ಅಮೆರಿಕ-ಇರಾನ್​ ಯುದ್ಧ  
ವಿದೇಶ

ಅಬ್ಬಬ್ಬಾ! ಒಂದು ವಾರಕ್ಕೆ ಇಷ್ಟೊಂದಾ? ಇರಾನ್​ ಮೇಲಿನ ದಾಳಿಗೆ ಅಮೆರಿಕ ಮಾಡಿದ ಖರ್ಚು ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | America ​

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲಿನ ದಾಳಿಗೆ ಅಮೆರಿಕಕ್ಕೆ 11 ಬಿಲಿಯನ್​ ಡಾಲರ್​ ಖರ್ಚು
  • ಭೀಕರ ಯುದ್ಧಕ್ಕೆ ಅಮೆರಿಕ ಮಾಡಿದ ಖರ್ಚಿನಲ್ಲಿ ಇನ್ನೂ ಹಲವು ಸೇರಿಲ್ಲ
ಯುಎಸ್​: ಇರಾನ್​ ಮತ್ತು ಇಸ್ರೇಲ್​-ಅಮೆರಿಕ ನಡುವಿನ ಭೀಕರ ಯುದ್ಧವು ಇದೀಗ 13ನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳ ನಡುವೆ ಸೇಡಿಗೆ ಸೇಡು ಎನ್ನುವಂತೆ ದಾಳಿಗೆ ಪ್ರತಿದಾಳಿಗಳು ನಡೆಯುತ್ತಿವೆ. ತನ್ನ ಸುಪ್ರೀಂ ನಾಯಕನನ್ನೇ ಹತ್ಯೆಗೈದ ಟ್ರಂಪ್​ ದೇಶವನ್ನು ನಾಶ ಮಾಡಬೇಕೆಂದು ಪಣತೊಟ್ಟಿರುವ ಇರಾನ್​, ಯಾವುದೇ ಕಾರಣಕ್ಕೂ ಯುದ್ಧ ಕೈಬಿಡುವ ಮಾತಿಲ್ಲ ಎಂಬುದನ್ನು ದ್ವೇಷದ ಕಿಚ್ಚಿನಲ್ಲಿ ತೋರಿಸುತ್ತಿರುವುದು ಗಮನಾರ್ಹ.
ಅಮೆರಿಕಕ್ಕೆ ಬುದ್ಧಿ ಕಲಿಸಲು ಸಿಡಿದೆದ್ದಿರುವ ಇರಾನ್​, ಗಲ್ಫ್​ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿಯನ್ನು ನಿರಂತರವಾಗಿ ಮಾಡುತ್ತಿದೆ. ಮತ್ತೊಂದೆಡೆ, ತನ್ನ ಅಧಿಕಾರದಲ್ಲಿರುವ ಹಾರ್ಮುಜ್​ ಜಲಸಂಧಿಯನ್ನು ಮುಚ್ಚಿರುವ ಇರಾನ್​, ಅಮೆರಿಕ ಮತ್ತು ಇಸ್ರೇಲ್​ ಸೇರಿದಂತೆ ಇತರೆ ದೇಶಗಳ ತೈಲ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಮೂಲಕ ದೊಡ್ಡ ಹಿಡಿತ ಸಾಧಿಸಿದೆ. ಈ ಬೆಳವಣಿಗೆಗಳ ಮಧ್ಯೆ ಅಚ್ಚರಿಯ ವರದಿಯೊಂದು ಬೆಳಕಿಗೆ ಬಂದಿದೆ.
ಇರಾನ್ ವಿರುದ್ಧ ತನ್ನ ಮಿಲಿಟರಿ ಪಡೆಯನ್ನು ಸಂಪೂರ್ಣವಾಗಿ ಬಳಸಿಕೊಂಡ ಅಮೆರಿಕಕ್ಕೆ ಮೊದಲ ವಾರಕ್ಕೆ ಕನಿಷ್ಠ 11.3 ಬಿಲಿಯನ್ ಡಾಲರ್​ ಖರ್ಚು ತಗುಲಿದೆ ಎಂದು ಪೆಂಟಗನ್ ಕಾಂಗ್ರೆಸ್ ಜೊತೆ ಹಂಚಿಕೊಂಡ ಅಂದಾಜನ್ನು ಗುರುವಾರ (ಮಾ.12) 'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ ತಿಳಿಸಿದೆ. ಈ ಅಂಕಿ ಅಂಶವು ಸಂಘರ್ಷದ ಆರ್ಥಿಕ ವೆಚ್ಚದ ಇದುವರೆಗಿನ ವಿವರವಾದ ಮೌಲ್ಯಮಾಪನ ಎಂಬುದು ಇಲ್ಲಿ ಗಮನಾರ್ಹ.
ವರದಿಯ ಪ್ರಕಾರ, ಇದು ಅಂದಾಜು ಅಮೆರಿಕದ ಕಾರ್ಯಾಚರಣೆಗಳ ಆರಂಭಿಕ ಹಂತದ ವೆಚ್ಚವನ್ನು ಮಾತ್ರ ಒಳಗೊಂಡಿದೆ ಎನ್ನಲಾಗಿದೆ. ಅಲ್ಲಿಗೆ ದಾಳಿಗಳು ಪ್ರಾರಂಭವಾಗುವ ಮೊದಲು ಈ ಪ್ರದೇಶಕ್ಕೆ ನಿಯೋಜಿಸಲಾದ ಹೆಚ್ಚುವರಿ ಪಡೆಗಳು, ವಿಮಾನಗಳು ಸೇರಿದಂತೆ ಹಲವಾರು ಪ್ರಮುಖ ಖುರ್ಚು-ವೆಚ್ಚಗಳನ್ನು ಇದಕ್ಕೆ ಸೇರಿಸಿಲ್ಲ ಎಂದು ವರದಿಯಾಗಿದೆ. 
ಪೆಂಟಗನ್ ಕಾರ್ಯಾಚರಣೆಯ ಲೆಕ್ಕಪತ್ರವನ್ನು ಪೂರ್ಣಗೊಳಿಸುತ್ತಿದ್ದಂತೆ ಒಟ್ಟಾರೆ ಬಿಲ್ ಡಬಲ್​ ಆಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ಅನೇಕ ಕಾಂಗ್ರೆಸ್ ಸಹಾಯಕರು ಹೇಳಿರುವಂತೆ, ಶೀಘ್ರವೇ ಶ್ವೇತಭವನವು ಯುದ್ಧಕ್ಕೆ ಹೆಚ್ಚುವರಿ ಹಣದ ಅಗತ್ಯತೆಯನ್ನು ಪೂರೈಸಲು ಕಾಂಗ್ರೆಸ್‌ಗೆ ವಿನಂತಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಕೆಲವರು, 50 ಬಿಲಿಯನ್​ಗೂ ಅಧಿಕ ಹಣವನ್ನು ಕೇಳಬಹುದು ಎಂದು ಊಹಿಸಿದ್ದಾರೆ,(ಏಜೆನ್ಸೀಸ್).