5,000 ಮೈಲಿ ಸಮುದ್ರಯಾನ ಮಾಡಿದ ಅಪರೂಪದ ಆಮೆ ರೋಸ್ಸಿ 
ವಿದೇಶ

5,000 ಮೈಲಿ ಸಮುದ್ರಯಾನ, ಸಾವಿನಂಚಿನಿಂದ ವಾಪಸ್! ಅಪರೂಪದ ಆಮೆ ರೋಸ್ಸಿ ರೋಚಕ ಕಥೆ | The story of Rossi, the rare turtle

ಪ್ರಮುಖ ಮುಖ್ಯಾಂಶಗಳು

  • ಕೆಂಪ್ಸ್ ರಿಡ್ಲಿ ಸಮುದ್ರ ಆಮೆಯ ರೋಸ್ಸಿ 5,000 ಮೈಲಿ ಪ್ರಯಾಣ
  • 2023ರಲ್ಲಿ ವೇಲ್ಸ್‌ನ ಸಮುದ್ರ ತೀರದಲ್ಲಿ ಸಾವಿನಂಚಿನಲ್ಲಿದ್ದ ರೋಸ್ಸಿ
  • ಎರಡು ವರ್ಷಗಳ ಆರೈಕೆ ಬಳಿಕ ಬದುಕುಳಿದ ಅಪರೂಪದ ಆಮೆ
Rhossi Sea Turtle: ಸಮುದ್ರದ ಜೀವಿಗಳು ಎಷ್ಟು ದೂರ ಪ್ರಯಾಣಿಸಬಹುದು ಎನ್ನುವುದನ್ನು ಕೆಲವೊಮ್ಮೆ ಊಹಿಸಲು ಆಗುವುದಿಲ್ಲ. ಇದಕ್ಕೆ ಸಾಕ್ಷಿಯಂತಿದೆ ರೋಸ್ಸಿ (Rhossi) ಎಂಬ ಅಪರೂಪದ ಸಮುದ್ರ ಆಮೆಯ ಕಥೆ. ಅಮೆರಿಕದ ಗಲ್ಫ್ ಆಫ್ ಮೆಕ್ಸಿಕೊ ರೋಸ್ಸಿಯ ಮೂಲ ವಾಸಸ್ಥಳ. ಆದರೆ ಬಲವಾದ ಸಮುದ್ರದ ಪ್ರವಾಹಕ್ಕೆ ಸಿಲುಕಿದ ಈ ಪುಟ್ಟ ಆಮೆ ಅಟ್ಲಾಂಟಿಕ್ ಸಾಗರದಲ್ಲಿ ಸುಮಾರು 5,000 ಮೈಲಿ (8,000 ಕಿ.ಮೀ.) ದೂರ ಕೊಚ್ಚಿಕೊಂಡು ಹೋಗಿ ವೇಲ್ಸ್‌ನ ಕರಾವಳಿಗೆ ತಲುಪಿತ್ತು.
2023ರ ಡಿಸೆಂಬರ್‌ನಲ್ಲಿ ವೇಲ್ಸ್‌ನ ರೋಸ್ನೈಗರ್ ಸಮುದ್ರ ತೀರದಲ್ಲಿ ಸ್ಥಳೀಯ ನಾಯಿಯೊಂದು ರೋಸ್ಸಿಯನ್ನು ಪತ್ತೆ ಮಾಡಿತ್ತು. ಆಗ ಅದು ಕೇವಲ ಸುಮಾರು 2 ಪೌಂಡ್ (0.9 ಕೆ.ಜಿ.) ತೂಕವಿತ್ತು. ಉತ್ತರ ಅಟ್ಲಾಂಟಿಕ್‌ನ ತೀವ್ರ ಚಳಿಗೆ ಸಿಲುಕಿದ್ದ ಕಾರಣ ರೋಸ್ಸಿ ಕೋಲ್ಡ್-ಸ್ಟನ್ನಿಂಗ್ ಎಂಬ ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಅಂದರೆ, ಅತಿಯಾದ ಚಳಿಯಿಂದ ಆಮೆಯ ದೇಹದ ಚಟುವಟಿಕೆಗಳು ನಿಧಾನಗೊಂಡು, ಅದು ಸಾಯುವ ಸ್ಥಿತಿಗೆ ತಲುಪಿತ್ತು. ತಕ್ಷಣವೇ ಅಂಗ್ಲೇಸೇಯ್ ಆಂಗ್ಲೆಸೆ ಸಮುದ್ರ ಮೃಗಾಲಯ(Anglesey Sea Zoo) ಅದನ್ನು ರಕ್ಷಿಸಿ ಚಿಕಿತ್ಸೆ ನೀಡಿದರು.

2 ವರ್ಷ 

ರೋಸ್ಸಿಯ 

ಆರೈಕೆ

ರೋಸ್ಸಿಯನ್ನು ಬದುಕಿಸುವುದು ಅಷ್ಟು ಸುಲಭವಾಗಿರಲಿಲ್ಲ. ತಜ್ಞರ ತಂಡ ಸುಮಾರು 2 ವರ್ಷಗಳ ಕಾಲ ಆರೈಕೆ ಮಾಡಲಾಗಿದೆ. ಹೀಗಾಗಿ ಕೇವಲ 2 ಪೌಂಡ್ ತೂಕವಿದ್ದ ರೋಸ್ಸಿ ಇದೀಗ 46 ಪೌಂಡ್ (21 ಕೆ.ಜಿ.) ತೂಕಕ್ಕೆ ಬೆಳೆದಿದೆ. ಪೂರ್ತಿ ಆರೋಗ್ಯ ಸುಧಾರಿಸಿದ ಬಳಿಕ ರೋಸ್ಸಿಯನ್ನು ಅದರ ನೈಸರ್ಗಿಕ ವಾಸಸ್ಥಳಕ್ಕೆ ಮರಳಿಸುವ ಪ್ರಯತ್ನ ಶುರುವಾಯಿತು. ಆಗಸ್ಟ್ 10ರಂದು ವೇಲ್ಸ್‌ನಿಂದ ಹೆಲಿಕಾಪ್ಟರ್ ಮೂಲಕ ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣಕ್ಕೆ ತಂದು, ಅಲ್ಲಿಂದ ವಿಮಾನದ ಮೂಲಕ ಅಮೆರಿಕದ ಹ್ಯೂಸ್ಟನ್‌ಗೆ ತಲುಪಿಸಿದರು. ರೋಸ್ಸಿಯನ್ನು ಹೂಸ್ಟನ್ ಮೃಗಾಲಯ ಕರೆದೊಯ್ದು, ಸದ್ಯ ದೊಡ್ಡ ಸಮುದ್ರನೀರಿನ ಟ್ಯಾಂಕ್‌ನಲ್ಲಿ ಇರಿಸಲಾಗಿದೆ.

ಕೊನೆಗೂ ಸಮುದ್ರ ತಲುಪಲಿರುವ ರೋಸ್ಸಿ

ಕೆಂಪ್ಸ್ ರಿಡ್ಲಿ ಸಮುದ್ರ ರೋಸ್ಸಿ ಆಮೆ ಅಪಾಯದಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಮುಖ್ಯವಾಗಿ ಗಲ್ಫ್ ಆಫ್ ಮೆಕ್ಸಿಕೊ ಮತ್ತು ಅಟ್ಲಾಂಟಿಕ್ ಪ್ರದೇಶದಲ್ಲಿ ಇದು ಕಂಡುಬರುತ್ತೆ. ಸದ್ಯ ರೋಸ್ಸಿ ಆರೋಗ್ಯ ಸುಧಾರಿಸಿದ ಬಳಿಕ ಅದನ್ನು ಮತ್ತೆ ಗಲ್ಫ್ ಆಫ್ ಮೆಕ್ಸಿಕೊಕ್ಕೆ ಬಿಡಲು ಯೋಜಿಸಲಾಗಿದೆ. 5,000 ಮೈಲಿ ದೂರ ಕೊಚ್ಚಿಕೊಂಡು ಹೋಗಿ, ಸಾವಿನಂಚಿನಿಂದ ಪಾರಾಗಿ ತವರಿನತ್ತ ಮರಳಿರುವ ರೋಸ್ಸಿಯ ಕಥೆ ನಿಜಕ್ಕೂ ಅಪರೂಪದ ಯಶೋಗಾಥೆ, (ಏಜೆನ್ಸೀಸ್​).