Nepal Flood: ಮತ್ತೇ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಿದ್ದು, ಬೃಹತ್ ಕಟ್ಟಡಗಳು ಮತ್ತು ಮನೆಗಳು ಕೊಚ್ಚಿ ಹೋದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಈ ಘಟನೆ ನೋಡಿದಾಗ, ಊರೇ ನಾಶವಾದ್ರೂ ಅಲುಗಾಡದೆ ಜಲಪ್ರಳಯಕ್ಕೆ ಸವಾಲಾಗಿ ನಿಂತ ಹಸಿರು ಬಣ್ಣದ ಮನೆಯೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಈ ಮೊದಲು ಸಂಭವಿಸಿದ ಹಠಾತ್ ಜಲಪ್ರಳಯದಲ್ಲಿ ನೂರಾರು ಮಂದಿ ದುರಂತ ಅಂತ್ಯ ಕಂಡಿದ್ದು, 2,600ಕ್ಕೂ ಅಧಿಕ ಜನರು ಕಣ್ಮರೆಯಾದರು. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರ ಜೀವ ಮತ್ತು ಬದುಕುವ ಭರವಸೆಯನ್ನು ಕಸಿದುಕೊಂಡಿದ್ದು ನಿಜಕ್ಕೂ ಘೋರ ದುರಂತ. ಇದರ ಹೊಡೆತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ನೇಪಾಳಕ್ಕೆ ಮತ್ತದೇ ಪ್ರವಾಹ, ಭೂಕುಸಿತ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ.
ವೈರಲ್ ಆಗಿರುವ ಇತ್ತೀಚಿನ ಪ್ರವಾಹದ ದೃಶ್ಯವೊಂದರಲ್ಲಿ ಕೆಂಪು ಬಣ್ಣದ ಮನೆಯೊಂದು ರಭಸವಾಗಿ ಹರಿಯುತ್ತಿದ್ದ ನದಿಗೆ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದೆ. ಇದನ್ನು ಅಲ್ಲೇ ಇದ್ದ ನೇಪಾಳಿಗರು ಕಣ್ಣಾರೆ ನೋಡಿದ್ದು, ಸಾವು ಕಣ್ಣೆದುರಿಗೆ ಇದ್ದರೂ ಭಯದ ಭೀತಿಯಲ್ಲೇ ಓಡಿ ಹೋ್ಗಿದ್ದಾರೆ. ಈ ಮನೆ ಕುಸಿಯುವ ದೃಶ್ಯ ನೋಡಿದಾಗ ರಕ್ಕಸ ಪ್ರವಾಹಕ್ಕೂ ಅಲುಗಾಡದ ಹಸಿರು ಬಣ್ಣದ ಮನೆಯೊಂದು ನೆನಪಿಗೆ ಬಂದಿದೆ. ಅಲ್ಲಿ, ಆ ಮನೆಯ ಬಾಲ್ಕನಿಯಲ್ಲಿ ಉಸಿರನ್ನು ಕೈಯಲ್ಲಿಡಿದು ಕೊನೆಗೂ ಪವಾಡದಂತೆ ಬದುಕುಳಿದ ಜನರು ಈಗ ಎರಡನೇ ಬಾರಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಅಂತೆಯೇ, ಹಸಿರು ಕಟ್ಟಡದಂತೆ ಈ ಮನೆಯು ಕಾಣಿಸಿಕೊಂಡಿದ್ದು, ದುರಂತದಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ದುಃಖಕರ ಸಂಗತಿ.
ವರದಿಗಳ ಪ್ರಕಾರ, ಕಳೆದ ಮೂರು ದಿನಗಳಲ್ಲಿ 24 ಮಂದಿ ಪ್ರವಾಹದ ದುರಂತಗಳಲ್ಲಿ ಮೃತಪಟ್ಟಿದ್ದು, 14 ಮಂದಿ ಮಿಸ್ಸಿಂಗ್ ಪಟ್ಟಿಯಲ್ಲಿದ್ದಾರೆ. ಬಾಗ್ಲುಂಗ್‌ನ ಗಾಲ್ಕೋಟ್‌ನಲ್ಲಿ ಪ್ರಬಲ ಜಲಪ್ರವಾಹಕ್ಕೆ ಸರ್ಕಾರಿ ಕಟ್ಟಡವೊಂದು ಕೊಚ್ಚಿಹೋಗಿದೆ. ಕಾಲಿಗಂಡಕಿ ನದಿಯು ಉಕ್ಕಿ ಹರಿಯುತ್ತಿದ್ದು, ಮನಂಗ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ಇಬ್ಬರು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಟ್ಟು 747 ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, 143 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಮನಂಗ್, ಮ್ಯಾಗ್ಡಿ, ಪರ್ಬತ್ ಮತ್ತು ಪಾಲ್ಪಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ,(ಏಜೆನ್ಸೀಸ್).