ವಿದೇಶ

ಯೂಕ್ರೇನ್​ಗೆ ಅಮೆರಿಕ ನೆರವು ಬಂದ್​?

ಕಳೆದ ಐದು ವರ್ಷಗಳಿಂದ ರಷ್ಯಾದೊಂದಿಗೆ ಯುದ್ಧ ನಡೆಸುತ್ತಿರುವ ಯೂಕ್ರೇನ್​ಗೆ ಹೊಸ ಸಂಕಷ್ಟ ಎದುರಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪರವಾಗಿ ನಿಂತಿರುವಂತೆ ಕಾಣುತ್ತಿದ್ದಾರೆ. ಕೇವಲ ಒಂದೇ ವಾರದಲ್ಲಿ ಟ್ರಂಪ್ ತೆಗೆದುಕೊಂಡ ನಾಲ್ಕು ನಿರ್ಧಾರಗಳಿಂದ ಯೂಕ್ರೇನ್ ಇಕ್ಕಟ್ಟಿಗೆ ಸಿಲುಕಿದೆ.

ಕಳೆದ ಐದು ವರ್ಷಗಳಿಂದ ರಷ್ಯಾದೊಂದಿಗೆ ಯುದ್ಧ ನಡೆಸುತ್ತಿರುವ ಯೂಕ್ರೇನ್​ಗೆ ಹೊಸ ಸಂಕಷ್ಟ ಎದುರಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪರವಾಗಿ ನಿಂತಿರುವಂತೆ ಕಾಣುತ್ತಿದ್ದಾರೆ. ಕೇವಲ ಒಂದೇ ವಾರದಲ್ಲಿ ಟ್ರಂಪ್ ತೆಗೆದುಕೊಂಡ ನಾಲ್ಕು ನಿರ್ಧಾರಗಳಿಂದ ಯೂಕ್ರೇನ್ ಇಕ್ಕಟ್ಟಿಗೆ ಸಿಲುಕಿದೆ. ಒಂದು ವೇಳೆ ಟ್ರಂಪ್ ಯೂಕ್ರೇನ್​ಗೆ ಸೇನಾ ನೆರವು ಮತ್ತು ಗುಪ್ತಚರ ಮಾಹಿತಿ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಯೂಕ್ರೇನ್ ಸೇನೆಯ ಪರಿಸ್ಥಿತಿ ಏನಾಗಬಹುದು? ಅಮೆರಿಕದ ಸಹಾಯವಿಲ್ಲದೆ ಯೂಕ್ರೇನ್ ರಷ್ಯಾವನ್ನು ಎದುರಿಸಲು ಸಾಧ್ಯವೇ? ಮತ್ತು ಟ್ರಂಪ್ ಅವರ ಈ ಬದಲಾದ ನಿಲುವಿನಿಂದ ಪುತಿನ್​ಗೆ ಎಷ್ಟು ಲಾಭವಾಗಬಹುದು? ಈ ಎಲ್ಲ ಬೆಳವಣಿಗೆಗಳ ಅವಲೋಕನ ಇಲ್ಲಿದೆ.

ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧದಲ್ಲಿ ಅಮೆರಿಕದ ಪಾತ್ರ ಅತ್ಯಂತ ನಿರ್ಣಾಯಕವಾದದ್ದು. ಅಮೆರಿಕವು ಯೂಕ್ರೇನ್​ಗೆ ನೀಡುತ್ತಿರುವ ಸೇನಾ, ಆರ್ಥಿಕ ಹಾಗೂ ಗುಪ್ತಚರ ನೆರವನ್ನು ಸ್ಥಗಿತಗೊಳಿಸಿದರೆ, ಅದು ಯುದ್ಧಭೂಮಿಯಲ್ಲಿ ಗಂಭೀರ ಪರಿಣಾಮಗಳನ್ನು ಬೀರಲಿದೆ.

ದುರ್ಬಲಗೊಳ್ಳಲಿದೆ ರಕ್ಷಣಾ ವ್ಯವಸ್ಥೆ

ಅಮೆರಿಕದ ಉಪಗ್ರಹಗಳು ಮತ್ತು ಸುಧಾರಿತ ಗುಪ್ತಚರ ಜಾಲವು ರಷ್ಯಾದ ಕ್ಷಿಪಣಿ ಉಡಾವಣೆಗಳ ಕುರಿತು ಯೂಕ್ರೇನ್​ಗೆ ನಿಖರವಾದ ಮುನ್ಸೂಚನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಮುನ್ಸೂಚನೆಯು ಯೂಕ್ರೇನ್ ಸೈನಿಕರಿಗೆ ಹಾಗೂ ನಾಗರಿಕರಿಗೆ ಸುರಕ್ಷಿತ ತಾಣಗಳಿಗೆ ತೆರಳಲು ಅಗತ್ಯ ಸಮಯವನ್ನು ಒದಗಿಸುತ್ತದೆ. ಅಮೆರಿಕದ ಗುಪ್ತಚರ ಮಾಹಿತಿ ವಿನಿಮಯ ನಿಂತುಹೋದರೆ, ರಕ್ಷಣಾ ವ್ಯವಸ್ಥೆ ದುರ್ಬಲಗೊಂಡು ನಾಗರಿಕರು ಮತ್ತು ಸೇನಾ ಪಡೆಗಳಿಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಕ್ಷಿಪಣಿಗಳ ಕೊರತೆ

ರಷ್ಯಾದ ಸುಧಾರಿತ ಬ್ಯಾಲಿಸ್ಟಿಕ್ ಮತ್ತು ಹೈಪರ್​ಸಾನಿಕ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಲು ಯೂಕ್ರೇನ್ ಮುಖ್ಯವಾಗಿ ಅಮೆರಿಕ ನಿರ್ವಿುತ ಪ್ಯಾಟ್ರಿಯಟ್ ವಾಯು ರಕ್ಷಣಾ ವ್ಯವಸ್ಥೆಯನ್ನು ಅವಲಂಬಿಸಿದೆ. ಅಮೆರಿಕವು ಈ ಕ್ಷಿಪಣಿಗಳ ಪೂರೈಕೆಯನ್ನು ನಿಲ್ಲಿಸಿದರೆ, ಯೂಕ್ರೇನ್​ನ ಪ್ರಮುಖ ನಗರಗಳು, ವಿದ್ಯುತ್ ಸ್ಥಾವರಗಳು ಹಾಗೂ ಸೇನಾ ನೆಲೆಗಳಿಗೆ ರಕ್ಷಣೆ ನೀಡುವುದು ಕಠಿಣವಾಗಲಿದೆ.

ಸೇನಾ ಕಾರ್ಯಾಚರಣೆಗಳ ಮೇಲೆ ಪರಿಣಾಮ

ಅಮೆರಿಕದ ಸಂವಹನ ವ್ಯವಸ್ಥೆ ಮತ್ತು ತಂತ್ರಜ್ಞಾನದಲ್ಲಿ ವ್ಯತ್ಯಯ ಉಂಟಾದರೆ, ಯೂಕ್ರೇನ್ ಸೇನೆಯ ಕಾರ್ಯಾಚರಣೆ ತೀವ್ರ ಹಿನ್ನಡೆ ಅನುಭವಿಸಲಿದೆ. ಮುಖ್ಯವಾಗಿ, ಡ್ರೋನ್​ಗಳ ಮೂಲಕ ನಿಗಾ ಇಡುವುದು ಮತ್ತು ನಿಖರ ಗುರಿಯ ಮೇಲೆ ದಾಳಿ ನಡೆಸುವುದು ಕಷ್ಟಕರವಾಗುತ್ತದೆ. ಯುದ್ಧಭೂಮಿಯಲ್ಲಿ ಶತ್ರು ಸೈನಿಕರ ಚಲನವಲನಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಕ್ಷೀಣಿಸುತ್ತದೆ. ಹೊಸ ದಾಳಿಗಳು ಮತ್ತು ರಕ್ಷಣಾ ತಂತ್ರಗಳನ್ನು ರೂಪಿಸುವಲ್ಲಿ ಸಮನ್ವಯದ ಕೊರತೆ ಎದುರಾಗುತ್ತದೆ.

ಕಾರ್ಯತಂತ್ರಕ್ಕೆ ಹಿನ್ನಡೆ

ಯೂಕ್ರೇನ್ ಇತ್ತೀಚಿನ ದಿನಗಳಲ್ಲಿ ರಷ್ಯಾದ ತೈಲ ಸಂಸ್ಕರಣಾಗಾರಗಳು ಹಾಗೂ ಇಂಧನ ನೆಲೆಗಳ ಮೇಲೆ ದಾಳಿ ನಡೆಸಿ, ರಷ್ಯಾದ ಆರ್ಥಿಕ ಆದಾಯ ಮತ್ತು ಯುದ್ಧ ಸಾಮರ್ಥ್ಯಕ್ಕೆ ಹೊಡೆತ ನೀಡಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಅಮೆರಿಕ ಇಂತಹ ದಾಳಿಗಳನ್ನು ವಿರೋಧಿಸಿ, ರಷ್ಯಾದ ಇಂಧನ ಮಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದರೆ, ರಷ್ಯಾವನ್ನು ಆರ್ಥಿಕವಾಗಿ ಮಣಿಸುವ ಯೂಕ್ರೇನ್​ನ ಕಾರ್ಯತಂತ್ರಕ್ಕೆ ಹಿನ್ನಡೆಯಾಗುತ್ತದೆ.

ಯೂಕ್ರೇನ್ ಸೋಲೊಪ್ಪಿಕೊಳ್ಳಲಿದೆಯೇ?

ಅಮೆರಿಕದ ನೆರವು ನಿಂತ ತಕ್ಷಣವೇ ಯೂಕ್ರೇನ್ ಸಂಪೂರ್ಣವಾಗಿ ಯುದ್ಧ ಸೋಲುತ್ತದೆ ಎಂದರ್ಥವಲ್ಲ. ಏಕೆಂದರೆ, ಯೂಕ್ರೇನ್ ತನ್ನ ಸ್ವದೇಶಿ ಶಸ್ತ್ರಾಸ್ತ್ರ ಮತ್ತು ಡ್ರೋನ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಯುರೋಪಿಯನ್ ಒಕ್ಕೂಟದ (ಇಯು) ಪ್ರಮುಖ ರಾಷ್ಟ್ರಗಳು ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವನ್ನು ಮುಂದುವರಿಸಿವೆ. ಆದಾಗ್ಯೂ, ಅಮೆರಿಕ ಒದಗಿಸುವ ಅತ್ಯಾಧುನಿಕ ಉಪಗ್ರಹ ಗುಪ್ತಚರ ಮಾಹಿತಿ ಮತ್ತು ಪ್ಯಾಟ್ರಿಯಟ್​ನಂತಹ ನಿರ್ಣಾಯಕ ಶಸ್ತ್ರಾಸ್ತ್ರಗಳಿಗೆ ಯುರೋಪ್ ಸಂಪೂರ್ಣ ಪರ್ಯಾಯವಾಗುವುದು ಅಷ್ಟು ಸುಲಭವಲ್ಲ.

ಟ್ರಂಪ್ ಅಚ್ಚರಿಯ ನಿರ್ಧಾರಗಳು/ಹೇಳಿಕೆಗಳು

ಅಕ್ಟೋಬರ್ 9: ಅಮೆರಿಕದಲ್ಲಿ ಡೀಸೆಲ್ ದರ ಏರಿಕೆಗೆ ರಷ್ಯಾ-ಯೂಕ್ರೇನ್ ಯುದ್ಧವೇ ಕಾರಣ ಎಂದು ಟ್ರಂಪ್ ದೂರಿದರು. ಇದರ ಬೆನ್ನಲ್ಲೇ ಅವರು ರಷ್ಯಾದ ಡೀಸೆಲ್ ಮಾರಾಟದ ಮೇಲಿದ್ದ ನಿರ್ಬಂಧಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿದರು. ಇದರಿಂದ ಇಂಧನ ಬೆಲೆಗಳನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂಬುದು ಅವರ ವಾದವಾಗಿತ್ತು. ರಷ್ಯಾವು ತೈಲ ಮತ್ತು ಅನಿಲ ಮಾರಾಟದಿಂದಲೇ ಅಪಾರ ಆದಾಯವನ್ನು ಗಳಿಸುವುದರಿಂದ ಈ ನಿರ್ಧಾರ ಮಹತ್ವದ್ದಾಗಿದೆ. ಈ ಆದಾಯವು ಯುದ್ಧದ ಖರ್ಚು-ವೆಚ್ಚಗಳನ್ನು ಭರಿಸಲು ರಷ್ಯಾಕ್ಕೆ ನೆರವಾಗುತ್ತದೆ. ರಷ್ಯಾದ ಇಂಧನ ಮಾರಾಟಕ್ಕೆ ವಿನಾಯಿತಿ ನೀಡುವುದರಿಂದ ಮಾಸ್ಕೋಗೆ ನೇರ ಆರ್ಥಿಕ ಲಾಭವಾಗಲಿದೆ.

ಅಕ್ಟೋಬರ್ 10: ಟ್ರಂಪ್ ಅವರು ನೇರವಾಗಿ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಅವರ ನಾಯಕತ್ವವನ್ನೇ ಪ್ರಶ್ನಿಸಿದರು. ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡು ಯುದ್ಧವನ್ನು ಕೊನೆಗಾಣಿಸಬಲ್ಲ ಹೊಸ ಅಧ್ಯಕ್ಷರನ್ನು ಯೂಕ್ರೇನ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಯುದ್ಧವನ್ನು ಕೊನೆಗೊಳಿಸಲು ಜೆಲೆನ್​ಸ್ಕಿ ಅವರಿಗೆ ಹಲವು ಅವಕಾಶಗಳಿದ್ದರೂ, ಅವರು ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಟ್ರಂಪ್ ಆರೋಪಿಸಿದರು. ಯೂಕ್ರೇನ್ ಅಧ್ಯಕ್ಷರು ರಷ್ಯಾದೊಂದಿಗೆ ಶಾಂತಿ ಒಪ್ಪಂದದ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂಬುದು ಟ್ರಂಪ್ ನಿಲುವಾಗಿತ್ತು.

ಅಕ್ಟೋಬರ್ 11: ರಷ್ಯಾ-ಯೂಕ್ರೇನ್ ಯುದ್ಧದಲ್ಲಿ ಇಂಧನ ಹಾಗೂ ವಿದ್ಯುತ್ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸಲು ಟ್ರಂಪ್ ಕದನ ವಿರಾಮ ಘೊಷಿಸಿದರು. ಇಂಧನ ನೆಲೆಗಳಲ್ಲಿ ವಿದ್ಯುತ್ ಸ್ಥಾವರಗಳು, ತೈಲ ಸಂಸ್ಕರಣಾಗಾರಗಳು ಮತ್ತು ಇಂಧನಕ್ಕೆ ಸಂಬಂಧಿಸಿದ ಇತರ ಪ್ರಮುಖ ಮೂಲಸೌಕರ್ಯಗಳು ಸೇರಿವೆ. ರಷ್ಯಾ ಮತ್ತು ಯೂಕ್ರೇನ್ ಎರಡೂ ದೇಶಗಳು ಪರಸ್ಪರರ ಇಂಧನ ನೆಲೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಈ ದಾಳಿಗಳು ವಿದ್ಯುತ್ ಸರಬರಾಜು, ಇಂಧನ ಲಭ್ಯತೆ ಮತ್ತು ಸೇನಾ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿವೆ. ಆದರೆ ಕದನವಿರಾಮದ ಕುರಿತಂತೆ ಟ್ರಂಪ್ ಘೊಷಣೆಯ ನಂತರ ವಿವಾದ ಭುಗಿಲೆದ್ದಿತು. ತಮಗೆ ಈ ಒಪ್ಪಂದದ ಬಗ್ಗೆ ಮೊದಲೇ ಯಾವುದೇ ಮಾಹಿತಿ ಇರಲಿಲ್ಲ ಎಂದು ಜೆಲೆನ್​ಸ್ಕಿ ತಿಳಿಸಿದರು. ರಷ್ಯಾ ಕೂಡ ಯೂಕ್ರೇನ್​ನ ಇಂಧನ ನೆಲೆಗಳ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ ಮಾತ್ರ ಯೂಕ್ರೇನ್ ದಾಳಿಗಳನ್ನು ನಿಲ್ಲಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಅಕ್ಟೋಬರ್ 13: ಯೂಕ್ರೇನ್ ತನ್ನ ವೇಗದ ಡ್ರೋನ್​ಗಳನ್ನು ನಿಯಂತ್ರಿಸಲು ಮತ್ತು ರಷ್ಯಾದ ಮೇಲೆ ದಾಳಿ ನಡೆಸಲು ಬಳಸುತ್ತಿದ್ದ ಸ್ಟಾರ್​ಲಿಂಕ್ ಇಂಟರ್ನೆಟ್ ಸೇವೆಯ ಮೇಲೆ ದಿಢೀರನೆ ವೇಗದ ಮಿತಿ (ಸ್ಪೀಡ್​ಲಾಕ್) ವಿಧಿಸಲಾಯಿತು. ಈ ಮೊದಲು ಈ ಡ್ರೋನ್​ಗಳು ಗಂಟೆಗೆ 200 ಕಿ.ಮೀ. ವೇಗದಲ್ಲಿ ದಾಳಿ ನಡೆಸುತ್ತಿದ್ದವು. ವೇಗದ ಮಿತಿ ವಿಧಿಸಿದ ನಂತರ ಇದರ ಗರಿಷ್ಠ ಮಿತಿ ಗಂಟೆಗೆ 160 ಕಿ.ಮೀ.ಗೆ ಕುಸಿಯಿತು. ಯಾವುದೇ ಡ್ರೋನ್ ಈ ವೇಗಕ್ಕಿಂತ ವೇಗವಾಗಿ ಚಲಿಸಲು ಪ್ರಯತ್ನಿಸಿದ ತಕ್ಷಣ, ಅದರಲ್ಲಿರುವ ಇಂಟರ್ನೆಟ್ ಸಿಗ್ನಲ್ ಕಡಿತಗೊಂಡು ಡ್ರೋನ್ ಕೆಳಗೆ ಬೀಳಲು ಶುರುವಾಯಿತು. ಇದಕ್ಕೆ ಎಲಾನ್ ಮಸ್ಕ್ ಅವರೇ ಹೊಣೆ ಎಂದು ಜೆಲೆನ್​ಸ್ಕಿ ದೂರಿದರು. ಆದರೆ, ಮಸ್ಕ್ ಇದನ್ನು ನಿರಾಕರಿಸುತ್ತ, ‘ಈ ಕ್ರಮವನ್ನು ಅಮೆರಿಕ ಸರ್ಕಾರವೇ ತೆಗೆದುಕೊಂಡಿದೆ’ ಎಂದು ಸ್ಪಷ್ಟನೆ ನೀಡಿದರು.