ಹೊರ್ಮುಜ್ ಸಂಘರ್ಷಕ್ಕೆ ಹೊಸ ತಿರುವು! ಅಮೆರಿಕನ್ನರಿಗೆ ಸಮುದ್ರದ ತಳವೇ ಸರಿಯಾದ ಜಾಗ: ಟ್ರಂಪ್ ವಿರುದ್ಧ ಗುಡುಗಿದ ಮೊಜ್ತಾಬಾ! Mojtaba Khamenei
ಟೆಹ್ರಾನ್: ಜಾಗತಿಕ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಇರಾನ್‌ನ ನೂತನ ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಾಬಾ ಖಮೇನಿ(Mojtaba Khamenei) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೊರ್ಮುಜ್ ಜಲಸಂಧಿಯ ಹೊಸ ನಿರ್ವಹಣೆಯು ಈ ಪ್ರದೇಶದಲ್ಲಿ ಶಾಂತಿಯನ್ನು ತರಲಿದೆ ಮತ್ತು ಶತ್ರುಗಳ ದುರುಪಯೋಗವನ್ನು ಕೊನೆಗಾಣಿಸಲಿದೆ ಎಂದು ಗುರುವಾರ ಘೋಷಿಸಿದ್ದಾರೆ.
ಫೆಬ್ರವರಿ 28 ರಂದು ನಡೆದ ವೈಮಾನಿಕ ದಾಳಿಯಲ್ಲಿ ತಮ್ಮ ತಂದೆ ಆಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟ ನಂತರ ಅಧಿಕಾರ ವಹಿಸಿಕೊಂಡ ಮೊಜ್ತಾಬಾ ಅವರು, ಇರಾನ್ ರಾಷ್ಟ್ರದ ಘನತೆಯನ್ನು ಎತ್ತಿಹಿಡಿಯುವ ಶಪಥ ಮಾಡಿದ್ದಾರೆ.
ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯವೇ ರಾಷ್ಟ್ರೀಯ ಆಸ್ತಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಮೊಜ್ತಾಬಾ ಅವರು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ರಾಷ್ಟ್ರೀಯ ಆಸ್ತಿಯೆಂದು ರಕ್ಷಿಸಲಾಗುವುದು ಎಂದು ಮೊಜ್ತಾಬಾ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶದ ಒಳಗೆ ಮತ್ತು ಹೊರಗೆ ಇರುವ ಒಂಬತ್ತು ಕೋಟಿ ಇರಾನಿಯನ್ನರು ಇರಾನ್‌ನ ಆಧ್ಯಾತ್ಮಿಕ, ಮಾನವೀಯ, ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ನ್ಯಾನೊತಂತ್ರಜ್ಞಾನದಿಂದ ಹಿಡಿದು ಪರಮಾಣು ಸಾಮರ್ಥ್ಯದವರೆಗೆ, ತಮ್ಮ ಅಸ್ಮಿತೆಯ ಭಾಗವೆಂದು ಪರಿಗಣಿಸುತ್ತಾರೆ. ದೇಶದ ಭೂಮಿ ಮತ್ತು ಆಕಾಶವನ್ನು ರಕ್ಷಿಸುವಂತೆಯೇ ಈ ಸಾಮರ್ಥ್ಯಗಳನ್ನೂ ನಾವು ರಕ್ಷಿಸುತ್ತೇವೆ ಎಂದು ನೂತನ ಸುಪ್ರೀಂ ಲೀಡರ್ ಗುಡುಗಿದ್ದಾರೆ.
ಅಮೆರಿಕನ್ನರಿಗೆ ಸಮುದ್ರದ ತಳವೇ ಸರಿಯಾದ ಜಾಗ"
ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಮೊಜ್ತಾಬಾ ಖಮೇನಿ ತೀವ್ರವಾಗಿ ಖಂಡಿಸಿದ್ದಾರೆ. ಹೊರ್ಮುಜ್ ಜಲಸಂಧಿಯು ಟೆಹ್ರಾನ್‌ನ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿರುವ ಮೊಜ್ತಾಬಾ , ಪರ್ಷಿಯನ್ ಗಲ್ಫ್‌ನಲ್ಲಿ ಅಮೆರಿಕನ್ನರಿಗೆ ಜಾಗವಿದ್ದರೆ ಅದು ಕೇವಲ ನೀರಿನ ತಳದಲ್ಲಿ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್‌ನ ಭವಿಷ್ಯವು ಅಮೆರಿಕ ಮುಕ್ತವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸುಪ್ರೀಂ ಲೀಡರ್, ಈ ಪ್ರದೇಶದ ಅಭಿವೃದ್ಧಿ ಮತ್ತು ಸಮೃದ್ಧಿಯು ಅನ್ಯರಾಷ್ಟ್ರಗಳ ಹಸ್ತಕ್ಷೇಪವಿಲ್ಲದೆ ಸಾಧ್ಯವಾಗಲಿದೆ ಎಂದಿದ್ದಾರೆ. ಸಾವಿರಾರು ಕಿಲೋಮೀಟರ್ ದೂರದಿಂದ ಬಂದು ದುರಾಸೆ ಮತ್ತು ದ್ವೇಷ ಸಾಧಿಸುವ ವಿದೇಶಿಯರಿಗೆ ಇಲ್ಲಿ ಜಾಗವಿಲ್ಲ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಹೇಳಿಕೆ ಮತ್ತು ಇರಾನ್‌ನ ಆಫರ್
ಇರಾನ್ ಸರ್ಕಾರವು ಒಳಗಿನಿಂದಲೇ ಕುಸಿಯುತ್ತಿದೆ ಮತ್ತು ನಾಯಕತ್ವದ ಬಿಕ್ಕಟ್ಟಿನಿಂದಾಗಿ ಅವರು ನಮ್ಮೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹಕ್ಕು ಮಂಡಿಸಿದ್ದರು. ಹೊರ್ಮುಜ್ ಜಲಸಂಧಿಯನ್ನು ಆದಷ್ಟು ಬೇಗ ಮುಕ್ತಗೊಳಿಸುವಂತೆ ಇರಾನ್ ಕೋರಿದೆ ಎಂದು ಹೇಳಿದ್ದರು.
ಆದರೆ, ಇರಾನ್ ವಿಧಿಸಿರುವ ಷರತ್ತುಗಳನ್ನು ಒಪ್ಪಿಕೊಳ್ಳಲು ಟ್ರಂಪ್ ಆಡಳಿತವು ಸಿದ್ಧವಿಲ್ಲದಂತೆ ಕಾಣುತ್ತಿದೆ. ಅಮೆರಿಕ ಹೇರಿರುವ ದಿಗ್ಬಂಧನಗಳನ್ನು ತೆರವುಗೊಳಿಸಿದರೆ ಮಾತ್ರ ಯುದ್ಧವನ್ನು ಕೊನೆಗೊಳಿಸಿ ಹೊರ್ಮುಜ್ ಜಲಸಂಧಿಯನ್ನು ತೆರೆಯುವುದಾಗಿ ಇರಾನ್ ಪ್ರಸ್ತಾಪಿಸಿದೆ. ಈ ಪ್ರಸ್ತಾಪದ ಅಡಿಯಲ್ಲಿ ಪರಮಾಣು ಕಾರ್ಯಕ್ರಮದ ಮೇಲಿನ ಚರ್ಚೆಯನ್ನು ಮುಂದೂಡಲು ಇರಾನ್ ಕೋರಿದೆ. ಆದರೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಇದನ್ನು ನಿರಾಕರಿಸಿದ್ದಾರೆ. ಯಾವುದೇ ಒಪ್ಪಂದವು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸದಂತೆ ಶಾಶ್ವತವಾಗಿ ತಡೆಯುವಂತಿರಬೇಕು ಎಂದು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ತಲುಪಿರುವ ಇರಾನ್‌ನ ಈ ಆಫರ್ ಬಗ್ಗೆ ಶ್ವೇತಭವನವು ಪರಿಶೀಲನೆ ನಡೆಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಭೌಗೋಳಿಕ ಉದ್ವಿಗ್ನತೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ,(ಏಜೆನ್ಸೀಸ್).