ವಿದೇಶ

ಷಿಕಾಗೋಗೆ ಹೊರಟಿದ್ದ ಫ್ಲೈಟ್​ನಲ್ಲಿ ಹೈಡ್ರಾಮಾ; ಆಗಸದಲ್ಲೇ ಡೋರ್​ ತೆರೆಯಲು ಯತ್ನ, ಮುಂದೇನಾಯ್ತು?..Chicago

  • ಸ್ಯಾನ್ ಡಿಯಾಗೋದಿಂದ ಷಿಕಾಗೋಗೆ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಹೈಡ್ರಾಮಾ.

  • ಎಕ್ಸಿಟ್​ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ, ಸಿಬ್ಬಂದಿ, ಇತರ ಪ್ರಯಾಣಿಕರಿಂದ ತಪ್ಪಿದ ದುರಂತ.

  • ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ.

ಫೀನಿಕ್ಸ್ (ಅರಿಜೋನಾ): ಷಿಕಾಗೋ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಎಕ್ಸಿಟ್ತೆ ಡೋರ್ ತೆರೆ​ಯಲು ಯತ್ನಿಸಿದ ಕಾರಣ ಅರಿಜೋನಾದ ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾದ ಘಟನೆ ಬೆಳಕಿಗೆ ಬಂದಿದೆ.

ಸ್ಯಾನ್ ಡಿಯಾಗೋದಿಂದ ಷಿಕಾಗೋಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್‌ನ 'ಫ್ಲೈಟ್ 1494' ವಿಮಾನದಲ್ಲಿ ಈ ಘಟನೆ ನಡೆದಿದ್ದು, ಕೆಲ ಕಾಲ ಪ್ರಯಾಣಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆರೋಪಿ ಯಾರು? ಎನ್ನುವ ಮಾಹಿತಿಯನ್ನು ಇನ್ನು ಬಹಿರಂಗ ಪಡಿಸಿಲ್ಲ.

ಅಮೆರಿಕನ್ ಏರ್‌ಲೈನ್ಸ್‌ನ 'ಫ್ಲೈಟ್ 1494'ದಲ್ಲಿ ಪ್ರಯಾಣಿಕನೊಬ್ಬ ಎಕ್ಸಿಟ್​ ಡೋರ್​ ತೆರೆಯಲು ಯತ್ನಿಸಿದ ಕಾರಣ, ಅಶಿಸ್ತಿನ ವರ್ತನೆಯಿಂದಾಗಿ,ವಿಮಾನವನ್ನು ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಲಾಗಿದೆ ಎಂದು ಅಮೆರಿಕನ್ ಏರ್‌ಲೈನ್ಸ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

ವಿಡಿಯೋ ವೈರಲ್

ಅಮೆರಿಕನ್ ಏರ್‌ಲೈನ್ಸ್‌ನ ಫ್ಲೈಟ್​ನಲ್ಲಿ ಪ್ರಯಾಣಿಸುತ್ತಿದ್ದ ಸೀನ್ ಬೆನ್ನೆಟ್ ಎಂಬ ವ್ಯಕ್ತಿ ಹಂಚಿಕೊಂಡಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳ ಪ್ರಕಾರ, ಎಕ್ಸಿಟ್ ಡೋರ್​ ತೆರೆಯಲು ಹೋಗುತ್ತಿರುವ ವ್ಯಕ್ತಿಯನ್ನು ವಿಮಾನದ ಸಿಬ್ಬಂದಿ ಮತ್ತು ಸಹಪ್ರಯಾಣಿಕರು ಆತನೊಂದಿಗೆ ಹೋರಾಡಿ ನೆಲಕ್ಕೆ ಕೆಡವಿ ಹಿಡಿದಿಟ್ಟುಕೊಂಡಿರುವುದು ಇದೆ.

ನಾವು ಫೀನಿಕ್ಸ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದೇವೆ. ಕೆಲವು ಬಲಿಷ್ಠ ಹೀರೋಗಳು ಆತನನ್ನು ಹಿಡಿದು ಕೆಳಗೆ ಕೆಡವಿದರು. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಇದಕ್ಕೆ ಕ್ಯಾಪ್ಶನ್​ ಕೊಟ್ಟಿದ್ದಾರೆ ಸೀನ್ ಬೆನ್ನೆಟ್.

ಏನಾಗಿತ್ತು?

ಫೀನಿಕ್ಸ್​​ ಪೊಲೀಸರು ಇಲ್ಲಿನ ಮಾಧ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ, ಪ್ರಯಾಣಿಕನೊಬ್ಬ ನಿಗದಿತ ಆಸನದಿಂದ ಎದ್ದು ವಿಮಾನದ ಮುಂಭಾಗಕ್ಕೆ ತೆರಳಿದ್ದಾನೆ. ತನ್ನ ಸ್ಥಾನಕ್ಕೆ ಮರಳುವಂತೆ ಸಿಬ್ಬಂದಿ ಮಾಹಿತಿ ಕೊಟ್ಟರು ಸಹ ಕೇಳಿಸಿಕೊಳ್ಳದೆ..ಎಕ್ಸಿಟ್ ಡೋರ್​ ತೆರೆಯಲು ಯತ್ನಿಸಿದ್ದಾನೆ.

ಕಾರ್ಯಪ್ರವೃತ್ತರಾದ ವಿಮಾನ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಆತನನ್ನು ಹಿಡಿದು..ಕೂರಿಸಲು ಯತ್ನಿಸಿದ್ದಾರೆ. ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ವಿಮಾನ ಫೀನಿಕ್ಸ್‌ನಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವವರೆಗೂ ಆತನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಆರೋಪಿ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.

ತನಿಖೆಗೆ ಮುಂದು

ಫೀನಿಕ್ಸ್​ನಲ್ಲಿ ವಿಮಾನ ತುರ್ತು ಭೂ ಸ್ಪರ್ಶಗೊಳ್ಳುತ್ತಲೇ ಭದ್ರತಾ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ನಂತರ ವಿಮಾನವು ತನ್ನ ಮೂಲ ಗಮ್ಯಸ್ಥಾನವಾದ ಷಿಕಾಗೋ ಒ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ಅಮೆರಿಕನ್ ಏರ್‌ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿವೆ.

ಸದ್ಯ ಆರೋಪಿಯ ಕುರಿತು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಮಾಹಿತಿ ನೀಡಿದ್ದು, ತನಿಖೆ ಮುಂದುವರೆದಿದೆ ಎಂದು ಫೀನಿಕ್ಸ್ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).