ವಾಷಿಂಗ್ಟನ್ ಡಿಸಿಯಲ್ಲಿ ಮಿತಿಮೀರಿದ ಇಲಿಗಳ ಹಾವಳಿ
- ವಾಷಿಂಗ್ಟನ್ ಡಿಸಿಯಲ್ಲಿ ಮಿತಿಮೀರಿದ ಇಲಿಗಳ ಹಾವಳಿ
- 1.2 ಕೋಟಿ ವೆಚ್ಚದಲ್ಲಿ ಇಲಿಗಳ ಸಂತಾನ ಹರಣಕ್ಕೆ ಮಾಸ್ಟರ್ ಪ್ಲಾನ್
- ಮೂರು ವಾರಗಳಲ್ಲಿ ಇಲಿಗಳ ವಂಶ ನಿರ್ವಂಶ
ಅಮೆರಿಕ: ಈ ಇಲಿಗಳ ಕಾಟ ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದರೆ ಅದು ನಿಮ್ಮ ತಪ್ಪು ಕಲ್ಪನೆ. ಈ ಇಲಿಗಳ ಹಾವಳಿಯು ಒಂದು ಜಾಗತಿಕವಾದ ಸಮಸ್ಯೆಯಾಗಿದ್ದು, ಸದ್ಯ ಅಮೆರಿಕದ ನಗರಗಳಲ್ಲಿ ಈ ಇಲಿಗಳ ಸಂತತಿಯನ್ನು ನಿಯಂತ್ರಣ ಮಾಡಲು (Rat Population Control) ಅಲ್ಲಿಯ ಸರ್ಕಾರ ಸುಮಾರು 1,30,000 ಡಾಲರ್ (1.2 ಕೋಟಿ ರೂಪಾಯಿ) ಖರ್ಚು ಮಾಡಲು ಮುಂದಾಗಿದೆ.
ಏನಿದು ಇಲಿ ಕಾಟ ತಡೆಯುವ ಹೊಸ ಐಡಿಯಾ?
ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ವಿಷ ಬಳಸಲಾಗುತ್ತದೆ. ಆದರೆ ಈ ಇಲಿಗಳ ಸಂತಾನೋತ್ಪತ್ತಿಯ ವೇಗಕ್ಕೆ ಈ ವಿಷಗಳು ಸಾಲುತ್ತಿಲ್ಲ. ಹಾಗಾಗಿ, ವಾಷಿಂಗ್ಟನ್ ಹೆಲ್ತ್ ಡಿಪಾರ್ಟ್ಮೆಂಟ್ ಒಂದು ಮಾಸ್ಟರ್ ಪ್ಲಾನ್ ಹಾಕಿದೆ.
ಅಧಿಕಾರಿಗಳು ಮೊದಲು ಇಲಿಗಳ ಬಿಲಗಳ ಬಳಿ ವಿಷದ ಪುಡಿ ಮತ್ತು ಆಹಾರವನ್ನು ಇಡುತ್ತಾರೆ. ಇದರಿಂದ ದೊಡ್ಡ ಇಲಿಗಳು ಸಾಯುತ್ತವೆ. ಆದರೆ, ಒಂದು ವೇಳೆ ಯಾವುದಾದರೂ ಇಲಿ ವಿಷದಿಂದ ಬದುಕುಳಿದರೆ, ಅವುಗಳಿಗೆ ದ್ರವ ಗರ್ಭನಿರೋಧಕ ನೀಡಲಾಗುತ್ತದೆ. ಇದನ್ನು ಕುಡಿದ ಇಲಿಗಳು ಮುಂದೆ ಮರಿಗಳನ್ನು ಹಾಕಲು ಸಾಧ್ಯವಾಗುವುದಿಲ್ಲ. ಅಂದರೆ, ಇಲಿಗಳ ವಂಶವನ್ನೇ ಅಲ್ಲಿಗೆ ಅಂತ್ಯಗೊಳಿಸುವುದು ಈ ಯೋಜನೆಯ ಗುರಿಯಾಗಿದೆ.
3 ವಾರಗಳ ಸತತ ಕಾರ್ಯಾಚರಣೆ
ವಾಷಿಂಗ್ಟನ್‌ನ ಪ್ರಸಿದ್ಧ ರೆಸ್ಟೋರೆಂಟ್‌ಗಳಿರುವ ಆಡಮ್ಸ್ ಮಾರ್ಗನ್ ಎಂಬ ಏರಿಯಾದಲ್ಲಿ ಈ ಪೈಲಟ್ ಪ್ರಾಜೆಕ್ಟ್ ಶುರುವಾಗಲಿದೆ. ಇಲಿಗಳು ಗರ್ಭಧರಿಸಿ ಮರಿ ಹಾಕಲು ಸುಮಾರು 3 ವಾರಗಳ ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಅಧಿಕಾರಿಗಳು ಕೂಡ 3 ವಾರಗಳ ಕಾಲ ಒಂದೇ ಏರಿಯಾದ ಮೇಲೆ ಗಮನ ಹರಿಸಿ, ಅಲ್ಲಿನ ಇಲಿಗಳ ಸಂಖ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ನಿರ್ಧರಿಸಿದ್ದಾರೆ.
ಡಿಸಿ ಆರೋಗ್ಯ ನಿರ್ದೇಶಕಿ ಅಯನ್ನಾ ಬೆನೆಟ್ ಈ ಬಗ್ಗೆ ಮಾತನಾಡುತ್ತಾ, ನಾವು ಮೊದಲು ಇಲಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ. ನಂತರ 3 ವಾರಗಳ ಬಳಿಕ ಮತ್ತೆ ಅಲ್ಲಿಗೆ ಹೋಗಿ, ಬದುಕುಳಿದ ಮರಿಗಳು ದೊಡ್ಡವಾಗಿ ಮತ್ತೆ ಸಂತಾನೋತ್ಪತ್ತಿ ಮಾಡದಂತೆ ತಡೆಯುತ್ತೇವೆ, ಎಂದು ವಿವರಿಸಿದ್ದಾರೆ.
ಕಸ ಹಾಕುವ ಮುನ್ನ ಎಚ್ಚರ
ಸರ್ಕಾರ ಎಷ್ಟೇ ಕೋಟಿ ಖರ್ಚು ಮಾಡಿದರೂ, ಜನರ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ ಎಂದು ಮೇಯರ್ ಕಚೇರಿ ತಿಳಿಸಿದೆ. ಜನರು ಎಲ್ಲೆಂದರಲ್ಲಿ ಆಹಾರದ ತುಂಡುಗಳನ್ನು ಎಸೆಯಬಾರದು. ಕಸದ ಬುಟ್ಟಿಗಳ ಹೊರಗೆ ಕಸ ಹಾಕಿದರೆ ಇಲಿಗಳಿಗೆ ಇದು ಆಹಾರವಾಗುತ್ತದೆ. ಅವುಗಳಿಗೆ ಹೊರಗಿನ ಆಹಾರ ಸಿಕ್ಕರೆ ನಮ್ಮ ಗರ್ಭನಿರೋಧಕ ದ್ರವವನ್ನು ಅವು ಮುಟ್ಟುವುದೇ ಇಲ್ಲ, ಎನ್ನುವುದು ಅಧಿಕಾರಿಗಳ ಕಳಕಳಿಯ ಮಾತಾಗಿದೆ.
ನ್ಯೂಯಾರ್ಕ್‌ನಲ್ಲಿ ಫೇಲ್ ಆಗಿದ್ದ ಐಡಿಯಾ ಈಗ ವರ್ಕ್ ಆಗುತ್ತಾ?
ಇದೇ ರೀತಿಯ ಪ್ರಯೋಗವನ್ನು 2013 ರಲ್ಲಿ ನ್ಯೂಯಾರ್ಕ್‌ನಲ್ಲಿ ಮಾಡಲಾಗಿತ್ತು. ಆಗ ಇಲಿಗಳಿಗೆ ತಿನ್ನಲು ಕ್ಯಾನೋಲಿ ಕ್ರೀಮ್ ಎಂಬ ಗರ್ಭನಿರೋಧಕ ನೀಡಲಾಗಿತ್ತು. ಆದರೆ ಇಲಿಗಳು ಏನು ಮಾಡಿದರೂ ಆ ಕ್ರೀಮ್ ಅನ್ನು ತಿನ್ನಲೇ ಇಲ್ಲ, ಹಾಗಾಗಿ ಆ ಯೋಜನೆ ಫೇಲ್ ಆಗಿತ್ತು. ಆದರೆ ಈಗ 12 ವರ್ಷಗಳ ನಂತರ ತಂತ್ರಜ್ಞಾನ ಸುಧಾರಿಸಿದೆ. ಈಗಿನ ದ್ರವ ರೂಪದ ಔಷಧಿ ಖಂಡಿತ ಕೆಲಸ ಮಾಡುತ್ತದೆ ಎಂಬ ಭರವಸೆ ಅಧಿಕಾರಿಗಳದ್ದಾಗಿದೆ,(ಏಜನ್ಸೀಸ್).