ಸಾಂದರ್ಭಿಕ ಚಿತ್ರ 
ವಿದೇಶ

ಅಮೆರಿಕ-ಇರಾನ್ ಸಂಘರ್ಷ; ಇರಾನ್​ನ ಕೆಶ್ಮ್​​ ದ್ವೀಪದ ಮೇಲೆ ಯುಸ್ ಸೇನೆ ಮತ್ತೆ ದಾಳಿ: ಗಲ್ಫ್​ ದೇಶಗಳ ಗುರಿಯಾಗಿಸಿ ಇರಾನ್ ಪ್ರತಿದಾಳಿ | US-Iran conflict

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಅಮೆರಿಕ-ಇರಾನ್ ನಡುವಿನ ಸಂಘರ್ಷ(US-Iran conflict) ಮುಂದುವರೆದಿದ್ದುಇರಾನ್‌ನ ಹಾರ್ಮುಜ್ ಜಲಸಂಧಿಯಲ್ಲಿರುವ ಕೆಶ್ಮ್ ದ್ವೀಪದ ಮೇಲೆ ಸ್ವರಕ್ಷಣಾ ದಾಳಿಗಳನ್ನು ನಡೆಸಿರುವುದಾಗಿ ಬುಧವಾರ(ಜೂ. 03) ಮುಂಜಾನೆ ಯುಎಸ್​ ಸೇನೆ ಘೋಷಿಸಿದೆ. ಪ್ರತಿಯಾಗಿ ಗಲ್ಫ್​ ರಾಷ್ಟ್ರಗಳ ಯುಎಸ್ ಸೇನಾ ನೆಲೆಗಳನ್ನುಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಯುಎಸ್​ ಸೆಂಟ್ರಲ್ ಕಮಾಂಡ್, ಇರಾನಿನ ಮಿಲಿಟರಿ ನೆಲದ ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಯಾವುದೇ ಅಮೇರಿಕನ್ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಹೇಳಿದೆ. 
ಆದರೆ ಬಹ್ರೇನ್‌ನಲ್ಲಿರುವ ಯುಎಸ್ ನೌಕಾಪಡೆಯ ಐದನೇ ಫ್ಲೀಟ್‌ನ ಪ್ರಧಾನ ಕಚೇರಿ ಮತ್ತು ಆ ಪ್ರದೇಶದಲ್ಲಿನ ಪ್ರತ್ಯೇಕ ವಾಯುನೆಲೆಯ ಮೇಲೆ ದಾಳಿ ನಡೆಸಲಾಗಿದೆ ಎಂಬ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ ಹೇಳಿಕೆಯನ್ನು ಅದು ಸುಳ್ಳು ಎಂದು ನಿರಾಕರಿಸಿದೆ.
ಇರಾನ್ ತನ್ನ ನೆರೆಯ ದೇಶಗಳ ಹಲವು ಸ್ಥಳಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ ಅವೆಲ್ಲವೂ ತಮ್ಮ ಉದ್ದೇಶಿತ ಗುರಿಗಳನ್ನು ತಲುಪುವಲ್ಲಿ ವಿಫಲವಾಗಿವೆ. ಕುವೈತ್ ಮೇಲೆ ಹಾರಿಸಿದ ಎರಡು ಇರಾನಿನ ಕ್ಷಿಪಣಿಗಳು ಮಾರ್ಗಮಧ್ಯೆ ಬಿದ್ದವು. ಬಹ್ರೇನ್ ಮೇಲೆ ಹಾರಿಸಿದ ಮೂರು ಕ್ಷಿಪಣಿಗಳನ್ನು ಅಮೆರಿಕ ಮತ್ತು ಬಹ್ರೇನ್ ವಾಯು ರಕ್ಷಣಾ ಪಡೆಗಳು ತಡೆದಿವೆ ಎಂದು ಹೇಳಿದೆ. 

ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ಪ್ರತಿದಾಳಿ

ಪರ್ಷಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿ ಹಾಗೂ ಕೆಶ್ಮ್ ದ್ವೀಪದಲ್ಲಿ ಅಮೆರಿಕದ ಪ್ರತಿಕೂಲ ದಾಳಿಯ ಬಳಿಕ, ಕುವೈತ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಲಾಯಿತು ಎಂದು ಇರಾನ್​ನ ಸೇನೆಯಾದ​ ರೆವಲ್ಯೂಷನರಿ ಗಾರ್ಡ್ಸ್ ಹೇಳಿಕೊಂಡಿದೆ. 
ಏಪ್ರಿಲ್ 8ರಿಂದ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಜಾರಿಯಲ್ಲಿದೆ. ಆದರೆ ಸಂಘರ್ಷಕ್ಕೆ ಅಂತ್ಯವಾಡುವ ಶಾಂತಿ ಒಪ್ಪಂದದ ಭಾಗವಾಗಿ ಇಲ್ಲಿಯವರೆಗೆ ಎರಡೂ ದೇಶಗಳ ನಡುವೆ ನಡೆಸಲಾದ ಮಾತುಕತೆಗಳು ವಿಫಲವಾಗಿವೆ. ಇನ್ನೂ ಎರಡೂ ದೇಶಗಳ ನಡುವೆ ಮಾತುಕತೆ ಮುಂದುವರೆದಿವೆ (ಏಜೆನ್ಸೀಸ್).