ಜನ್ಮಕೊಟ್ಟ ತಂದೆಗೆ ಮಗನಿಂದಲೇ ಶವಪೆಟ್ಟಿಗೆ! ಪುಟ್ಟ ಬಾಲಕನ ಈ ವಿಚಿತ್ರ ಹವ್ಯಾಸದ ಹಿಂದಿದೆ ರೋಚಕ ಸ್ಟೋರಿ | Coffin Box 
ವಿದೇಶ

ತಂದೆ ಬದುಕಿರುವಾಗಲೇ ಮಗನಿಂದ ಶವಪೆಟ್ಟಿಗೆ ರೆಡಿ! ಪುಟ್ಟ ಬಾಲಕನ ಈ ವಿಚಿತ್ರ ಹವ್ಯಾಸದ ಹಿಂದಿದೆ ರೋಚಕ ಸ್ಟೋರಿ | Coffin Box

Coffin Box: ಸಾಮಾನ್ಯವಾಗಿ ಪುಟ್ಟ ಮಕ್ಕಳು ಎಂದಾಕ್ಷಣ ಅವರ ಆಡುವುದೇ ಪ್ಲಾಸ್ಟಿಕ್​ನಿಂದ ತಯಾರಿಸಿದ ವಸ್ತಗಳಲ್ಲಿ. ಉದಾಹರಣೆಗೆ, ಮನೆ, ಗೊಂಬೆ, ಕಾರು, ಪ್ರಾಣಿಗಳು, ವಿಮಾನಗಳಂತಹ ಆಟದ ವಸ್ತಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆದರೆ, ಇಲ್ಲೊಬ್ಬ ಪೋರ, ತನ್ನ ತಂದೆಗೆಂದೇ ಪೇಪರ್​ನಲ್ಲಿ ಶವಪೆಟ್ಟಿಗೆ ಮಾಡಿಡುವ ವಿಚಿತ್ರ ಅಭ್ಯಾಸವೊಂದನ್ನು ರೂಢಿಸಿಕೊಂಡಿದ್ದಾನೆ.

ಚೀನಾದ 7 ವರ್ಷದ ಬಾಲಕನೊಬ್ಬ ಕಾಗದದಿಂದ ಶವಪೆಟ್ಟಿಗೆ, ಹೂವಿನ ಹಾರಗಳನ್ನು ತಯಾರಿಸಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನೇ ಆಟವಾಗಿ ಮಾಡಿಕೊಂಡಿರುವುದು ಸದ್ಯ ನೋಡುವವರಿಗೆ ಮಾತ್ರವಲ್ಲ, ಕೇಳುವವರಿಗೂ ಬಿಗ್​ ಶಾಕಿಂಗ್ ಆಗಿದೆ. ತಾನೇ ಪೂಜಾರಿಯಂತೆ ಮುಂದೆ ನಿಂತು, ಮೃತ ವ್ಯಕ್ತಿಯ ಅಂತ್ಯಕ್ರಿಯೆಯ ವಿಧಿವಿಧಾನವನ್ನು ನೆರವೇರಿಸಿ, ಅದಕ್ಕೆ ತಕ್ಕಂತೆ ಸಂಗೀತವನ್ನೂ ಹಾಕುತ್ತಾನೆ. ಇದು ನಿಜಕ್ಕೂ ಶಾಕಿಂಗ್ ಬಿಡಿ.

ಬಾಲಕನ ಈ ವಿಭಿನ್ನ, ವಿಚಿತ್ರ ಆಸಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಅನೇಕ ಸ್ಥಳೀಯರು ಯಾರಿಗೂ ಇಲ್ಲದ ಈ ವರ್ತನೆ ಈತನಿಗೇಕೆ? ವಿಚಿತ್ರವೆನಿಸುವ ಹವ್ಯಾಸದ ಹಿಂದಿನ ಕಥೆ ಮಾತ್ರ ಕುತೂಹಲ ಮೂಡಿಸುವಂತಿದೆ. ಮಕ್ಕಳು ಸಾಮಾನ್ಯವಾಗಿ ಆಟವಾಡಲು ಆಟಿಕೆಗಳು, ಕಾರುಗಳು, ಮನೆಗಳ ಮಾದರಿಗಳನ್ನು ಬಳಸುತ್ತಾರೆ. ಆದರೆ ಚೀನಾದ ಏಳು ವರ್ಷದ ಬಾಲಕನೊಬ್ಬನ ಆಟದ ಆಸಕ್ತಿ ಮಾತ್ರ ವಿಭಿನ್ನವಾಗಿದೆ.

ಕಾಗದದಿಂದ ಶವಪೆಟ್ಟಿಗೆ, ಹೂವಿನ ಹಾರಗಳು ಹಾಗೂ ಅಂತ್ಯಕ್ರಿಯೆಗೆ ಬೇಕಾದ ವಿವಿಧ ವಸ್ತುಗಳನ್ನು ತಯಾರಿಸುವುದೇ ಈತನ ನೆಚ್ಚಿನ ಹವ್ಯಾಸ. ಅಷ್ಟೇ ಅಲ್ಲ, ತಾನೇ ಅಂತ್ಯಕ್ರಿಯೆಯ ನಿರ್ವಾಹಕನಂತೆ ವರ್ತಿಸಿ, ವಿಧಿವಿಧಾನಗಳನ್ನು ಅನುಕರಿಸುತ್ತಾನೆ. ಬಾಲಕನ ಈ ವಿಭಿನ್ನ ಹವ್ಯಾಸದ ಬಗ್ಗೆ ಆತನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಈ ವಿಚಾರ ಸಾಕಷ್ಟು ಗಮನ ಸೆಳೆದಿದೆ.

4ನೇ ವಯಸ್ಸಿನಲ್ಲಿ ಅಂತ್ಯಕ್ರಿಯೆ ನೋಡಿದ ಬಳಿಕ ಆಸಕ್ತಿ!

ಚೀನಾದ ವಾಂಗ್ ಎಂಬ ಏಳು ವರ್ಷದ ಬಾಲಕನಿಗೆ ಅಂತ್ಯಕ್ರಿಯೆಯ ವಿಧಿವಿಧಾನಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ಆತನ ತಾಯಿ ಮಾ ಹೇಳುವ ಪ್ರಕಾರ, ವಾಂಗ್‌ಗೆ ನಾಲ್ಕು ವರ್ಷ ವಯಸ್ಸಿದ್ದಾಗ ಆತನನ್ನು ಮೊದಲ ಬಾರಿಗೆ ಅಂತ್ಯಕ್ರಿಯೆಯೊಂದಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆ ಘಟನೆಯ ಬಳಿಕ ಅಂತ್ಯಕ್ರಿಯೆಯ ಸಂಪ್ರದಾಯಗಳ ಬಗ್ಗೆ ಆತನ ಆಸಕ್ತಿ ಹೆಚ್ಚಾಗತೊಡಗಿತು.

ಆ ಬಳಿಕ ಕಾಗದದಿಂದಲೇ ಶವಪೆಟ್ಟಿಗೆ, ಹೂವಿನ ಹಾರಗಳು, ಕಾಗದದ ಗೋಪುರಗಳು ಹಾಗೂ ಪ್ರಾಣಿಗಳ ಆಕೃತಿಗಳನ್ನು ತಯಾರಿಸಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲ, ಅಂತ್ಯಕ್ರಿಯೆಯಲ್ಲಿ ನಡೆಯುವ ವಿವಿಧ ಆಚರಣೆಗಳನ್ನೂ ತನ್ನ ಆಟದಲ್ಲಿ ಅನುಕರಿಸುತ್ತಾನೆ.

ಅಂತ್ಯಕ್ರಿಯೆ ಹೊಣೆ ನನ್ನದೇ...

ವಾಂಗ್ ತನ್ನ ಆಟದಲ್ಲಿ ಅಂತ್ಯಕ್ರಿಯೆಯ ಸಂಪೂರ್ಣ ಜವಾಬ್ದಾರಿ ತಾನೇ ವಹಿಸುತ್ತಾನೆ. ಮೃತರ ಗೌರವಾರ್ಥ ಭಾಷಣ ಮಾಡುವುದರಿಂದ ಹಿಡಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ಅನುಕರಿಸುವವರೆಗೆ ಎಲ್ಲವನ್ನೂ ತಾನೇ ಮಾಡಿ ಮುಗಿಸುತ್ತಾನೆ. ಪೋಷಕರ ಮೊಬೈಲ್‌ಗಳಲ್ಲಿ ಅಂತ್ಯಕ್ರಿಯೆಗೆ ಸಂಬಂಧಿಸಿದ ಹಾಡುಗಳನ್ನು ಬಳಸಿ, ಆಟದ ರೂಪದಲ್ಲಿ ವಿಧಿ ವಿಧಾನಗಳನ್ನು ಪೂರ್ಣಗೊಳಿಸುತ್ತಾನೆ.

ಮಗನ ವಿಚಿತ್ರ ಹವ್ಯಾಸಕ್ಕೆ ಹೆತ್ತವರೇ ಸಾಥ್

ಮೊದಲಿಗೆ ಮಗನ ಈ ಹವ್ಯಾಸದ ಬಗ್ಗೆ ಗೊತ್ತಾದಾಗ ವಾಂಗ್​ ಪೋಷಕರು ಭಾರಿ ಆತಂಕಕ್ಕೆ ಒಳಗಾಗಿದ್ದರು. ಆದರೆ, ನಂತರದಲ್ಲಿ ಇದನ್ನು ಅಪಶಕುನವೆಂದು ಭಾವಿಸದೆ, ಆತನ ವಿಭಿನ್ನ ಆಸಕ್ತಿಯನ್ನು ಅರ್ಥಮಾಡಿಕೊಂಡು ಪ್ರೋತ್ಸಾಹಿಸಿದ್ದಾರೆ. ಅಜ್ಜ-ಅಜ್ಜಿಯರೂ ಇದನ್ನು ಕೆಟ್ಟ ಸೂಚನೆ ಎಂದು ಪರಿಗಣಿಸದೆ, ಪ್ರತಿಯೊಬ್ಬ ಮಗುವಿಗೂ ತನ್ನದೇ ಆದ ಆಸಕ್ತಿ ಮತ್ತು ಹವ್ಯಾಸಗಳಿರುತ್ತವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ, ವಾಂಗ್‌ಗೆ ಭವಿಷ್ಯದಲ್ಲಿ ಅಂತ್ಯಕ್ರಿಯೆ ಸೇವೆಗಳ ಕ್ಷೇತ್ರದಲ್ಲೇ ಕೆಲಸ ಮಾಡಬೇಕೆಂಬ ಆಸೆಯಿದೆಯಂತೆ. ಬಾಲಕನ ಈ ವಿಭಿನ್ನ ಹವ್ಯಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇವೆಲ್ಲ ಬೇಕೇ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವರಿಗೆ ಇದು ಅಚ್ಚರಿ ಮೂಡಿಸಿದರೆ, ಅನೇಕರು ಮಗುವಿನ ಆಸಕ್ತಿಗೆ ಬೆನ್ನುತಟ್ಟಿದ್ದಾರೆ,(ಏಜೆನ್ಸೀಸ್).