ಇಸ್ರೇಲ್ನ ರಾಜಕೀಯ ವಲಯದಲ್ಲಿ ಮಹತ್ವದ ಬದಲಾವಣೆಗಳು ವೇಗ ಪಡೆದಿದ್ದು, ಮುಂದಿನ ಪ್ರಧಾನಮಂತ್ರಿಯಾಗುವ ಸಾಧ್ಯತೆಯಿರುವ ಗಾದಿ ಐಸೆನ್ಕೋಟ್ ಅವರು ದೇಶದ ಆಡಳಿತ ಮತ್ತು ಕಾನೂನು ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ನಾಯಕರು ಪ್ರಧಾನಿಯಾಗುವಂತಿಲ್ಲ ಎಂದು ಈ ಮಸೂದೆಯಲ್ಲಿ ಹೇಳಲಾಗಿದೆ. ನೆತನ್ಯಾಹು ವಿರುದ್ಧ ಸದ್ಯ 3 ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿವೆ. ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ ಮತ್ತು ಆರು ವಾರದೊಳಗೆ ಗಾದಿ ಐಸೆನ್ಕೋಟ್ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರೆ, ಬೆಂಜಮಿನ್ ನೆತನ್ಯಾಹು ಮತ್ತೆ ಪ್ರಧಾನಿಯಾಗುವ ಎಲ್ಲ ದಾರಿಗಳು ಮುಚ್ಚಲಿವೆ. ಐಸೆನ್ಕೋಟ್ ಮತ್ತು ಅವರ ಸಹೋದ್ಯೋಗಿಗಳು ಬುಧವಾರ ಇಸ್ರೇಲ್ ಸಂಸತ್ತಿನಲ್ಲಿ ಒಟ್ಟು 8 ಮಸೂದೆಗಳನ್ನು ಮಂಡಿಸಿದ್ದು, ಇದರ ಪ್ರಮುಖ ವಿವರಗಳು ಇಲ್ಲಿವೆ.
ಪ್ರಧಾನಿ ಅಧಿಕಾರಾವಧಿಗೆ ಮಿತಿ: ಯಾವುದೇ ಒಬ್ಬ ವ್ಯಕ್ತಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರಿಯದಂತೆ ಕಾನೂನು ತರಲು ಐಸೆನ್ಕೋಟ್ ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ಹುದ್ದೆಯ ಗರಿಷ್ಠ ಅಧಿಕಾರಾವಧಿಯನ್ನು ನಿಗದಿಪಡಿಸಲಾಗುತ್ತದೆ. ಈ ನಿಯಮ ಜಾರಿಯಾದರೆ ಬೆಂಜಮಿನ್ ನೆತನ್ಯಾಹು ಅವರಂತಹ ನಾಯಕರು ದೀರ್ಘಕಾಲದವರೆಗೆ ನಿರಂತರವಾಗಿ ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ನೆತನ್ಯಾಹು ಇಸ್ರೇಲ್ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.
ಹಮಾಸ್ ದಾಳಿಯ ಕುರಿತು ಸ್ವತಂತ್ರ ತನಿಖೆ: ಹಮಾಸ್ ಸಂಘಟನೆಯು 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಗೆ ಮುನ್ನ, ದೇಶದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಎಲ್ಲಿ ಎಡವಿದವು ಎಂಬುದರ ಕುರಿತು ತನಿಖೆ ನಡೆಸಲು ಸ್ವತಂತ್ರ ಆಯೋಗವನ್ನು ರಚಿಸಲು ಐಸೆನ್ಕೋಟ್ ಮುಂದಾಗಿದ್ದಾರೆ. ಈ ಆಯೋಗದ ಸದಸ್ಯರನ್ನು ಸುಪ್ರೀಂ ಕೋರ್ಟ್ ಆಯ್ಕೆ ಮಾಡಲಿದ್ದು, ಈ ತನಿಖೆಯಲ್ಲಿ ನೆತನ್ಯಾಹು ಸರ್ಕಾರದ ಹೊಣೆಗಾರಿಕೆಯೂ ನಿಗದಿಯಾಗುವ ಸಾಧ್ಯತೆಯಿದೆ.
ನ್ಯಾಯಾಲಯಗಳ ಅಧಿಕಾರ ಹೆಚ್ಚಳ: ನೆತನ್ಯಾಹು ಸರ್ಕಾರವು ನ್ಯಾಯಾಲಯಗಳ ಅಧಿಕಾರವನ್ನು ಮೊಟಕುಗೊಳಿಸುವಂತಹ ಕೆಲವು ಕಾನೂನುಗಳನ್ನು ಜಾರಿಗೆ ತಂದಿತ್ತು. ಐಸೆನ್ಕೋಟ್ ಈ ಕಾನೂನುಗಳನ್ನು ರದ್ದುಗೊಳಿಸಲು ಉದ್ದೇಶಿಸಿದ್ದಾರೆ. ಇದರಿಂದ ನ್ಯಾಯಾಲಯಗಳು ಸರ್ಕಾರದ ನಿರ್ಧಾರಗಳನ್ನು ಹೆಚ್ಚು ಪರಿಶೀಲಿಸಲು ಮತ್ತು ಅವು ತಪ್ಪಾಗಿದ್ದರೆ ತಡೆಯಲು ಸಾಧ್ಯವಾಗುತ್ತದೆ.
ಸಂಸತ್ತಿನ ಸ್ಪೀಕರ್ ಬದಲಾವಣೆ: ಸಂಸತ್ತಿನ ಪ್ರಸ್ತುತ ಸ್ಪೀಕರ್ ಆಗಿರುವ ಒಹಾನಾ ಅವರನ್ನು ಬದಲಾಯಿಸಿ, ಅವರ ಸ್ಥಾನಕ್ಕೆ ಕಹಾನಾ ಅವರನ್ನು ತರಲು ಐಸೆನ್ಕೋಟ್ ಬಣ ಬಯಸಿದೆ. ಒಹಾನಾ ಅವರು ನೆತನ್ಯಾಹು ಅವರ ಬೆಂಬಲಿಗರಾಗಿದ್ದಾರೆ. ಸ್ಪೀಕರ್ ಬದಲಾವಣೆಯಿಂದ ಗಾದಿ ಐಸೆನ್ಕೋಟ್ ಬಣಕ್ಕೆ ಸಂಸತ್ತಿನಲ್ಲಿ ತಮ್ಮ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಸಹಾಯವಾಗಲಿದೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹಜೋರ್ಗ್ ಅವರು ಮುಂದಿನ ಸರ್ಕಾರ ರಚಿಸಲು ಗಾದಿ ಐಸೆನ್ಕೋಟ್ ಅವರನ್ನು ಆಯ್ಕೆ ಮಾಡಿದ್ದಾರೆ. ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಲು ಐಸೆನ್ಕೋಟ್ ಅವರಿಗೆ 6 ವಾರಗಳ ಕಾಲಾವಕಾಶವಿದೆ. ಸರ್ಕಾರ ರಚಿಸಲು 61 ಸಂಸದರ ಬೆಂಬಲದ ಅಗತ್ಯವಿದೆ. ಗಾದಿ ಐಸೆನ್ಕೋಟ್ ಅವರ ಮೈತ್ರಿಕೂಟಕ್ಕೆ 6 ಪಕ್ಷಗಳ 67 ಸಂಸದರು ಬೆಂಬಲ ನೀಡಿದ್ದಾರೆ. ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಬಳಿ ಕೇವಲ 46 ಸಂಸದರ ಬೆಂಬಲವಿದ್ದು, ಇದು ಬಹುಮತದ ಸಂಖ್ಯೆಗಿಂತ ಬಹಳ ದೂರದಲ್ಲಿದೆ. ಈ ಕಾರಣದಿಂದಾಗಿ ಅಧ್ಯಕ್ಷರು ಅವರಿಗೆ ಸರ್ಕಾರ ರಚಿಸಲು ಮೊದಲ ಅವಕಾಶವನ್ನು ನೀಡಿಲ್ಲ. ಅಕ್ಟೋಬರ್ 27ರಂದು ನಡೆದ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ.
ಐಸೆನ್ಕೋಟ್ ಅವರಿಗೆ ಆರು ಪಕ್ಷಗಳ 67 ಸಂಸದರ ಬೆಂಬಲ ದೊರೆತಿದೆ. ಇವುಗಳಲ್ಲಿ ನಾಲ್ಕು ಯಹೂದಿ ಪಕ್ಷಗಳು ಮತ್ತು ಎರಡು ಅರಬ್ ಪಕ್ಷಗಳು ಸೇರಿವೆ. ನಾಲ್ಕು ಯಹೂದಿ ಪಕ್ಷಗಳ ಬಳಿ ಒಟ್ಟು 48 ಸ್ಥಾನಗಳಿದ್ದರೆ, ಎರಡು ಅರಬ್ ಪಕ್ಷಗಳ ಬಳಿ 19 ಸ್ಥಾನಗಳಿವೆ. ದೊಡ್ಡ ಸಮಸ್ಯೆಯೆಂದರೆ, ಈ ಆರು ಪಕ್ಷಗಳ ಪೈಕಿ ಮೂರು ಯಹೂದಿ ಪಕ್ಷಗಳು ಅರಬ್ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಸಿದ್ಧವಿಲ್ಲ. "ಅರಬ್ ಪಕ್ಷಗಳನ್ನು ಸರ್ಕಾರದಲ್ಲಿ ಸೇರಿಸಿಕೊಳ್ಳುವುದಿಲ್ಲ" ಎಂದು ಐಸೆನ್ಕೋಟ್ ಕೂಡ ಚುನಾವಣೆಗೂ ಮುನ್ನ ಹೇಳಿದ್ದರು. ಮತ್ತೊಂದೆಡೆ, ನೆತನ್ಯಾಹು ಅವರನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಅರಬ್ ಪಕ್ಷಗಳು ಐಸೆನ್ಕೋಟ್ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿವೆ. ಆದರೆ, ಈ ಬೆಂಬಲಕ್ಕೆ ಪ್ರತಿಯಾಗಿ ಅರಬ್ ಪಕ್ಷಗಳು ವಸತಿ ಮತ್ತು ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆ ತರುವಂತೆ ಕೆಲವು ಶರತ್ತುಗಳನ್ನು ವಿಧಿಸಿವೆ.
ಒಂದು ವೇಳೆ ಐಸೆನ್ಕೋಟ್ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ನೆತನ್ಯಾಹು ಅವರಿಗೆ ಮತ್ತೊಂದು ಅವಕಾಶ ಸಿಗಲಿದೆ. ಅವರು ಕೂಡ ವಿಫಲರಾದರೆ, ಹೊಸ ಚುನಾವಣೆಗೆ ಹೋಗುವ ಮುನ್ನ ಸಂಸತ್ತಿನ ಯಾವುದೇ ಸದಸ್ಯರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ದೊರೆಯಬಹುದು. ಇದಕ್ಕಾಗಿ ಅವರು 61 ಸಂಸದರ ಬೆಂಬಲವನ್ನು ಕ್ರೋಢೀಕರಿಸಬೇಕಾಗುತ್ತದೆ.
ಕಾಮಿನಿಟ್ಜ್ ಕಾನೂನು ರದ್ದತಿಗೆ ಬೇಡಿಕೆ: ಅರಬ್ ಪಕ್ಷಗಳು ಪ್ರಮುಖವಾಗಿ ಕಾಮಿನಿಟ್ಜ್ ಕಾನೂನನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿವೆ. ಈ ಕಾನೂನಿನ ಅಡಿಯಲ್ಲಿ, ಸರ್ಕಾರದ ಅನುಮತಿಯಿಲ್ಲದೆ ನಿರ್ಮಿಸಲಾದ ಮನೆಗಳಿಗೆ ದಂಡ ವಿಧಿಸಬಹುದು ಮತ್ತು ಅವುಗಳನ್ನು ನೆಲಸಮಗೊಳಿಸಲು ಆದೇಶಿಸಬಹುದು. ಅರಬ್ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಸರ್ಕಾರದ ಅನುಮತಿ ಸುಲಭವಾಗಿ ಸಿಗುವುದಿಲ್ಲವಾದ್ದರಿಂದ, ಜನರು ಅನಿವಾರ್ಯವಾಗಿ ಅನುಮತಿಯಿಲ್ಲದೆ ಮನೆಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ ಮತ್ತು ನಂತರ ಇದೇ ಕಾನೂನಿನ ಅಡಿಯಲ್ಲಿ ಅವರ ಮನೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಅರಬ್ ಪಕ್ಷಗಳ ವಾದವಾಗಿದೆ.
ಗಾದಿ ಐಸೆನ್ಕೋಟ್ ಅವರ ಸರ್ಕಾರ ರಚನೆಯ ಪ್ರಯತ್ನಗಳನ್ನು ನೆತನ್ಯಾಹು ಬೆಂಬಲಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಜೆರುಸಲೆಮ್ನ ಸಂಸತ್ತಿನ ಹೊರಗೆ ನೆತನ್ಯಾಹು ಬೆಂಬಲಿಗರು ಮತ್ತು ಬಲಪಂಥೀಯ ಸಂಘಟನೆಗಳ ನೂರಾರು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅರಬ್ ಪಕ್ಷಗಳ ಬೆಂಬಲದೊಂದಿಗೆ ಗಾದಿ ಸರ್ಕಾರ ರಚಿಸಲು ಮುಂದಾಗಿರುವುದಕ್ಕೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಸರ್ಕಾರ ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಅಂತರ್ಯುದ್ಧ ಭುಗಿಲೇಳಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಲಪಂಥೀಯ ಸಂಘಟನೆಯಾದ "ಇಮ್ ತಿತ್ಜುರ್' ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ, "ನಮಗೆ ಯಹೂದಿ ರಾಷ್ಟ್ರ ಬೇಕು ಮತ್ತು ಭಯೋತ್ಪಾದಕರೊಂದಿಗೆ ಸೇರಿ ಸರ್ಕಾರ ರಚಿಸಬೇಡಿ' ಎಂಬ ಘೋಷಣೆಗಳನ್ನು ಕೂಗಲಾಯಿತು. ಅಲ್ಲದೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮರುಮತದಾನ ನಡೆಸಬೇಕೆಂದೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅರಬ್ ಪಕ್ಷಗಳ 19 ಸ್ಥಾನಗಳು ಐಸೆನ್ಕೋಟ್ ಅವರಿಗೆ ಸಂಸತ್ತಿನಲ್ಲಿ ಬಲವಾದ ಬಹುಮತವನ್ನು ತಂದುಕೊಡಬಲ್ಲವು. ಆದರೆ, ಅವುಗಳನ್ನು ಸರ್ಕಾರದಲ್ಲಿ ಸೇರಿಸಿಕೊಂಡರೆ ಇತರ ಮಿತ್ರಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳಲಿದೆ.
ತಾನು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು "ಜಾಯಿಂಟ್ ಲಿಸ್ಟ್' ಪಕ್ಷ ಸ್ಪಷ್ಟಪಡಿಸಿದೆ. ಆದಾಗ್ಯೂ, ಅದು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದು. ಇದರಿಂದ ಕಡಿಮೆ ಸ್ಥಾನಗಳನ್ನು ಹೊಂದಿರುವ ಸರ್ಕಾರವೂ ನಡೆಯಲು ಸಾಧ್ಯವಾಗುತ್ತದೆ.
ಮತ್ತೊಂದು ಅರಬ್ ಪಕ್ಷವಾದ "ಯುನೈಟೆಡ್ ಅರಬ್ ಲಿಸ್ಟ್' ಸರ್ಕಾರದಲ್ಲಿ ಸೇರುವುದನ್ನು ಇನ್ನೂ ನಿರಾಕರಿಸಿಲ್ಲ. ಆದರೆ, ಸರ್ಕಾರದಲ್ಲಿ ಭಾಗಿಯಾಗುವ ಪ್ರತಿಯೊಂದು ಪಕ್ಷವೂ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಎಂಬುದು ಐಸೆನ್ಕೋಟ್ ಅವರ ಶರತ್ತಾಗಿದೆ. "ಯುನೈಟೆಡ್ ಅರಬ್ ಲಿಸ್ಟ್' ಪಕ್ಷದ ನಾಯಕ ಮನ್ಸೂರ್ ಅಬ್ಬಾಸ್ ಹಾಗೆ ಮಾಡಲು ನಿರಾಕರಿಸಿದ್ದಾರೆ.
ಒಂದು ವೇಳೆ ಮನ್ಸೂರ್ ಅಬ್ಬಾಸ್ ಅವರು ಐಸೆನ್ಕೋಟ್ ಅವರ ಶರತ್ತನ್ನು ಒಪ್ಪಿಕೊಂಡರೂ, ಸರ್ಕಾರ ರಚಿಸುವ ಹಾದಿ ಸುಲಭವಲ್ಲ. "ಇಸ್ರೇಲ್ ಬೇತೇನು' ಪಕ್ಷದ ನಾಯಕ ಅವಿಗ್ಡೋರ್ ಲಿಬರ್ಮ್ಯಾನ್ ಅವರು ಅರಬ್ ಪಕ್ಷಗಳಿರುವ ಯಾವುದೇ ಸರ್ಕಾರದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಅಂತಹ ಸರ್ಕಾರಕ್ಕೆ ಹೊರಗಿನಿಂದಲೂ ಬೆಂಬಲ ನೀಡಲು ಅವರು ಒಲವು ಹೊಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಐಸೆನ್ಕೋಟ್ ಅವರ ಮುಂದೆ ಯಹೂದಿ ಪಕ್ಷಗಳ ಬೆಂಬಲ ಪಡೆಯುವ ಮಾರ್ಗ ಮಾತ್ರ ಉಳಿದಿದೆ.