ಶಾಂತಿಯ ತಾಣ ಈಗ ರಣರಂಗ! ದುಬೈ ಮೇಲೆ ಇರಾನ್ ಅಟ್ಯಾಕ್ ಮಾಡಿದ್ದೇಕೆ..?
ಟೆಹ್ರಾನ್: ದಶಕಗಳಿಂದ ಮಧ್ಯಪ್ರಾಚ್ಯದ ಅಸ್ಥಿರತೆಯ ನಡುವೆಯೂ ಸುರಕ್ಷಿತ ಸ್ವರ್ಗ ಎಂದು ಕರೆಯಲ್ಪಡುತ್ತಿದ್ದ ದುಬೈ ನಗರ (Dubai Under Attack) ಈಗ ಯುದ್ಧದ ರಣರಂಗವಾಗಿ ಮಾರ್ಪಟ್ಟಿದೆ. ಅಮೇರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ನಡೆಸಿದ ಆಕ್ರಮಣದಲ್ಲಿ ದುಬೈ ನಗರವನ್ನೇ ಗುರಿಯಾಗಿಸಿಕೊಂಡಿರುವುದು ಜಾಗತಿಕ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಹೆಸರಾಗಿದ್ದ ಈ ನಗರದ ಮೇಲೆ ಇರಾನ್ ಯಾಕೆ ಮುಗಿಬಿದ್ದಿದೆ ಎಂಬ ಪ್ರಶ್ನೆಗೆ ಈಗ ಆಘಾತಕಾರಿ ಕಾರಣಗಳು ಹೊರಬಂದಿವೆ.
ಅಮೇರಿಕಾ ನೌಕಾಪಡೆಯ 'ಶಕ್ತಿ ಕೇಂದ್ರ' ಜೆಬೆಲ್ ಅಲಿ ಬಂದರು
ದುಬೈ ಮೇಲಿನ ದಾಳಿಗೆ ಅತಿ ಮುಖ್ಯ ಕಾರಣವೆಂದರೆ ಅಲ್ಲಿನ ಜೆಬೆಲ್ ಅಲಿ ಬಂದರು. ಇದು ಕೇವಲ ವಾಣಿಜ್ಯ ಬಂದರಲ್ಲ, ಬದಲಿಗೆ ಪಶ್ಚಿಮ ಏಷ್ಯಾದಲ್ಲಿ ಅಮೇರಿಕಾ ನೌಕಾಪಡೆಯ ಅತ್ಯಂತ ದೊಡ್ಡ ಮತ್ತು ಪ್ರಮುಖ ನೆಲೆಗಳಲ್ಲಿ ಒಂದಾಗಿದೆ. ಅಮೇರಿಕ ತನ್ನ ಯುದ್ಧ ನೌಕೆಗಳು ಮತ್ತು ವಿಮಾನವಾಹಕ ನೌಕೆಗಳನ್ನು ನಿಲ್ಲಿಸಲು, ಇಂಧನ ತುಂಬಿಸಲು ಈ ಬಂದರನ್ನೇ ಅವಲಂಬಿಸಿದೆ. ಇಲ್ಲಿನ ಅಮೇರಿಕನ್ ಕಾರ್ಯಾಚರಣೆಯನ್ನು ಹತ್ತಿಕ್ಕಲು ಇರಾನ್ ಈ ತಂತ್ರ ಹೂಡಿದೆ.
ಅರಬ್ ರಾಷ್ಟ್ರಗಳಿಗೆ ಕಠಿಣ ಸಂದೇಶ
ಇರಾನ್‌ನ ಈ ದಾಳಿಯು ಯುಎಇ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ನೀಡಿದ ನೇರ ಎಚ್ಚರಿಕೆಯಾಗಿದೆ. ನಮ್ಮ ಶತ್ರುಗಳಾದ ಅಮೇರಿಕ ಮತ್ತು ಇಸ್ರೇಲ್‌ಗೆ ನೀವು ನೆಲವನ್ನು ನೀಡಿದರೆ, ಅದರ ಪರಿಣಾಮವನ್ನು ನೀವೂ ಅನುಭವಿಸಬೇಕಾಗುತ್ತದೆ ಎಂಬ ಸಂದೇಶವನ್ನು ಇರಾನ್ ರವಾನಿಸಿದೆ. ಇಸ್ರೇಲ್‌ನೊಂದಿಗೆ ಸುಧಾರಿಸುತ್ತಿರುವ ಅರಬ್ ರಾಷ್ಟ್ರಗಳ ಸಂಬಂಧವನ್ನು ಕೆಡಿಸುವುದು ಇರಾನ್‌ನ ಗುರಿಯಾಗಿದೆ.
ಜಾಗತಿಕ ವಾಣಿಜ್ಯದ ಮೇಲೆ ಹೊಡೆತ
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರವಾಸಿ ತಾಣಗಳಾದ ಪಾಮ್ ಐಲ್ಯಾಂಡ್ ಹಾಗೂ ಬುರ್ಜ್ ಅಲ್ ಅರಬ್ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಜಾಗತಿಕ ಆರ್ಥಿಕತೆಯ ಬೆನ್ನೆಲುಬನ್ನು ಮುರಿಯಲು ಯತ್ನಿಸಿದೆ. ದುಬೈನಲ್ಲಿ ಅಸ್ಥಿರತೆ ಉಂಟಾದರೆ ವಿಶ್ವದ ತೈಲ ಮಾರುಕಟ್ಟೆ ಮತ್ತು ಸಾರಿಗೆ ವ್ಯವಸ್ಥೆ ಕುಸಿಯುತ್ತದೆ ಎಂಬುದು ಇರಾನ್‌ಗೆ ತಿಳಿದಿದೆ.
ಇಸ್ರೇಲ್-ಅಮೇರಿಕಾ ಜಂಟಿ ದಾಳಿಗೆ ಸೇಡು
ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯಾದ 'ಆಪರೇಷನ್ ಎಪಿಕ್ ಫ್ಯೂರಿ' ಕಾರ್ಯಾಚರಣೆಯಲ್ಲಿ ದುಬೈ ಮತ್ತು ಕತಾರ್‌ನಲ್ಲಿರುವ ಅಮೇರಿಕ ನೆಲೆಗಳ ಪ್ರಮುಖ ಪಾತ್ರವಿತ್ತು ಎಂಬುದು ಇರಾನ್‌ನ ಆರೋಪವಾಗಿದೆ. ತನ್ನ ನಾಯಕನ ಸಾವಿಗೆ ಕಾರಣವಾದ ಶಕ್ತಿಗಳು ಎಲ್ಲಿಂದ ಕಾರ್ಯಾಚರಣೆ ನಡೆಸಿದ್ದವೋ, ಅದೇ ಜಾಗದ ಮೇಲೆ ಇರಾನ್ ಈಗ ಕೆಂಡ ಕಾರುತ್ತಿದೆ.
ಇರಾನ್‌ನ 'ನರಕದ ಬಾಗಿಲು' ಎಚ್ಚರಿಕೆ
ನರಕದ ಬಾಗಿಲುಗಳನ್ನು ತೆರೆದಿದ್ದೇವೆ ಎಂದು ಗುಡುಗಿರುವ ಇರಾನ್ ರೆವಲ್ಯೂಷನರಿ ಗಾರ್ಡ್ಸ್, ಕೇವಲ ಇಸ್ರೇಲ್ ಮಾತ್ರವಲ್ಲದೆ ಅಮೇರಿಕಾವನ್ನು ಬೆಂಬಲಿಸುವ ಪ್ರತಿಯೊಂದು ನೆಲೆಯನ್ನೂ ಸುಟ್ಟು ಹಾಕುವುದಾಗಿ ಘೋಷಿಸಿದೆ. ಈ ದಾಳಿಯಿಂದಾಗಿ ದುಬೈ ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದು, ಸಾವಿರಾರು ಪ್ರವಾಸಿಗರು ಅತಂತ್ರರಾಗಿದ್ದಾರೆ.
ಮುಂದೇನು..?
ಸದಾ ಪ್ರವಾಸಿಗರಿಂದ ಕಂಗೊಳಿಸುತ್ತಿದ್ದ ದುಬೈನ ರಸ್ತೆಗಳಲ್ಲಿ ಈಗ ಸೈರನ್ ಸದ್ದು ಮತ್ತು ಸ್ಫೋಟದ ಭೀತಿ ಆವರಿಸಿದೆ. ಇರಾನ್‌ನ ಈ ಉದ್ಧಟತನಕ್ಕೆ ಅಮೇರಿಕಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದರ ಮೇಲೆ ಇಡೀ ಮಧ್ಯಪ್ರಾಚ್ಯದ ಭವಿಷ್ಯ ಅಡಗಿದೆ,(ಏಜೆನ್ಸೀಸ್).