ವಿದೇಶ

ಟ್ರಂಪ್​ಗೆ ಮಧ್ಯಂತರ ಪರೀಕ್ಷೆ! ಮಿಡ್​ಟರ್ಮ್​ ಎಲೆಕ್ಷನ್​ನಿಂದ ಏನು ಪರಿಣಾಮ?

ಯುಎಸ್: ಅಮೆರಿಕದಲ್ಲಿ ಮಂಗಳವಾರ (ನ. 3) ಮಧ್ಯಂತರ ಚುನಾವಣೆ ನಡೆಯಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಇದು ಮಹತ್ವದ ಪರೀಕ್ಷೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಎಲ್ಲ ಸ್ಥಾನಗಳು ಮತ್ತು ಸೆನೆಟ್​ನ ಮೂರನೇ ಒಂದು ಭಾಗದ ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರ ಫಲಿತಾಂಶ ಮುಂದಿನ 2 ವರ್ಷಗಳ ಆಡಳಿತ, ಶಾಸನಗಳ ಸ್ವರೂಪ ಮತ್ತು ಟ್ರಂಪ್ ಅವರ ರಾಜಕೀಯ ಕಾರ್ಯಸೂಚಿಯ ಮೇಲೆ ಪರಿಣಾಮ ಬೀರಲಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮುಗಿದ 2 ವರ್ಷಗಳ ಬಳಿಕ ನಡೆಯುವ ಮಧ್ಯಂತರ ಚುನಾವಣೆಯು ಜನಪ್ರತಿನಿಧಿಗಳ ಆಯ್ಕೆಯ ಪ್ರಕ್ರಿಯೆ ಮಾತ್ರವಲ್ಲ, ಅದು ಅಧಿಕಾರದಲ್ಲಿರುವ ಅಧ್ಯಕ್ಷರ ಜನಪ್ರಿಯತೆ, ಆಡಳಿತದ ಸಾಧನೆ ಮತ್ತು ನೀತಿಗಳಿಗೆ ಜನರು ನೀಡುವ ಪ್ರತಿಕ್ರಿಯೆಯೂ ಹೌದು. ಈ ಸಲದ ಮಧ್ಯಂತರ ಚುನಾವಣೆಯಲ್ಲಿ ಮತದಾರರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಎಲ್ಲ 435 ಸ್ಥಾನಗಳಿಗೆ ಹಾಗೂ ಸೆನೆಟ್​ನ 100 ಸ್ಥಾನಗಳ ಪೈಕಿ ಸುಮಾರು ಮೂರನೇ ಒಂದು ಭಾಗಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ. ರಾಜ್ಯಗಳ ಗವರ್ನರ್​ಗಳು, ಸ್ಥಳೀಯ ಆಡಳಿತ ಸಂಸ್ಥೆಗಳಿಗೂ ಕೆಲವು ಕಡೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್​ನ ಎರಡೂ ಸದನಗಳ ಮೇಲೆ ಟ್ರಂಪ್​ರ ರಿಪಬ್ಲಿಕನ್ ಪಕ್ಷದ ಹಿಡಿತ ಮುಂದುವರಿಯುತ್ತದೆಯೇ ಅಥವಾ ಡೆಮಾಕ್ರಟಿಕ್ ಪಕ್ಷ ಬಹುಮತ ಗಳಿಸುತ್ತದೆಯೇ ಎಂಬ ಕುತೂಹಲ ಇದೆ. ಫಲಿತಾಂಶವು ಟ್ರಂಪ್ ಅವರ ಉಳಿದ ಅಧ್ಯಕ್ಷೀಯ ಅವಧಿಯ ರಾಜಕೀಯ ದಿಕ್ಕನ್ನು ನಿರ್ಧರಿಸುವುದರ ಜತೆಗೆ, ಅಮೆರಿಕದ ಆಂತರಿಕ ನೀತಿ ಮತ್ತು ಜಾಗತಿಕ ರಾಜತಾಂತ್ರಿಕ ನಡೆಗಳ ಮೇಲೂ ಪರಿಣಾಮ ಬೀರುತ್ತದೆ.

ಏನಿದು ಮಧ್ಯಂತರ ಚುನಾವಣೆ?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರ ನಡುವಿನ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಚುನಾವಣೆಯೇ ಮಧ್ಯಂತರ ಚುನಾವಣೆ. ಈ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆ ಇರುವುದಿಲ್ಲ. ಸಂಸತ್ತಿನ ಎರಡು ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್​ಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಮೆರಿಕದ ಸಂಸತ್ತು ದೇಶಾದ್ಯಂತ ಅನ್ವಯವಾಗುವ ಕಾನೂನುಗಳನ್ನು ರೂಪಿಸುವ ಮತ್ತು ಅಂಗೀಕರಿಸುವ ಪ್ರಮುಖ ಸಂಸ್ಥೆ. ಸಂಸತ್ತು ಯಾವ ಪಕ್ಷದ ಹಿಡಿತದಲ್ಲಿರುತ್ತದೆ ಎಂಬುದರ ಮೇಲೆ ಅಧ್ಯಕ್ಷರು ತಮ್ಮ ಯೋಜನೆಗಳನ್ನು ಎಷ್ಟು ಸುಲಭವಾಗಿ ಜಾರಿಗೊಳಿಸಬಹುದು ಎಂಬುದು ನಿರ್ಧಾರವಾಗುತ್ತದೆ. ಹೀಗಾಗಿ ಮಧ್ಯಂತರ ಚುನಾವಣೆಯ ಫಲಿತಾಂಶವು ಅಧ್ಯಕ್ಷರ ಜನಪ್ರಿಯತೆ ಮತ್ತು ಆಡಳಿತದ ಬಗೆಗಿನ ‘ಜನಾದೇಶ’ ಎಂಬ ಅಭಿಪ್ರಾಯವೂ ವ್ಯಾಪಕವಾಗಿದೆ.

ಟ್ರಂಪ್​ಗೆ ಎದುರಾಗಿರುವ ಸವಾಲುಗಳೇನು?

ಡೆಮಾಕ್ರಟಿಕ್ ಪಕ್ಷ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಥವಾ ಸೆನೆಟ್​ನ ಯಾವುದಾದರೂ ಒಂದು ಸದನದಲ್ಲಿ ಬಹುಮತ ಪಡೆದರೂ ಟ್ರಂಪ್ ಆಡಳಿತಕ್ಕೆ ವಿಧೇಯಕಗಳನ್ನು ಅಂಗೀಕರಿಸುವುದು ಕಷ್ಟವಾಗಬಹುದು. ಬಜೆಟ್ ಮತ್ತು ಪ್ರಮುಖ ನೀತಿಗಳ ವಿಚಾರದಲ್ಲಿ ವಿರೋಧ ಪಕ್ಷದೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಇದರ ಜತೆಗೆ ಕಾಂಗ್ರೆಸ್​ನ ಸಮಿತಿಗಳ ಮೂಲಕ ಟ್ರಂಪ್ ಆಡಳಿತದ ನಿರ್ಧಾರಗಳು, ವೆಚ್ಚಗಳು ಮತ್ತು ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸುವ ಅವಕಾಶ ಡೆಮಾಕ್ರಟಿಕ್ ಪಕ್ಷಕ್ಕೆ ಸಿಗಲಿದೆ. ಶ್ವೇತಭವನದ ವೆಚ್ಚಗಳು, ಭ್ರಷ್ಟಾಚಾರದ ಆರೋಪಗಳು ಮತ್ತು ವಲಸೆ ನಿಯಂತ್ರಣ ಸಂಸ್ಥೆಗಳ ಕಾರ್ಯಾಚರಣೆಗಳೂ ಪರಿಶೀಲನೆಗೆ ಒಳಪಡಬಹುದು. ಟ್ರಂಪ್ ವಿರುದ್ಧ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಬೇಕೆಂಬ ಚರ್ಚೆಯೂ ಡೆಮಾಕ್ರಟಿಕ್ ಪಕ್ಷದೊಳಗಿದೆ. ಒಂದು ವೇಳೆ ರಿಪಬ್ಲಿಕನ್ ಪಕ್ಷ ಎರಡೂ ಸದನಗಳಲ್ಲಿ ತನ್ನ ಬಹುಮತ ಉಳಿಸಿಕೊಂಡರೆ, ಟ್ರಂಪ್ ತಮ್ಮ ಉಳಿದ ಅವಧಿಯ ಕಾರ್ಯಸೂಚಿಯನ್ನು ಮುಂದುವರಿಸಲು ಹೆಚ್ಚು ಅನುಕೂಲವಾಗಲಿದೆ.

ಡೆಮಾಕ್ರಟಿಕ್ ಪಕ್ಷ ಗೆಲ್ಲುತ್ತಾ?

ಟ್ರಂಪ್ ಜನಪ್ರಿಯತೆ ಕುಸಿದಿರುವುದು ಡೆಮಾಕ್ರಟಿಕ್ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಸುಲಭವಿಲ್ಲ. ಕೆಲವು ಕ್ಷೇತ್ರಗಳಲ್ಲಿ ರಿಪಬ್ಲಿಕನ್ ಪ್ರಭಾವಿಯಾಗಿದ್ದರೆ, ಇನ್ನು ಕೆಲವೆಡೆ ಡೆಮಾಕ್ರಟಿಕ್ ಹಿಡಿತ ಗಟ್ಟಿಯಾಗಿದೆ. ಹೀಗಾಗಿ ಅಲ್ಪ ಅಂತರದಲ್ಲಿ ಫಲಿತಾಂಶ ಬದಲಾಗಬಹುದಾದ ಕ್ಷೇತ್ರಗಳೇ ನಿರ್ಣಾಯಕವಾಗಲಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಸ್ಪರ್ಧೆ ತೀವ್ರವಾಗಿರುವ 21 ಕ್ಷೇತ್ರಗಳನ್ನು ಚುನಾವಣಾ ವಿಶ್ಲೇಷಣಾ ಸಂಸ್ಥೆ ಗುರುತಿಸಿದೆ. ಇವುಗಳಲ್ಲಿ 16 ಕ್ಷೇತ್ರಗಳು ಈಗ ರಿಪಬ್ಲಿಕನ್ ಪಕ್ಷದ ವಶದಲ್ಲಿವೆ. ಸೆನೆಟ್​ನಲ್ಲೂ ಏಳು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಇದೆ ಎಂದು ವಿಶ್ಲೇಷಣೆ ತಿಳಿಸಿದೆ. ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರು ನಿರ್ಧರಿಸುವ ವಿಚಾರವೂ ಈ ಬಾರಿ ವಿವಾದಕ್ಕೆ ಕಾರಣವಾಗಿದೆ. ಕೆಲವು ರಾಜ್ಯಗಳಲ್ಲಿ ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಕ್ಷೇತ್ರಗಳ ಮರುವಿಂಗಡಣೆ ಮಾಡಲು ರಿಪಬ್ಲಿಕನ್ ಪಕ್ಷ ಪ್ರಯತ್ನಿಸಿದೆ; ಇದಕ್ಕೆ ಪ್ರತಿಯಾಗಿ ಡೆಮಾಕ್ರಟಿಕ್ ಪಕ್ಷವೂ ಅಂತಹ ಕ್ರಮಗಳನ್ನು ಕೈಗೊಂಡಿದೆ ಎಂಬ ಆರೋಪಗಳಿವೆ.

ಮತದಾರರ ಮುಂದಿರುವ ಪ್ರಮುಖ ವಿಚಾರಗಳು

ಈ ಚುನಾವಣೆಯಲ್ಲಿ ಅಮೆರಿಕನ್ನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಜೀವನ ವೆಚ್ಚ. ಪೆಟ್ರೋಲ್, ದಿನಸಿ ಸಾಮಗ್ರಿ, ಮನೆ ಬಾಡಿಗೆ ಮತ್ತು ಆರೋಗ್ಯ ಸೇವೆಗಳ ವೆಚ್ಚ ಹೆಚ್ಚಾಗಿರುವುದು ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಹಣದುಬ್ಬರ ನಿಯಂತ್ರಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಟ್ರಂಪ್ ಮೇಲೆ ಈ ವಿಚಾರದಲ್ಲಿ ಒತ್ತಡ ಹೆಚ್ಚಾಗಿದೆ. ಇರಾನ್​ನೊಂದಿಗಿನ ಯುದ್ಧದಿಂದ ಇಂಧನ ಪೂರೈಕೆಗೆ ಅಡ್ಡಿಯುಂಟಾಗಿ ಪೆಟ್ರೋಲ್ ಬೆಲೆ ಏರಿರುವುದೂ ಜನರ ಕೆಂಗಣ್ಣಿಗೆ ಗುರಿಯಾಗಿದೆ. ‘ಟ್ರಂಪ್ ಜಾರಿಗೆ ತಂದಿರುವ ಆಮದು ಸುಂಕ ನೀತಿಗಳು ಅಮೆರಿಕನ್ನರ ಖರೀದಿ ವೆಚ್ಚವನ್ನು ಹೆಚ್ಚಿಸಿವೆ’ ಎಂಬುದು ಡೆಮಾಕ್ರಟಿಕ್ ಪಕ್ಷದ ಆರೋಪ. ವಲಸೆಯೂ ಪ್ರಮುಖ ಚುನಾವಣಾ ವಿಚಾರವಾಗಿದೆ.

ಗಡಿ ನಿಯಂತ್ರಣ ಬಿಗಿಗೊಳಿಸಿರುವುದು ಮತ್ತು ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಂಡಿರುವುದು ತಮ್ಮ ಸಾಧನೆ ಎಂದು ರಿಪಬ್ಲಿಕನ್ ಪಕ್ಷ ಹೇಳುತ್ತಿದೆ. ಆದರೆ ಈ ಕ್ರಮಗಳ ಅನುಷ್ಠಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಟೀಕೆಗಳೂ ಇವೆ. ಕೃತಕ ಬುದ್ಧಿಮತ್ತೆಯ ನಿಯಂತ್ರಣವೂ ಚರ್ಚೆಯಲ್ಲಿದೆ. ಎರಡೂ ಪಕ್ಷಗಳ ಕೆಲವು ಪ್ರಮುಖ ನಾಯಕರು ಎಐ ತಂತ್ರಜ್ಞಾನಕ್ಕೆ ನಿಯಮ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ ತಂತ್ರಜ್ಞಾನದ ಬೆಳವಣಿಗೆಗೆ ಕಾನೂನು ನಿರ್ಬಂಧ ಹೇರಬಾರದು ಎಂಬುದು ಟ್ರಂಪ್ ನಿಲುವು.

2028ರ ಅಧ್ಯಕ್ಷೀಯ ಚುನಾವಣೆ ಮೇಲೂ ಪರಿಣಾಮ

ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಗೆದ್ದರೆ ಅದು ತಮ್ಮ ನೀತಿಗಳಿಗೆ ಜನರ ಬೆಂಬಲ ಎಂದು ಟ್ರಂಪ್ ಪ್ರತಿಪಾದಿಸಬಹುದು. ಡೆಮಾಕ್ರಟಿಕ್ ಪಕ್ಷ ಗೆದ್ದರೆ ಅದು ಆಡಳಿತದ ವಿರುದ್ಧದ ಜನಾದೇಶ ಎಂದು ವಿರೋಧ ಪಕ್ಷ ಹೇಳಬಹುದು. 2028ರಲ್ಲಿ ನಡೆಯಲಿರುವ ಮುಂದಿನ ಅಧ್ಯಕ್ಷೀಯ ಚುನಾವಣೆಯ ಸಿದ್ಧತೆಗೂ ಈ ಫಲಿತಾಂಶ ವೇದಿಕೆಯಾಗಲಿದೆ. ಅಮೆರಿಕದ ಸಂವಿಧಾನದ ಪ್ರಕಾರ ಟ್ರಂಪ್ ಮೂರನೇ ಬಾರಿ ಅಧ್ಯಕ್ಷರಾಗಲು ಸ್ಪರ್ಧಿಸುವಂತಿಲ್ಲ. ಹೀಗಾಗಿ ರಿಪಬ್ಲಿಕನ್ ಪಕ್ಷದ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿ ಯಾರು ಎಂಬ ಚರ್ಚೆ ಮಧ್ಯಂತರ ಚುನಾವಣೆಯ ಬಳಿಕ ತೀವ್ರಗೊಳ್ಳುವ ಸಾಧ್ಯತೆಯಿದೆ. ಡೆಮಾಕ್ರಟಿಕ್ ಪಕ್ಷದಲ್ಲೂ ಟ್ರಂಪ್ ವಿರೋಧಿ ರಾಜಕೀಯವನ್ನು ಮೀರಿ ಜನರ ವಿಶ್ವಾಸ ಗಳಿಸಬಲ್ಲ ನಾಯಕನ ಹುಡುಕಾಟ ಆರಂಭವಾಗಬಹುದು.

ಫಲಿತಾಂಶ ಯಾವಾಗ?

ಅಮೆರಿಕ ಮಧ್ಯಂತರ ಚುನಾವಣೆಯ ಮತದಾನ ಭಾರತೀಯ ಕಾಲಮಾನದ ಪ್ರಕಾರ ನ. 3ರ ಮಂಗಳವಾರ ಸಂಜೆ 4.30ಕ್ಕೆ ಆರಂಭವಾಗುತ್ತದೆ. ಮತ ಎಣಿಕೆ ಪ್ರಕ್ರಿಯೆ ನ. 4ರ ಬುಧವಾರ ಬೆಳಗಿನ ಜಾವ 4.30ರಿಂದ ಆರಂಭವಾಗಲಿದೆ. ನಿಖರ ಫಲಿತಾಂಶಗಳಿಗೆ ಕೆಲವು ದಿನಗಳು ಬೇಕಾಗಬಹುದು.

ಸಂಸತ್​ನಲ್ಲಿ ಯಾರ ಹಿಡಿತ?

ಪ್ರಸ್ತುತ ಸಂಸತ್ತಿನ ಎರಡೂ ಸದನಗಳಲ್ಲೂ ರಿಪಬ್ಲಿಕನ್ ಪಕ್ಷ ಬಹುಮತ ಹೊಂದಿದೆ. ಆದರೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಅದರ ಬಹುಮತ ಅತ್ಯಂತ ಕಡಿಮೆ. 435 ಸದಸ್ಯರ ಸಭೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ 218 ಸ್ಥಾನಗಳಿವೆ. ಪಕ್ಷದ ಪರವಾಗಿ ಮತ ಚಲಾಯಿಸುವ ಒಬ್ಬ ಸ್ವತಂತ್ರ ಸದಸ್ಯರೂ ಇದ್ದಾರೆ. ಸೆನೆಟ್​ನಲ್ಲಿ ರಿಪಬ್ಲಿಕನ್ ಪಕ್ಷ 53 ಸ್ಥಾನಗಳನ್ನು ಹೊಂದಿದೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಮತ್ತು ಅದರೊಂದಿಗೆ ಮತ ಚಲಾಯಿಸುವ ಇಬ್ಬರು ಸ್ವತಂತ್ರ ಸದಸ್ಯರು ಸೇರಿ 47 ಸ್ಥಾನಗಳನ್ನು ಹೊಂದಿದ್ದಾರೆ.

ಸೆನೆಟ್​ನಲ್ಲಿ ಬಹುಮತ ಪಡೆಯಲು ಡೆಮಾಕ್ರಟಿಕ್ ಪಕ್ಷಕ್ಕೆ ಕನಿಷ್ಠ 51 ಸ್ಥಾನ ಅಗತ್ಯ. ಉಪಾಧ್ಯಕ್ಷರ ಮತವನ್ನು ಪರಿಗಣಿಸಿದರೆ 50-50 ಸಮಬಲದ ಸಂದರ್ಭದಲ್ಲೂ ರಿಪಬ್ಲಿಕನ್ ಪಕ್ಷಕ್ಕೆ ಅನುಕೂಲವಾಗಲಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಡೆಮಾಕ್ರಟಿಕ್ ಪಕ್ಷ ಬಹುಮತ ಪಡೆಯಲು ಕೆಲವೇ ಸ್ಥಾನಗಳನ್ನು ಗೆದ್ದುಕೊಳ್ಳಬೇಕಿದೆ. ಸೆನೆಟ್​ನಲ್ಲಿ ರಿಪಬ್ಲಿಕನ್ ಪಕ್ಷದ ಹಿಡಿತ ಹೆಚ್ಚು ಬಲವಾಗಿದ್ದರೂ, ಕೆಲವು ರಾಜ್ಯಗಳಲ್ಲಿನ ಸ್ಪರ್ಧೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಯಾವುದಕ್ಕೆ ಮತದಾನ?

ಅಮೆರಿಕ ಸಂಸತ್ತಿನ ಕೆಳಮನೆಯಾದ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ನ ಎಲ್ಲ 435 ಸ್ಥಾನಗಳಿಗೂ ಈ ಬಾರಿ ಚುನಾವಣೆ ನಡೆಯಲಿದೆ. ಈ ಸದನದ ಸದಸ್ಯರ ಅಧಿಕಾರಾವಧಿ ಎರಡು ವರ್ಷ. ಹೀಗಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಎಲ್ಲ ಸ್ಥಾನಗಳಿಗೂ ಚುನಾವಣೆ ನಡೆಯುತ್ತದೆ. ಮೇಲ್ಮನೆಯಾದ ‘ಸೆನೆಟ್’ನ 100 ಸ್ಥಾನಗಳ ಪೈಕಿ 35 ಸ್ಥಾನಗಳಿಗೆ ಮತದಾನ ನಡೆಯಲಿದೆ. ಸೆನೆಟರ್​ಗಳ ಅಧಿಕಾರಾವಧಿ ಆರು ವರ್ಷಗಳಾಗಿದ್ದು, ಎಲ್ಲ ಸ್ಥಾನಗಳಿಗೂ ಒಂದೇ ಬಾರಿ ಚುನಾವಣೆ ನಡೆಯುವುದಿಲ್ಲ. ಪ್ರತಿ ಎರಡು ವರ್ಷಗಳಿಗೊಮ್ಮೆ ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಇದರ ಜತೆಗೆ ಹಲವು ರಾಜ್ಯಗಳಲ್ಲಿ ಗವರ್ನರ್​ಗಳು ಸೇರಿದಂತೆ ರಾಜ್ಯಮಟ್ಟದ ಜನಪ್ರತಿನಿಧಿಗಳ ಆಯ್ಕೆಗೂ ಮತದಾನ ನಡೆಯಲಿದೆ. ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಜಾರ್ಜಿಯಾ ಮತ್ತು ಮಿಷಿಗನ್ ರಾಜ್ಯಗಳ ಗವರ್ನರ್ ಚುನಾವಣೆಗಳೂ ಗಮನ ಸೆಳೆಯುತ್ತಿವೆ. ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮತ್ತು ಅರಿಜೋನಾನಂತಹ ‘ಸ್ವಿಂಗ್ ಸ್ಟೇಟ್’ಗಳೂ ಇವೆ.

ಟ್ರಂಪ್ ಜನಪ್ರಿಯತೆ ಕುಸಿತ

ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷರ ಹೆಸರು ಮತಪತ್ರದಲ್ಲಿ ಇರುವುದಿಲ್ಲ. ಆದರೂ ಅವರ ಆಡಳಿತದ ಜನಪ್ರಿಯತೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಹಿಂದೆಯೂ ಮಧ್ಯಂತರ ಚುನಾವಣೆಗಳಲ್ಲಿ ಅಧ್ಯಕ್ಷರ ಪಕ್ಷಕ್ಕೆ ಹಿನ್ನಡೆಯಾಗಿರುವ ಉದಾಹರಣೆಗಳೇ ಹೆಚ್ಚು. ಕೆಲವು ಸಮೀಕ್ಷಾ ಅಂಕಿಅಂಶಗಳ ಪ್ರಕಾರ, ಟ್ರಂಪ್ ಎರಡನೇ ಅವಧಿಯ ಆರಂಭದಲ್ಲಿ ಅವರ ಜನಪ್ರಿಯತೆ ಶೇ. 50ಕ್ಕಿಂತ ಸ್ವಲ್ಪ ಹೆಚ್ಚಿತ್ತು. ಆದರೆ 2026ರ ಅಕ್ಟೋಬರ್ ಆರಂಭದ ವೇಳೆಗೆ ಅದು ಸುಮಾರು ಶೇ. 37ಕ್ಕೆ ಕುಸಿದಿತ್ತು. ಶೇ. 61ರಷ್ಟು ಮಂದಿ ಅವರ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 1934ರಿಂದ ನಡೆದ ಮಧ್ಯಂತರ ಚುನಾವಣೆಗಳ ಅಂಕಿಅಂಶಗಳನ್ನು ಗಮನಿಸಿದರೆ, ಅಧ್ಯಕ್ಷರ ಪಕ್ಷವು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಸರಾಸರಿ 27 ಸ್ಥಾನಗಳನ್ನು ಕಳೆದುಕೊಂಡಿದೆ. 23 ಚುನಾವಣೆಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಅಧ್ಯಕ್ಷರ ಪಕ್ಷ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಈ ಹಿಂದಿನ ಪ್ರವೃತ್ತಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ವಿಷಯದಲ್ಲೂ ನಿಜವಾಗಬಹುದು.

ಮತಪತ್ರವೋ, ಮತಯಂತ್ರವೋ?

ಅಮೆರಿಕದಲ್ಲಿ ಎರಡೂ ವಿಧಾನಗಳನ್ನು ಬಳಸಲಾಗುತ್ತದೆ. ಅಲ್ಲಿ ಮತದಾನ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಬಹುತೇಕ ಕಡೆ ಮತದಾರರು ಕೈಯಿಂದ ಗುರುತು ಹಾಕುವ ಮತಪತ್ರಗಳನ್ನು ಅಥವಾ ಟಚ್​ಸ್ಕ್ರೀನ್ ಮೂಲಕ ಮತ ಗುರುತಿಸುವ ಯಂತ್ರಗಳನ್ನು ಬಳಸುತ್ತಾರೆ. ಆದರೆ, ದಾಖಲೆ ಮತ್ತು ಮರುಪರಿಶೀಲನೆಗಾಗಿ ಶೇ. 95ಕ್ಕೂ ಹೆಚ್ಚು ಮತಗಳಲ್ಲಿ ಕಾಗದದ ಮತಪತ್ರದ ಸಾಕ್ಷಿ (ಪೇಪರ್ ಟ್ರೇಲ್) ಇರುವುದು ಕಡ್ಡಾಯ.