ದಯಾಮರಣಕ್ಕೆ ಪ್ರಾಣಬಿಟ್ಟ ಮಹಿಳೆ ವೆಂಡಿ ಡಫ್ಫಿ 
ವಿದೇಶ

ಯಾವ ಕಾಯಿಲೆ ಇಲ್ಲದಿದ್ರೂ ದಯಾಮರಣಕ್ಕೆ ಶರಣಾದ ತಾಯಿ! ಈಕೆಯ ಕಟು ನಿರ್ಧಾರದ ಹಿಂದಿದೆ ಮನಕಲಕುವ ಕಥೆ

Euthanasia: ಇತ್ತೀಚೆಗಷ್ಟೇ, ಭಾರತದಲ್ಲಿ ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್​ ರಾಣಾ ಎಂಬ ಯುವಕನಿಗೆ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅಸ್ತು ಎಂದಿತು. ಈ ಐತಿಹಾಸಿಕ ತೀರ್ಪು ನೀಡುವ ಮುಖೇನ ಮೊದಲ ಬಾರಿಗೆ ನಿಷ್ಕ್ರೀಯ ದಯಾಮರಣಕ್ಕೆ ನ್ಯಾಯಾಲಯ ಅನುಮತಿ ನೀಡಿತು. ಇದೇ ರೀತಿ ಯುನೈಟೆಡ್​ ಕಿಂಗ್​ಡಮ್​ನಲ್ಲಿಯೂ ಒಂದು ಕರುಣಾಜನಕ ಘಟನೆ ನಡೆದಿದ್ದು, ಸಾವಿಗೆ ಶರಣಾದ ತಾಯಿಯ ಕಥೆ ಕೇಳಿದ್ರೆ ಎಂತವರಿಗೂ ಮನಕಲಕುತ್ತೆ.
ಜೀವನದಲ್ಲಿ ನಾವು ಪ್ರೀತಿಸುವ, ಇಷ್ಟಪಡುವ ವ್ಯಕ್ತಿಗಳು ನಮ್ಮನ್ನು ಅಗಲಿದರೆ, ಆ ನೋವನ್ನು ಅರಗಿಸಿಕೊಳ್ಳುವುದು ತೀರ ಕಷ್ಟಸಾಧ್ಯ. ಅದೊಂದು ರೀತಿ ವಿಮೋಚನೆ ಆಗದ ಶಾಪವಿದ್ದಂತೆ. ಬಹುತೇಕರು ಇಂತಹ ನೋವಿನಿಂದ ಕೆಲವು ತಿಂಗಳ ಬಳಿಕ ಯಥಾಸ್ಥಿತಿಗೆ ಮರಳುತ್ತಾರೆ. ಮತ್ತೆ ತಮ್ಮ ಜೀವನವನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಾರೆ. ಆದ್ರೆ, ಕೆಲವೇ ಕೆಲವರು ಮಾತ್ರ ಹೊರಬರಲು ಪರದಾಡಿ, ವಿಪರೀತ ನೋವಿನಿಂದ ತಮ್ಮ ಜೀವವನ್ನೇ ಬಲಿ ಕೊಡುತ್ತಾರೆ. ಆ ಸಾಲಿಗೆ ಈ ತಾಯಿ ಕೂಡ.

ಗಟ್ಟಿಮುಟ್ಟಾಗಿದ್ದ ಜೀವ

ಯುಕೆಯಲ್ಲಿ ದಯಾಮರಣಕ್ಕೆ ಶರಣಾದ ಮಹಿಳೆಯನ್ನು ವೆಂಡಿ ಡಫ್ಫಿ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ತನ್ನ ಅಕ್ಕರೆಯ ಮಗನನ್ನು ಕಳೆದುಕೊಂಡ ಕ್ಷಣದಿಂದಲೂ ಇವರು ವಿಪರೀತ ಕುಗ್ಗಿದ್ದರು. ದೈಹಿಕವಾಗಿ ಆರೋಗ್ಯವಂತೆ ಕಂಡರೂ ಮಾನಸಿಕವಾಗಿ ಪ್ರತಿದಿನ ವಿಪರೀತ ನೋವು ತಿನ್ನುತ್ತಿದ್ದರು. ಸ್ವಿಟ್ಜರ್‌ಲ್ಯಾಂಡ್‌ನ ಚಿಕಿತ್ಸಾಲಯದಲ್ಲಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿ, 'ಡೈ ವಿತ್ ಎ ಸ್ಮೈಲ್' ಎಂದು ಹೇಳುತ್ತಾ ಸಾವಿಗೆ ಶರಣಾಗಿದ್ದು ನಿಜಕ್ಕೂ ಎಂತವರ ಕಣ್ಣಿನಲ್ಲಿ ನೀರು ತರಿಸುತ್ತದೆ.
56 ವರ್ಷದ ವೆಂಡಿ ಡಫ್ಫಿ, ಅಂತಿಮವಾಗಿ ದಯಾಮರಣಕ್ಕೆ ಸ್ವಿಟ್ಜರ್‌ಲ್ಯಾಂಡ್ ಅನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಯಿತು. ಕಾರಣ, ಯುಕೆಯಲ್ಲಿ ಅಸಿಸ್ಟೆಂಟ್​ ಆತ್ಮಹತ್ಯೆ ಕಾನೂನುಬದ್ಧವಲ್ಲ. ಕಳೆದ ವರ್ಷಗಳಲ್ಲಿ, ಯುನೈಟೆಡ್​ ಕಿಂಗ್​ಡಮ್​ ಸಂಸತ್ತಿನಲ್ಲಿ ಬಿಸಿ ಚರ್ಚೆಯ ರೈಟ್ ಟು ಡೈ ಮಸೂದೆ ಸ್ಥಗಿತಗೊಂಡು ಮೂಲೆಗೆ ಬಿದ್ದಿದೆ. ಹೀಗಿರುವಾಗ, ತನ್ನ ಸಾಯುವ ಬಯಕೆ ಈಡೇರುವುದು ಸ್ವಿಟ್ಜರ್‌ಲ್ಯಾಂಡ್​ನಲ್ಲಿ ಮಾತ್ರ ಎಂದು ತಿಳಿದ ವೆಂಡಿ, ಅಲ್ಲಿಯೇ ಹಣ ಕೊಟ್ಟು ಸಾವಿಗೀಡಾಗಿದ್ದಾರೆ.

ಯಾರೀ ವೆಂಡಿ ಡಫ್ಫಿ?

ನಾಲ್ಕು ವರ್ಷಗಳ ಹಿಂದೆ ತಮ್ಮ ಏಕಮಾತ್ರ ಪುತ್ರನನ್ನು ಕಳೆದುಕೊಂಡ ವೆಂಡಿ, ದೊಡ್ಡ ಶಾಕ್​ಗೆ ಒಳಗಾದರು. ಅವರ ಮಗ ಮಾರ್ಕಸ್, 23ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡರು. ಮಲಗಿದ್ದ ವೇಳೆ, ಅವರ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಟೊಮೆಟೋ ಹೊರಬರದೆ, ಅಲ್ಲೇ ಸಿಕ್ಕಿಕೊಂಡ ಕಾರಣ, ಮಾರ್ಕಸ್​ ಉಸಿರುಗಟ್ಟಿ ಪ್ರಾಣಬಿಟ್ಟರು. ಆ ಘಟನೆಯಿಂದ ಭಾರೀ ನೋವುಂಡ ವೆಂಡಿ, ಓವರ್​ಡೋಸ್​ ಮಾತ್ರೆಗಳನ್ನು ನುಂಗಿ ಸಾಯಲು ಪ್ರಯತ್ನಿಸಿದರು. ಆದರೆ, ಎರಡು ವಾರಗಳ ಕಾಲ ವೆಂಟಿಲೇಟರ್‌ ಸಹಾಯದಿಂದ ಬದುಕುಳಿದರು.
ಅಂತಿಮವಾಗಿ ಯಾವುದೇ ಔಷಧಿ ಅಥವಾ ಚಿಕಿತ್ಸೆಯು ತನ್ನ ನೋವನ್ನು ಮರೆಮಾಡಲು ಸಾಧ್ಯವಿಲ್ಲ ಎಂದ ಡಫ್ಫಿ, ಸಾವಿಗೆ ಇನ್ನೂ ಕಾಯಲು ಆಗೋದಿಲ್ಲ ಎಂದು ದೃಢವಾಗಿ ನಿರ್ಧರಿಸಿದರು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಒಂದು ಎತ್ತರದ ಬ್ರಿಡ್ಜ್​ನಿಂದ ಅಥವಾ ಟವರ್ ಬ್ಲಾಕ್​ನಿಂದ ಬಿದ್ದು ಸಾಯಬೇಕು ಎಂದು ಎಷ್ಟೋ ಬಾರಿ ಅಂದುಕೊಂಡೆ. ಆದರೆ, ನನ್ನಂತೆಯೇ ಕುಟುಂಬದವರು ಜೀವನಪರ್ಯಂತ ನೋವಿನಲ್ಲಿ ಕೊರಗಿದರೆ ಎಂಬ ಚಿಂತೆ ಕಾಡಿತು. ಹೀಗಾಗಿ, ನಗುವಿನಿಂದಲೇ ದಯಾಮರಣಕ್ಕೆ ಶರಣಾಗುವುದು ಉತ್ತಮ ಎಂದಿದ್ದಾರೆ.

ಹಣ ಕೊಟ್ಟು, 'ಡೈ ವಿತ್ ಎ ಸ್ಮೈಲ್​' ಹಾಡು....

ವೆಂಡಿ ಅವರ ದಯಾಮರಣ ಅರ್ಜಿಯನ್ನು ನಾನ್​ ಫ್ರಾಫಿಟ್​ ಸಂಸ್ಥೆ ಪೆಗಾಸೋಸ್ ಒಪ್ಪಿಕೊಂಡಿತು. 13,500 ಡಾಲರ್​ ಕಟ್ಟಿಸಿಕೊಂಡು, ಅವರ ಕೊನೆ ಕ್ಷಣಕ್ಕೆ ಸಾಕ್ಷಿಯಾಯಿತು. 'ಡೈಲಿ ಮೇಲ್'​ ಜೊತೆ ಕೊನೆಯದಾಗಿ ಮಾತನಾಡಿದ ದುಃಖಿತ ತಾಯಿ, ಲೇಡಿ ಗಾಗಾ ಮತ್ತು ಬ್ರೂನೋ ಮಾರ್ಸ್ ಅವರ 'ಡೈ ವಿತ್ ಎ ಸ್ಮೈಲ್' ಹಾಡನ್ನು ಕೇಳುವ ಮೂಲಕ ನಾನು ಪ್ರಾಣಬಿಡಬೇಕು. ನನ್ನ ಒಡಹುಟ್ಟಿದವರು, ನಾಲ್ಕು ಸಹೋದರಿಯರು ಮತ್ತು ಇಬ್ಬರು ಸಹೋದರರಿಗೆ ವಿದಾಯ ಹೇಳುವುದು ತುಂಬಾ ಕಷ್ಟ ಆಗ್ತಿದೆ. ಆದರೆ, ನನಗೆ ಶೇ.100ಕ್ಕೆ 100 ನೋವನ್ನು ಭರಿಸುವ ಶಕ್ತಿಯಿಲ್ಲ ಎಂಬುದು ಅವರಿಗೂ ಗೊತ್ತಿದೆ ಎಂದರು,(ಏಜೆನ್ಸೀಸ್).