ಪಾಕಿಸ್ತಾನಿ ಪ್ರಮುಖ ವಾಯುನೆಲೆ ಮೇಲೆ ತಾಲಿಬಾನ್ ಅಟ್ಯಾಕ್
- ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ತಾಲಿಬಾನ್ ಡ್ರೋನ್ ಅಟ್ಯಾಕ್
- ನೂರ್ ಖಾನ್ ವಾಯುನೆಲೆ, ಕ್ವೆಟ್ಟಾದಲ್ಲಿರುವ 12ನೇ ಕಾರ್ಪ್ಸ್ ಪ್ರಧಾನ ಕಚೇರಿ ಗುರಿ
- ಇನ್ನೊಮ್ಮೆ ಈ ರೀತಿ ಆದರೆ ಖಂಡಿತ ಬಿಡೋದಿಲ್ಲ ಎಂದು ಎಚ್ಚರಿಸಿದ ತಾಲಿಬಾನ್ ಸರ್ಕಾರ
ಕರಾಚಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ, ಕ್ವೆಟ್ಟಾದಲ್ಲಿರುವ 12ನೇ ಕಾರ್ಪ್ಸ್ ಪ್ರಧಾನ ಕಚೇರಿ, ಖೈಬರ್ ಪಖ್ತುಂಖ್ವಾದ ಮೊಹಮ್ಮದ್ ಏಜೆನ್ಸಿಯಲ್ಲಿರುವ ಖೋವಿಜೂ ಕ್ಯಾಂಪ್ ಮತ್ತು ಗುಲ್ನಿ ಸೇನಾ ನೆಲೆಗಳು ಸೇರಿದಂತೆ ಪಾಕಿಸ್ತಾನದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಇದೀಗ ಅಫ್ಘಾನ್ ವಾಯುಪಡೆಯ ಡ್ರೋನ್ ಮೂಲಕ ದಾಳಿ ನಡೆಸಿದೆ. ಇವೆಲ್ಲವೂ ಪಾಕಿಸ್ತಾನದ ಪ್ರಮುಖ ರಕ್ಷಣಾ ಸೌಲಭ್ಯ ಮತ್ತು ಕಾರ್ಯಾಚರಣೆ ಕೇಂದ್ರಗಳೆಂದು ಪರಿಗಣಿಸಲಾಗಿವೆ.
ಪಾಕಿಸ್ತಾನ ಸೇನೆಯ ಇತ್ತೀಚಿನ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಎಕ್ಸ್ (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಿಳಿಸಿದೆ. "ಇಂದು, ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಏರ್ಫೋರ್ಸ್ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ, ಕ್ವೆಟ್ಟಾ (ಬಲೂಚಿಸ್ತಾನ್) ನಲ್ಲಿರುವ 12ನೇ ವಿಭಾಗದ ಪ್ರಧಾನ ಕಚೇರಿ, ಖೈಬರ್ ಪಖ್ತುಂಖ್ವಾದ ಮೊಹಮ್ಮದ್ ಏಜೆನ್ಸಿಯಲ್ಲಿರುವ ಖ್ವಾಜೈ ಕ್ಯಾಂಪ್ ಮತ್ತು ಹಲವಾರು ಇತರ ಮಹತ್ವದ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳು ಮತ್ತು ಕಮಾಂಡ್ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪಾಕಿಸ್ತಾನದ ಪ್ರಮುಖ ಮಿಲಿಟರಿ ಕಟ್ಟಡಗಳ ಮೇಲೆ ನಡೆಸಿದ ಡ್ರೋನ್ ದಾಳಿಗಳು ಯಶಸ್ವಿಯಾಗಿವೆ. ನಮ್ಮ ದಾಳಿಗಳು ಉದ್ದೇಶಿತ ಸ್ಥಳಗಳ ಮೇಲೆ ದೊಡ್ಡ ಮಟ್ಟಿಗಿನ ಡ್ಯಾಮೇಜ್ ಮಾಡಿವೆ. ಕಾಬೂಲ್, ಬಾಗ್ರಾಮ್ ಮತ್ತು ಇತರ ಹಲವಾರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು, ರಾತ್ರೋ ರಾತ್ರಿ ದಾಳಿ ಮಾಡಿದ ಪಾಕಿಸ್ತಾನಕ್ಕೆ ಈ ಬಿಸಿ ತಟ್ಟಿದೆ ಎಂದು ಆಫ್ಘಾನ್ ತಿಳಿಸಿದೆ.
ಪಾಕ್ ಸೇನೆಯ ಇತ್ತೀಚಿನ ವೈಮಾನಿಕ ದಾಳಿಗೆ ಇದು ನಮ್ಮ ತಿರುಗೇಟು ಎಂದ ತಾಲಿಬಾನ್, ನಮ್ಮ ವಾಯುಪ್ರದೇಶದ ಯಾವುದೇ ನೆಲೆ ಮೇಲೆ ಅಟ್ಯಾಕ್ ಮಾಡೋದು ಅಥವಾ ಪಾಕಿಸ್ತಾನಿ ಸೇನೆಯಿಂದ ಆಕ್ರಮಣಕಾರಿ ದಾಳಿಗಳು ಸಂಭವಿಸಿದರೆ, ಇದಕ್ಕಿಂತ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ,(ಏಜೆನ್ಸೀಸ್).