Japan Earthquake (ಚಿತ್ರ X)
ಜಪಾನ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ
ನಡುವೆಯೂ ವೈದ್ಯಕೀಯ ತಂಡವೊಂದು ಪ್ರದರ್ಶಿಸಿದ ಅತ್ಯುನ್ನತ ಕರ್ತವ್ಯನಿಷ್ಠೆ ಮತ್ತು ಸಾಹಸ ಈಗ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಜಪಾನ್‌ನ ಕುಮಮೊಟೊ ನಗರದ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬರಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆ (Operation) ನಡೆಯುತ್ತಿದ್ದ ಸಂದರ್ಭದಲ್ಲಿ 7.1 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಯ ರಕ್ಷಣೆಗೆ ನಿಂತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಪರೇಷನ್ ಥಿಯೇಟರ್‌ನಲ್ಲಿ ನಡೆದಿದ್ದೇನು?
ವೈದ್ಯರ ತಂಡವು ಆಪರೇಷನ್‌ನಲ್ಲಿ ನಿರತವಾಗಿದ್ದಾಗ ಇದ್ದಕ್ಕಿಂದಂತೆ ಇಡೀ ಶಸ್ತ್ರಕಿತ್ಸಾ ಕೊಠಡಿ ಭೀಕರವಾಗಿ ನಡುಗಲು ಪ್ರಾರಂಭಿಸಿತು. ಈ ವೇಳೆ ವೈದ್ಯಕೀಯ ಉಪಕರಣಗಳು ಕೂಡಾ ಶಬ್ಧ ಮಾಡುತ್ತಾ ಚಲಿಸತೊಡಗಿದವು ಹಾಗೂ ಮೇಲಿದ್ದ ದೀಪಗಳು ಮಿನುಗಲು ಪ್ರಾರಂಭಿಸಿದವು. ಆದಾಗ್ಯೂ, ಭೀಕರ ಕಂಪನಕ್ಕೆ ವೈದ್ಯರು ನೆಲದ ಮೇಲೆ ಕಾಲು ನಿಲ್ಲಿಸಲು ಹರಸಾಹಸ ಪಡುವಂತಾಗಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಈ ಹಠಾತ್ ಆಘಾತದ ನಡುವೆಯೂ ಧೃತಿಗೆಡದ ವೈದ್ಯರು ತಮ್ಮ ಜೀವಕ್ಕಿಂತ ರೋಗಿಯ ಜೀವವೇ ಮುಖ್ಯ ಎಂದು ಭಾವಿಸಿದರು. ಭೂಕಂಪದ ತೀವ್ರತೆಗೆ ಆಪರೇಷನ್ ಟೇಬಲ್ ಜಾರಿ ಹೋಗದಂತೆ ಇಬ್ಬರು ವೈದ್ಯರು ಅದನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ನಿಂತಿದ್ದರು. ಆದಾಗ್ಯೂ, ಚಲಿಸುತ್ತಿರುವ ಯಂತ್ರೋಪಕರಣಗಳನ್ನು ನಿಯಂತ್ರಿಸಲು ಯತ್ನಿಸುತ್ತಿರುವಾಗ ಒಬ್ಬ ವೈದ್ಯರು ನೆಲಕ್ಕೆ ಬಿದ್ದರು. ಆದರೂ, ದೃತಿಗೆಡದೇ ಕೊಠಡಿಯಲ್ಲಿದ್ದ ಪ್ರತಿಯೊಬ್ಬ ಸಿಬ್ಬಂದಿಯೂ ರೋಗಿಗೆ ಯಾವುದೇ ಅಪಾಯವಾಗದಂತೆ ರಕ್ಷಿಸಿದರು.
ಯಶಸ್ವಿಯಾದ ಶಸ್ತ್ರಚಿಕಿತ್ಸೆ
ಭೂಕಂಪದ ತೀವ್ರತೆಯಿಂದಾಗಿ ಆಪರೇಷನ್ನ್ನು ಕೆಲವು ಸಮಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ನಡುಕ ಕಡಿಮೆಯಾಗುತ್ತಿದ್ದಂತೆಯೇ ಧೈರ್ಯ ತಂದುಕೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದರು. ಪ್ರಸ್ತುತ ಆಸ್ಪತ್ರೆಯು ಆಗಸ್ಟ್ 5 ರಿಂದ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಮುಂದುವರಿಸಿದೆ.
ಜಪಾನ್‌ನಲ್ಲಿ ಸೃಷ್ಟಿಯಾದ ಭಾರಿ ವಿನಾಶ
ಜುಲೈ 28 ರ ಮಧ್ಯಾಹ್ನ ಜಪಾನ್‌ನ ದಕ್ಷಿಣ ದ್ವೀಪವಾದ ಕ್ಯುಶುನಲ್ಲಿ ಸಂಭವಿಸಿದ ಈ 7.1 ತೀವ್ರತೆಯ ಭೂಕಂಪವು ಭಾರಿ ವಿನಾಶವನ್ನೇ ಸೃಷ್ಟಿಸಿದೆ. ಈ ಭೀಕರ ದುರಂತದಲ್ಲಿ ಸುಮಾರು 38 ಜನರು ಪ್ರಾಣ ಕಳೆದುಕೊಂಡಿದ್ದು, 120ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು ಮತ್ತು ಕಟ್ಟಡಗಳು ಧರಾಶಾಹಿಯಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ.
ಈ ಭೂಕಂಪದಲ್ಲಿ 79,000ಕ್ಕೂ ಹೆಚ್ಚು ಜನರು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದರೆ, ಸುಮಾರು 3,500 ಮನೆಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. 35 ಡಿಗ್ರಿ ಸೆಲ್ಸಿಯಸ್ ತಾಪಮಾನದ ಉರಿಯುವ ಬಿಸಿಲಿನಲ್ಲಿ ಸುಮಾರು 9,000 ಜನರು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಭೀಕರ ಕಂಪನದ ಪ್ರಭಾವ ನೆರೆಯ ದಕ್ಷಿಣ ಕೊರಿಯಾದಲ್ಲೂ ಕಂಡುಬಂದಿತ್ತು (ಏಜೆನ್ಸೀಸ್).