- ಅಮೆರಿಕಕ್ಕೆ ತೆರಳಬೇಕಿದ್ದ ವಿಮಾನಗಳು ದಿಢೀರ್ ರದ್ದು
- ಪ್ರಯಾಣಿಕರಿಗೆ ಮಾಹಿತಿ ತಲುಪಿಸಿದ ಏರ್ ಇಂಡಿಯಾ
- ಜ.25,26 ನ್ಯೂಯಾರ್ಕ್, ನ್ಯೂಜೆರ್ಸಿಗೆ ವಿಮಾನಗಳು ಹಾರಾಡುವುದಿಲ್ಲ ಎಂದು ಸ್ಪಷ್ಟನೆ
ನವದೆಹಲಿ: ಅಮೆರಿಕಕ್ಕೆ ಹೊರಡಬೇಕಿದ್ದ ಎಲ್ಲ ವಿಮಾನಗಳನ್ನು ಏರ್ ಇಂಡಿಯಾ ದಿಢೀರ್ ರದ್ದುಗೊಳಿಸಿದೆ. ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿರುವ ಸಂಸ್ಥೆ, ಅಮೆರಿಕಕ್ಕೆ ಅಪ್ಪಳಿಸಬಹುದಾದ ಚಳಿಗಾಲದ ಚಂಡಮಾರುತದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.
ಜ.25 ಮತ್ತು 26ರಂದು ಎರಡು ದಿನಗಳವರೆಗೆ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸುತ್ತಿರುವುದಾಗಿ ಏರ್ ಇಂಡಿಯಾ ಅಧಿಕೃತವಾಗಿ ಘೋಷಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಭಾನುವಾರ (ಜ.25 ಬೆಳಗ್ಗೆಯಿಂದ ಸೋಮವಾರದವರೆಗೆ ಅಮೆರಿಕದ ಪೂರ್ವ ಕರಾವಳಿಯಲ್ಲಿ ಭಾರೀ ಹಿಮಪಾತ, ಮಳೆ ಮತ್ತು ತೀವ್ರ ಶೀತ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ರಾಷ್ಟ್ರೀಯ ಹವಾಮಾನ ಸೇವೆ (NWS) ಮುನ್ಸೂಚನೆ ನೀಡಿದೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಈ ಚಂಡಮಾರುತದ ಹೊಡೆತಕ್ಕೆ ಸಿಲುಕಬಹುದು ಎಂದು ತಿಳಿಸಲಾಗಿದೆ,(ಏಜೆನ್ಸೀಸ್).