Mojtaba Khamenei 
ವಿದೇಶ

ಖಮೇನಿ ಪುತ್ರನ ಬೆನ್ನಟ್ಟಿದ ಅಮೆರಿಕ: ಮುಜ್ತಬಾ ಪತ್ತೆ ಹಚ್ಚಿದವರಿಗೆ ಸಿಗಲಿದೆ 92,47,48,000 ರೂಪಾಯಿ! | Mojtaba Khamenei

ವಾಷಿಂಗ್ಟನ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಅಮೆರಿಕವು ಅತ್ಯಂತ ಆಕ್ರಮಣಕಾರಿ ಹೆಜ್ಜೆಯನ್ನಿಟ್ಟಿದೆ. ಇರಾನ್‌ನ ನೂತನ ಸುಪ್ರೀಂ ಲೀಡರ್ ಮುಜ್ತಬಾ ಖಮೇನಿ (Mojtaba Khamenei) ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 10 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 92,47,48,000 ರೂಪಾಯಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ 'ರಿವಾರ್ಡ್ ಫಾರ್ ಜಸ್ಟಿಸ್' ಪ್ರೋಗ್ರಾಂ ಅಡಿಯಲ್ಲಿ ಈ ಬೌಂಟಿಯನ್ನು ಪ್ರಕಟಿಸಲಾಗಿದೆ. "ವಿಶ್ವಾದ್ಯಂತ ಭಯೋತ್ಪಾದನೆಯನ್ನು ಸಂಘಟಿಸುವ ಮತ್ತು ಕಾರ್ಯಗತಗೊಳಿಸುವ ಇರಾನ್‌ನ ಪ್ರಮುಖ ವ್ಯಕ್ತಿಗಳನ್ನು ನಾವು ಗುರಿಯಾಗಿಸಿದ್ದೇವೆ. ಅವರ ಬಗ್ಗೆ ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಮತ್ತು ಅವರಿಗೆ ಸ್ಥಳಾಂತರದ ಸೌಲಭ್ಯವನ್ನೂ ನೀಡಲಾಗುವುದು," ಎಂದು ಅಮೆರಿಕ ತಿಳಿಸಿದೆ. ಮುಜ್ತಬಾ ಖಮೇನಿ ಜೊತೆಗೆ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಅಲಿ ಅಸ್ಘರ್ ಹೆಜಾಜಿ ಅವರ ಹೆಸರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
"ಇರಾನ್ ಮೇಲೆ ಇನ್ನು ಭೀಕರ ದಾಳಿ": ಟ್ರಂಪ್ ಎಚ್ಚರಿಕೆ
ಫಾಕ್ಸ್ ನ್ಯೂಸ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂಬರುವ ದಿನಗಳಲ್ಲಿ ಇರಾನ್ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. "ಮುಂದಿನ ಒಂದು ವಾರ ನಾವು ಇರಾನ್ ಮೇಲೆ ಅತ್ಯಂತ ಭೀಕರವಾಗಿ ದಾಳಿ ನಡೆಸಲಿದ್ದೇವೆ. ಅಂತಿಮವಾಗಿ ಇರಾನ್‌ನ ನಾಯಕತ್ವವನ್ನು ಅಲ್ಲಿನ ಜನರೇ ಉರುಳಿಸಲಿದ್ದಾರೆ ಎಂಬ ನಂಬಿಕೆ ನನಗಿದೆ," ಎಂದು ಟ್ರಂಪ್ ಹೇಳಿದ್ದಾರೆ. ಫೆಬ್ರವರಿ 28 ರಂದು ಇರಾನ್‌ನ ಮಾಜಿ ಸುಪ್ರೀಂ ಲೀಡರ್ ಅಲಿ ಖಮೇನಿಯನ್ನು ಹತ್ಯೆ ಮಾಡುವ ಮೂಲಕ ಪ್ರಾರಂಭವಾದ ಈ ಅಭಿಯಾನವು ಈಗ ಇಡೀ ಮಧ್ಯಪ್ರಾಚ್ಯವನ್ನು ಆವರಿಸಿದೆ.

ಗಾಯಗೊಂಡಿರುವ ಮುಜ್ತಬಾ ಖಮೇನಿ?

ನೂತನ ಸುಪ್ರೀಂ ಲೀಡರ್ ಮುಜ್ತಬಾ ಖಮೇನಿ ಅವರು ಫೆಬ್ರವರಿ 28 ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಮತ್ತು ಅವರ ಮುಖ ವಿರೂಪಗೊಂಡಿರುವ ಸಾಧ್ಯತೆಯಿದೆ ಎಂದು ಹೆಗ್ಸೆತ್ ಹೇಳಿದ್ದಾರೆ. ಇರಾನ್ ಸರ್ಕಾರವು ಮುಜ್ತಬಾ ಗಾಯಗೊಂಡಿರುವುದನ್ನು ಖಚಿತಪಡಿಸಿದ್ದರೂ, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಅಧಿಕಾರ ವಹಿಸಿಕೊಂಡ ನಂತರ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್​).