ಮುಳುಗಡೆ ಆಗುತ್ತಿರುವ ದೋಣಿಯ ದೃಶ್ಯ
- ಸಮುದ್ರದಲ್ಲಿ ಮುಳುಗಿತು 9.5 ಕೋಟಿ ಮೌಲ್ಯದ ಹೊಸ ಬೋಟ್
- ವಿಲಾಸಿ ಹಡಗು ತಲುಪಿದ ಕೇವಲ 4 ದಿನಗಳಲ್ಲಿ ಸಮುದ್ರ ಪಾಲು
- ಅದೃಷ್ಟವಶಾತ್ ದೋಣಿಯಲ್ಲಿದ್ದ 14 ಜನರು ಸುರಕ್ಷಿತವಾಗಿ ಪಾರು
Yacht Sinks: 9.55 ಕೋಟಿ ರೂ. ಮೌಲ್ಯದ ಬೃಹತ್ ಐಷಾರಾಮಿ ದೋಣಿಯೊಂದು ಖರೀದಿ ಮಾಡಿದ ನಾಲ್ಕೇ ದಿನಕ್ಕೆ ಇಟಲಿಯ ಸಮುದ್ರದಲ್ಲಿ ಮುಳುಗಡೆಯಾದ ದುರಂತ ಇದೀಗ ಹಲವರನ್ನು ಭಾರಿ ಅಚ್ಚರಿಗೆ ದೂಡಿದೆ.
98 ಅಡಿ ಉದ್ದದ 'ಆಂಜಿಯೋಲಾ II' ಎಂಬ ಹೆಸರಿನ ಈ ಬೋಟ್ನಲ್ಲಿ ಇಂಜಿನ್ ಫೆಲ್ಯೂರ್ನಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ದೋಣಿಯಲ್ಲಿ ಹೋಲ್ ಆಗಿ ಸಮುದ್ರದ ನೀರು ಒಳಬಂದಿದೆ. ಈ ವೇಳೆ, ಬೋಟ್ನಲ್ಲಿದ್ದ 14 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇಟಾಲಿಯನ್ ದ್ವೀಪವಾದ ಸಾರ್ಡಿನಿಯಾದ ಹೆಸರಾಂತ ಪ್ರವಾಸಿ ತಾಣವಾದ ಪೋರ್ಟೊ ಸೆರ್ವೊ ಬಳಿ ಮಂಗಳವಾರ (ಆ.11) ಈ ಅಪಘಾತ ಸಂಭವಿಸಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ನೋಡ ನೋಡುತ್ತಿದ್ದಂತೆ ದೋಣಿಯು ಸಮುದ್ರದಲ್ಲಿ ಮುಳಗಡೆಯಾಗುತ್ತಿರುವ ದೃಶ್ಯಗಳು ಸ್ಥಳದಲ್ಲಿದ ಕೆಲವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಹಾರ ನೌಕೆಯ ಮಾಲೀಕರು ಕೊನೆಯವರೆಗೂ ಹಡಗಿನಲ್ಲಿಯೇ ಉಳಿದು, ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿ ಹೊರಬಂದ ಬಳಿಕವೇ ಅವರು ಬಂದಿದ್ದಾರೆ ಎನ್ನಲಾಗಿದೆ. ಆಂಜಿಯೋಲಾ II ಅನ್ನು 2020ರಲ್ಲಿ ಪ್ರಮುಖ ಇಟಾಲಿಯನ್ ವಿಹಾರ ನೌಕೆ ತಯಾರಕ ಪೆರ್ಮೇರ್ ಎಂಬುವವರು ನಿರ್ಮಿಸಿದ್ದಾರೆ. ಸುಮಾರು 98 ಅಡಿ ಉದ್ದವಿರುವ ಈ ಟೂರಿಸ್ಟ್ ಬೋಟ್, ಸುಮಾರು 9.1 ಮಿಲಿಯನ್ ಡಾಲರ್ ಮೌಲ್ಯದ್ದು ಎಂದು ವರದಿಯಾಗಿದೆ.
ಈ ಬೋಟ್ ಐದು ಕ್ಯಾಬಿನ್‌ಗಳನ್ನು ಹೊಂದಿದ್ದು, 10 ಅತಿಥಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುತ್ತದೆ. ಉಳಿದಂತೆ, ಇನ್ನೂ ಐದು ಸಿಬ್ಬಂದಿ ಸದಸ್ಯರಿಗೆ ಸೌಲಭ್ಯಗಳಿವೆ. ನಾಲ್ಕು ಇಂಜಿನ್‌ಗಳಿಂದ ರನ್ ಆಗುವ ಆಂಜಿಯೋಲಾ II, ಗರಿಷ್ಠ 28 ನಾಟ್‌ಗಳ ವೇಗದಲ್ಲಿ (ಗಂಟೆಗೆ 52 ಕಿ.ಮೀಗಿಂತ ಹೆಚ್ಚು) ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿವರಿಸಲಾಗಿದೆ.
ಹೊಸದಾಗಿ ಸಮುದ್ರಕ್ಕಿಳಿದ 4 ದಿನಕ್ಕೆ ಬೋಟ್ ಮುಳುಗಡೆ ಆಗಲು ಕಾರಣವೇನು ಎಂಬುದರ ಬಗ್ಗೆ ಇಟಾಲಿಯನ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇಂಜಿನ್ ಏಕೆ ದಿಢೀರ್ ಫೆಲ್ಯೂರ್ ಆಯಿತು? ಬೆಂಕಿ ಹೇಗೆ ಕಾಣಿಸಿಕೊಂಡಿತು? ನೀರು ಒಳಗೆ ನುಗ್ಗಿದ್ದು ಹೇಗೆ ಎಂಬುದರ ಇಂಚಿಂಚೂ ಮಾಹಿತಿಯನ್ನು ಇಟಾಲಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ,(ಏಜೆನ್ಸೀಸ್).