- ಅಮೆರಿಕನ್ನರು ತಕ್ಷಣ ಇರಾನ್ ಬಿಟ್ಟು ಹೊರಡುವಂತೆ ಸೂಚನೆ
- ಪ್ರತಿಭಟನೆಗಳು ಹಿಂಸಾತ್ಮಕಕ್ಕೆ ತಿರುಗುತ್ತಿದ್ದಂತೆ ಅಮೆರಿಕ ವಾರ್ನಿಂಗ್
- ಖಮೇನಿ ರಾಷ್ಟ್ರದ ಮೇಲೆ ದಾಳಿಗೆ ಟ್ರಂಪ್ ಸಿದ್ಧತೆ?
ಟೆಹ್ರಾನ್: ಇರಾನ್‌ನಾದ್ಯಂತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಇರಾನ್‌ನಲ್ಲಿ ಉಳಿದಿರುವ ಅಮೆರಿಕನ್ನರಿಗೆ ಯುಎಸ್ ರಾಯಭಾರ ಕಚೇರಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಪ್ರತಿಭಟನೆ ತೀವ್ರ
ಇರಾನ್‌ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳಲ್ಲಿ ಇಲ್ಲಿಯವರೆಗೆ 500ಕ್ಕೂ ಅಧಿಕ ಮಂದಿ ದುರಂತವಾಗಿ ಸಾವಿಗೀಡಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿಗಳಲ್ಲಿ ಉಲ್ಲೇಖವಾಗಿದೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಘೋಷಣೆಗಳು ತಾರಕಕ್ಕೇರಿದ್ದು, ಇರಾನ್‌ನಲ್ಲಿ ಜನರು ಸರ್ಕಾರವನ್ನು ಭಾರೀ ವಿರೋಧಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕ, ಮಧ್ಯಪ್ರವೇಶಿಸುವುದಾಗಿಯೂ ಇರಾನ್ಗೆ ಎಚ್ಚರಿಸಿದೆ.
ಇರಾನ್ ಜತೆ ವ್ಯಾಪಾರ ಮಾಡಿದ್ರೆ ಶೇ.25ರಷ್ಟು ಸುಂಕ!
ಇದರ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ, ಇರಾನ್ನಲ್ಲಿರುವ ಅಮೆರಿಕನ್ನರಿಗೆ ಪ್ರತಿಭಟನೆಯ ತೀವ್ರತೆಯ ಹಿನ್ನೆಲೆ ತಕ್ಷಣವೇ ಇರಾನ್ ತೊರೆಯುವಂತೆ ಎಚ್ಚರಿಸಿದೆ. ಮತ್ತೊಂದೆಡೆ, ಖಮೇನಿ ರಾಷ್ಟ್ರದೊಂದಿಗೆ ವ್ಯಾಪಾರ ಮಾಡುವ ಅನ್ಯ ದೇಶಗಳ ಮೇಲೆ ಶೇ.25ರಷ್ಟು ಸುಂಕವನ್ನು ಟ್ರಂಪ್ ಘೋಷಿಸಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಅಮೆರಿಕದ ಪಾಸ್‌ಪೋರ್ಟ್ ಮತ್ತು ಸಂಬಂಧ ಹೊಂದಿರುವ ಜನರನ್ನು ಇರಾನ್ ಅಧಿಕಾರಿಗಳು ಬಂಧಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಯುಎಸ್ ರಾಯಭಾರ ಕಚೇರಿ ಈ ಎಚ್ಚರಿಕೆಯನ್ನು ನೀಡಿದೆ. ಇರಾನ್ ಸರ್ಕಾರವು ದ್ವಿ ಪೌರತ್ವವನ್ನು ಗುರುತಿಸುವುದಿಲ್ಲ ಮತ್ತು ಅಮೆರಿಕ-ಇರಾನಿಯನ್ ರಾಷ್ಟ್ರೀಯತೆಯನ್ನು ಹೊಂದಿರುವವರನ್ನು ಇರಾನ್ ತನ್ನ ನಾಗರಿಕರೆಂದು ಪರಿಗಣಿಸುತ್ತದೆ.
ಹೀಗಾಗಿ, ಅವರನ್ನು ಬಂಧಿಸುವ ಸಾಧ್ಯತೆಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಇರಾನಿನ ಪಾಸ್‌ಪೋರ್ಟ್‌ನಿಂದಲೇ ದೇಶವನ್ನು ತೊರೆಯಲು ಅಮೆರಿಕ ಸಲಹೆ ನೀಡಿದೆ. ಇರಾನ್‌ನಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಿದರೆ ಗಂಭೀರ ದಾಳಿ ನಡೆಯುವುದು ಶತಸಿದ್ಧ ಎಂದು ಟ್ರಂಪ್ ಎರಡ್ಮೂರು ಬಾರಿ ಎಚ್ಚರಿಸಿರುವುದು ಇರಾನ್ಗೆ ದೊಡ್ಡ ಸಂಕಷ್ಟವನ್ನು ಸೂಚಿಸಿದೆ,(ಏಜೆನ್ಸೀಸ್).