ಕಿಮ್ ಜಾಂಗ್ ಉನ್ ಅವರ ಮಗಳು ಉತ್ತರ ಕೊರಿಯಾದ ಮುಂದಿನ ನಾಯಕಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. 
ವಿದೇಶ

ಉತ್ತರ ಕೊರಿಯಾದಲ್ಲಿ ಹೊಸ ಅಧ್ಯಾಯ: ಕಿಮ್ ಜೊಂಗ್ ಉನ್ ಪುತ್ರಿ ಜೂ ಏ ಮುಂದಿನ ಸರ್ವಾಧಿಕಾರಿ..? Kim Jong Un

ಸೋಲ್: ಉತ್ತರ ಕೊರಿಯಾದಲ್ಲಿ ಕಿಮ್(Kim Jong Un) ಕುಟುಂಬದ ನಾಲ್ಕನೇ ತಲೆಮಾರಿನ ಆಳ್ವಿಕೆಗೆ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿವೆ. ಕಿಮ್ ಜೊಂಗ್ ಉನ್ ಅವರ ಹದಿಹರೆಯದ ಮಗಳು ಕಿಮ್ ಜೂ ಏ, ಈಗ ಕೇವಲ ತರಬೇತಿ ಹಂತದಲ್ಲಿಲ್ಲ, ಬದಲಾಗಿ ಉತ್ತರಾಧಿಕಾರಿ ಘೋಷಣೆ ಹಂತವನ್ನು ತಲುಪಿದ್ದಾಳೆ ಎಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ (NIS) ಗುರುವಾರ ಸಂಸತ್ತಿನ ಸಭೆಯಲ್ಲಿ ಮಹತ್ವದ ವರದಿ ನೀಡಿದೆ.

ಉತ್ತರಾಧಿಕಾರಿ ಪಟ್ಟದತ್ತ ಜೂ ಏ: ಪ್ರಮುಖ ಬೆಳವಣಿಗೆಗಳು

ಪದನಾಮದಲ್ಲಿ ಬದಲಾವಣೆ: ಈ ಹಿಂದೆ ದಕ್ಷಿಣ ಕೊರಿಯಾದ ಸಂಸ್ಥೆಗಳು ಜೂ ಏಳನ್ನು ತರಬೇತಿ ಪಡೆಯುತ್ತಿರುವ ಉತ್ತರಾಧಿಕಾರಿ ಎಂದು ಗುರುತಿಸಿದ್ದವು. ಆದರೆ, ಈ ತಿಂಗಳು ನಡೆಯಲಿರುವ ಉತ್ತರ ಕೊರಿಯಾದ ವರ್ಕರ್ಸ್ ಪಾರ್ಟಿ ಕಾಂಗ್ರೆಸ್‌ಗೆ ಮುನ್ನ ಅವಳನ್ನು ನಿಯೋಜಿತ ಉತ್ತರಾಧಿಕಾರಿ ಎಂದು ಕರೆಯುತ್ತಿರುವುದು ದೊಡ್ಡ ಬದಲಾವಣೆಯಾಗಿದೆ.
ನೀತಿ ನಿರ್ಧಾರಗಳಲ್ಲಿ ಪಾಲ್ಗೊಳ್ಳುವಿಕೆ: ಸುಮಾರು 13 ವರ್ಷದ ಜೂ ಏ, ಇತ್ತೀಚಿನ ದಿನಗಳಲ್ಲಿ ತನ್ನ ತಂದೆಯ ಜೊತೆ ಕೇವಲ ಕ್ಷಿಪಣಿ ಪರೀಕ್ಷೆ ಅಥವಾ ಸೇನಾ ಪರೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ, ಸರ್ಕಾರದ ಪ್ರಮುಖ ನೀತಿಗಳ ಬಗ್ಗೆ ತಂದೆಗೆ ಸಲಹೆಗಳನ್ನು ನೀಡುತ್ತಿರುವ ಸುಳಿವುಗಳು ಸಿಕ್ಕಿವೆ ಎಂದು ಎನ್‌ಐಎಸ್ ತಿಳಿಸಿದೆ.
ಗೌರವ ಮತ್ತು ಶಿಷ್ಟಾಚಾರ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವಳಿಗೆ ನೀಡಲಾಗುತ್ತಿರುವ ಗೌರವ ಮತ್ತು ನಂಬರ್ 2 ಸ್ಥಾನಮಾನದ ಶಿಷ್ಟಾಚಾರಗಳು ಅವಳು ಮುಂದಿನ ನಾಯಕಿ ಎನ್ನುವುದನ್ನು ಪುಷ್ಟೀಕರಿಸುತ್ತಿವೆ. ಇತ್ತೀಚೆಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರೊಂದಿಗೆ ಕಿಮ್ ನಡೆಸಿದ ಮಾತುಕತೆಯ ವೇಳೆಯೂ ಜೂ ಏ ಉಪಸ್ಥಿತಿ ಎದ್ದುಕಾಣುತ್ತಿತ್ತು.

ಮುಂದಿನ ಹಾದಿ ಏನು..?

ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ 9ನೇ ವರ್ಕರ್ಸ್ ಪಾರ್ಟಿ ಕಾಂಗ್ರೆಸ್ ಉತ್ತರ ಕೊರಿಯಾದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಇಲ್ಲಿ ಜೂ ಏಳಿಗೆ ಯಾವುದಾದರೂ ಅಧಿಕೃತ ಹುದ್ದೆಯನ್ನು ನೀಡಲಾಗುತ್ತದೆಯೇ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತಿದೆ. ಕಿರಿಯ ವಯಸ್ಸಿನಲ್ಲೇ ಅಧಿಕಾರಕ್ಕೆ ಬಂದ ಕಿಮ್ ಜೊಂಗ್ ಉನ್, ತನ್ನ ಮಗಳಿಗೆ ದೀರ್ಘಕಾಲದ ತರಬೇತಿ ನೀಡುವ ಮೂಲಕ ಅಧಿಕಾರದ ಹಸ್ತಾಂತರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).