Missile attack: ಜಿಹಾದಿ ಬಂಡುಕೋರರನ್ನು ಗುರಿಯಾಗಿಸಿ ನೈಜೇರಿಯಾದ ವಾಯುಪಡೆ ನಡೆಸಿದ ಕ್ಷಿಪಣಿ ದಾಳಿ ತಪ್ಪಾಗಿ ಈಶಾನ್ಯ ನೈಜೀರಿಯಾದ ಸ್ಥಳೀಯ ಮಾರುಕಟ್ಟೆ ಮೇಲೆ ಬಿದ್ದ ಪರಿಣಾಮ ಮಕ್ಕಳು ಸೇರಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಸೋಮವಾರ(ಏ. 13) ವರದಿಯಾಗಿದೆ.
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಪ್ರಕಾರ, ಬೊರ್ನೊ ರಾಜ್ಯದ ಗಡಿಯ ಸಮೀಪವಿರುವ ಯೋಬೆ ರಾಜ್ಯದ ಹಳ್ಳಿಯ ಮೇಲೆ ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮತ್ತು ಈ ಗ್ರಾಮವು ದಶಕಕ್ಕೂ ಹೆಚ್ಚು ಕಾಲ ಈ ಪ್ರದೇಶವನ್ನು ಧ್ವಂಸಗೊಳಿಸಿರುವ ಜಿಹಾದಿ ದಂಗೆಯ ಕೇಂದ್ರಬಿಂದುವಾಗಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ನೈಜೀರಿಯಾ ನಿರ್ದೇಶಕಿ ಇಸಾ ಸನುಸಿ, ನಮ್ಮಲ್ಲಿ ಅವರ ಚಿತ್ರಗಳಿವೆ ಮತ್ತು ಅವುಗಳಲ್ಲಿ ಮಕ್ಕಳೂ ಸೇರಿದ್ದಾರೆ. ಅಲ್ಲಿರುವ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ ನೋಡಿಕೊಂಡಿರುವ ವ್ಯಕ್ತಿ ಮತ್ತು ಗಾಯಾಳುಗಳ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ಎಪಿ ವರದಿ ಪ್ರಕಾರ, ನೈಜೀರಿಯಾದಲ್ಲಿ ಇಂತಹ ಮಿಸ್‌ಫೈರ್‌ಗಳು ಸಾಮಾನ್ಯ, ಅಲ್ಲಿ ಸೈನ್ಯವು ವಿಶಾಲವಾದ ಅರಣ್ಯ ಪ್ರದೇಶಗಳನ್ನು ನಿಯಂತ್ರಿಸುವ ಸಶಸ್ತ್ರ ಗುಂಪುಗಳ ವಿರುದ್ಧ ವಾಯುದಾಳಿಗಳನ್ನು ನಡೆಸುತ್ತದೆ . 2017ರಿಂದ ಕನಿಷ್ಠ 500 ನಾಗರಿಕರು ಇಂತಹ ಮಿಸ್‌ಫೈರ್‌ಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಬೊರ್ನೊ-ಯೋಬೆ ಗಡಿಯ ಬಳಿ ಇರುವ ದೊಡ್ಡ, ದೂರದ ಮಾರುಕಟ್ಟೆಯನ್ನು ಬೊಕೊ ಹರಾಮ್ ಜಿಹಾದಿಗಳು ಆಹಾರ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಾಗಿ ಬಳಸುತ್ತಾರೆ ಎಂದು ತಿಳಿದುಬಂದಿದೆ (ಏಜೆನ್ಸೀಸ್).