ಇಸ್ಲಾಮಾಬಾದ್‌ನಲ್ಲಿ ಭೀಕರ ಆತ್ಮಹತ್ಯಾ ದಾಳಿ: 25 ಮಂದಿ ಸಾವು, 80ಕ್ಕೂ ಹೆಚ್ಚು ಜನರಿಗೆ ಗಾಯ..!
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಶಹಜಾದ್ ಟೌನ್ ಪ್ರದೇಶದಲ್ಲಿರುವ ತರ್ಲಾಯ್ ಇಮಾಂಬರ್ಗಾ (Islamabad Blast) ಬಳಿ ಶುಕ್ರವಾರ ಮಧ್ಯಾಹ್ನ ಪ್ರಬಲ ಸ್ಫೋಟ ಸಂಭವಿಸಿದೆ. ಈ ಘೋರ ಘಟನೆಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಪ್ರಾರ್ಥನೆಯ ನಂತರ ನಡೆದ ರಕ್ತಪಾತ
ಶುಕ್ರವಾರದ ಪ್ರಾರ್ಥನೆಯು ಮುಗಿದು ಭಕ್ತಾದಿಗಳು ಇಮಾಂಬರ್ಗಾದಿಂದ ಹೊರಬರುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನದಟ್ಟಣೆ ಇದ್ದ ಜಾಗಕ್ಕೆ ನುಗ್ಗಿದ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಟ್ಟಡಗಳ ಕಿಟಕಿಗಳು ಪುಡಿಪುಡಿಯಾಗಿದ್ದು, ಇಡೀ ಪ್ರದೇಶ ರಕ್ತಸಿಕ್ತವಾಗಿತ್ತು.
ಗಾಯಾಳುಗಳನ್ನು ತಕ್ಷಣವೇ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS) ಮತ್ತು ಪಾಲಿಕಿನಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.
ಬಲೂಚಿಸ್ತಾನ್ ಕಾರ್ಯಾಚರಣೆಯ ಪ್ರತಿಫಲವೇ..?
ಪಾಕಿಸ್ತಾನ ಸರ್ಕಾರವು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರದ್ದ್-ಉಲ್-ಫಿತ್ನಾ-1 ಎಂಬ ಬೃಹತ್ ಸೇನಾ ಕಾರ್ಯಾಚರಣೆಯನ್ನು ಜನವರಿ 26 ರಿಂದ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಇದುವರೆಗೆ 216 ಬಲೂಚ್ ಬಂಡುಕೋರರನ್ನು ಸದೆಬಡಿಯಲಾಗಿದೆ. ಆದರೆ, ಈ ಸಂಘರ್ಷದಲ್ಲಿ 22 ಯೋಧರು ಮತ್ತು 36 ನಾಗರಿಕರು ಸಹ ಪ್ರಾಣ ಕಳೆದುಕೊಂಡಿದ್ದರು. ಬಲೂಚಿಸ್ತಾನ್ ಕಾರ್ಯಾಚರಣೆಗೆ ಪ್ರತಿಯಾಗಿ ಈ ಆತ್ಮಹತ್ಯಾ ದಾಳಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೂರು ತಿಂಗಳಲ್ಲಿ ಎರಡನೇ ದಾಳಿ
ಇಸ್ಲಾಮಾಬಾದ್‌ನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಪ್ರಮುಖ ಆತ್ಮಹತ್ಯಾ ದಾಳಿ ಇದಾಗಿದೆ.
ಕಳೆದ ನವೆಂಬರ್‌ನಲ್ಲಿ ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಬಳಿ ಆತ್ಮಹತ್ಯಾ ದಾಳಿ ನಡೆದು 12 ಜನರು ಬಲಿಯಾಗಿದ್ದರು. ಆಗಿನ ದಾಳಿಯ ನಂತರ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನವು ಯುದ್ಧದ ಸ್ಥಿತಿಯಲ್ಲಿದೆ ಎಂದು ಘೋಷಿಸಿದ್ದರು.
ಪ್ರಸ್ತುತ ದಾಳಿಯು ರಾಜಧಾನಿಯ ಭದ್ರತಾ ವ್ಯವಸ್ಥೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.
ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಮೇಲೆ ಕಣ್ಣು..?
ಬಲೂಚ್ ಬಂಡುಕೋರರು ದೀರ್ಘಕಾಲದಿಂದ ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ವಿಶೇಷವಾಗಿ ಚೀನಾದ 60 ಬಿಲಿಯನ್ ಡಾಲರ್ ಹೂಡಿಕೆಯ CPEC ಯೋಜನೆಗಳನ್ನು ಇವರು ವಿರೋಧಿಸುತ್ತಿದ್ದು, ಈ ಯೋಜನೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಇಂದಿನ ದಾಳಿಯೂ ಅದರ ಭಾಗವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಖಂಡನೆ ಮತ್ತು ಆತಂಕ
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯು ನಮ್ಮ ಸಂಕಲ್ಪವನ್ನು ಕುಗ್ಗಿಸಲು ಸಾಧ್ಯವಿಲ್ಲ. ಅಮಾಯಕರ ರಕ್ತ ಚೆಲ್ಲಿದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ. ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಈ ಹಿಂದೆಯೇ ಎಚ್ಚರಿಸಿದಂತೆ, ಇದು ಕೇವಲ ಗಡಿ ಭಾಗದ ಹೋರಾಟವಲ್ಲ, ಇದು ಇಡೀ ಪಾಕಿಸ್ತಾನದ ಅಸ್ತಿತ್ವದ ಯುದ್ಧವಾಗಿದೆ ಎಂದು ಗುಡುಗಿದ್ದರು,(ಏಜೆನ್ಸೀಸ್).