ಕೆಂಪು ಸಮುದ್ರದ ಬಿಕ್ಕಟ್ಟು ಮತ್ತು ಹೌತಿ ಡ್ರೋನ್ ದಾಳಿಗಳು ಜಾಗತಿಕ ತೈಲ ಮಾರುಕಟ್ಟೆಗೆ ಬೆದರಿಕೆ  
ವಿದೇಶ

ಹೊರ್ಮುಜ್ ಬಳಿಕ ಕೆಂಪು ಸಮುದ್ರದ ಸರದಿ? ಮೆಕ್ಕಾ ಮೇಲೆ ಹೌತಿ ಡ್ರೋನ್ ದಾಳಿ, ತೈಲ ಮಾರುಕಟ್ಟೆಗೆ ಹೊಸ ಸಂಕಷ್ಟ! Oil Price Hike

ನವದೆಹಲಿ: ಕಳೆದೆ ಏಳು ತಿಂಗಳಿನಿಂದ ಇರಾನ್​ ಮತ್ತು ಅಮೆರಿಕ ನಡುವೆ ಸಂಘರ್ಷ ನಡೆಯುತ್ತಿದೆ. ಈ ಯುದ್ಧದಿಂದಾಗಿ ಹೊರ್ಮುಜ್​ ಜಲಸಂಧಿ ಬಂದ್​ಆಗಿದ್ದ ಕಾರಣ ಜಾಗತಿಕ ತೈಲ ಮಾರುಕಟ್ಟೆ (Oil Price Hike) ಯಲ್ಲಿ ಭಾರಿ ತಲ್ಲಣ ಉಂಟಾಗಿತ್ತು. ನಂತರ ಅಮೆರಿಕೆ ಹಾಗೂ ಇರಾನ್​ ನಡುವೆ ಶಾಂತಿ, ಒಪ್ಪಂದ ಮಾತುಕತೆ ಹೆಸರಿನಲ್ಲಿ ಕೆಲಕಾಲ ಹೊರ್ಮುಜ್​ನಲ್ಲಿ ವಾತಾವರಣ ತಿಳಿಯಾಗಿತ್ತು.
ಆದರೆ, ಈಗ ಯೆಮನ್​ ದೇಶದ ಹೌತಿ ಬಂಡುಕೋರರು, ಇಸ್ಲಾಂನ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದ ಮೇಲೆ ಡ್ರೋನ್ ದಾಳಿ ನಡೆಸಿರುವುದು, ಕೇವಲ ಅರಬ್​ ಮಾತ್ರವಲ್ಲದೇ, ಸಂಪೂರ್ಣ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ಮೆಕ್ಕಾದಲ್ಲಿ ಮೊದಲ ಬಾರಿಗೆ ಸೈರನ್​!

ಮೆಕ್ಕಾದಲ್ಲಿರುವ ಮಸೀದಿ ಜಗತ್ತಿನಲ್ಲಿರುವ ಪ್ರತಿ ಮುಸಲ್ಮಾನರಿಗೂ ಪವಿತ್ರವಾಗಿದ್ದು, ದಿನದ ಐದು ನಮಾಜ್​ ಅನ್ನು ಈ ಮಸೀದಿಯಿರುವ ದಿಕ್ಕಿಗೆ ಮುಖಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈಗ ಈ ಮಸೀದಿ ಮೇಲೆ ನಡೆದಿರುವ ದಾಳಿ ಇಸ್ಲಾಂ ಮೇಲೆ ನಡೆದಿರುವ ದಾಳಿ ಎಂದೇ ಭಾವಿಸಲಾಗುತ್ತಿದೆ.
ಆದರೆ, ಈ ದಾಳಿಯನ್ನು ಕೂಡ ಇಸ್ಲಾಂ ಧರ್ಮ ಪರಿಪಾಲಕರೇ ಮಾಡಿರುವ ಕಾರಣ ಸೌದಿ ಆಡಳಿತ ಈ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಲಿದೆ ಎಂದು ಕಾದು ನೋಡಬೇಕಿದೆ. ಅಂತೆಯೇ ಸೌದಿ ವಾಯು ಪ್ರದೇಶಕ್ಕೆ ಪ್ರವೇಶ ಪಡೆದಿದ್ದ, ಹೌತಿ ಡ್ರೋನ್​ವೊಂದನ್ನು ಸೌದಿ ಮಿಲಿಟರಿ ಹೊಡೆದುರಳಿಸಿದ್ದು, ಮೆಕ್ಕಾದಲ್ಲಿ ಇದೇ ಮೊದಲ ಬಾರಿಗೆ ತುರ್ತು ಎಚ್ಚರಿಕೆ ಸೈರನ್​ ಅನ್ನು ಮೊಳಗಿಸಲಾಗಿದೆ.

ಹೊರ್ಮುಜ್​ ಆಯ್ತು; ಈಗ ಕೆಂಪು ಸಮುದ್ರ!

ಇರಾನ್​ ಮತ್ತು ಅಮೆರಿಕ ಸಂಘರ್ಷದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಪಟ್ಟ ಸ್ಥಳ ಎಂದರೆ ಅದು ಹೊರ್ಮುಜ್​ ಜಲಸಂಧಿ. ಈ ಮಾರ್ಗದಲ್ಲಿ ಜಗತ್ತಿನ ತೈಲ ಹಾಗೂ ಆಹಾರ ಪದಾರ್ಥಗಳು ಸರಬರಾಜಾಗುತ್ತಿದ್ದು, ಯುದ್ಧದಿಂದಾಗಿ ಇಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು.
ಈಗ, ತೈಲ ಉತ್ಪಾದಕ ದೇಶಗಳಾಗಿರುವ ಅರಬ್​ ದೇಶಗಳಲ್ಲೇ ಸಂಘರ್ಷ ಆರಂಭವಾಗಿರುವ ಹಿನ್ನಲೆ, ಈಗ ಕೆಂಪು ಸಮುದ್ರದ ಜಲಮಾರ್ಗ ಕೂಡ ಬಂದ್​ ಆಗುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಕೆಂಪು ಸಮುದ್ರವು ಏಷ್ಯಾ ಹಾಗೂ ಆಫ್ರಿಕಾ ಖಂಡಗಳ ನಡುವೆ ಇರುವ ಪ್ರಮುಖ ಜಲಮಾರ್ಗವಾಗಿದ್ದು, ಅರಬ್​ ದೇಶಗಳಿಂದ ರಫ್ತಾಗುವ ಶೇ. 60 ರಷ್ಟು ವಸ್ತುಗಳು ಈ ಮಾರ್ಗದ ಮೂಲಕವೇ ಸಾಗುತ್ತದೆ.
ಅಂತೆಯೇ ಪ್ರಸಿದ್ಧ ಸೂಯೇಜ್​ ಕಾಲುವೆ ಕೂಡ ಇದೇ ಕೆಂಪು ಸಮುದ್ರದಲ್ಲಿದ್ದು, ಈ ಸಮುದ್ರ ಸೌದಿ ಅರೇಬಿಯಾದ ಗಡಿಯಲ್ಲಿದ್ದು ಹೌತಿಗಳೊಂದಿಗಿನ ಯುದ್ಧ ತೀವ್ರವಾದರೆ ಈ ಸಮುದ್ರದಲ್ಲಿ ಹಡಗುಗಳ ಓಡಾಟಕ್ಕೆ ಕುತ್ತುಬರಲಿದೆ ಎಂದು ಹೇಳಲಾಗುತ್ತಿದೆ.

ತೈಲ ಮಾರುಕಟ್ಟೆ ತತ್ತರ!

ಇನ್ನೂ ತೈಲ ಮಾರುಕಟ್ಟೆಯ ಪ್ರಮುಖ ಕೊಂಡಿಯಾಗಿರುವ ಅರಬ್​ ದೇಶದಲ್ಲಿ ಯುದ್ಧ ಕಾರ್ಮೋಡ ಕವಿದಿರುವುದು ತೈಲ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಯವನ್ನು ಉಂಟುಮಾಡಲಿದೆ ಎಂದು ನಂಬಲಾಗಿದೆ.
ಇರಾನ್​ ಸಂಘರ್ಷಕ್ಕೂ ಪೂರ್ವದಲ್ಲಿ ಬ್ಯಾರೆಲ್​ ಕಚ್ಚಾ ತೈಲ ಬೆಲೆ 80-90 ಡಾಲರ್​ ಇತ್ತು. ಯುದ್ಧ ತಾರಕ್ಕಕೇ ತಲುಪಿ ಹೊರ್ಮುಜ್​ ಜಲಸಂಧಿ ಬಂದ್​ ಆದಾಗ ಬ್ಯಾರೆಲ್​ ತೈಲದ ಬೆಲೆ 150 ಡಾಲರ್​ ಗಡಿ ದಾಟಿತ್ತು. ಪ್ರಸ್ತುತ ಬ್ಯಾರೆಲ್​ ಕಚ್ಚಾ ತೈಲದ ಬೆಲೆ 105-110 ಡಾಲರ್​ ಇದೆ. ಆದರೆ ಈಗ ಸೌದಿಯಲ್ಲಿ ಸಂಘರ್ಷ ಆರಂಭವಾಗಿದ್ದು, ಈ ಬೆಲೆ ದಿನಕಳೆದಂತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಕಚ್ಚಾ ತೈಲ ಬೆಲೆ ಏರಿಕೆಯಾದರೆ ಸಹಜವಾಗಿ ಪೆಟ್ರೋಲ್​, ಡೀಸೆಲ್​ ಬೆಲೆ ಕೂಡ ಹೆಚ್ಚಳವಾಗಲಿದ್ದು, ಇದರ ಬಿಸಿಯನ್ನು ಭಾರತ ಸೇರಿದಂತೆ ಪೆಟ್ರೋಲ್​ ಅನ್ನು ಆಮದು ಮಾಡಿಕೊಳ್ಳುವ ದೇಶಗಳು ಮೊದಲು ಅನುಭವಿಸಲಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ, (ಏಜೆನ್ಸೀಸ್​).