ಪ್ರತ್ಯಕ್ಷ ವರದಿ: ಬೆಂಕಿ ಬಸಣ್ಣ ನ್ಯೂಯಾರ್ಕ್
ಹಿಮಪಾತದಿಂದಾಗಿ ರಸ್ತೆಗಳು ಮಂಜುಗಡ್ಡೆಯ ಹಾಳೆಗಳಂತಾಗಿದ್ದು, ದೇಶಾದ್ಯಂತ ಸಾವಿರಾರು ವಾಹನ ಅಪಘಾತಗಳು ಸಂಭವಿಸಿವೆ. ಮಿಸ್ಸೌರಿ, ಮಿನ್ನೇಸೋಟ ಮತ್ತು ಓಕ್ಲಹಾಮ ರಾಜ್ಯಗಳಲ್ಲಿ 24 ಗಂಟೆಗಳಲ್ಲಿ 500ಕ್ಕೂ ಹೆಚ್ಚು ಅಪಘಾತಗಳು ವರದಿಯಾಗಿವೆ. 42ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 13,000 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿಮಾನ ನಿಲ್ದಾಣಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಲಕ್ಷಾಂತರ ಮನೆಗಳು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಐವರ ಸಾವು
ಪ್ರಕೃತಿಯ ವಿಕೋಪಕ್ಕೆ ಇದುವರೆಗೆ ಕನಿಷ್ಠ ಐವರು ಬಲಿಯಾಗಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಶೀತ ಮಾರುತಕ್ಕೆ ಮೂವರು ಸಾವನ್ನಪ್ಪಿದ್ದರೆ, ಟೆನ್ನೆಸ್ಸೀ ಮತ್ತು ಮಿಷಿಗನ್ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಹಿಮಗಾಳಿಯು ಸೈಬೀರಿಯಾಕ್ಕಿಂತಲೂ ಹೆಚ್ಚಿನ ಚಳಿಯನ್ನು ತಂದೊಡ್ಡಿದ್ದು, ದೇಶದಾದ್ಯಂತ ಸುಮಾರು 20 ಕೋಟಿ ಜನರು ಮೈಕೊರೆಯುವ ಮಂಜಿನ ಸೆರೆಯಲ್ಲಿದ್ದಾರೆ.
ಇನ್ನೂ 2 ದಿನ ಇದೇ ಸ್ಥಿತಿ!
ಈ ಭೀಕರ ಹಿಮಪಾತವು ಮುಂದಿನ 48 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಇಲಾಖೆ ಎಚ್ಚರಿಸಿದೆ.
ವಿದ್ಯುತ್ತಿಲ್ಲದ ಬದುಕು
ಭಾರಿ ಹಿಮದಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಕುಸಿದು, ಲಕ್ಷಾಂತರ ಜನರು ವಿದ್ಯುತ್ ವ್ಯತ್ಯಯಕ್ಕೆ ಒಳಗಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ಜನರು 24 ಗಂಟೆಗಳಿಗಿಂತ ಹೆಚ್ಚು ಕಾಲ ವಿದ್ಯುತ್ ಮತ್ತು ತಾಪಮಾನವಿಲ್ಲದೆ ದಿನಗಳನ್ನು ಕಳೆಯುವಂತಾಗಿದೆ. ವಿಮಾನಯಾನ ಕ್ಷೇತ್ರವು ತೀವ್ರವಾಗಿ ಪ್ರಭಾವಿತರಾಗಿ, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ವಿಮಾನಗಳು ರದ್ದು ಅಥವಾ ವಿಳಂಬಗೊಂಡಿವೆ.
ರಕ್ಷಣಾ ಕಾರ್ಯಾಚರಣೆ
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಫೆಡರಲ್ ಎಮರ್ಜೆನ್ಸಿ’ ಘೊಷಿಸಿದ್ದಾರೆ ಮತ್ತು ರಕ್ಷಣಾ ಕಾರ್ಯಕ್ಕಾಗಿ ಫೆಡರಲ್ ತುರ್ತು ನಿರ್ವಹಣಾ ಸಂಸ್ಥೆ (ಎಫ್ಇಎಂಎ) ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಮತ್ತು ಸ್ಥಳೀಯ ಆಡಳಿತಗಳು, ಜತೆಗೆ ನ್ಯಾಷನಲ್ ಗಾರ್ಡ್, ಅನೇಕ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲ್ಪಟ್ಟಿದ್ದು, ಹಿಮದಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರಿಗೆ ಮತ್ತು ವಾಹನಚಾಲಕರಿಗೆ ಸಹಾಯ ಮಾಡುತ್ತಿದ್ದಾರೆ.