ ಸಂಘರ್ಷ ಅನಿವಾರ್ಯ ಎಂದು ಹೇಳಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಇಸ್ರೇಲ್ ಸನ್ನದ್ಧ: ನೆತನ್ಯಾಹು ತುರ್ತು ಸಭೆ

ಅತ್ತ ಅಮೆರಿಕ ಮತ್ತು ಇರಾನ್ ನಡುವೆ ವಾಕ್ಸಮರ ನಡೆಯುತ್ತಿದ್ದರೆ, ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಭದ್ರತಾ ಸಂಪುಟದ ತುರ್ತು ಸಭೆಯನ್ನು ಕರೆದಿದ್ದಾರೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ ಅಥವಾ ಇರಾನ್ ಪ್ರತೀಕಾರ ತೀರಿಸಿಕೊಂಡರೆ, ಅದು ನೇರವಾಗಿ ಇಸ್ರೇಲ್ ಮೇಲೆ ಪರಿಣಾಮ ಬೀರಲಿದೆ ಎಂಬುದು ಇಸ್ರೇಲ್ ಆತಂಕಕ್ಕೆ ಕಾರಣವಾಗಿದೆ.

ಮುಂದೇನು..?

ಸದ್ಯಕ್ಕೆ ಚೆಂಡು ಅಮೆರಿಕದ ಅಂಗಳದಲ್ಲಿದೆ. ಟ್ರಂಪ್ ಅವರು ಇರಾನ್ ನೀಡಿದ ನಿಖರವಾದ ಪದಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದರೆ, ಇರಾನ್ ಪರಮಾಣು ಶಕ್ತಿ ಹೆಚ್ಚಿಸಿಕೊಳ್ಳುತ್ತಿರುವುದು ಮತ್ತು ಪ್ರಾದೇಶಿಕ ಭದ್ರತೆಗೆ ಸವಾಲಾಗುತ್ತಿರುವುದು ಅಮೆರಿಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ,(ಏಜೆನ್ಸೀಸ್).