ಖಾರ್ಗ್ ದ್ವೀಪ 
ವಿದೇಶ

ಇರಾನ್​ಗೆ ಕಾದಿದೆ ಕಂಟಕ! ಈ ದ್ವೀಪದ ಮೇಲೆಯೇ ಟ್ರಂಪ್​ ಕಣ್ಣು; ಏನಿದು ಅಮೆರಿಕ ಲೆಕ್ಕಾಚಾರ? | Kharg Island

ಪ್ರಮುಖ ಮುಖ್ಯಾಂಶಗಳು

  • ಖಾರ್ಗ್ ದ್ವೀಪದಲ್ಲಿ ಟ್ರಂಪ್ ಕಾರ್ಯತಂತ್ರ
  • ಟ್ರಂಪ್ ಲೆಕ್ಕಾಚಾರವನ್ನು ತಲೆಕೆಳಗು ಮಾಡಲಿದೆಯೇ ಇರಾನ್?
  • ಶೀಘ್ರವೇ ಯುಎಸ್​ ಮಿಲಿಟರಿ ಖಾರ್ಗ್​ ದ್ವೀಪಕ್ಕೆ ಲಗ್ಗೆ
ವಾಷಿಂಗ್ಟನ್​: ಅದ್ಯಾಕೋ ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ನಡುವಿನ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇಸ್ರೇಲಿ ಪಡೆಯ ದಾಳಿಗೆ ಪ್ರತೀಕಾರವಾಗಿ ಇರಾನ್​ ಸೇಡು ತೀರಿಸಿಕೊಳ್ಳುತ್ತಿದೆ. ಮತ್ತೊಂದೆಡೆ ಡೊನಾಲ್ಡ್ ಟ್ರಂಪ್​ ಮಾತ್ರ ಹಲವು ಆಯಾಮಗಳಲ್ಲಿ ಇಸ್ಲಾಮಿಕ್ ರಾಷ್ಟ್ರವನ್ನು ಕಟ್ಟಿಹಾಕಲು ಕಾರ್ಯತಂತ್ರ ರೂಪಿಸುತ್ತಿರುವುದು ಗಮನಾರ್ಹ. 
ಕಳೆದ ಮೂರು ವಾರಗಳಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕ ತೈಲ ಮತ್ತು ಅನಿಲ ಬಿಕ್ಕಟ್ಟನ್ನು ಉಂಟುಮಾಡಿದೆ. ಇರಾನ್ ಜಲಸಂಧಿಯನ್ನು ನಿರ್ಬಂಧಿಸಿರುವುದು ಇತರೆ ರಾಷ್ಟ್ರಗಳನ್ನು ದೊಡ್ಡ ಸಂಕಷ್ಟಕ್ಕೆ ದೂಡಿದೆ. ಈ ಸಂದರ್ಭದಲ್ಲಿ, ಟ್ರಂಪ್ ತಮ್ಮ ಕಾರ್ಯತಂತ್ರವನ್ನು ಇರಾನ್​ನ ಆರ್ಥಿಕ ಮೂಲವಾಗಿರುವ ಖಾರ್ಗ್ ದ್ವೀಪದ ಕಡೆಗೆ ಬದಲಾಯಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿವೆ. 
ಟ್ರಂಪ್ ಅವರ ಗಮನ ಖಾರ್ಗ್ ದ್ವೀಪದ ಮೇಲಿದೆ ಮತ್ತು ಈಗಿರುವ ಗುರಿ ದ್ವೀಪವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು 'ಆಕ್ಸಿಯಾಸ್' ವೆಬ್‌ಸೈಟ್‌ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ಈಗಾಗಲೇ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿದೆ. ಈಗ, ಅದನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ದೊಡ್ಡ ಪ್ರಮಾಣದ ಯುಎಸ್ ಪಡೆಗಳನ್ನು ಕಳುಹಿಸಲು ಪಣತೊಟ್ಟಿದೆ ಎನ್ನಲಾಗಿದೆ.
ಖಾರ್ಗ್​ ದ್ವೀಪ ಇರಾನ್‌ನಿಂದ 25 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ದ್ವೀಪ. ಇದು ಕೇವಲ ದ್ವೀಪವಲ್ಲ, ಇರಾನ್‌ನ ಆರ್ಥಿಕತೆಯ ಬೆನ್ನೆಲುಬು. ಅಮೆರಿಕ ಏನಾದರೂ ಇದನ್ನು ಮುಟ್ಟಿದರೆ, ತೈಲ ಬಿಕ್ಕಟ್ಟಿನಿಂದಾಗಿ ಇಡೀ ಜಗತ್ತೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಇಲ್ಲಿಂದ ಪ್ರತಿದಿನ 7 ಮಿಲಿಯನ್ ಬ್ಯಾರೆಲ್ ತೈಲವನ್ನು ಲೋಡ್ ಮಾಡಲಾಗುತ್ತೆ. ವಿದೇಶಗಳಲ್ಲಿ ಮಾರಾಟವಾಗುವ 10 ಬ್ಯಾರೆಲ್ ತೈಲದಲ್ಲಿ 9 ಖಾರ್ಗ್​ನಿಂದಲೇ ಹೋಗುತ್ತದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಮೆರಿಕಕ್ಕೆ ಅತ್ಯಂತ ಅಪಾಯಕಾರಿ ಕಾರ್ಯಾಚರಣೆ. ಇದು ಜಾಗತಿಕವಾಗಿ ದೊಡ್ಡ ಪರಿಣಾಮ ಬೀರಲಿದೆ. ಈ ಕಾರ್ಯಾಚರಣೆ ಏನಾದರೂ ಪ್ರಾರಂಭವಾದರೆ, ಇರಾನ್ ನೇರವಾಗಿ ಅಮೆರಿಕದ ಸೈನಿಕರ ಮೇಲೆ ನೇರ ದಾಳಿ ನಡೆಸುವ ಎಲ್ಲ ಸಾಧ್ಯತೆಯಿದೆ. ಶ್ವೇತಭವನ ಮತ್ತು ಪೆಂಟಗನ್ ಪ್ರಸ್ತುತ, ಇರಾನ್‌ಗೆ ಹೆಚ್ಚುವರಿ ಪಡೆಗಳನ್ನು ಕಳುಹಿಸುವ ಬಗ್ಗೆ ಚರ್ಚಿಸುತ್ತಿವೆ ಎಂದು ವರದಿಯಾಗಿದೆ. ಇದು ಯಾವ ಹಂತಕ್ಕೆ ಹೋಗಿ ತಲುಪಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).