ಜೆಸಿಬಿ ಬಕೆಟ್‌ನಲ್ಲಿ ಕುಳಿತು ಆಸ್ಪತ್ರೆಗೆ ಸಾಗುತ್ತಿರುವ 97 ರ ವೃದ್ಧೆ
ನೇಪಾಳ: ಪ್ರಕೃತಿ ಮುನಿಸಿಕೊಂಡಾಗ ಉಂಟಾಗುವ ವಿನಾಶದ ರೌದ್ರಾವತಾರಕ್ಕೆ ಸಿಲುಕಿ ನಲುಗಿದ ಕಥೆಗಳು ಎದೆಯನ್ನು ನಡುಗಿಸುತ್ತವೆ. ಆದರೆ, ಅದೇ ವಿಪತ್ತಿನ ಮಧ್ಯೆಯೂ ಧೃತಿಗೆಡದೆ ಸಾವು ಬಂದು ಬಾಗಿಲು ತಟ್ಟಿದರೂ ಬದುಕಿ ಬರುವ ಧೀರರ ಕಥೆಗಳು ಆಶ್ಚರ್ಯ ಮೂಡಿಸುತ್ತವೆ.
ಸದ್ಯ, ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಅನಾಹುತದ ನಡುವೆ, ಬರೋಬ್ಬರಿ 97 ವರ್ಷದ ಅಜ್ಜಿ (97 Year Old Survivor) ಯೊಬ್ಬರು ಮೃತ್ಯುವಿನ ದವಡೆಯಿಂದ ಪಾರಾಗಿ ಬಂದಿರುವ ರೋಚಕ ಘಟನೆ ಜಗತ್ತಿನಾದ್ಯಂತ ಸಂಚಲನಕ್ಕೆ ಸಾಕ್ಷಿಯಾಗಿದೆ.
ಏನಿದು ಘಟನೆ?
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಅಕ್ಷರಶಃ ನರಕ ಸೃಷ್ಟಿಸಿದೆ. ಹಿಮಾಲಯದ ಗಡಿ ಭಾಗದಲ್ಲಿ ಹಿಮನದಿ ಕುಸಿದು ಬಿದ್ದ ಕಾರಣ ಭೋಟೆ ಕೋಶಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ.
ಈ ವೇಳೆ ವೃದ್ಧರ ಆರೈಕೆ ಕೇಂದ್ರವೊಂದರಲ್ಲಿ ಆಶ್ರಯ ಪಡೆದಿದ್ದ 97 ವರ್ಷದ ಗುಣ ಮಾಯಾ ಬೊಹರಾ ಎಂಬ ವೃದ್ಧೆ, ಪ್ರವಾಹದ ರಭಸಕ್ಕೆ ಕುಸಿದುಬಿದ್ದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಕತ್ತಲು, ಮಣ್ಣು ಮತ್ತು ಪ್ರವಾಹದ ನೀರಿನ ನಡುವೆ ಉಸಿರುಕಟ್ಟುವ ವಾತಾವರಣದಲ್ಲಿ ಆ ತಾಯಿ, ಬದುಕಿಗಾಗಿ ನಡೆಸಿದ ಹೋರಾಟವೇ ರೋಚಕವಾಗಿದೆ. ಈ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನೇಪಾಳಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
JCB ಬಕೆಟ್‌ನಲ್ಲಿ ರಕ್ಷಣೆ!
ಬರೊಬ್ಬರಿ ನಾಲ್ಕು ಗಂಟೆ ನಡೆದ ಈ ಕಾರ್ಯಾಚರಣೆಯಲ್ಲಿ ಅವಶೇಷ ಅಡಿಯಲ್ಲಿ ಹೂತು ಬಿದ್ದಿದ್ದ ಆ ಅಜ್ಜಿಯನ್ನು ಹೊರತೆಗೆಯಲಾಗಿದೆ. ರಕ್ಷಣೆ ನಂತರ ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ಸಾರಿಗೆ ಹಾಗೂ ರಸ್ತೆ ವ್ಯವಸ್ಥೆಯಿರದ ಕಾರಣ 97 ವಯಸ್ಸಿನ ವೃದ್ಧೆಯನ್ನು ಜೆಸಿಬಿ ಯಂತ್ರದ ಬಕೆಟ್ ಒಳಗಡೆ ಕುಳಿಸಿ ಪ್ರಯಾಣ ಬೆಳೆಸಲಾಗಿದೆ.
ಪ್ರಸ್ತುತ ಜೆಸಿಬಿ ಬಕೆಟ್‌ನಲ್ಲಿ ಕೈ ಮುಗಿದು ಬರುತ್ತಿರುವ ವೃದ್ಧೆಯ ಫೋಟೊ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಇಂತಹ ರಣ ಭೀಕರ ಪ್ರವಾಹದಲ್ಲಿ ಸಿಲುಕಿ, ಪ್ರಾಣ ಉಳಿಸಿಕೊಂಡು ಬಂದಿರುವ ಈ ಮುದುಕಿ, ಯುದ್ಧಭೂಮಿಯಿಂದ ಜೀವಂತವಾಗಿ ಮರಳಿದ ಸೈನಿಕನಿಗೆ ಸಮ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.
ಸದ್ಯ, ನೇಪಾಳದ ಆಸ್ಪತ್ರೆಯೊಂದನ್ನು ಸೇರಿರುವ ಈ ಮಾತೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆಂದು ಆಕೆಯ ಸಹೋದರ ದೀಪಕ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ನೇಪಾಳದಲ್ಲಿ ಭೀಕರ ಪ್ರವಾಹ: 626 ಶವಗಳು ಪತ್ತೆ, 2500 ಮಂದಿ ನಾಪತ್ತೆ!
ನೇಪಾಳದಲ್ಲಿ ಸಂಭವಿಸಿರುವ ಪ್ರವಾಹ ಉಂಟುಮಾಡಿದ ಅನಾಹುತದ ಕರಾಳತೆ ಮಾತ್ರ ಕಣ್ಣೀರು ತರಿಸುವಂತಿದೆ. ನೇಪಾಳದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಈ ದುರಂತದಲ್ಲಿ ಇಲ್ಲಿಯವರೆಗೆ ಬರೋಬ್ಬರಿ 626 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಅಲ್ಲದೆ, ಸುಮಾರು 2,500ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಇವರಲ್ಲಿ 300ಕ್ಕೂ ಹೆಚ್ಚು ಮಂದಿ ಭಾರತೀಯರು ಸೇರಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಹವಾಮಾನ ಇಲಾಖೆ ಮತ್ತೆ ಮಳೆಯಾಗುವ ಎಚ್ಚರಿಕೆ ನೀಡಿರುವುದರಿಂದ, ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಕಾರ್ಯಗಳಿಗೆ ಭಾರೀ ಅಡ್ಡಿಯುಂಟಾಗಿದೆ, (ಏಜನ್ಸೀಸ್).