ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಹುಸಿ ಆರೋಪಕ್ಕೆ "ಭಯೋತ್ಪಾದಕ ರಾಷ್ಟ್ರದಿಂದ ಈ ಪ್ರಶ್ನೆ" ಎಂದು ದಿಟ್ಟ ತಿರುಗೇಟು ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ 
ವಿದೇಶ

‘ಒಂದು ಭಯೋತ್ಪಾದಕ ರಾಷ್ಟ್ರ ನನ್ನನ್ನೇ ಪ್ರಶ್ನಿಸುತ್ತಿದೆ’… ಪಾಕ್ ಪತ್ರಕರ್ತನ ಪ್ರಶ್ನೆಗೆ ಎಸ್​. ಜೈಶಂಕರ್ ಖಡಕ್ ಆನ್ಸರ್; ವಿಡಿಯೋ ವೈರಲ್! S. Jaishankar

ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಉದ್ರೇಕಕಾರಿ ಪ್ರಶ್ನೆ ಕೇಳಿದ ಪಾಕಿಸ್ತಾನಿ ಪತ್ರಕರ್ತನಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ‘ಒಂದು ಭಯೋತ್ಪಾದಕ ರಾಷ್ಟ್ರ ನನ್ನನ್ನು ಪ್ರಶ್ನಿಸುತ್ತಿದೆ’ ಎಂದು ಖಡಕ್ ತಿರುಗೇಟು ನೀಡಿರುವ ವೈರಲ್ ವಿಡಿಯೋ ವಿವರ ಇಲ್ಲಿ ನೋಡಿ.

ನ್ಯೂಯಾರ್ಕ್: ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪಾಕಿಸ್ತಾನಿ ಪತ್ರಕರ್ತನೊಬ್ಬ ಭಾರತದ ವಿರುದ್ಧ ಮಾಡಿದ ಆರೋಪಕ್ಕೆ, ಭಾರತದ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆ ಈಗ ಜಾಗತಿಕ ರಾಜಕಾರಣದಲ್ಲಿ ಕಾಡ್ಗಿಚ್ಚನೇ ಹೊತ್ತಿಸಿದೆ.

ಪಾಕಿಸ್ತಾನದ ಪತ್ರಕರ್ತನೊಬ್ಬ ವಿದೇಶಾಂಗ ಸಚಿವರಿಗರ ಪ್ರಶ್ನಿಸುತ್ತಿದ್ದಂತೆ ಸಚಿವ ಎಸ್. ಜೈಶಂಕರ್ (S. Jaishankar), "ಒಂದು ಭಯೋತ್ಪಾದಕ ರಾಷ್ಟ್ರ ನನ್ನಲ್ಲಿ ಈ ಪ್ರಶ್ನೆ ಕೇಳುತ್ತಿದೆ" ಎಂದು ದಿಟ್ಟ ತಿರುಗೇಟು ನೀಡುವ ಮೂಲಕ ಪಾಕಿಸ್ತಾನಕ್ಕೆ ಮುಖಭಂಗ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರತೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಕ್​ ಪತ್ರಕರ್ತ ಕೇಳಿದ್ದೇನು?

ವಿಶ್ವಸಂಸ್ಥೆಯಲ್ಲಿ ಹಡಗು ಮತ್ತು ನಾವಿಕರ ಸುರಕ್ಷತೆ ಕುರಿತಂತೆ ಪತ್ರಿಕಾಗೋಷ್ಠಿ ನಡೆಯುತ್ತಿತ್ತು. ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಲೈಬೀರಿಯಾದ ವಿದೇಶಾಂಗ ಸಚಿವೆ ಸಾರಾ ಬೇಸೊಲೊ ನ್ಯಾಂಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎದ್ದುನಿಂತ ಪಾಕಿಸ್ತಾನಿ ಪತ್ರಕರ್ತ, "ನಿಮ್ಮ ಸರ್ಕಾರ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಪ್ರಾಯೋಜಿಸುವುದನ್ನು ಯಾವಾಗ ನಿಲ್ಲಿಸುತ್ತದೆ? ಎಂದು ಪ್ರಶ್ನೆ ಕೇಳಿದ್ದಾನೆ.

ಕೂಡಲೇ ಎಚ್ಚೆತ್ತ ಜೈಶಂಕರ್, "ಒಂದು ಭಯೋತ್ಪಾದಕ ರಾಷ್ಟ್ರ ನನ್ನಲ್ಲಿ ಈ ಪ್ರಶ್ನೆ ಕೇಳುತ್ತಿದೆ" ಎಂದು ತಿರುಗೇಟು ನೀಡುವ ಮೂಲಕ ನೆರೆ ರಾಷ್ಟ್ರದ ಭಯೋತ್ಪಾದಕ ಚಾಳಿಯನ್ನು ಜಗಜ್ಜಾಹೀರು ಮಾಡಿದ್ದಾರೆ. ಬಳಿಕ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಮಾತು ಮುಂದುವರಿಸಿ, ನೀವು ನಿಮ್ಮ ಉತ್ತರವನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೀರಿ ಎಂದು ಪತ್ರಕರ್ತನಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇದಕ್ಕೂ ಮುನ್ನ ದಿನ ಭಾರತೀಯ ಪತ್ರಕರ್ತರೊಬ್ಬರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ವಿಶ್ವಸಂಸ್ಥೆಯ ಕಟ್ಟಡಕ್ಕೆ ಬರುವಾಗ, ನೀವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಯಾವಾಗ ನಿಲ್ಲಿಸುತ್ತೀರಿ? ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಜೈಶಂಕರ್ ಅವರ ಈ ಖಡಕ್ ಉತ್ತರ ಹೊರಬಂದಿರುವುದು ಗಮನಾರ್ಹವಾಗಿದೆ.

ವಿಶ್ವಸಂಸ್ಥೆ ಸುಧಾರಣೆ ಬಗ್ಗೆ ಜೈಶಂಕರ್ ಗರಂ

ಇದೇ ವೇಳೆ ವಿಶ್ವಸಂಸ್ಥೆಯ ಕಾರ್ಯವೈಖರಿ ಮತ್ತು ಸುಧಾರಣೆಗಳ ಬಗ್ಗೆಯೂ ಎಸ್. ಜೈಶಂಕರ್ ಮಾತನಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯನ್ನು ಬದಲಾಯಿಸುವ ಕಾಲ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಸುಧಾರಣೆಗಳ ಪ್ರಗತಿ ಕುಂಠಿತಗೊಂಡಿರುವುದರಿಂದ ಅಂತಾರಾಷ್ಟ್ರೀಯ ಸಮುದಾಯದಲ್ಲಿ ತೀವ್ರ ಹತಾಶೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸುಧಾರಣೆಯನ್ನು ವಿರೋಧಿಸುವ ಶಕ್ತಿಗಳು ವಿಶ್ವಸಂಸ್ಥೆಯನ್ನು ಕೇವಲ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ ಹೊರತು, ಅದರ ನಿಜವಾದ ಅಭಿವೃದ್ಧಿಯ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಜೈಶಂಕರ್ ಕಿಡಿಕಾರಿದ್ದಾರೆ. ವಿಶ್ವಸಂಸ್ಥೆಯಲ್ಲಿ ಯಾವುದೇ ಮಹತ್ವದ ಸುಧಾರಣೆಗಳು ಬರಬೇಕಾದರೆ ಕೇವಲ ಬಾಯಿಮಾತಿನ ಮಾತುಕತೆ ಸಾಲದು, ಅದಕ್ಕೊಂದು ಸ್ಪಷ್ಟ ಪಠ್ಯ ಆಧಾರಿತ ಮಾತುಕತೆ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಸುಧಾರಣೆಯನ್ನು ಯಾರೂ ಏಕಪಕ್ಷೀಯವಾಗಿ ಅಥವಾ ಸರ್ವಾನುಮತದಿಂದ ತರಲುಸಾಧ್ಯವಿಲ್ಲ. ಹಾಗಾಗಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಮತದಾನದ ಮೂಲಕವೇ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ, (ಏಜೆನ್ಸೀಸ್​).