- ಇರಾನ್-ಅಮೆರಿಕ ಶಾಂತಿ ಒಪ್ಪಂದ ಬೆನ್ನಲ್ಲೇ ಹೊರ್ಮುಜ್ ಜಲಸಂಧಿ ಸಂಚಾರ ಮುಕ್ತ
- ಕಚ್ಚಾ ತೈಲದ ಬೆಲೆಗಳು ಕುಸಿಯಲು ಪ್ರಾರಂಭ
- ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್-ಡಿಸೇಲ್ ಬೆಲೆ ಕೂಡ ಇಳಿಕೆ ಸಾಧ್ಯತೆ?
US-Iran Peace Deal: ಅಮೆರಿಕ ಮತ್ತು ಇರಾನ್ ಮಧ್ಯೆ ಇದೀಗ ಶಾಂತಿ ಒಪ್ಪಂದದ ಮಾತುಕತೆ ನಡೆದಿದ್ದು, ಶೀಘ್ರವೇ ಎರಡೂ ರಾಷ್ಟ್ರಗಳು ಸಹಿ ಹಾಕಲು ಸಿದ್ಧವಾಗಿವೆ. ಈ ಸಂದರ್ಭದಲ್ಲಿ, ಕಾರ್ಯತಂತ್ರದ ಪ್ರಮುಖ ಹೊರ್ಮುಜ್ ಜಲಮಾರ್ಗ ಅಂತಿಮವಾಗಿ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಬೆಲೆಗಳು ಕುಸಿಯಲು ಪ್ರಾರಂಭಿಸಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿಯಲು ಪ್ರಾರಂಭಿಸಿದ್ದೇ ತಡ ಹೆಚ್ಚುತ್ತಿರುವ ಎಲ್‌ಪಿಜಿ ಸಿಲಿಂಡರ್ಗಳು, ಇಂಧನ ಬೆಲೆ, ಹಣದುಬ್ಬರ ಕಡಿಮೆಯಾಗುವ ನಿರೀಕ್ಷೆಗಳು ಭಾರತೀಯರಲ್ಲಿ ಮೂಡಿವೆ. ಇದಕ್ಕೆ ಕಾರಣ, ಹೊರ್ಮುಜ್ ಜಲಸಂಧಿ ಮೂಲಕ ತನ್ನ ತೈಲ ಅಗತ್ಯಗಳಲ್ಲಿ ಶೇ.85ಕ್ಕಿಂತ ಹೆಚ್ಚು ಆಮದುಗಳ ಮೇಲೆ ಭಾರತ ಅವಲಂಬಿಸಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಯಬಹುದು ಎಂಬ ಮಾತುಗಳಿವೆ. ಆದರೆ, ಹೇಗೆ? ನಿಜಕ್ಕೂ ಆಗಲಿದ್ಯಾ? ಎಂಬುದು ಸದ್ಯದ ಮಟ್ಟಿಗೆ ಅಸ್ಪಷ್ಟ.
ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕುಸಿತ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ, ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಕ್ಷಣಕ್ಕೆ ಕಡಿಮೆಯಾಗುವ ಸಾಧ್ಯತೆ ತೀರ ಕಡಿಮೆ. ಇನ್ಫೋಮೆರಿಕ್ಸ್ ರೇಟಿಂಗ್ಸ್‌ನ ಅರ್ಥಶಾಸ್ತ್ರಜ್ಞ ಡಾ. ಮನೋರಂಜನ್ ಶರ್ಮಾ ಅವರ ವಿಶ್ಲೇಷಣೆಯ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿ 80 ಡಾಲರ್ಕ್ಕಿಂತ ಕಡಿಮೆಯಿದ್ದರೆ ಮಾತ್ರ ಭಾರತದಲ್ಲಿ ಇಂಧನ ಬೆಲೆ ಕಡಿತ ಸಾಧ್ಯ ಎನ್ನಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಹಿಂದೆ ಎದುರಿಸಿದ ನಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ, ಕಚ್ಚಾ ತೈಲ ಬೆಲೆಗಳು ದೀರ್ಘಾವಧಿಯಲ್ಲಿ ಕಡಿಮೆಯಿದ್ದರೆ ಮಾತ್ರ ಲೀಟರ್‌ಗೆ 2ರಿಂದ 4 ರೂ. ಸೀಮಿತ ಕಡಿತ ಸಾಧ್ಯ ಮತ್ತು ತಾತ್ಕಾಲಿಕ ಬೆಲೆ ಕುಸಿತದಿಂದಾಗಿ ಅಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
ಎಲ್‌ಪಿಜಿ ಸಿಲಿಂಡರ್‌ಗಳ ಕಥೆಯೇನು?
ಸಿಲಿಂಡರ್‌ಗಳ ಬೆಲೆಗಳಿಗೆ ಸಂಬಂಧಿಸಿದಂತೆ, ಆಯ್ದ ಗುಂಪುಗಳು ಮಾತ್ರ ಸರ್ಕಾರದಿಂದ ಪರಿಹಾರ ದೊರೆಯುವ ಸಾಧ್ಯತೆಯಿದೆ. ಎಲ್ಲರಿಗೂ ಅಲ್ಲ! ಸರ್ಕಾರವು ಈಗಾಗಲೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಬ್ಸಿಡಿಯನ್ನು ನೀಡುತ್ತಿದೆ. ಎಲ್‌ಪಿಜಿ ಬೆಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದರೆ, ಸರ್ಕಾರದ ಸಬ್ಸಿಡಿ ಹೊರೆ ಇನ್ನಷ್ಟು ಇಳಿಯಲಿದೆ.
ಲಭ್ಯವಿರುವ ಹೆಚ್ಚುವರಿ ನಿಧಿಗಳ ಆಧಾರದ ಮೇಲೆ ಸರ್ಕಾರವು ಭವಿಷ್ಯದ ನೀತಿಗಳನ್ನು ನಿರ್ಧರಿಸುತ್ತದೆ. ಆದಾಗ್ಯೂ, ಪೂರ್ಣ ಬೆಲೆ ಕಡಿತವು ಸರ್ಕಾರದ ಆರ್ಥಿಕ ಪರಿಸ್ಥಿತಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ, ಸಾಮಾನ್ಯ ಗ್ರಾಹಕರಿಗೆ ತಕ್ಷಣಕ್ಕೆ ಹೆಚ್ಚಿನ ಪರಿಹಾರ ಸಿಗದಿರಬಹುದು,(ಏಜೆನ್ಸೀಸ್).