ಅಮೆರಿಕ ಮಹಾ ಸೈತಾನ; ಇಸ್ರೇಲ್ ಅದರ ಸಾಕು ಪ್ರಾಣಿ! ಯುಎಸ್ಗೆ ಮಿಲಿಟರಿ ನೆಲೆಗಳನ್ನು ಕೊಟ್ಟರೆ ಗಲ್ಫ್ ರಾಷ್ಟ್ರಗಳನ್ನೂ ಬಿಡಲ್ಲ ಎಂದು ಮೊಜ್ತಬಾ ಖಮೇನಿ ಎಚ್ಚರಿಕೆ!
ಟೆಹ್ರಾನ್: ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ಅಮೆರಿಕ ಮತ್ತು ಇರಾನ್ ನಡುವಿನ ಮಹಾಯುದ್ಧಕ್ಕೆ ಬ್ರೇಕ್ ಹಾಕಲು ಒಂದು ಕಡೆ ರಹಸ್ಯ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ(Mojtaba Khamenei) ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಅತ್ಯಂತ ವಿಷಕಾರಿ ಹಾಗೂ ಉಗ್ರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಈ ಬಾರಿಯ ಈದ್ ಉಲ್-ಅದ್ಹಾ ಹಬ್ಬದ ಸಂದರ್ಭದಲ್ಲಿ ಇರಾನ್‌ನ ಅಧಿಕೃತ ಟೆಲಿಗ್ರಾಮ್ ಚಾನೆಲ್ ಹಾಗೂ ಇರಾನ್ ಸ್ಟೇಟ್ ಟೆಲಿವಿಷನ್ ಮೂಲಕ ಲಿಖಿತ ಸಂದೇಶ ರವಾನಿಸಿರುವ ಮೊಜ್ತಬಾ ಖಮೇನಿ, ಅಮೆರಿಕ ಜಗತ್ತಿನ ಪಾಲಿಗೆ ಮಹಾ ಸೈತಾನ ಮತ್ತು ಇಸ್ರೇಲ್ ಆ ಸೈತಾನನ ಕೈಯಲ್ಲಿರುವ ತರಬೇತಿ ಪಡೆದ ಸಾಕು ಪ್ರಾಣಿ ಎಂದು ಜರೆದಿದ್ದಾರೆ.
ಕಳೆದ ಫೆಬ್ರವರಿ 28 ರಂದು ಮಾಜಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬಳಿಕ ಇರಾನ್‌ನ ಅತ್ಯುನ್ನತ ಗದ್ದುಗೆ ಏರಿರುವ ಮೊಜ್ತಬಾ ಖಮೇನಿ, ಯುದ್ಧ ಆರಂಭವಾದ ದಿನದಿಂದ ಇದುವರೆಗೆ ಎಲ್ಲೂ ಸಾರ್ವಜನಿಕವಾಗಿ ಪ್ರತ್ಯಕ್ಷಗೊಂಡಿಲ್ಲ. ಆದರೆ, ರಹಸ್ಯ ನೆಲೆಗಳಿಂದಲೇ ಅವರು ಹೊರಡಿಸುತ್ತಿರುವ ಈ ಲಿಖಿತ ಯುದ್ಧದ ಸಂದೇಶಗಳು ಇಡೀ ಗಲ್ಫ್ ಪ್ರದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ.
ಇನ್ನ 25 ವರ್ಷಗಳಲ್ಲಿ ಇಸ್ರೇಲ್ ಜಗತ್ತಿನ ಭೂಪಟದಿಂದಲೇ ನಾಶವಾಗಲಿದೆ!
ಇರಾನ್‌ನ ಸಶಸ್ತ್ರ ಪಡೆಗಳ ಶೌರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಮೊಜ್ತಬಾ, ಇಸ್ರೇಲ್‌ನ ವಿನಾಶದ ಕಾಲ ಹತ್ತಿರ ಬಂದಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಬೆಂಬಲದೊಂದಿಗೆ ಅಬ್ಬರಿಸುತ್ತಿರುವ ಇಸ್ರೇಲ್ ಎಂಬ ದೇಶ ಇನ್ನು ಕೇವಲ 25 ವರ್ಷಗಳ ಒಳಗೆ ಜಗತ್ತಿನ ಭೂಪಟದಿಂದಲೇ ಸಂಪೂರ್ಣವಾಗಿ ನಾಶವಾಗಲಿದೆ. ಅದರ ಅಸ್ತಿತ್ವವೇ ಇಲ್ಲದಂತಾಗಲಿದೆ ಎಂದು ಖಮೇನಿ ಭವಿಷ್ಯ ನುಡಿದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಗಳಿಗೆ ತಮ್ಮ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸೌದಿ, ಯುಎಇ ಮತ್ತು ಕತಾರ್ ದೇಶಗಳಿಗೆ ನೇರ ಯುದ್ಧದ ಬೆದರಿಕೆ!
ಇರಾನ್ ಕೇವಲ ಅಮೆರಿಕಕ್ಕೆ ಮಾತ್ರವಲ್ಲದೆ ತನ್ನ ನೆರೆಹೊರೆಯ ಮುಸ್ಲಿಂ ಗಲ್ಫ್ ರಾಷ್ಟ್ರಗಳಿಗೂ ಭೀಕರ ಸರಣಿ ಎಚ್ಚರಿಕೆಗಳನ್ನು ನೀಡಿದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಕತಾರ್ ದೇಶಗಳ ಹೆಸರನ್ನು ನೇರವಾಗಿ ಪ್ರಸ್ತಾಪಿಸಿರುವ ಇರಾನ್ ಸುಪ್ರೀಂ ಲೀಡರ್, ಯಾವುದೇ ಗಲ್ಫ್ ರಾಷ್ಟ್ರಗಳು ತಮ್ಮ ದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಬಳಸಲು ಅನುಮತಿ ನೀಡಿದರೆ, ನಾವು ಆ ದೇಶಗಳನ್ನೂ ಬಿಡುವುದಿಲ್ಲ. ಇರಾನ್ ಕ್ಷಿಪಣಿಗಳು ಅವರ ಮೇಲೂ ಮುಗಿಬೀಳಲಿವೆ ಎಂದು ಬೆದರಿಸಿದ್ದಾರೆ.
ಕಾಲದ ಚಕ್ರ ಎಂದಿಗೂ ಹಿಂದಕ್ಕೆ ಉರುಳುವುದಿಲ್ಲ. ಈ ಪ್ರಾದೇಶಿಕ ರಾಷ್ಟ್ರಗಳು ಮತ್ತು ಗಲ್ಫ್ ಮಣ್ಣು ಇನ್ಮೇಲೆ ಅಮೆರಿಕದ ಮಿಲಿಟರಿ ನೆಲೆಗಳಿಗೆ ರಕ್ಷಣಾ ಗುರಾಣಿಯಾಗಿ ನಿಲ್ಲಲು ಸಾಧ್ಯವಿಲ್ಲ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ರಾಜನಂತೆ ಮೆರೆಯುತ್ತಿದ್ದ ಹಳೇ ಸುವರ್ಣ ಯುಗ ಈಗ ಶಾಶ್ವತವಾಗಿ ಅಂತ್ಯವಾಗಿದೆ. ವಾಷಿಂಗ್ಟನ್ ಎಷ್ಟೇ ತಲೆಕೆಳಗಾಗಿ ನಿಂತರೂ ತನ್ನ ಹಳೆಯ ಪ್ರಭಾವವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ದಿನಕಳೆದಂತೆ ಅಮೆರಿಕ ಜಾಗತಿಕವಾಗಿ ಅತ್ಯಂತ ದುರ್ಬಲವಾಗುತ್ತಿದೆ ಎಂದು ಅಲ್ ಜಜೀರಾ ಮಾಧ್ಯಮ ಉಲ್ಲೇಖಿಸಿರುವ ಖಮೇನಿ ಅವರ ಟೆಲಿಗ್ರಾಮ್ ಸಂದೇಶದಲ್ಲಿ ಬರೆಯಲಾಗಿದೆ.
ಒಂದೆಡೆ ಶಾಂತಿ ಮಾತುಕತೆ, ಇನ್ನೊಂದೆಡೆ ಯುದ್ಧದ ಅಬ್ಬರ!
ಅಂತಾರಾಷ್ಟ್ರೀಯ ರಾಜತಾಂತ್ರಿಕ ವರದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ಪ್ರಸ್ತುತ 60 ದಿನಗಳ ತಾತ್ಕಾಲಿಕ ಕದನ ವಿರಾಮದ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗುತ್ತಿವೆ. ಹೊರ್ಮುಜ್ ಜಲಸಂಧಿಯ ಮುಕ್ತ ಸಂಚಾರ ಹಾಗೂ ಇರಾನ್ ಮೇಲಿನ ನಿರ್ಬಂಧ ಸಡಿಲಿಕೆಯ ಕರಡು ಸಿದ್ಧವಾಗುತ್ತಿದೆ. ಇಂತಹ ಸಂದರ್ಭದಲ್ಲೇ ಇರಾನ್ ಸುಪ್ರೀಂ ಲೀಡರ್ ಇಷ್ಟೊಂದು ಉಗ್ರವಾದ ಹೇಳಿಕೆ ನೀಡಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೆರಳಿಸುವಂತೆ ಮಾಡಿದೆ.
ಇರಾನ್‌ನ ಈ ಡೆಡ್ಲಿ ಅಲ್ಟಿಮೇಟಮ್ ಕೇವಲ ಅಮೆರಿಕಕ್ಕೆ ಮಾತ್ರವಲ್ಲದೆ ಇಡೀ ಗಲ್ಫ್ ವಲಯಕ್ಕೆ ಯುದ್ಧದ ಕಂಟಕ ತಂದಿಟ್ಟಿದ್ದು, ಟ್ರಂಪ್ ಆಡಳಿತ ಇರಾನ್‌ನ ಈ ಉದ್ಧಟತನಕ್ಕೆ ಮಾತುಕತೆಯ ವೇದಿಕೆಯಲ್ಲೇ ತಿರುಗೇಟು ನೀಡುತ್ತಾ ಅಥವಾ ರಣರಂಗದಲ್ಲಿ ಶಸ್ತ್ರಾಸ್ತ್ರಗಳ ಮೂಲಕ ಉತ್ತರಿಸುತ್ತಾ ಎಂಬುದನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡುತ್ತಿದೆ,(ಏಜೆನ್ಸೀಸ್).