ಇಸ್ರೇಲ್ನಲ್ಲಿ ಚುನಾವಣೆಯ ಬಳಿಕ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಪಾಳಯಕ್ಕೆ ಬಹುಮತ ಸಿಗದಿರುವುದು ಅವರ ಮುಂದಿನ ಹಾದಿಯನ್ನು ಕಠಿಣಗೊಳಿಸಿದೆ. ಮತ್ತೊಂದೆಡೆ, ಚುನಾವಣೆಯಲ್ಲಿ ಮತಗಳ್ಳತನ (ವೋಟ್ ಚೋರಿ) ನಡೆದಿದೆ ಎಂದು ನೆತನ್ಯಾಹು ಅವರ ಲಿಕುಡ್ ಪಕ್ಷ ಆರೋಪಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದ್ದು, ತನಿಖೆಗೆ ಸೂಚಿಸಲಾಗಿದೆ. ಸರ್ಕಾರ ರಚನೆಯ ಲೆಕ್ಕಾಚಾರ, ಅರಬ್ ಪಕ್ಷಗಳ ನಿರ್ಣಾಯಕ ಪಾತ್ರ ಮತ್ತು ಚುನಾವಣಾ ಅಕ್ರಮದ ಆರೋಪಗಳು ಈಗ ಇಸ್ರೇಲ್ ರಾಜಕೀಯದ ಕೇಂದ್ರಬಿಂದುವಾಗಿವೆ.
ಚುನಾವಣೆ ಮುಗಿದರೂ ಇಸ್ರೇಲ್ನಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಅವರ ಬೆಂಬಲಿತ ಪಕ್ಷಗಳ ಪಾಳಯ ಸರ್ಕಾರ ರಚಿಸಲು ಅಗತ್ಯವಾದ ಬಹುಮತವನ್ನು ಗಳಿಸಿಲ್ಲ. 120 ಸದಸ್ಯರ ಸಂಸತ್ತಿನಲ್ಲಿ ವಿರೋಧಿ ಪಾಳಯಕ್ಕೂ ಬಹುಮತ ಸಿಕ್ಕಿಲ್ಲ. ಅರಬ್ ಸಮುದಾಯವನ್ನು ಪ್ರತಿನಿಧಿಸುವ ಪಕ್ಷಗಳು 19 ಸ್ಥಾನಗಳನ್ನು ಗೆದ್ದಿರುವುದು ಈ ಬಾರಿಯ ಚುನಾವಣೆಯ ಪ್ರಮುಖ ಬೆಳವಣಿಗೆ. ಈ ಮಧ್ಯೆ, ಅರಬ್ ಪಕ್ಷಗಳು ‘ಮತಗಳ್ಳತನದ ಮೂಲಕ ಚುನಾವಣೆಯನ್ನು ಕದ್ದಿವೆ’ ಎಂದು ಲಿಕುಡ್ ಆರೋಪಿಸಿದೆ. ಆದರೆ, ‘ಮತಗಳ್ಳತನದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರವಿಲ್ಲ’ ಎಂದಿದ್ದಾರೆ ಪೊಲೀಸರು. ಮತದಾರರಿಗೆ ಹಣದ ಆಮಿಷವೊಡ್ಡಿದ ಆರೋಪ ಕುರಿತು ತನಿಖೆ ನಡೆಯುತ್ತಿದೆ. ವಿದೇಶಿ ಹಸ್ತಕ್ಷೇಪದ ಶಂಕೆ ವ್ಯಕ್ತವಾಗಿದ್ದು, ಅದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಇಸ್ರೇಲ್ನಲ್ಲಿ ಈಗ ಸರ್ಕಾರ ರಚನೆಯ ಲೆಕ್ಕಾಚಾರದ ಜತೆಗೆ ಚುನಾವಣೆಯ ವಿಶ್ವಾಸಾರ್ಹತೆ ಕುರಿತ ವಿವಾದವೂ ಮಹತ್ವ ಪಡೆದಿದೆ.
ಇಸ್ರೇಲ್ನ ಸಂಸತ್ತನ್ನು ನೆಸೆಟ್ ಎಂದು ಕರೆಯಲಾಗುತ್ತದೆ. ಅದರಲ್ಲಿ ಒಟ್ಟು 120 ಸದಸ್ಯರಿರುತ್ತಾರೆ. ಸರ್ಕಾರ ರಚಿಸಲು ಕನಿಷ್ಠ 61 ಸದಸ್ಯ ಬಲ ಅಗತ್ಯ. ಅ. 27ರಂದು ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಳ್ಳುವ ಹಂತಕ್ಕೆ ಬಂದಾಗಿನ ಮಾಹಿತಿ ಪ್ರಕಾರ, ನೆತನ್ಯಾಹು ಅವರ ಬಲಪಂಥೀಯ, ತೀವ್ರ ಬಲಪಂಥೀಯ ಮತ್ತು ಧಾರ್ವಿುಕ ಪಕ್ಷಗಳ ಪಾಳಯಕ್ಕೆ 53 ಸ್ಥಾನ ಬಹುತೇಕ ಖಚಿತ. ಗಾದಿ ಐಸೆನ್ಕೋಟ್ ನೇತೃತ್ವದ ವಿರೋಧಿ ಪಾಳಯಕ್ಕೆ 48 ಸ್ಥಾನಗಳು ದೊರೆಯುವ ಅಂದಾಜಿದೆ. ಅರಬ್ ಸಮುದಾಯವನ್ನು ಪ್ರತಿನಿಧಿಸುವ ಪಕ್ಷಗಳು 19 ಸ್ಥಾನಗಳನ್ನು ಗಳಿಸಿವೆ. ಹೀಗಾಗಿ, ಯಾವುದೇ ಪಾಳಯವೂ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ. ನೆತನ್ಯಾಹು ಅವರ ಪಾಳಯ ಬಹುಮತಕ್ಕೆ 8 ಸ್ಥಾನಗಳ ಕೊರತೆ ಎದುರಿಸುತ್ತಿದೆ. ವಿರೋಧಿ ಪಾಳಯಕ್ಕೆ 13 ಸ್ಥಾನಗಳ ಕೊರತೆಯಿದೆ. ಅಂತಿಮ ಮತ ಎಣಿಕೆ ಮತ್ತು ಅಧಿಕೃತ ಫಲಿತಾಂಶ ಪ್ರಕಟವಾದ ಬಳಿಕವೇ ಸ್ಥಾನಗಳ ಹಂಚಿಕೆ ಸ್ಪಷ್ಟವಾಗಲಿದೆ.
ಚುನಾವಣೆ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿರುವುದು ಮತಗಳ್ಳತನದ ಆರೋಪ. ಅರಬ್ ಪಕ್ಷಗಳು ಗಂಭೀರ ಅಕ್ರಮಗಳ ಮೂಲಕ ಚುನಾವಣೆಯನ್ನು ರಿಗ್ ಮಾಡಿವೆ ಎಂದು ಲಿಕುಡ್ ಆರೋಪಿಸಿದೆ. ಮತದಾರರಿಗೆ ಹಣದ ಆಮಿಷವೊಡ್ಡುವುದು, ಬೆದರಿಕೆ ಹಾಕುವುದು, ಹಿಂಸಾಚಾರ, ನಕಲಿ ದಾಖಲೆಗಳ ಬಳಕೆ, ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮತ್ತು ನಿಷೇಧಿತ ತಂತ್ರಾಂಶದ ಮೂಲಕ ಮತದಾರರನ್ನು ಪ್ರಭಾವಿಸುವುದು ಸೇರಿದಂತೆ ಹಲವು ಆರೋಪಗಳನ್ನು ಪಕ್ಷ ಮಾಡಿದೆ. ಈ ಸಂಬಂಧ ನೂರಾರು ಸಾಕ್ಷ್ಯಗಳು ಮತ್ತು ದೂರುಗಳನ್ನು ಪೊಲೀಸರಿಗೆ, ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ಗೆ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಿರುವುದಾಗಿ ಲಿಕುಡ್ ಹೇಳಿದೆ. ಆದರೆ, ಪೊಲೀಸರು ಹೇಳುವುದೇ ಬೇರೆ. ಅಕ್ರಮಗಳ ಘಟನೆಗಳು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಕಡಿಮೆ ಇದ್ದವು. ಮತಗಳ್ಳತನದ ಆರೋಪಗಳಿಗೆ ಸಾಕ್ಷ್ಯಾಧಾರಗಳಿಲ್ಲ ಎನ್ನುತ್ತಾರೆ ಪೊಲೀಸರು. ಕೇಂದ್ರ ಚುನಾವಣಾ ಸಮಿತಿಯ ಅಧಿಕಾರಿಯೂ ಮತಗಳ್ಳತನದ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷವೇ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲು ಅಷ್ಟು ಸ್ಥಾನ ಸಾಕಾಗುವುದಿಲ್ಲ. ಇತರ ಪಕ್ಷಗಳ ಬೆಂಬಲ ಬೇಕೇ ಬೇಕಾಗುತ್ತದೆ. ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಅವರ ಮಿತ್ರಪಕ್ಷಗಳ ಪಾತ್ರ ಮಹತ್ವದ್ದಾಗಿದೆ. ಧಾರ್ವಿುಕ ಸಂಪ್ರದಾಯವಾದಿ ಪಕ್ಷಗಳು ಮತ್ತು ತೀವ್ರ ಬಲಪಂಥೀಯ ನಾಯಕರು ಅವರ ಆಡಳಿತಕ್ಕೆ ಬೆಂಬಲ ನೀಡುತ್ತ ಬಂದಿದ್ದಾರೆ. ಆದರೆ, ಈ ಪಕ್ಷಗಳ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಹೊಸ ಮಿತ್ರರನ್ನು ಸೆಳೆಯುವುದು ನೆತನ್ಯಾಹು ಅವರಿಗೆ ಸುಲಭವಲ್ಲ. ಇನ್ನೊಂದೆಡೆ, ಐಸೆನ್ಕೋಟ್ ನೇತೃತ್ವದ ವಿರೋಧಿ ಪಾಳಯದಲ್ಲಿ ವಿಭಿನ್ನ ರಾಜಕೀಯ ನಿಲುವುಗಳ ಪಕ್ಷಗಳಿವೆ. ನೆತನ್ಯಾಹು ಅವರನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಅವು ಒಂದಾಗಿದ್ದರೂ, ಸರ್ಕಾರ ರಚನೆ ವಿಚಾರದಲ್ಲಿ ಎಲ್ಲರೂ ಒಂದೇ ನಿಲುವು ಹೊಂದಿಲ್ಲ. ಅರಬ್ ಪಕ್ಷಗಳ ಬೆಂಬಲ ಪಡೆಯಬೇಕೇ ಎಂಬ ಪ್ರಶ್ನೆಯೂ ಅವುಗಳ ಒಗ್ಗಟ್ಟಿಗೆ ಸವಾಲಾಗಿದೆ.
ನೆಗೆವ್ ಪ್ರದೇಶದಲ್ಲಿ ಮತದಾರರಿಗೆ ಹಣ ನೀಡಿ ನಿರ್ದಿಷ್ಟ ಅರಬ್ ಪಕ್ಷಗಳಿಗೆ ಮತ ಹಾಕುವಂತೆ ಪ್ರೇರೇಪಿಸಿದ ಶಂಕೆಯ ಮೇಲೆ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ, ವಿದೇಶಿ ಹಸ್ತಕ್ಷೇಪ ನಡೆದಿರುವ ಶಂಕೆಯನ್ನೂ ಶಿನ್ ಬೆಟ್ ಸಂಸ್ಥೆ ತನಿಖೆ ನಡೆಸುತ್ತಿದೆ. ಕೇಂದ್ರ ಚುನಾವಣಾ ಸಮಿತಿಯ ಮುಖ್ಯಸ್ಥರೂ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ, ವಿದೇಶಿ ಹಸ್ತಕ್ಷೇಪದ ತನಿಖೆಗೂ ಲಿಕುಡ್ ಮಾಡಿರುವ ಮತಗಳ್ಳತನದ ಆರೋಪಗಳಿಗೂ ನೇರ ಸಂಬಂಧವಿದೆಯೇ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ.
ಈ ಚುನಾವಣೆಯಲ್ಲಿ ಅರಬ್ ಸಮುದಾಯವನ್ನು ಪ್ರತಿನಿಧಿಸುವ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗಳಿಸಿರುವುದು ಗಮನಾರ್ಹ. ಇದು ಇಸ್ರೇಲ್ನ ಸಂಸತ್ತಿನಲ್ಲಿ ಈ ಪಕ್ಷಗಳ ಪ್ರಾತಿನಿಧ್ಯ ಹೆಚ್ಚಿರುವುದನ್ನು ಸೂಚಿಸುತ್ತದೆ. ಈ ಸಂಖ್ಯಾಬಲವು ಸರ್ಕಾರ ರಚನೆಯ ಲೆಕ್ಕಾಚಾರದಲ್ಲಿ ಅವುಗಳಿಗೆ ಮಹತ್ವದ ಸ್ಥಾನ ನೀಡಿದೆ. ಐಸೆನ್ಕೋಟ್ ನೇತೃತ್ವದ ವಿರೋಧಿ ಪಾಳಯದ 48 ಸ್ಥಾನಗಳಿಗೆ ಅರಬ್ ಪಕ್ಷಗಳ 19 ಸ್ಥಾನಗಳನ್ನು ಸೇರಿಸಿದರೆ ಒಟ್ಟು 67 ಸ್ಥಾನಗಳಾಗುತ್ತವೆ. ಸಂಖ್ಯಾಬಲದ ದೃಷ್ಟಿಯಿಂದ ಇದು ಬಹುಮತಕ್ಕೆ ಸಾಕು. ಆದರೆ, ಲೆಕ್ಕಾಚಾರದಲ್ಲಿರುವ ಈ ಬಹುಮತವನ್ನು ರಾಜಕೀಯ ಒಪ್ಪಂದವಾಗಿ ಪರಿವರ್ತಿಸುವುದು ಸುಲಭವಲ್ಲ. ವಿರೋಧಿ ಪಾಳಯದ ಕೆಲವು ಪ್ರಮುಖ ನಾಯಕರು ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದನ್ನು ವಿರೋಧಿಸಿದ್ದಾರೆ. ನೆತನ್ಯಾಹು ಅವರೂ ಅರಬ್ ಪಕ್ಷಗಳ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ. ಹೀಗಾಗಿ, ಅರಬ್ ಪಕ್ಷಗಳು ಯಾರಿಗೆ ಬೆಂಬಲ ನೀಡುತ್ತವೆ, ಅವುಗಳ ಬೆಂಬಲವನ್ನು ಇತರ ಪಕ್ಷಗಳು ಸ್ವೀಕರಿಸುತ್ತವೆಯೇ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ನಿರ್ಣಾಯಕ.
ನೆತನ್ಯಾಹು ಅವರ ಮುಂದೆ ಹಲವು ದಾರಿಗಳಿವೆ. ಮೊದಲನೆಯದು, ತಮ್ಮ ಈಗಿನ ಮಿತ್ರಪಕ್ಷಗಳನ್ನು ಉಳಿಸಿಕೊಂಡೇ ಇತರ ಪಕ್ಷಗಳ ಬೆಂಬಲ ಗಳಿಸುವುದು. ಇದಕ್ಕೆ ಕನಿಷ್ಠ ಎಂಟು ಹೆಚ್ಚುವರಿ ಸದಸ್ಯರ ಬೆಂಬಲ ಬೇಕು. ಆದರೆ, ಹೊಸ ಪಕ್ಷಗಳನ್ನು ಸೇರಿಸಿಕೊಳ್ಳುವಾಗ ಈಗಿನ ಮಿತ್ರರ ಅಭಿಪ್ರಾಯಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಎರಡನೆಯದು, ವಿರೋಧಿ ಪಾಳಯದ ಕೆಲವು ನಾಯಕರೊಂದಿಗೆ ಒಪ್ಪಂದ ಮಾಡಿಕೊಂಡು ರಾಷ್ಟ್ರೀಯ ಏಕತಾ ಸರ್ಕಾರ ರಚಿಸುವ ಪ್ರಯತ್ನ. ಇಂತಹ ಸರ್ಕಾರದಲ್ಲಿ ತಟಸ್ಥ ಅಥವಾ ಬಲಪಂಥೀಯ ವಿರೋಧ ಪಕ್ಷಗಳು ಸೇರಬಹುದು. ಆದರೆ, ಇದಕ್ಕಾಗಿ ನೆತನ್ಯಾಹು ತಮ್ಮ ಈಗಿನ ಮಿತ್ರರ ಪೈಕಿ ಕೆಲವರನ್ನು ದೂರವಿಡಬೇಕಾಗುತ್ತದೆ. ನೆತನ್ಯಾಹು ನೇತೃತ್ವದ ಸರ್ಕಾರದಲ್ಲಿ ಪಾಲ್ಗೊಳ್ಳಲು ವಿರೋಧಿ ನಾಯಕರು ಸಿದ್ಧರಾಗುತ್ತಾರಾ ಎಂಬ ಪ್ರಶ್ನೆಯೂ ಇದೆ. ಮೂರನೆಯದು, ಮಾತುಕತೆ ವಿಫಲವಾದರೆ ಮತ್ತೊಂದು ಚುನಾವಣೆಗೆ ಸಿದ್ಧರಾಗುವುದು.
2023ರ ಅ. 7ರಂದು ಹಮಾಸ್ ನಡೆಸಿದ ದಾಳಿಯನ್ನು ತಡೆಯುವಲ್ಲಿ ಭದ್ರತಾ ವ್ಯವಸ್ಥೆ ವಿಫಲವಾದ ಕುರಿತು ನೆತನ್ಯಾಹು ಸರ್ಕಾರ ಟೀಕೆ ಎದುರಿಸುತ್ತಿದೆ. ತೀವ್ರ ಸಂಪ್ರದಾಯವಾದಿ ಯಹೂದಿ ಸಮುದಾಯದವರಿಗೆ ಕಡ್ಡಾಯ ಸೇನಾ ಸೇವೆಯಿಂದ ವಿನಾಯಿತಿ ನೀಡುವ ವಿಚಾರವೂ ವಿವಾದವಾಗಿದೆ. ಈ ಸಮುದಾಯದ ಬೆಂಬಲ ಹೊಂದಿರುವ ಧಾರ್ವಿುಕ ಪಕ್ಷಗಳು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದರಿಂದ, ಸೇನಾ ಸೇವೆಯ ನಿಯಮಗಳಲ್ಲಿ ಬದಲಾವಣೆ ತರಬೇಕೆಂಬ ಒತ್ತಡ ಮತ್ತು ವಿನಾಯಿತಿ ಮುಂದುವರಿಸಬೇಕೆಂಬ ಬೇಡಿಕೆಗಳಲ್ಲಿ ಯಾವುದನ್ನು ಪರಿಗಣಿಸಬೇಕೆಂಬುದು ಕಗ್ಗಂಟಾಗಿದೆ. ಇದಲ್ಲದೆ, ಭ್ರಷ್ಟಾಚಾರ ಪ್ರಕರಣದಲ್ಲಿ ನೆತನ್ಯಾಹು ವಿಚಾರಣೆ ಎದುರಿಸುತ್ತಿದ್ದಾರೆ. ಈ ವಿಷಯಗಳು ಚುನಾವಣೆ ಬಳಿಕವೂ ಮುಂದುವರಿಯಲಿವೆ.
ಹೊಸ ಸರ್ಕಾರ ರಚನೆಯಾದ ಬಳಿಕ ಗಾಜಾ, ಇರಾನ್, ಲೆಬನಾನ್ ಮತ್ತು ವೆಸ್ಟ್ ಬ್ಯಾಂಕ್ ಕುರಿತ ಇಸ್ರೇಲ್ನ ನೀತಿಗಳಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂಬುದು ಕುತೂಹಲಕರವಾಗಿದೆ. ನೆತನ್ಯಾಹು ಅವರ ಈಗಿನ ಮಿತ್ರಪಕ್ಷಗಳು ಸರ್ಕಾರದಲ್ಲಿ ಪ್ರಭಾವ ಉಳಿಸಿಕೊಂಡರೆ, ದೇಶದ ಭದ್ರತೆ ಮತ್ತು ಪ್ಯಾಲೆಸ್ತೀನ್ ವಿಚಾರದಲ್ಲಿ ಕಠಿಣ ನಿಲುವು ಮುಂದುವರಿಯುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರ ರಚನೆಯಾದರೆ ಕೆಲವು ನೀತಿಗಳಲ್ಲಿ ಸಡಿಲಿಕೆ ಅನಿವಾರ್ಯ ಆಗಬಹುದು. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದರೆ ತೈಲ ಮಾರುಕಟ್ಟೆ, ಸರಕು ಸಾಗಣೆ ಮತ್ತು ಪ್ರಾದೇಶಿಕ ವ್ಯಾಪಾರದ ಮೇಲೂ ಪರಿಣಾಮ ಬೀರಬಹುದು. ಇಸ್ರೇಲ್ನ ಮುಂದಿನ ಸರ್ಕಾರದ ನಿರ್ಧಾರಗಳು ಅಮೆರಿಕದೊಂದಿಗಿನ ಸಂಬಂಧ ಹಾಗೂ ಅರಬ್ ರಾಷ್ಟ್ರಗಳೊಂದಿಗಿನ ಸಂಬಂಧಗಳಿಗೂ ಅತ್ಯಂತ ಮಹತ್ವದ್ದಾಗಿವೆ.
ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳಲ್ಲಿ ರಕ್ಷಣಾ ಸಹಕಾರ, ತಂತ್ರಜ್ಞಾನ, ಕೃಷಿ, ನೀರಿನ ನಿರ್ವಹಣೆ ಮತ್ತು ವ್ಯಾಪಾರ ಪ್ರಮುಖ ಕ್ಷೇತ್ರಗಳಾಗಿವೆ. ಹೊಸ ಸರ್ಕಾರದ ರಾಜಕೀಯ ಆದ್ಯತೆಗಳು ಕೆಲವು ಕ್ಷೇತ್ರಗಳಲ್ಲಿ ಸಹಕಾರದ ಸ್ವರೂಪವನ್ನು ಬದಲಿಸಬಹುದು. ಭಾರತಕ್ಕೆ ಇಸ್ರೇಲ್ ಜತೆಗಿನ ಸಂಬಂಧ ಮಾತ್ರವಲ್ಲ, ಅರಬ್ ರಾಷ್ಟ್ರಗಳೊಂದಿಗಿನ ಬಾಂಧವ್ಯವೂ ಮುಖ್ಯ. ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಭಾರತೀಯರ ಹಿತಾಸಕ್ತಿ, ಇಂಧನ ಆಯಾತ, ವ್ಯಾಪಾರ ಮಾರ್ಗಗಳ ಸುರಕ್ಷತೆ ಭಾರತದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಸ್ಥಾನ ಹೊಂದಿವೆ. ಹೀಗಾಗಿ, ಇಸ್ರೇಲ್ನಲ್ಲಿ ಸರ್ಕಾರ ರಚನೆಯಾಗುವ ರೀತಿ ಮತ್ತು ಮಧ್ಯಪ್ರಾಚ್ಯದ ಪರಿಸ್ಥಿತಿಯು ಭಾರತದ ರಾಜತಾಂತ್ರಿಕ ಲೆಕ್ಕಾಚಾರಕ್ಕೂ ಮಹತ್ವದ್ದೇ.