ಸಾಂದರ್ಭಿಕ ಚಿತ್ರ  
ವಿದೇಶ

ಚಂದ್ರನಿಗೆ ಅಪ್ಪಳಿಸಲಿದೆ ಮಸ್ಕ್​ ಸ್ಪೇಸ್​ಎಕ್ಸ್​ ರಾಕೆಟ್! ಇಲ್ಲಿಂದ ಶುರು ಭೂಮಿಗೆ ಅಸಲಿ ಸಮಸ್ಯೆ? ವಿಜ್ಞಾನಿಗಳು ಹೇಳುವುದೇನು? SpaceX Rocket

ಪ್ರಮುಖ ಮುಖ್ಯಾಂಶಗಳು

  • ಚಂದಿರಕ್ಕೆ​ ಅಪ್ಪಳಿಸಲಿದೆ ಸ್ಪೇಸ್‌ಎಕ್ಸ್ ರಾಕೆಟ್ ಅವಶೇಷ?
  • ಭೂಮಿಗೆ ಕಾದಿದೆಯೇ ಭಾರಿ ಅಪಾಯ?
  • ಈ ಬಗ್ಗೆ ವಿಜ್ಞಾನಿಗಳ ಅಭಿಪ್ರಾಯ ಹೀಗಿದೆ
SpaceX Rocket: ವಿಶ್ವದ ಬಿಲಿಯನೇರ್ ಉದ್ಯಮಿ ಎಲಾನ್​ ಮಸ್ಕ್ ಒಡೆತನದ ಅಮೆರಿಕದ ಹೆಸರಾಂತ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್ ಕಳೆದ ವರ್ಷ ಚಂದ್ರನ ಮೇಲೆ ಫಾಲ್ಕನ್​ 9 ರಾಕೆಟ್ ಉಡಾವಣೆ ಮಾಡಿತು. ಚಂದಿರನ ಮೇಲೆ ಎರಡು ಲ್ಯಾಂಡರ್‌ಗಳನ್ನು ಕಳುಹಿಸುವ ಯೋಜನೆ ಯಶಸ್ವಿಗೊಳಿಸಿದ ಬಳಿಕ ಇದೀಗ ಭೂಮಿಗೆ ಹೊಸ ಕಂಟಕ ಎದುರಾಗಿದೆ ಎಂಬ ವರದಿಗಳು ಸದ್ಯ ವಿಜ್ಞಾನಿಗಳ ಲೋಕಕ್ಕೆ ದೊಡ್ಡ ಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ಚಂದ್ರನ ಗುರುತ್ವಾಕರ್ಷಣೆಯ ಬಲ

ಈ ರಾಕೆಟ್​ಗೆ ಬಳಸಿದ ಭಾಗಗಳಲ್ಲಿ ಒಂದು ಇನ್ನೂ ಸ್ವಲ್ಪ ದೂರದಲ್ಲಿ ಸುತ್ತುತ್ತಿದೆ ಎನ್ನಲಾಗಿದೆ. ಅಸ್ಥಿರ ಕಕ್ಷೆಯಲ್ಲಿ ಬಿಟ್ಟ ಕಾರಣ, ಅದು ಚಂದ್ರನ ಕಡೆಗೆ ಮುಖಮಾಡಿದ್ದು, ಆಗಸ್ಟ್ 5ರಂದು ಅತಿ ವೇಗದಲ್ಲಿ ಚಂದ್ರನಿಗೆ ಅಪ್ಪಳಿಸುವ ಭೀತಿ ಎದುರಾಗಿದೆ. ಭೂಮಿಗೆ ಮರಳಲು ರಾಕೆಟ್‌ನಲ್ಲಿ ಸಾಕಷ್ಟು ಇಂಧನವಿಲ್ಲದ ಹಿನ್ನಲೆ ಜೊತೆಗೆ ಚಂದ್ರನ ಗುರುತ್ವಾಕರ್ಷಣೆಯ ಬಲದಿಂದಾಗಿ, ಆಗಸ್ಟ್​ನಲ್ಲಿ ಗಂಟೆಗೆ 8700 ಕಿ.ಮೀ ವೇಗದಲ್ಲಿ ಅಪ್ಪಳಿಸಿ, ಕುಸಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ದೊಡ್ಡ ಎಚ್ಚರಿಕೆಯ ಘಂಟೆ

ಈಗಾಗಲೇ ಸೂಚಿಸಿರುವಂತೆ ಏನಾದರೂ ಚಂದ್ರನಿಗೆ ಅಪ್ಪಳಿಸಿದ್ದೇ ಆದರೆ, ಇದರ ಪರಿಣಾಮವು ಸುಮಾರು 60ರಿಂದ 70 ಅಡಿಗಳಷ್ಟು ದೊಡ್ಡ ಕುಳಿಯನ್ನು ರಚಿಸಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಪೇಸ್​ಎಕ್ಸ್​ನ ರಾಕೆಟ್ ಚಂದ್ರನ ಮೇಲೆ ಅಪ್ಪಳಿಸುವುದರಿಂದ ಭೂಮಿಗೆ ಅಥವಾ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ವಿಜ್ಞಾನಿಗಳ ಕಳವಳ

ಕಕ್ಷೆಯಲ್ಲಿರುವ ನಮ್ಮ ಗಗನಯಾತ್ರಿಗಳು ಅಥವಾ ಇತರ ಉಪಗ್ರಹಗಳಿಗೆ ಯಾವುದೇ ಹಾನಿಯೂ ಇಲ್ಲ ಎಂದಿರುವ ವಿಜ್ಞಾನಿಗಳು, ಭವಿಷ್ಯದಲ್ಲಿ ಮೂನ್​ ಮೇಲೆ ಹಲವು ನೆಲೆಗಳನ್ನು ಸ್ಥಾಪಿಸಲು ಮುಂದಾಗಿರುವ ಚಿಂತನೆ ಅಥವಾ ಪ್ರಾಜೆಕ್ಟ್​ಗೆ ಈ ಘಟನೆಯು ದೊಡ್ಡ ಎಚ್ಚರಿಕೆಯ ಘಂಟೆ ಎಂದು ಹೇಳಿದ್ದಾರೆ. ಕೆಲವು ವಿಜ್ಞಾನಿಗಳು ಈ ರಾಕೆಟ್ ತುಣುಕು ಚಂದ್ರನ ಮೇಲೆ ಅಪ್ಪಳಿಸಿದರೆ, ಅದು ಅಲ್ಲಿನ ವೈಜ್ಞಾನಿಕ ಉಪಕರಣಗಳನ್ನು ನಾಶಪಡಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, 1967ರ ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ, ಬಾಹ್ಯಾಕಾಶವು ಪ್ರಪಂಚದ ಸಾಮಾನ್ಯ ಆಸ್ತಿಯಾಗಿದೆ. ಯಾವ ದೇಶಕ್ಕೂ ಅದು ತನ್ನದೆಂದು ಹೇಳಿಕೊಳ್ಳುವ ಅವಕಾಶವಿಲ್ಲ. ಇದು ಚಂದ್ರನನ್ನು ಒಳಗೊಂಡಂತೆ ಸ್ಪೇಸ್​ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಮಾರ್ಗಸೂಚಿಗಳು ಅಥವಾ ನಿಯಮಗಳನ್ನು ಒಳಗೊಂಡಿಲ್ಲ. ಜವಾಬ್ದಾರಿಯು ಆಯಾ ದೇಶಗಳು ಮತ್ತು ಕಂಪನಿಗಳ ಮೇಲಿದೆ ಎಂದು ವಿವರಿಸಲಾಗಿದೆ.
ಒಪ್ಪಂದದ ಪ್ರಕಾರ, ಪ್ರಸ್ತುತ ಚಂದ್ರನ ಮೇಲೆ ಬೀಳುವ ರಾಕೆಟ್ ತುಣುಕುಗಳ ಸಂಪೂರ್ಣ ಹೊಣೆಗಾರಿಕೆಯು ಸ್ಪೇಸ್ ಎಕ್ಸ್ ಕಂಪನಿ ಹಾಗೂ ಅಮೆರಿಕದ ಮೇಲಿದೆ. ಇಲ್ಲಿಂದ ವಿವಾದ ಸ್ಫೋಟಗೊಳ್ಳುತ್ತದೆ ಎಂಬುದು ಮುನ್ಸೂಚನೆ. ಹೀಗಾಗಿಯೇ ಚಂದ್ರನ ಮೇಲೆ ನಡೆಸುವ ಪ್ರಯೋಗಗಳಿಗೆ ಅಂತಾರಾಷ್ಟ್ರೀಯ ರಿಜಿಸ್ಟ್ರಿ ಸಿದ್ಧಪಡಿಸಬೇಕು. ಯಾರಾದರೂ ತಪ್ಪು ಮಾಡಿದರೆ ನೋಟಿಸ್ ಜಾರಿಗೊಳಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಿಗಾ ವಹಿಸಲು ವ್ಯವಸ್ಥೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).